ಒಂದೇ ಕುಟುಂಬದ 11 ಸದಸ್ಯರ ಆತ್ಮಹತ್ಯೆಗೆ ಈಡಾದ ಬುರಾರಿ ದುರಂತ ಆಧರಿಸಿದ ಸರಣಿ ‘ಆಖ್ರಿ ಸಚ್’. ತಾಂತ್ರಿಕವಾಗಿ ಬಹಳ ಅಚ್ಚುಕಟ್ಟಾದ ಸರಣಿ. ಭಾವನಾತ್ಮಕವಾಗಿ ಇನ್ನಷ್ಟು ಪಕ್ವವಾಗಿದ್ದರೆ ಒಂದು ಪರ್ಫೆಕ್ಟ್ ಎಮೋಷನಲ್ ಥ್ರಿಲ್ಲರ್ ಆಗಬಹುದಾದ ಸಾಧ್ಯತೆಗಳಿದ್ದವು. ಇದು ಆ ಅವಕಾಶವನ್ನು ತಪ್ಪಿಸಿಕೊಂಡಿದೆ. ಒಮ್ಮೆ ಖಂಡಿತ ನೋಡಬಹುದು. ಸರಣಿ DisneyPlus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ.
ಬುರಾರಿ ದುರಂತದ ಹಿನ್ನೆಲೆ ಆಧರಿಸಿ ಹೆಣೆಯಲಾದ ‘ಆಖ್ರಿ ಸಚ್’ ಸರಣಿ 11 ಜನ ಕುಟುಂಬಸ್ಥರ ಸಂಶಯಾಸ್ಪದ ಆತ್ಮಹತ್ಯೆಯ ತನಿಖೆ ನಡೆಸಲು ಬರುವ ಪೊಲೀಸ್ ಅಧಿಕಾರಿಯ ಸುತ್ತ ತಿರುಗುತ್ತದೆ. ಈ ಘಟನೆಯಲ್ಲಿ ಮೂರು ತಲೆಮಾರಿನ ಒಂದೇ ಕುಟುಂಬದ ಸದಸ್ಯರು ದುರ್ಮರಣಕ್ಕೆ ಈಡಾಗುತ್ತಾರೆ. ಸರಣಿಯ ಆರಂಭದಲ್ಲೇ ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆ ಎನ್ನುವ ಡಿಸ್ಕ್ಲೇಮರ್ ಜೊತೆಗೆ ಕಥೆ ಶುರುವಾಗುತ್ತದೆ. ಆದರೆ ಎಲ್ಲಿಯೂ ನಿರ್ಮಾಣ ತಂಡ ಇದನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಬುರಾರಿ ದುರಂತದಿಂದ ಪ್ರೇರಿತ ಎಂಬ ಹೇಳಿಕೆಯನ್ನಾದರೂ ಕೊಡಬಹುದಿತ್ತು.
ಮೊದಲ ಎರಡು ಸಂಚಿಕೆಗಳು ನಿರೀಕ್ಷೆಗೂ ಮೀರಿದ ಅನುಭವ ಕೊಡುವಲ್ಲಿ ಯಶಸ್ವಿಯಾಗಿದೆಯಾದರೂ ಇತ್ತೀಚಿಗೆ ಬರುತ್ತಿರುವ ಥ್ರಿಲ್ಲರ್ ಮಾದರಿಯ ಸರಣಿಗಳಿಗೆ ಹೋಲಿಸಿದರೆ ಸ್ವಲ್ಪ ನಿರಾಸೆ ಮೂಡಿಸಿದೆ ಎಂದೇ ಹೇಳಬಹುದು. ಈ ಕಥೆಗೆ ಬೇಕಾದ ತೀವ್ರತೆ ಮತ್ತು ಉದ್ವೇಗ ಎರಡೂ ಇದರಲ್ಲಿ ಕಂಡುಬರುವುದಿಲ್ಲ. ಪೊಲೀಸ್ ತಂಡದಲ್ಲಿ ಮತ್ತು ದುರಂತಕ್ಕೆ ಬಲಿಯಾದವರ ಕುಟುಂಬದಲ್ಲಿ ಸಾಕಷ್ಟು ಒತ್ತಡಭರಿತ ಸನ್ನಿವೇಶಗಳನ್ನು ಸೃಷ್ಟಿಮಾಡುವ ಅವಕಾಶವಿದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲಾಗಿಲ್ಲ.
