ನಿರ್ದೇಶಕ ಉಮೇಶ್ ಮಂಡ್ಯ ಸೀಮೆಯ ಭಾಷೆ, ಸಂಸ್ಕೃತಿ, ಹರಕೆ, ಆಚರಣೆ, ಒಡನಾಟಗಳನ್ನು ಸೊಗಸಾಗಿ ತೆರೆಗೆ ಅಳವಡಿಸಿದ್ದಾರೆ. ತಿಳಿಹಾಸ್ಯ, ಚಿತ್ರಕಥೆಯ ಭಾಗವಾಗಿದ್ದು ಸಿನಿಮಾ ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ.ನಟ ರಂಗಾಯಣ ರಘು ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ನಡೆದಿದ್ದಾರೆ. ಬಹಳ ವರ್ಷಗಳ ನಂತರ ಅವರಿಗೆ ಸಿಕ್ಕಿರುವ ಅಪರೂಪದ ಪಾತ್ರವಿದು.
‘ಕಮರ್ಷಿಯಲ್’ ಎನ್ನುವ ಹಣೆಪಟ್ಟಿಯೊಂದಿಗೆ ಬಿಡುಗಡೆಯಾಗುವ ಸಿನಿಮಾಗಳಿಗೆ ಸಾಕಷ್ಟು ಮಿತಿಗಳಿರುತ್ತವೆ. ನಿರ್ಧಿಷ್ಟ ಪ್ರಾದೇಶಿಕತೆ, ಭಾಷೆ, ಸಂಸ್ಕೃತಿಯನ್ನು ಹೇಳಲು ಹೊರಟರೆ ಎಲ್ಲರಿಗೂ ಕನೆಕ್ಟ್ ಆಗಲ್ಲ ಎನ್ನುವುದೊಂದು ಅಲ್ಲಿನ ಗ್ರಹಿಕೆ. ಜೊತೆಗೆ ಹೀರೋ ವೈಭವೀಕರಣ ಹಾಗೂ ಇನ್ನಿತರೆ ಮಸಾಲೆ ಅಂಶಗಳನ್ನು ಬೆರೆಸಬೇಕಾದ ಅನಿವಾರ್ಯತೆಯೂ ಇರುತ್ತದೆ. ಇಂತಹ ಮಿತಿಗಳ ಮಧ್ಯೆ ಅಪ್ಪಟ ನೆಲದ ಕತೆಯನ್ನು ಗಟ್ಟಿಯಾಗಿ ಹೇಳುವುದು ಕಷ್ಟ. ಹಾಗಾಗಿ ‘ಕಮರ್ಷಿಯಲ್ ಚೌಕಟ್ಟಿ’ನಲ್ಲಿ ನೆಲದ ಸಿನಿಮಾಗಳು ಪರಿಣಾಮಕಾರಿಯಾಗಿ ರೂಪುಗೊಳ್ಳುವುದು ಕಡಿಮೆ. ಒಂದೊಮ್ಮೆ ಮಾಡಿದರೂ ಹೀರೋಯಿಸಂನಿಂದಾಗಿ ಅವು ತೆಳುವಾಗುತ್ತವೆ.
ಹೀಗಿದ್ದಾಗ, ನಿರ್ದೇಶಕರು ರಿಯಲಿಸ್ಟಿಕ್ ಅಪ್ರೋಚ್ (‘ತಿಥಿ ಸಿನಿಮಾ’ ಒಂದು ಉದಾಹರಣೆ) ಮಾಡಿದರೆ ಹೇಗೆಂದು ಆಲೋಚಿಸುತ್ತಾರೆ. ಇಂತಹ ಮಾದರಿಯಲ್ಲಿ ದೊಡ್ಡ ವರ್ಗದ ಪ್ರೇಕ್ಷಕರನ್ನು ಒಳಗೊಳ್ಳುವುದು ಕಷ್ಟ. ಅಲ್ಲದೆ ಸಿನಿಮಾದ ಪ್ರೊಮೋಷನ್, ಬಾಕ್ಸ್ ಆಫೀಸ್ ಸೇರಿದಂತೆ ಹಲವು ವಿಚಾರಗಳಲ್ಲಿ ಹಿನ್ನೆಡೆಯಾಗುವುದು ಸಹಜ. ಮಣ್ಣಿನ ಸೊಗಡಿನ ಕತೆ, ಆ ಪ್ರದೇಶದ ಭಾಷೆ, ಸ್ಲ್ಯಾಂಗ್, ಸಂಸ್ಕೃತಿ, ಆಚರಣೆಗಳನ್ನು ಹೇಳುತ್ತಲೇ ಪ್ರೇಕ್ಷಕರನ್ನು ರಂಜಿಸುವುದು ಸವಾಲು. ಈ ಹಾದಿಯಲ್ಲಿ ‘ಟಗರು ಪಲ್ಯ’ ಚಿತ್ರದ ನಿರ್ದೇಶಕ ಉಮೇಶ್ ಕೃಪ ಯಶಸ್ವಿಯಾಗಿದ್ದಾರೆ. ಮಂಡ್ಯ, ಮಳವಳ್ಳಿ ಗ್ರಾಮೀಣ ನೆಲದ ಕತೆಯನ್ನು ಅಲ್ಲಿನ ಸೊಗಡಿನೊಂದಿಗೆ ನಿರೂಪಿಸಿದ್ದಾರೆ.
‘ಟಗರು ಪಲ್ಯ’ ಟ್ರೇಲರ್‌ನಲ್ಲಿ ‘ಬನ್ನಿ… ಊರ್ ಕಡೆ ಒಂದ್ ಸಾರಿ ಹೋಗ್ ಬರಾನ’ ಎಂದು ಸಿನಿಮಾಗೆ ಇನ್ವಿಟೇಷನ್ ಕೊಟ್ಟಿದ್ದರು. ಗ್ರಾಮೀಣ ಭಾಗದ ಪ್ರೇಕ್ಷಕರು, ಅಲ್ಲಿಂದ ನಗರಗಳಿಗೆ ವಲಸೆ ಬಂದವರು ಸಿನಿಮಾ ವೀಕ್ಷಿಸುವಾಗ ಖಂಡಿತ ತಮ್ಮ ಊರು – ಮನೆಯನ್ನು ನೆನಪು ಮಾಡಿಕೊಳ್ಳುತ್ತಾರೆ. ನಿರ್ದೇಶಕ ಉಮೇಶ್ ಮಂಡ್ಯ ಸೀಮೆಯ ಭಾಷೆ, ಸಂಸ್ಕೃತಿ, ಹರಕೆ, ಆಚರಣೆ, ಒಡನಾಟಗಳನ್ನು ಸೊಗಸಾಗಿ ತೆರೆಗೆ ಅಳವಡಿಸಿದ್ದಾರೆ. ಇದು ಒಂದು ಹಗಲಿನಲ್ಲಿ ನಡೆಯುವ ಕತೆ. ಆದರೆ ಎಲ್ಲಿಯೂ ಪ್ರೇಕ್ಷಕರಿಗೆ ಬೇಸರವಾಗದಂತೆ ನಿರೂಪಿಸುತ್ತಾ ಹೋಗಿದ್ದಾರೆ. ಅಲ್ಲಿನ ಭಾಷೆ, ಆಚಾರ – ವಿಚಾರಗಳೇ ಹಾಸುಹೊಕ್ಕಾಗಿರುವ ತಿಳಿಹಾಸ್ಯ ಚಿತ್ರಕಥೆಯ ಭಾಗವಾಗಿದೆ. ಹಾಗಾಗಿ ಸಿನಿಮಾ ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ.
ಚಿತ್ರಕಥೆಯಲ್ಲಿ ಪ್ರೇಮಕತೆಯ ಜೊತೆ ಹರಕೆ, ಆಚರಣೆಗಳ ಪ್ರಸ್ತಾಪವಿದೆ. ಪ್ರೀತಿಯ ಕತೆಯೊಂದಿಗೆ ‘ಸಂಬಂಜ ಅನ್ನೋದು ದೊಡ್ದು ಕನ’ ಎನ್ನುವ ಆಶಯವಿದೆ. ಮಗಳು ಜ್ಯೋತಿ ಮದುವೆ ನಿಶ್ಚಯವಾದರೆ ಟಗರು ಬಲಿ ಕೊಡುವುದಾಗಿ ಪಾಂಡಪ್ಪ ಹರಕೆ ಹೊತ್ತಿದ್ದಾನೆ. ಹರಕೆಯ ಟಗರು ತಲೆ ಒದರದೆ ಮೊಂಡುಬೀಳುತ್ತದೆ. ಇದೊಂದು ಸಣ್ಣ ಟ್ವಿಸ್ಟ್‌ನೊಂದಿಗೆ ನಿರ್ದೇಶಕರಿಲ್ಲಿ ಬಹಳಷ್ಟು ವಿಷಯಗಳನ್ನು ಹೇಳುತ್ತಾರೆ. ರೈತರ ಪಡಿಪಾಟಲು, ನಗರೀಕರಣದ ಸವಾಲು, ಸಣ್ಣ ವಿಚಾರಕ್ಕೆ ದೂರವಾಗುವ ಸಂಬಂಧಗಳು, ರೈತ ಯುವಕರ ಮದುವೆ ಗೋಜಲು.. ಹೀಗೆ ತಮಾಷೆಯ ನಿರೂಪಣೆಯಲ್ಲೇ ಕೆಲವು ಸಂಕೀರ್ಣವಾದ ವಿಚಾರಗಳು ಪ್ರಸ್ತಾಪವಾಗುತ್ತವೆ.
