ನಟಿ ಮೇಘನಾ ರಾಜ್ ಅವರ ‘ತತ್ಸಮ ತದ್ಭವ’ ಕ್ರೈಂ – ಥ್ರಿಲ್ಲರ್ ಸಿನಿಮಾ ತೆರೆಕಂಡಿದೆ. ಸಣ್ಣ ವಿರಾಮದ ನಂತರ ಈ ಚಿತ್ರದೊಂದಿಗೆ ಅವರು ಬೆಳ್ಳಿತೆರೆಗೆ ಮರಳಿದ್ದಾರೆ. ಈ ವಾರ ತೆರೆಕಂಡಿರುವ ರಾಘವೇಂದ್ರ ರಾಜಕುಮಾರ್ ಮತ್ತು ಶ್ರುತಿ ನಟಿಸಿರುವ ’13’ ಕೂಡ ಥ್ರಿಲ್ಲರ್ ಜಾನರ್ ಸಿನಿಮಾ. ವಿಶಾಲ್ ಮತ್ತು ಎಸ್ ಜೆ ಸೂರ್ಯ ನಟಿಸಿರುವ ಬಹುನಿರೀಕ್ಷಿತ ತಮಿಳು ಸಿನಿಮಾ ‘ಮಾರ್ಕ್ ಅಂಟನಿ’ ಈ ವಾರದ ವಿಶೇಷ.
ತತ್ಸಮ ತದ್ಭವ | ಕನ್ನಡ | ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಆಕ್ಷನ್ ಸಿನಿಮಾ. ಕಾಣೆಯಾದ ತನ್ನ ಗಂಡನನ್ನು ಹುಡುಕಲು ಪೊಲೀಸರ ಮೊರೆಹೋಗುವ ಮಹಿಳೆಯೊಬ್ಬಳ ಸುತ್ತ ಕತೆ ಸುತ್ತುತ್ತದೆ. ಮೇಘನಾ ರಾಜ್ ಸರ್ಜಾ ಮತ್ತು ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಬಾಲಾಜಿ ಮನೋಹರ್, ದೇವರಾಜ್, ಶೃತಿ, ಟಿ ಎಸ್ ನಾಗಾಭರಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಾಸುಕಿ ವೈಭವ್ ಸಂಗೀತ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ ಚಿತ್ರಕ್ಕಿದೆ. P B Studios ಮತ್ತು Anvit Cinemas ಬ್ಯಾನರ್ ಅಡಿ ಪನ್ನಗ ನಾಗಾಭರಣ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಪರಿಮಳ ಡಿಸೋಜಾ | ಕನ್ನಡ | ಭವ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಒಂದು ನಿಗೂಢ ಕೊಲೆಯ ಸುತ್ತ ಸುತ್ತುತ್ತದೆ. ಕ್ರೈಮ್ – ಥ್ರಿಲ್ಲರ್ ಜಾನರ್ ಚಲನಚಿತ್ರವನ್ನು ಡಾ ಗಿರಿಧರ್ ಹೆಚ್ ಟಿ ನಿರ್ದೇಶಿಸಿದ್ದಾರೆ. ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕೆ ಕಲ್ಯಾಣ್ ಚಿತ್ರಕ್ಕೆ ಹಾಡುಗಳನ್ನು ರಚಿಸಿದ್ದು, ಕ್ರಿಸ್ಟೋಪರ್ ಜೇಸನ್ ಸಂಗೀತ ಸಂಯೋಜಿಸಿದ್ದಾರೆ. ಕೆ ರಾಮ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. Village Road Films ಬ್ಯಾನರ್ ಅಡಿಯಲ್ಲಿ ವಿನೋದ್ ಶೇಷಾದ್ರಿ ಚಿತ್ರ ನಿರ್ಮಿಸಿದ್ದಾರೆ.
