ಇಲ್ಲಿ ಎಲ್ಲವೂ ಮಾತಿನಲ್ಲೇ ಶುರುವಾಗಿ ಮಾತಿನಲ್ಲೇ ಮುಗಿದುಹೋಗುತ್ತದೆ. ಒಬ್ಬರನ್ನೊಬ್ಬರು ಹೇಗೆ ಅರ್ಥ ಮಾಡಿಕೊಂಡಿರುತ್ತಾರೆ, ಅರ್ಥ ಮಾಡಿಕೊಳ್ಳುತ್ತಾರೆ ಎಂಬುದನ್ನು ಸಿನಿಮಾ ತೋರಿಸುತ್ತದೆ. ಸತ್ಯ ಯಾವುದು ಸುಳ್ಳು ಯಾವುದು ಎಂಬುದನ್ನು ಕೇಳುವವರು ನಿರ್ಧರಿಸಬಹುದು ಎಂಬ ಡೈಲಾಗ್‌ನಂತೆಯೇ ಸಿನಿಮಾ ಸುಳ್ಳುಗಳ ಸುರುಳಿ ಬಿಚ್ಚುತ್ತಾ ಬದುಕಿನ ಸತ್ಯವನ್ನು ನಮ್ಮ ಮುಂದೆ ತಂದಿಡುತ್ತದೆ. ‘ಆಯಿರತೊನ್ನ್ ನುಣಗಳ್’ ಸೋನಿ LIVನಲ್ಲಿ ಸ್ಟ್ರೀಮ್‌ ಆಗುತ್ತಿದೆ.

‘ಆಯಿರತೊನ್ನ್ ನುಣಗಳ್’ (1001 ಸುಳ್ಳುಗಳು) ಹೆಸರೇ ಹೇಳುವಂತೆ ಸುಳ್ಳಿನ ಬಗ್ಗೆಯೇ ಇರುವ ಸಿನಿಮಾ. ಸಲೀಂ ಅಹಮದ್ ನಿರ್ಮಾಣ, ಕೆವಿ ತಾಮರ್ ನಿರ್ದೇಶನದ ಈ ಸಿನಿಮಾ ಸೋನಿ LIVನಲ್ಲಿ ಪ್ರಸಾರವಾಗುತ್ತಿದೆ. ಕತೆ ನಡೆಯುವ ಸ್ಥಳ ದುಬೈ. ಗೆಳೆತನದ ಪ್ರೀತಿಯ ಬಂಧಗಳನ್ನು ಮಾತ್ರವಲ್ಲದೆ ವೈವಾಹಿಕ ಸಂಬಂಧಗಳಲ್ಲಿನ ಏರಿಳಿತಗಳನ್ನು ಇದು ಚರ್ಚಿಸುತ್ತದೆ. ತಾಮರ್ ಮತ್ತು ಹಾಶಿಮ್ ಸುಲೈಮಾನ್ ಚಿತ್ರದ ಬರವಣಿಗೆಯನ್ನು ಸರಳ ಮತ್ತು ತೀಕ್ಷ್ಣವಾದ ಸಂಭಾಷಣೆಗಳೊಂದಿಗೆ ಪರಿಪೂರ್ಣಗೊಳಿಸಿದ್ದಾರೆ. ಆಪ್ತ ಸ್ನೇಹಿತರ ಸಣ್ಣ ವಲಯದಲ್ಲಿ ನಡೆಯುವ ಸಂಭಾಷಣೆಯಲ್ಲೇ ಎಲ್ಲವನ್ನೂ ಅಚ್ಚುಕಟ್ಟಾಗಿ ಹೇಳಲಾಗಿದೆ.