ನಿರ್ದೇಶಕ ಉಮೇಶ್ ಆಶಯವನ್ನು ತೆರೆ ಮೇಲೆ ಸಾಕಾರಗೊಳಿಸುವಲ್ಲಿ ಕಲಾವಿದರ ಪಾತ್ರ ಬಹುದೊಡ್ಡದು. ನಟ ರಂಗಾಯಣ ರಘು ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ನಡೆದಿದ್ದಾರೆ. ಬಹಳ ವರ್ಷಗಳ ನಂತರ ಅವರಿಗೆ ಸಿಕ್ಕಿರುವ ಅಪರೂಪದ ಪಾತ್ರವಿದು. ಅವರ ಬಾಡಿ ಲಾಂಗ್ವೇಜ್, ಸ್ಲ್ಯಾಂಗ್, ಬಿಡುಬೀಸಾಗಿ ನಟಿಸುವ ಕಲೆ ಈ ಚಿತ್ರಕಥೆಗೆ ಸೂಕ್ತ ರೀತಿಯಲ್ಲಿ ಹೊಂದಿಕೆಯಾಗಿದೆ. ಮಗಳ ಪ್ರೀತಿಯ ಗುಟ್ಟುಗಳಿಂದ ತಳಮಳಗೊಳ್ಳುವ ಅಮ್ಮನಾಗಿ ತಾರಾ ಅವರದ್ದೂ ಪೈಪೋಟಿಯ ಅಭಿನಯ. ಉಳಿದಂತೆ ನಾಗಭೂಷಣ್, ಅಮೃತಾ, ಬಿರಾದಾರ್, ಶರತ್ ಲೋಹಿತಾಶ್ವ, ಚಿತ್ರಾ ಶೆಣೈ, ಪೂರ್ಣಚಂದ್ರ, ಮೈಸೂರ್ ಆನಂದ್ ಸೇರಿದಂತೆ ಸಣ್ಣ ಪಾತ್ರಗಳಲ್ಲಿ ಬಂದು ಹೋಗುವ ಕಲಾವಿದರು ಕೂಡ ನೆನಪಿನಲ್ಲಿಳಿಯುತ್ತಾರೆ.
ತಾವೊಬ್ಬ ಒಳ್ಳೆಯ ಗೀತರಚನೆಕಾರ ಎನ್ನುವುದನ್ನು ನಟ ಧನಂಜಯ ನಿರೂಪಿಸುತ್ತಲೇ ಇದ್ದಾರೆ. ಇಲ್ಲಿಯೂ ಅವರು ಅರ್ಥಪೂರ್ಣ ಹಾಡುಗಳನ್ನು ರಚಿಸಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಚಿತ್ರಕಥೆಗೆ ಹಾಸುಹೊಕ್ಕಾಗಿದ್ದು, ಸುಂದರವಾಗಿ ಮೂಡಿಬಂದಿವೆ. ಈ ಸಿನಿಮಾದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗಿರುವ ಅಮೃತಾಗೆ ‘ಸೂರ್ಯಕಾಂತಿ’ ಹಾಡು ಬೋನಸ್! ಚಿತ್ರದಲ್ಲಿ ಕಾಮಿಡಿ ವರ್ಕ್‌ಔಟ್ ಆಗಿರುವುದಕ್ಕೆ ವಾಸುಕಿ ವೈಭವ್ ಅವರ ಹಿನ್ನೆಲೆ ಸಂಗೀತದ ಕೊಡುಗೆ ದೊಡ್ಡದು. ಸಂಗೀತದ ಜೊತೆ ಒಂದೊಳ್ಳೆಯ ಪಾತ್ರದಲ್ಲೂ ಮಿಂಚಿದ್ದಾರೆ ವಾಸುಕಿ. ಸದಭಿರುಚಿ ಮತ್ತು ನೆಲದ ಗುಣದ ಕತೆಗಳೆಡೆಗೆ ತುಡಿಯುವ ವ್ಯಕ್ತಿ ನಟ ಧನಂಜಯ. ಹಾಗಾಗಿ ಅವರ ಡಾಲಿ ಪಿಕ್ಚರ್ಸ್ ನಿರ್ಮಾಣದಲ್ಲಿ ನಿರ್ದೇಶಕರ ಆಶಯ ಕೈಗೂಡಿದೆ. ಅತಿಯಾಗಿ ದುಂದುವೆಚ್ಚ ಮಾಡದೆ ನೆಲದ ಗುಣದ ಕಮರ್ಷಿಯಲ್ ಸಿನಿಮಾ ಮಾಡಬಹುದು ಎನ್ನುವ ಮಾದರಿಗೂ ಒಂದು ಉದಾಹರಣೆ ಈ ಪ್ರಯೋಗ. ಕುಟುಂಬ ಸಮೇತರಾಗಿ ವೀಕ್ಷಿಸಬಹುದಾದ ಸಿನಿಮಾ ‘ಟಗರು ಪಲ್ಯ’.