13 Part-1 | ಕನ್ನಡ | ರಾಘವೇಂದ್ರ ರಾಜ್‌ಕುಮಾರ್ ಅವರು ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಪಾತ್ರದಲ್ಲಿ ಹಾಗೂ ಟೀ ಅಂಗಡಿ ನಡೆಸುವ ಮುಸ್ಲಿ ಮಹಿಳೆ ಸಾಯಿರಾಬಾನು ಪಾತ್ರದಲ್ಲಿ ಶ್ರುತಿ ಅವರು ನಟಿಸಿರುವ ಚಿತ್ರ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡೆದ ಒಂದು ನೈಜ ಘಟನೆ ಚಿತ್ರಕ್ಕೆ ಸ್ಫೂರ್ತಿ. ಪ್ರಮೋದ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಕೆ ನರೇಂದ್ರ ಬಾಬು ಕತೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. V V Productions ಬ್ಯಾನರ್ ಅಡಿ ಕೆ ಸಂಪತ್ ಕುಮಾರ್, ಮಂಜುನಾಥ್ ಗೌಡ, ಮಂಜುನಾಥ್ ಹೆಚ್ ಎಸ್ ಮತ್ತು ಕೇಶವ ಮೂರ್ತಿ ಸಿನಿಮಾ ನಿರ್ಮಿಸಿದ್ದಾರೆ. ಶೋಗನ್ ಬಾಬು ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಟೇಲ್ಸ್ ಆಫ್ ಮಹಾನಗರ | ಕನ್ನಡ | ವಿಭಿನ್ನ ಕಥಾಹಂದರದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಪ್ರಪಂಚವನ್ನೇ ಬದಲಾಯಿಸುವ ಎರಡು ಅಪ್ರತಿಮ ಶಕ್ತಿಗಳು ಎಂದರೆ ಅದು ಪ್ರೀತಿ ಮತ್ತು ಯುದ್ಧ ಎಂಬ ಅಂಶಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ‘ಪುನರ್ ವಿವಾಹ’ ಹಾಗೂ ‘ಪತ್ತೆದಾರಿ ಪ್ರತಿಭಾ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಥರ್ವ್ ಮತ್ತು ‘ಕನ್ನಡತಿ’ ಖ್ಯಾತಿಯ ರಮೋಲಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. Atharv Pictures ಬ್ಯಾನರ್ ಅಡಿಯಲ್ಲಿ ವಿಜಯ್ ಕುಮಾರ್ ಚಿತ್ರ ನಿರ್ಮಿಸಿದ್ದಾರೆ.
ಮಾರ್ಕ್ ಆಂಟನಿ | ತಮಿಳು | 90ರ ದಶಕದಲ್ಲಿ ನಡೆಯುವ ಈ ಕತೆ. ವಿಶಾಲ್ ಮತ್ತು ಎಸ್ ಜೆ ಸೂರ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾರ್ಕ್ ಆಂಟೋನಿಯ ಜಗತ್ತಿನಲ್ಲಿ ನಡೆಯುವ ಕತೆ. ಗ್ಯಾಂಗ್ಸ್‌ಸ್ಟರ್ ಗುಂಪಿನ ನಾಯಕರುಗಳಾಗಿ ವಿಶಾಲ್ ಮತ್ತು ಸೂರ್ಯ ಕಾಣಿಸಿಕೊಂಡಿದ್ದಾರೆ. ವಿಜ್ಞಾನಿ (ಸೆಲ್ವ ರಾಘವನ್) ಕಂಡುಹಿಡಿದ ಟೈಮ್ ಟ್ರಾವೆಲ್ ಯಂತ್ರವು ವಿಶಾಲ್ ಕೈಗೆ ಸಿಗುತ್ತದೆ. ನಂತರ ವಿಷಯಗಳು ಹಾಸ್ಯದ ತಿರುವು ಪಡೆಯುತ್ತವೆ. ವಿಶಾಲ್ ಮತ್ತು ಸೂರ್ಯನನ್ನು ಮುಗಿಸಲು ಸಾಕಷ್ಟು ಬೇರೆ ಬೇರೆ ಗುಂಪುಗಳು ಯೋಜನೆ ಹಾಕುತ್ತಿರುತ್ತವೆ. ಈ ಎಲ್ಲಾ ಅಂಶಗಳನ್ನು ಹಾಸ್ಯ ಮತ್ತು ಥ್ರಿಲ್ಲರ್ ಮೂಲಕ ಸಿನಿಮಾದಲ್ಲಿ ತೋರಿಸಲಾಗಿದೆ. Mini Studio ಬ್ಯಾನರ್ ಅಡಿಯಲ್ಲಿ ಎಸ್ ವಿನೋದ್ ಕುಮಾರ್ ಚಿತ್ರ ನಿರ್ಮಿಸಿದ್ದು, G V ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ವೇಲುಕುಟ್ಟಿ ಸಂಕಲನ, R K ವಿಜಯ ಮುರುಘನ್ ಕಲಾ ನಿರ್ದೇಶನ, ದಿನೇಶ್, ಬಾಬು ಭಾಸ್ಕರ್ ಮತ್ತು ಅಜಾರ್ ಛಾಯಾಗ್ರಹಣ ಸಿನಿಮಾಗಿದೆ.