ಸರಣಿಯ ಆರಂಭದಲ್ಲೇ ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ತಮನ್ನಾ ಅವರ ಪಾತ್ರ ಆನ್ಯಳ ಪರಿಚಯವಾಗುತ್ತದೆ. ಆಕೆಯ ಕಾರ್ಯತತ್ಪರತೆಯ ಪರಿಚಯವಾಗುತ್ತದೆ. 11 ಜನರ ಕುಟುಂಬ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಆ ಕೇಸನ್ನು ಆನ್ಯಾಳಿಗೆ ಅವಳ ಮೇಲಧಿಕಾರಿ ವಹಿಸುತ್ತಾರೆ. ತನಿಖೆ ಶುರುವಾಗುತ್ತಿದ್ದಂತೆ ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ತೋರಿದ ಸನ್ನಿವೇಶ ವಿಚಿತ್ರ ತಿರುವುಗಳನ್ನು ತೆಗೆದುಕೊಳ್ಳಲು ಶುರುಮಾಡುತ್ತದೆ. ಸರಣಿ ಮುಂದುವರೆದಂತೆ ವೀಕ್ಷಕರಿಗೆ ರಾಜಾವತ್ ಕುಟುಂಬದ ಒಳನೋಟಗಳನ್ನು ಫ್ಲಾಶ್‌ಬ್ಯಾಕ್ ಸನ್ನಿವೇಶಗಳ ಮೂಲಕ ತೆರೆದಿಡಲಾಗುತ್ತಾ ಹೋಗುತ್ತದೆ.
ಮೃತ ಕುಟುಂಬದ ಮುಖ್ಯಸ್ಥ ಈ ವೇಳೆಗಾಗಲೇ ಮೃತರಾಗಿದ್ದರೂ ಮೊದಲು ಅವರು ಪೊಲೀಸ್ ಇಲಾಖೆಯಲ್ಲಿ ಕಾರ್ಯಪ್ರವೃತ್ತರಾಗಿದ್ದರೆಂಬ ವಿಚಾರ ತಿಳಿಯುತ್ತದೆ. ತಂದೆ ಮತ್ತು ಅವರ ಮಗ ಭುವನ್ ನಡುವೆ ನಡೆದ ಮೇಲ್ನೋಟಕ್ಕೆ ಕ್ಷುಲ್ಲಕ ಎನಿಸಬಹುದಾದ ಘಟನೆಯೊಂದು ಅವರ ಮರಣಕ್ಕೆ ಕಾರಣ ಎಂದು ತಿಳಿಯುತ್ತದೆ. ಆದೇಶ್, ಭುವನ್, ಕವಿತಾ ಮತ್ತು ಬಬಿತಾ ನಾಲ್ವರೂ ಒಡಹುಟ್ಟಿದವರು ಮತ್ತು ಈ ದುರ್ಘಟನೆ ಬಬಿತಾಳ ಮಗಳ ನಿಶ್ಚಿತಾರ್ಥದ ಒಂದು ವಾರದ ನಂತರ ಘಟಿಸುತ್ತದೆ. ಆಕೆಯ ಜೊತೆಗೆ ಮದುವೆ ಗೊತ್ತಾದ ಅಮನ್‌ನ ಮೇಲೆ ಎಲ್ಲರ ಅನುಮಾನ ತಿರುಗಿದರೂ ನಂತರದ ಘಟನೆಗಳು ಬೇರೆಯದೆ ತಿರುವು ಪಡೆಯುತ್ತವೆ.
