‘ಗರಡಿ’ ಸಿನಿಮಾದ ‘ಹೊಡಿರೆಲಿ ಹಲಗಿ’ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗಿದೆ. ಉತ್ತರ ಕರ್ನಾಟಕ ಭಾಷಾ ಸೊಗಡಿನ ಹಾಡನ್ನು ಆ ಭಾಗದವರೇ ಆದ ಮೇಘನಾ ಹಳಿಹಾಳ ಹಾಡಿದ್ದು, ನಟಿ ನಿಶ್ವಿಕಾ ನಾಯ್ಡು ಹೆಜ್ಜೆ ಹಾಕಿದ್ದಾರೆ. ಚಿತ್ರದಲ್ಲಿ ದೇಸಿ ಕ್ರೀಡೆ ಕುಸ್ತಿ ಹಿನ್ನೆಲೆಯಲ್ಲಿ ಗುರು – ಶಿಷ್ಯರ ಕತೆ ಹೇಳುತ್ತಿದ್ದಾರೆ ಯೋಗರಾಜ್ ಭಟ್ಟರು.
ಯೋಗರಾಜ್ ಭಟ್ಟರ ‘ಗರಡಿ’ ಆರಂಭದಿಂದಲೂ ಸುದ್ದಿಯಲ್ಲಿದ್ದ ಸಿನಿಮಾ. ಇದು ಭಟ್ಟರು ಮಾಡುವ ಸಿನಿಮಾಗಳ ಕತೆಯಂತಿಲ್ಲ ಎಂದೇ ಎಲ್ಲರೂ ಮಾತನಾಡಿಕೊಂಡಿದ್ದರು. ಇದು ಅವರ ನಿರ್ದೇಶನದ ಮೊದಲ ಆಕ್ಷನ್ – ಡ್ರಾಮಾ ಸಿನಿಮಾ. ಕೌರವ್ ಪ್ರೊಡಕ್ಷನ್ಸ್ನಡಿ ಬಿ ಸಿ ಪಾಟೀಲ್ ನಿರ್ಮಿಸುತ್ತಿರುವ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಯೋಗರಾಜ್ ಭಟ್ಟರ ರಚನೆಯ ‘ಹೊಡಿರೆಲಿ ಹಲಗಿ’ ಗೀತೆಗೆ ಉತ್ತರ ಕರ್ನಾಟಕ ಗಾಯಕಿ ಮೇಘನಾ ಹಳಿಹಾಳ್ ದನಿಯಾಗಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಈ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಂಗೀತ ವಿ ಹರಿಕೃಷ್ಣ ಅವರದು. ‘ಈ ಹಾಡು ಹುಟ್ಟಲು ನಿರ್ಮಾಪಕರಾದ ಬಿ ಸಿ ಪಾಟೀಲ್ ಅವರು ಕಾರಣ. ಅವರು ನನಗೆ ಕರೆ ಮಾಡಿ ಉತ್ತರ ಕರ್ನಾಟಕದಲ್ಲಿ ಹಲಗಿ ಹೊಡೆಯಬೇಕಾದರೆ ಒಂದು ರಾಗ ಬರುತ್ತದೆ. ಅದರ ಮೇಲೆ ಹಾಡು ಮಾಡಿ ಎಂದರು. ಆಗ ಈ ಹಾಡು ಬರೆದೆ’ ಎನ್ನುತ್ತಾರೆ ಭಟ್ಟರು.
ನಿರ್ಮಾಪಕ ಬಿ ಸಿ ಪಾಟೀಲರು ಚಿತ್ರದಲ್ಲಿ ‘ಗರಡಿ ರಂಗಪ್ಪ’ನ ಪಾತ್ರದಲ್ಲಿ ನಟಿಸಿದ್ದಾರೆ. ಗುರುವಿಗೆ ಸಾಕಷ್ಟು ಶಿಷ್ಯರು. ಅದರಲ್ಲಿ ನಾಯಕ ಸೂರ್ಯ ಕೂಡ ಒಬ್ಬ. ಕಾರಣಾಂತರದಿಂದ ಗುರುವಿಗೆ ಶಿಷ್ಯ ಎದುರು ನಿಲ್ಲುವ ಪರಿಸ್ಥಿತಿ ಬರುತ್ತದೆ. ಇದೇ ಕಥಾವಸ್ತು. ನಾಯಕನ ಅಣ್ಣನಾಗಿ ನಟ ದರ್ಶನ್ ಅವರು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೋನಾಲ್ ಮಾಂಟೆರೊ ಚಿತ್ರದ ನಾಯಕಿ. ಸುಜಯ್, ರಾಘವೇಂದ್ರ, ಧರ್ಮಣ್ಣ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕೌರವ ಪ್ರೊಡಕ್ಷನ್ಸ್ ನಿರಂತರವಾಗಿ ಸಿನಿಮಾಗಳನ್ನು ನಿರ್ಮಿಸುತ್ತಾ ಬರುತ್ತಿದೆ. ಶಶಾಂಕ್ ಸಿನಿಮಾಸ್ ಜೊತೆಗೂಡಿ ಅವರ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ನಿರ್ಮಾಣವಾಗುತ್ತಿದೆ. ಬಿ ಸಿ ಪಾಟೀಲ್ ಅವರ ಪುತ್ರಿ ಸೃಷ್ಠಿ ಪಾಟೀಲ್ ಅವರು ಚಿತ್ರನಿರ್ಮಾಣದ ಹೊಣೆ ಹೊತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಸಿನಿಮಾಗಳನ್ನು ನಿರ್ಮಿಸುವುದು ತಮ್ಮ ನಿರ್ಮಾಣದ ಸಂಸ್ಥೆಯ ಗುರಿ ಎನ್ನುತ್ತಾರೆ ಸೃಷ್ಠಿ.