ಸೌಮ್ಯ- ರಾಜೇಶ್, ಮುಜೀಬ್- ಸಲ್ಮಾ, ಬೆನ್ಜಿ- ಎಲ್ವಿನ್, ದಿವ್ಯಾ-ವಿನಯ್, ಜೋಫಿ-ಅಲೀನಾ ಮತ್ತು ವಕೀಲ್ ತಮ್ಮ ಕುಟುಂಬದೊಂದಿಗೆ ವಿದೇಶದಲ್ಲಿ ವಾಸಿಸುವ ಆತ್ಮೀಯ ಸ್ನೇಹಿತರು. ಸೌಮ್ಯ-ರಾಜೇಶ್ ಮತ್ತು ಮುಜೀಬ್-ಸಲ್ಮಾ ವಾಸಿಸುವ ಫ್ಲಾಟ್‌ನಲ್ಲಿ ಬೆಂಕಿ ಹೊತ್ತಿ ಅವರ ವಸ್ತುಗಳೆಲ್ಲವೂ ಸುಟ್ಟು ಹೋಗಿವೆ. ಈ ಎರಡು ಕುಟುಂಬ ಆಸರೆ ಪಡೆಯಲು ಬಂದಿರುವುದು ದಿವ್ಯಾ ಮತ್ತು ವಿನಯ್ ಅವರ ಮನೆಗೆ. ಚಿತ್ರ ಶುರುವಾಗುವುದು ಹೀಗೆ. ಈ ಬಗ್ಗೆ ಮಾಹಿತಿ ತಿಳಿದು ಇತರ ಗೆಳೆಯರೂ ಅಲ್ಲಿಗೆ ಬರುತ್ತಾರೆ. ಇದು ಅವರ ನಡುವಿನ ಸಂಬಂಧದ ಆಳವನ್ನು ಸೂಚಿಸುತ್ತವೆ. ಬೆಂಕಿ ಅವಘಡದಿಂದ ಸ್ವಲ್ಪಮಟ್ಟಿಗೆ ಪಾರಾದ ಕುಟುಂಬಗಳಿಗೆ ಎಲ್ಲರೂ ಸಹಾಯಕ್ಕೆ ನಿಲ್ಲುವ ಮೂಲಕ ಅವರ ನಡುವಿನ ಗೆಳೆತನ ಯಾವ ರೀತಿ ಇದೆ ಎಂಬುದನ್ನು ತೋರಿಸಲಾಗಿದೆ.

ಚಿತ್ರದ ಪ್ರಮುಖ ಪಾತ್ರಗಳೇ ಐದು ಜೋಡಿಗಳು, ಹೆಚ್ಚಿಗೆ ಎಂದರೆ ಗೆಳೆಯನೇ ಆಗಿರುವ ವಕೀಲ (ಸುಧೀಶ್ ಸಖರಿಯಾ). ಅವರ ಹೆಂಡತಿ ಊರಿಗೆ ಹೋಗಿರುವ ಕಾರಣ ಅವರೊಬ್ಬರೇ ಈ ಕಾರ್ಯಕ್ರಮಕ್ಕೆ ಬಂದಿರುತ್ತಾರೆ. ಇನ್ನೊಂದು ಪಾತ್ರವೆಂದರೆ ವಿನಯ್ ಮನೆ ಸಹಾಯಕಿ ಇಂದು (ರಮ್ಯಾ ಸುರೇಶ್) ಮತ್ತು ಆಕೆಯ ಪತಿ. ಇಲ್ಲಿರುವ ಪ್ರತಿಯೊಬ್ಬ ಜೋಡಿಯದ್ದೂ ಒಂದೊಂದು ಕತೆಯಿದೆ. ಆಶ್ರಯ ಪಡೆಯಲು ಬಂದ ಸ್ನೇಹಿತರನ್ನು