ಖ್ಯಾತ ಮಲಯಾಳಂ ನಟ ಕುಂದರ ಜಾನಿ ಇಹಲೋಕ ತ್ಯಜಿಸಿದ್ದಾರೆ. ನಾಲ್ಕು ದಶಕಗಳ ಕಾಲ 500ಕ್ಕೂ ಹೆಚ್ಚು ಖಳ, ಪೋಷಕ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ.
ಮಲಯಾಳಂನ ಖ್ಯಾತ ನಟ ಕುಂದರ ಜಾನಿ (71) ಮೊನ್ನೆ ಅಕ್ಟೋಬರ್ 17ರ ರಾತ್ರಿ ಅಗಲಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳ, ಪೋಷಕ ಪಾತ್ರಗಳಲ್ಲಿ ಜಾನಿ ಅಭಿನಯಿಸಿದ್ದಾರೆ. ಜಾನಿ ಜೋಸೆಫ್ ಎಂಬ ಮೂಲ ನಾಮದಿಂದ ಕರೆಯಲ್ಪಡುತ್ತಿದ್ದ ಜಾನಿ, ತಮ್ಮ 23ನೇ ವಯಸ್ಸಿನಲ್ಲಿ ‘ನಿತ್ಯ ವಸಂತಂ’ (1979) ಮಲಯಾಳಂ ಚಲನಚಿತ್ರದಲ್ಲಿ 55 ವರ್ಷ ವಯಸ್ಸಿನ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ನಂತರ ‘ಅಗ್ನಿಪರ್ವತಂ’, ‘ರಾಜವಿಂತೆ ಮಗನ್’, ‘ಆವನಾಜಿ’ ಸಿನಿಮಾಗಳು ಇವರಿಗೆ ಹೆಸರು ತಂದುಕೊಟ್ಟವು. ‘ನಾಡೋಡಿಕ್ಕಟ್ಟೆ’ ಚಿತ್ರದಲ್ಲಿ ಭೂಗತ ಲೋಕದ ಡಾನ್ ನಂಬಿಯಾರ್ ಹಿಂಬಾಲಕನಾಗಿ ಅವರ ಬ್ರೇಕ್‌ಔಟ್ ಹಾಸ್ಯ ಪಾತ್ರ ಇಂದಿಗೂ ಪ್ರೇಕ್ಷರನ್ನು ಕಾಡುತ್ತದೆ. ಆ ಪಾತ್ರವು ತನ್ನದೇ ಆದ ರೂಪ ಪಡೆದುಕೊಂಡು ಇತ್ತೀಚಿನ ದಿನಗಳಲ್ಲಿ ಮೀಮ್‌ಗಳಲ್ಲಿ ಆಗಾಗ ಕಾಣಿಸಿಕೊಂಡಿದೆ. 1988ರಲ್ಲಿ ತೆರೆಕಂಡ ‘Oru CBI ಡೈರಿ ಕುರಿಪ್ಪು’ ಚಿತ್ರದ ‘ವಾಸು’ ಪಾತ್ರ ಅವರ ಜನಪ್ರಿಯತೆ ಹೆಚ್ಚಿಸಿತು.
‘ಗಾಡ್‌ಫಾದರ್’, ‘ಇನ್‌ಸ್ಪೆಕ್ಟರ್ ಬಲರಾಮ್’, ‘ಆವನಾಜಿ’, ‘ರಾಜವಿಂತೆ ಮಗನ್’, ‘ಕಿರೀಡೋಮ್’, ‘ಒರು ವಡಕ್ಕನ್ ವೀರಗಾಥ’, ‘ಸಮೂಹಂ’, ‘ಚೆಂಕೋಲ್’, ‘ಆರಂ ತಂಪುರನ್’, ‘ವರ್ಣಪಕಿಟ್ಟು’, ‘ಸ್ಪಟಿಕಂ’ ಅವರ ನಟನೆಯ ಕೆಲವು ಪ್ರಮುಖ ಮಲಯಾಳಂ ಸಿನಿಮಾಗಳು. ‘ವಾಜ್ಕೈ ಚಕ್ರಂ’, ‘ನಾಡಿಗನ್’ ಅವರ ತಮಿಳು ಸಿನಿಮಾಗಳು. 2022ರಲ್ಲಿ ಬಿಡುಗಡೆಯಾದ ಉನ್ನಿ ಮುಕುಂದನ್ ನಟನೆಯ ‘ಮೆಪ್ಪಡಿಯಾನ್’ ಅವರ ನಟನೆಯ ಕೊನೆಯ ಚಿತ್ರ. ನಟನ ನಿಧನಕ್ಕೆ ಸಂತಾಪ ಸೂಚಿಸಿದ ಕೇರಳ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್, ‘ಜಾನಿ ತಮ್ಮ ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಅಗಲಿಕೆ ಸಿನಿರಂಗಕ್ಕೆ ತುಂಬಲಾರದ ನಷ್ಟ’ ಎಂದಿದ್ದಾರೆ. ಜಾನಿ ಅವರ ಅಗಲಿಕೆಗೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.