ಕಾಸರಗೋಲ್ಡ್ | ಮಲಯಾಳಂ | ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಆಸಿಫ್ ಮತ್ತು ಅವನ ಜೊತೆಗಾರ ಸನ್ನಿ ಅಪಾಯಕಾರಿಯಾದ ಯೋಜನೆಯೊಂದನ್ನು ಹಾಕಿಕೊಳ್ಳುತ್ತಾರೆ. ಜೀವನಪರ್ಯಂತ ಸಂಪಾದಿಸುವ ಸಂಪತ್ತನ್ನು ಒಂದೇ ಬಾರಿಗೆ ಭದ್ರಪಡಿಸಿಟ್ಟುಕೊಳ್ಳಲು ಚಿನ್ನವನ್ನು ಕದಿಯುವ ಪ್ಲಾನ್ ಮಾಡಿ ಅಪಾರ ಚಿನ್ನದ ಬಿಸ್ಕೇಟ್‌ಗಳನ್ನು ಕದಿಯುತ್ತಾರೆ. ಆದರೆ ಆಸಿಫ್ ಮತ್ತು ಸನ್ನಿಗೆ ಅವರು ಕದ್ದಿದ್ದ ಚಿನ್ನದ ಮೇಲೆ ದುರಾಸೆ ಹುಟ್ಟಿ ಅವರಿಬ್ಬರು ತಮ್ಮ ಸ್ನೇಹ ಮರೆತು ವೈರಿಗಳಾಗಿ ಒಬ್ಬರ ಮೇಲೊಬ್ಬರು ದ್ವೇಷ ಸಾಧಿಸುತ್ತಾರೆ. ಮೃದುಲ್ ನಾಯರ್ ಸಿನಿಮಾ ನಿರ್ದೇಶಿಸಿದ್ದಾರೆ. ವಿಕ್ರಮ್ ಮೆಹ್ರಾ, ಸಿದ್ಧಾರ್ಥ್ ಆನಂದ್ ಕುಮಾರ್, ಸೂರಜ್ ಕುಮಾರ್ ಮತ್ತು ರಿನ್ನಿ ದಿವಾಕರ್ ನಿರ್ಮಾಣದ ಚಿತ್ರಕ್ಕೆ ವಿಷ್ಣು ವಿಜಯ್ ಮತ್ತು ನಿರಂಜ್ ಸುರೇಶ್ ಸಂಗೀತ ಸಂಯೋಜನೆಯಿದೆ. ವಿನಾಯಕನ್ ಮತ್ತು ವಿಷ್ಣು ವಿಜಯ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ನದಿಕಲಿಲ್ ಸುಂದರಿ ಯಮುನಾ | ಮಲಯಾಳಂ | ತನ್ನ ಕನಸಿನ ಹುಡುಗಿಯನ್ನು ಮದುವೆಯಾಗಲು ಪ್ರಯತ್ನಿಸುತ್ತಿರುವ ಬ್ರಹ್ಮಚಾರಿ ಕಣ್ಣನ್ (ಧ್ಯಾನ್)ನ ಸುತ್ತ ಕತೆ ಸುತ್ತುತ್ತದೆ. ಪ್ರೇಮ್ ನಜೀರ್ ಮತ್ತು ಕೆ ಆರ್ ವಿಜಯ ಅಭಿನಯದ ಹಳೆಯ ಮಲಯಾಳಂ ಚಿತ್ರದ ಹಾಡಿನ ಸಾಲೇ ಈ ಚಿತ್ರಕ್ಕೆ ಶೀರ್ಷಿಕೆಯಾಗಿದೆ. ನಟಿ ನಯನತಾರಾಳ ಅಂಶಗಳನ್ನು ತನ್ನ ಭಾವಿ ಪತ್ನಿಯಲ್ಲಿ ಕಾಣಲು ಬಯಸುವ ಕಣ್ಣನ್ ಅವನ ಕನಸಿನ ಹುಡುಗಿಯ ಗುಣಗಳು ಹೇಗಿರಬೇಕೆಂದು ವಿವರಿಸುವುದು ಸಿನಿಮಾದಲ್ಲಿದೆ. ಆದರೆ ಅವನ ಸ್ನೇಹಿತರು ಅವನ ಈ ಆದ್ಯತೆಗಳಿಗಾಗಿ ಅಪಹಾಸ್ಯ ಮಾಡುತ್ತಾರೆ. ಕಣ್ಣನ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾ ಸೂಕ್ತವಾದ ಸಂಗಾತಿಯನ್ನು ಹುಡುಕಲು ಹೆಣಗಾಡುತ್ತಿರುತ್ತಾನೆ. ಕ್ರಮೇಣ ಅವನ ಸ್ನೇಹಿತರು ಈ ಹುಡುಕಾಟದಲ್ಲಿ ಕಣ್ಣನ್‌ಗೆ ಸಹಾಯ ಮಾಡುತ್ತಾರೆ. ಧ್ಯಾನ್ ಶ್ರೀನಿವಾಸನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ರೊಮ್ಯಾಂಟಿಕ್ ಕಾಮಿಡಿ ಥ್ರಿಲ್ಲರ್ ಚಿತ್ರವನ್ನು ವಿಜೇಶ್ ಪಣತ್ತೂರ್ ಮತ್ತು ಉನ್ನಿ ವೆಲ್ಲೂರ ನಿರ್ದೇಶಿಸಿದ್ದಾರೆ. Cinematica Films Llp ಬ್ಯಾನರ್ ಅಡಿ ವಿಲಾಸ್ ಕುಮಾರ್ ಮತ್ತು ಸಿಮಿ ಮುರಳಿ ನಿರ್ಮಿಸಿದ್ದಾರೆ. ಫೈಜಲ್ ಅಲಿ ಛಾಯಾಗ್ರಹಣ, ರತಿನ್ ರಾಧಾಕೃಷ್ಣನ್ ಸಂಕಲನ, ಅರುಣ್ ಮುರಳೀಧರನ್ ಸಂಗೀತ ಸಂಯೋಜಿಸಿದ್ದಾರೆ. ನವಾಜ್ ವಳ್ಳಿಕ್ಕುನ್ನು, ಸುಧೀಶ್, ಸೋಹನ್ ಸೀನುಲಾಲ್, ಕಲಾಭವನ್ ಶಾಜೋನ್ ಮತ್ತು ನಿರ್ಮಲ್ ಪಲಾಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಪ್ರಾವು (Praavu) | ಮನೋಜ್ ಕೆ ಯು ಮತ್ತು ಅಮಿತ್ ಚಾಕಲಕ್ಕಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ತ್ರಿಕೋನ ಪ್ರೇಮಕಥೆಯನ್ನು ಹೊಂದಿರುವ ಸಿನಿಮಾವು ಸ್ನೇಹಿತರ ತರಲೆ, ತುಂಟಾಟಗಳನ್ನು ಒಳಗೊಂಡಿದೆ. ನವಾಜ್ ಅಲಿ ಚಿತ್ರ ನಿರ್ದೇಶಿಸಿದ್ದು, ಪಿ ಆರ್ ರಾಜಶೇಖರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. CET CINEMA ಬ್ಯಾನರ್ ಅಡಿಯಲ್ಲಿ ರಾಜಶೇಖರನ್ ಈ ಸಿನಿಮಾ ನಿರ್ಮಿಸಿದ್ದಾರೆ. ಜೋವಿನ್ ಜೋಶ್ ಸಂಕಲನ, ಆಂಥೋನಿ ಜೋ ಛಾಯಾಗ್ರಹಣ, ಬಿಜಿಬಾಲ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.