ಈ ಕಥೆಯ ವೇಗವನ್ನು ಅನೇಕ ವಿಷಯಗಳು ಪೇಲವಗೊಳಿಸಿವೆ. ಅದರಲ್ಲಿ ತಮನ್ನಾ ಭಾಟಿಯ ಅವರ ಅಭಿನಯವೂ ಒಂದು. ಆಕೆಯ ಆಂಗಿಕ ಅಭಿನಯ ಸ್ವಲ್ಪವೂ ಆ ಪಾತ್ರಕ್ಕೆ ಹೊಂದುವುದೇ ಇಲ್ಲ. ಆ ಪೊಲೀಸ್ ಅಧಿಕಾರಿಯ ಕಾರ್ಯತತ್ಪರತೆಯ ಮೇಲೆ ಆ ದುರಂತದ ಛಾಯೆ ಗಟ್ಟಿಯಾಗಿ ಕವಿದು ಆ ಪಾತ್ರವನ್ನು ಭಾವನಾತ್ಮಕವಾಗಿ ತುಸು ದುರ್ಬಲಗೊಳಿಸುತ್ತದೆ. ಆದರೆ ತಮನ್ನಾರ ಅಭಿನಯದಲ್ಲಿ ಆ ವಿಷಾದ ಕಂಡುಬರುವುದಿಲ್ಲ. ತಮನ್ನಾ ಅವರಾಗಲೀ ಅಥವಾ ಕಥೆ ಬರೆದವರಾಗಲೀ ಈ ವಿಷಯದ ಬಗ್ಗೆ ಹೆಚ್ಚು ಗಮನ ವಹಿಸದೇ ಹೋದದ್ದು ಬೇಸರ. ಇವರ ಪಾತ್ರಕ್ಕೆ ಹೋಲಿಸಿದರೆ ಭುವನ್ ಪಾತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಆ ಪಾತ್ರಕ್ಕೆ ಬೇಕಾದ ವಿಷಾದ ಮತ್ತು ಪಶ್ಚಾತ್ತಾಪವನ್ನು ಚೆನ್ನಾಗಿ ಅಭಿವ್ಯಕ್ತಿಸಿದ್ದಾರೆ. ಮುಖ್ಯಪಾತ್ರಗಳಿಗಿಂತ ಪೋಷಕ ಪಾತ್ರಗಳೇ ಇಲ್ಲಿ ಕಥೆಯನ್ನು ಪೋಷಿಸಲು ಸಹಾಯ ಮಾಡಿವೆ. ಅಲ್ಲಿನ ಸ್ಥಳೀಯರು ಹಾಗೂ ಪೊಲೀಸ್ ಅಧಿಕಾರಿಗಳು ಇವರೆಲ್ಲರ ಅಭಿನಯ ಕಥೆಯ ಸೊಗಡನ್ನು ಹಿಡಿದಿಡುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿವೆ.
ಒಟ್ಟಾರೆಯಾಗಿ ಹೇಳಬೇಕು ಎಂದರೆ ‘ಆಖ್ರಿ ಸಚ್’ ಒಂದು ಪೊಲೀಸ್, ಥ್ರಿಲ್ಲರ್ ತನಿಖೆ ಮಾದರಿಯ ಒಂದು ಸರಣಿ. ಈ ಮಾದರಿಗೆ ಇರಬೇಕಾದ ಎಲ್ಲ ಅಂಶಗಳನ್ನೂ ಒಳಗೊಂಡಿರುವ ಸರಣಿ. ಪೂರ್ತಿ ಪರಿಣಾಮಕಾರಿಯಾಗಿ ಇಲ್ಲದಿದ್ದರೂ ಅಲ್ಲಲ್ಲಿ ಬಹಳ ಚುರುಕಾಗಿ ಕಥೆ ಸಾಗುತ್ತದೆ. ಪೋಷಕ ಪಾತ್ರಗಳೇ ಈ ಸರಣಿಯ ಜೀವಾಳ. ಆದರೆ ಒಟ್ಟಾರೆಯಾಗಿ ಮೂಡಬೇಕಿದ್ದ ಒಂದು ಪರಿಣಾಮ ಮೂಡಿಬರದೇ ಬಿಡಿಬಿಡಿಯಾಗಿ ಸರಣಿ ಮನಸ್ಸಲ್ಲಿ ನಿಲ್ಲುತ್ತದೆ. ಈ ಕಥೆಗೆ ಮುಖ್ಯವಾಗಿ ಇರಬೇಕಿದ್ದ ಉದ್ವೇಗ ಮತ್ತು ರೋಚಕತೆಯಲ್ಲಿ ಲೋಪವಾಗಿದೆ. 