ಬರಮಾಡಿಕೊಂಡ ವಿನಯ್ ಮತ್ತು ದಿವ್ಯಾ ಮರುದಿನ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದಾರೆ. ವಿವಾಹ ವಾರ್ಷಿಕೋತ್ಸವದ ಉಡುಗೊರೆಯಾಗಿ ವಿನಯ್ ತನ್ನ ಹೆಂಡತಿ ದಿವ್ಯಾಳಿಗೆ ದುಬಾರಿ ವಾಚನ್ನು ಉಡುಗೊರೆಯಾಗಿ ಕೊಡುತ್ತಾನೆ. ಅದೊಂದು ಸರ್ಪ್ರೈಸ್‌ ಗಿಫ್ಟ್. ಈ ಸಂಭ್ರಮಾಚರಣೆಯಲ್ಲಿ ಆಡುವ ಆಟವೇ ಚಿತ್ರದ ಕಥಾವಸ್ತು! ಗೆಳೆಯರು ಎಲ್ಲರೂ ಸೇರಿದ್ದಲ್ಲವೇ ತಮಾಷೆಗಾಗಿ Truth or Dare ರೀತಿಯಲ್ಲಿಯೇ ಇಲ್ಲಿವರೆಗೆ ತಮ್ಮ ಸಂಗಾತಿಯಲ್ಲಿ ಹೇಳದೇ ಇರುವ ಸುಳ್ಳುಗಳನ್ನು ಹೇಳಬೇಕು. ಇದರಿಂದ ಯಾರಿಗಾದರೂ ತೊಂದರೆ ಆದರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂಬ ನಿರೀಕ್ಷಣಾ ಜಾಮೀನು ತೆಗೆದುಕೊಂಡೇ ವಕೀಲ ಹೊಸ ಆಟಕ್ಕಾಗಿ ಅಲ್ಲಿರುವ ಜೋಡಿಗಳನ್ನು ಹುರಿದುಂಬಿಸುತ್ತಾರೆ.

ಅತಿಥಿಗಳಲ್ಲಿ ಒಬ್ಬರಾದ ಸಲ್ಮಾ (ಶಾಮ್ಲಾ ಹಮ್ಜಾ) ‘ಇದು ಮೋಜಿನ ವಿಷಯವಲ್ಲ’ ಎಂದು ಮೊದಲಿಗೇ ಹೇಳುತ್ತಾಳೆ. ಅದು ಯಾವ ರೀತಿ ಇರುತ್ತದೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಒಂದು ಕುಟುಂಬದಲ್ಲಿ ವಿವಾಹ ವಾರ್ಷಿಕೋತ್ಸವಕ್ಕೆ ಬಂದು ಸೇರಿದ ಗೆಳೆಯರ ಕುಟುಂಬ ಒಂದೆಡೆಯಾದರೆ ಆ ಮನೆಯಲ್ಲಿ ಮನೆಗೆಲಸಕ್ಕೆ ಸಹಾಯಕಿ ಆಗಿರುವ ಇಂದು ಅವರ ಕುಟುಂಬದ ಕತೆ ಇಲ್ಲಿ ಉಪಕತೆಯಾಗಿದೆ.

ಅಲ್ಲಿ ಬಂದಿದ್ದ ಜೋಡಿಗಳು ತಮ್ಮ ಸಂಗಾತಿಯ ಜತೆ ಈವರೆಗೆ ಹಂಚಿಕೊಳ್ಳದ ವಿಷಯಗಳನ್ನು ಒಬ್ಬೊಬ್ಬರಾಗಿಯೇ ಹೇಳುತ್ತಾರೆ. ತನ್ನ ಗಂಡ ತನ್ನಿಂದ ಏನೂ ಮುಚ್ಚಿಟ್ಟಿಲ್ಲ, ಅವ ಎಲ್ಲವನ್ನೂ ತನ್ನಲ್ಲಿ ಶೇರ್ ಮಾಡ್ತಾನೆ ಎಂದು ಹೇಳುವ ಹೆಂಡತಿಯ ಮುಂದೆಯೇ ಗಂಡ ಇಲ್ಲಿವರೆಗೆ ಹೇಳದ ಸತ್ಯವನ್ನು ಹೇಳಿಬಿಡುತ್ತಾನೆ. ಎಲ್ಲಿ ತನ್ನ ಗಂಡ ತನ್ನನ್ನು ದೂರಿವಿರಿಸುತ್ತಾನೋ ಎಂಬ ಭಯದಿಂದ ತನಗೆ ಮಕ್ಕಳಾಗಲ್ಲ ಎಂಬ ಸತ್ಯವನ್ನು ಬಚ್ಚಿಟ್ಟು, ಗಂಡನಲ್ಲೇ ಸಮಸ್ಯೆ ಇದೆ ಎಂದು ಮೆಡಿಕಲ್ ರಿಪೋರ್ಟ್ ಕೂಡಾ ಸುಳ್ಳೇ ಬರೆಯುವಂತೆ ವೈದ್ಯೆಯಾಗಿರುವ ಗೆಳತಿಯಲ್ಲಿ ಹೇಳಿ ಮಾಡಿಸಿದ್ದು ಎಂದು ಬೆನ್ಜಿ ಹೇಳಿದಾಗ ತಮಾಷೆಯ ವಾತಾವರಣ ಗಂಭೀರವಾಗಿ ಬಿಡುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ, ಹೇಳಲಾಗದ ಪರಿಸ್ಥಿತಿಗಳು ಎಲ್ಲವನ್ನೂ ಒಂದು ಮನೆಯಲ್ಲೇ ತೋರಿಸಲಾಗಿದೆ.

ಸಂಗಾತಿಗೆ ಹೇಳಿದ ಸುಳ್ಳುಗಳು ಮತ್ತು ಹೇಳಲಾಗದ ರಹಸ್ಯಗಳು ಬಹಿರಂಗಗೊಳ್ಳುತ್ತಿದ್ದಂತೆ ಅಲ್ಲಿ ವಾದ – ಜಗಳ, ಮನಿಸು, ಸಿಡುಕು ಎಲ್ಲವೂ ಕಾಣಿಸುತ್ತದೆ. ಈ ರೀತಿ ಬಹಿರಂಗಪಡಿಸುವಿಕೆಯಿಂದ ಸಂಬಂಧ ಮುರಿದೇ ಹೋಗುತ್ತದೆ ಎಂದು ಅನಿಸಿದರೂ ಇಲ್ಲಿ ಎಲ್ಲವೂ ಪಾಸಿಟಿವ್. ಸಂಗಾತಿಯನ್ನು ಅರ್ಥ ಮಾಡಿಕೊಂಡು ಅವರು ಒಂದಾಗುತ್ತಾರೆ. ಈ ಹೊತ್ತಲ್ಲೇ ಅಮೂಲ್ಯ ಗಿಫ್ಟ್ ವಾಚ್ ಕಾಣೆಯಾಗಿಬಿಡುತ್ತದೆ. ಅಲ್ಲಿದ್ದವರು ಅಷ್ಟೇ ಜನ, ಇದ್ದವರಲ್ಲಿ ಕದ್ದವರು ಯಾರು? ಒಬ್ಬರನ್ನೊಬ್ಬರು ಬೆರಳು ತೋರಿಸುತ್ತಾ ಜಗಳವೇ ಆಗಿ ಬಿಡುತ್ತದೆ. ಕೊನೆಗೇ ವಿನಯ್ ಈಗ ನನ್ನ ಸರದಿ ಎಂದು ಆ ಸುಳ್ಳನ್ನು ಹೇಳಿ ಬಿಡುತ್ತಾನೆ. ಅವನು ಹೇಳಿದ್ದು ಸುಳ್ಳೋ, ಸತ್ಯವೋ? ಆತನ ಒಂದೇ ಒಂದು ಮಾತು ಎಲ್ಲವನ್ನೂ ಬದಲಿಸಿ ಬಿಡುತ್ತದೆ.

ಜಿತಿನ್ ಸ್ಟಾನ್ಸಿಲಾಸ್ ಅವರ ಛಾಯಾಗ್ರಹಣ, ನೇಹಾ ನಾಯರ್ ಮತ್ತು ಯಕ್ಸನ್ ಪಾತ್ರಗಳ ಚಲನೆ ಮತ್ತು ಕಥೆಗೆ ಅನುಗುಣವಾಗಿ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕಥೆಯು ವರ್ಷಗಳಿಂದ ಪ್ರತಿಯೊಬ್ಬರನ್ನು ತಿಳಿದಿರುವ ಜನರ ನಡುವಿನ ಅಸಹನೆ, ಅಹಂ ಎಲ್ಲವನ್ನೂ ಕಿತ್ತು ಬಿಸಾಕುವಂತೆ ಸಂದೇಶ ನೀಡುತ್ತದೆ. ಮದುವೆಯ ನಂತರ ಮಹಿಳೆಯರು ತಮ್ಮ ಸರ್‌ನೇಮ್ ಬದಲಾಯಿಸಬೇಕೇ? ದಂಪತಿಗಳ ನಡುವೆ ಸಂಪೂರ್ಣ ನಂಬಿಕೆಯಂತಹ ವಿಷಯವಿದೆಯೇ ಎಂಬ ಪ್ರಶ್ನೆಗಳನ್ನು ಎತ್ತುವ ಮೂಲಕ ಸಿನಿಮಾ ನಮ್ಮಲ್ಲಿ ಹಲವು ಪ್ರಶ್ನೆಗಳನ್ನು ಕೇಳುತ್ತದೆ .

ಮೊನಚಾದ ಬರವಣಿಗೆ ಮತ್ತು ನಿರ್ದಿಷ್ಟ ಸ್ಥಳವೊಂದರಲ್ಲೇ ಎಲ್ಲವೂ ಘಟಿಸುವಂತೆ ಮಾಡಿದ ಶೂಟಿಂಗ್ ಶೈಲಿಯನ್ನು ಮೆಚ್ಚಬೇಕು. Truth or Dare ಸಮಯದಲ್ಲಿ ದಂಪತಿಗಳ ನಡುವಿನ ಹೊಂದಾಣಿಕೆ, ಕಷ್ಟ ಸುಖಗಳು ಎಲ್ಲವೂ ಮಾತಿನ ಮೂಲಕ ಹೊರಬರುತ್ತವೆ. ಇಲ್ಲಿ ಎಲ್ಲವೂ ಮಾತಿನಲ್ಲೇ ಶುರುವಾಗಿ ಮಾತಿನಲ್ಲೇ ಮುಗಿದುಹೋಗುತ್ತದೆ. ಒಬ್ಬರನ್ನೊಬ್ಬರು ಹೇಗೆ ಅರ್ಥ ಮಾಡಿಕೊಂಡಿರುತ್ತಾರೆ, ಅರ್ಥ ಮಾಡಿಕೊಳ್ಳುತ್ತಾರೆ ಎಂಬುದನ್ನು ಸಿನಿಮಾ ತೋರಿಸುತ್ತದೆ. ಸತ್ಯ ಯಾವುದು ಸುಳ್ಳು ಯಾವುದು ಎಂಬುದನ್ನು ಕೇಳುವವರು ನಿರ್ಧರಿಸಬಹುದು ಎಂಬ ಡೈಲಾಗ್‌ನಂತೆಯೇ ಸಿನಿಮಾ ಸುಳ್ಳುಗಳ ಸುರುಳಿ ಬಿಚ್ಚುತ್ತಾ ಬದುಕಿನ ಸತ್ಯವನ್ನು ನಮ್ಮ ಮುಂದೆ ತಂದಿಡುತ್ತದೆ. ‘ಆಯಿರತೊನ್ನ್ ನುಣಗಳ್’ ಸಿನಿಮಾ ಸೋನಿ Livನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here