ಹಿರಿಯ ನಟಿ ಭೈರವಿ ವೈದ್ಯ ಅಗಲಿದ್ದಾರೆ. ಗುಜರಾಗಿ ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದವರು ಭೈರವಿ. ‘ತಾಲ್‌’ ಚಿತ್ರದೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಅವರು ಹಲವು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ನಟಿ ಭೈರವಿ ವೈದ್ಯ (67 ವರ್ಷ) ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. 45 ವರ್ಷಗಳ ಸುದೀರ್ಘ ಸಿನಿರಂಗದ ತಮ್ಮ ವೃತ್ತಿ ಜೀವನದಲ್ಲಿ ಅವರು ವೈವಿಧ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗುಜರಾತಿ ಸಿನಿಮಾದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಅವರು ‘ತಾಲ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಐಶ್ವರ್ಯಾ ರೈ ಬಚ್ಚನ್ ಮತ್ತು ಅನಿಲ್‌ ಕಪೂರ್ ಅಭಿನಯದ ಈ ಚಿತ್ರದಲ್ಲಿ ಅವರು ‌’ಜಾನಕಿ’ ಪಾತ್ರವನ್ನು ನಿರ್ವಹಿಸಿದ್ದರು. ಸಲ್ಮಾನ್ ಖಾನ್ ಅವರ ‘ಚೋರಿ ಚೋರಿ ಚುಪ್ಕೆ ಚುಪ್ಕೆ’ ಚಿತ್ರದಲ್ಲಿ ಭೈರವಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಬಾಲಿವುಡ್‌ನ ಹೊರತಾಗಿ, ಇವರು ಪ್ರಸಿದ್ಧ ಗುಜರಾತಿ ರಂಗಭೂಮಿ ಮತ್ತು ಸಿನಿಮಾ ನಟಿ. ಅವರು ಅನೇಕ ಪ್ರಸಿದ್ಧ ನಾಟಕಗಳು ಮತ್ತು ಗುಜರಾತಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಅವರು ‘ನಿಮಾ ಡೆನ್ಜಾಂಗ್ಪಾ’ ಶೋನಲ್ಲಿ ಕಾಣಿಸಿಕೊಂಡಿದ್ದರು. ‘ಹಸ್ರತೀನ್’, ‘ಮಹಿಸಾಗರ್’ ಶೋಗಳಲ್ಲೂ ಕೆಲಸ ಮಾಡಿದ್ದಾರೆ. ಹಿರಿಯ ನಟಿ ಭೈರವಿ ವೈದ್ಯ ಅಗಲಿಕೆಗೆ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಹನಟಿ ಮತ್ತು ಸ್ನೇಹಿತೆ ಸುರಭಿ ದಾಸ್, ‘ಭೈರವಿ ವೈದ್ಯ ಸಾವು ದುಃಖ ತಂದಿದೆ. ಅವರೊಂದಿಗೆ ಸೆಟ್‌ನಲ್ಲಿ ಒಳ್ಳೆಯ ಸಮಯ ಕಳೆದಿದ್ದೇನೆ, ಅದು ಯಾವಾಗಲೂ ನೆನಪಿನಲ್ಲಿರುತ್ತದೆ’ ಎಂದಿದ್ದಾರೆ. ನಟ ಬಾಬುಲ್ ಭಾವಸರ್, ‘ನಾನು ವರ್ಷಗಳ ಹಿಂದೆ ಅವರ ಜೊತೆ ನಟಿಸಿದ್ದೆ. ಸೌಮ್ಯ ಸ್ವಭಾವದವರು, ಶ್ರೇಷ್ಠ ನಟಿ’ ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here