2018ರ ಬುರಾರಿ ದುರಂತದ ಕರಿನೆರಳು ಮತ್ತು ತೀವ್ರತೆ ಆ ಘಟನೆಯ ಬಗ್ಗೆ ತಿಳಿದವರಿಗಷ್ಟೇ ಗೊತ್ತು. ಆ ಘಟನೆಯ ನಂತರದ ಭಯ, ವಿಷಾದ ಇವೆಲ್ಲವೂ ಈ ಸರಣಿಯ ಮುಖ್ಯ ಅಂಶಗಳಾಗಿ ಬಿಂಬಿತವಾಗಬೇಕಿತ್ತು. ಅದು ಯಾವುದೂ ಇಲ್ಲಿ ಕಾಣಬರದೇ ಸರಣಿ ಕೆಲವೆಡೆ ಬಹಳ ಪೇಲವ ಎನಿಸುತ್ತದೆ. ಘಟನೆಯ ತೀವ್ರತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ನಿರ್ದೇಶಕರು ಸೋತಿದ್ದಾರೆ. ಇಂಥ ಘಟನೆಗಳನ್ನು ತೆರೆಯ ಮೇಲೆ ತರಬೇಕಾದಾಗ ಚಿತ್ರಕಥೆಯಲ್ಲಿ, ಪಾತ್ರಗಳಲ್ಲಿ, ಅಭಿನಯದಲ್ಲಿ ಬೇಕಿರುವ ಭಾವತೀವ್ರತೆ ಎಲ್ಲಿಯೂ ಕಂಡುಬರುವುದಿಲ್ಲ.
ವೀಕ್ಷಕರಿಗೆ ಘಟನೆ ಘಟಿಸುವಾಗ ಬಲಿಯಾದವರಲ್ಲಿ ಏನೇನು ಭಯ ನೆಲೆಸಿತ್ತೋ ಆ ಭಯ ಮತ್ತು ಭೀತಿ ಅನುಭವಕ್ಕೆ ಬರಬೇಕು. ಇಲ್ಲಿ ಅದಾಗುವುದಿಲ್ಲ. ಆದರೂ ಸರಣಿ ಒಂದು ಮಟ್ಟಕ್ಕೆ ಕಥಾನಿರೂಪಣೆಯಲ್ಲಿ ಬಿಗಿಯನ್ನು ಕಾಯ್ದುಕೊಂಡಿರುವುದರಿಂದ ಕೊನೆಯವರೆಗೂ ಬಿಗಿಹಿಡಿದು ನೋಡಿಸಿಕೊಳ್ಳುತ್ತದೆ. ‘ಆಖ್ರಿ ಸಚ್’ ತಾಂತ್ರಿಕವಾಗಿ ಬಹಳ ಅಚ್ಚುಕಟ್ಟಾದ ಸರಣಿ. ಭಾವನಾತ್ಮಕವಾಗಿ ಇನ್ನಷ್ಟು ಪಕ್ವವಾಗಿದ್ದರೆ ಒಂದು ಪರ್ಫೆಕ್ಟ್ ಎಮೋಷನಲ್ ಥ್ರಿಲ್ಲರ್ ಆಗಬಹುದಾದ ಸಾಧ್ಯತೆಗಳಿದ್ದವು. ಇದು ಆ ಅವಕಾಶವನ್ನು ತಪ್ಪಿಸಿಕೊಂಡಿದೆ. ಒಮ್ಮೆ ಖಂಡಿತ ನೋಡಬಹುದು. ಸರಣಿ DisneyPlus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ.