ಸರ್ದಾರ್‌ ಸತ್ಯ, ಹಂಸ ಪ್ರತಾಪ್‌ ಪ್ರಮುಖ ಪಾತ್ರಗಳಲ್ಲಿರುವ ‘ಸೈಕಿಕ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಸಿನಿಮಾ ಸಂಕಲನಕಾರ ಪುಷ್ಕರ್‌ ಗಿರಿಗೌಡ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಇಲ್ಲಿ ಕ್ರೌರ್ಯವನ್ನು ವೈಭವೀಕರಿಸದೆ ಅದನ್ನು ಪರೋಕ್ಷವಾಗಿ ಮನದಟ್ಟು ಮಾಡುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಿದ್ದೇವೆ ಎನ್ನುತ್ತಾರೆ ನಿರ್ದೇಶಕರು.

ಪುಷ್ಕರ್‌ ಗಿರಿಗೌಡ ನಿರ್ದೇಶನದ ‘ಸೈಕಿಕ್‌’ ಕ್ರೈಂ – ಥ್ರಿಲ್ಲರ್‌ ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ. ಇದೀಗ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ನಿವೃತ್ತ ಪೊಲೀಸ್ ಆಧಿಕಾರಿಗಳ ಉಪಸ್ಥಿತಿಯಲ್ಲಿ ಟೀಸರ್‌ ಬಿಡುಗಡೆ ಮಾಡಿರುವುದು ವಿಶೇಷ. ಸಿನಿಮಾ ಸಂಕಲನಕಾರ ಪುಷ್ಕರ್ ಗಿರಿಗೌಡ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಕತೆ, ಚಿತ್ರಕಥೆಯೂ ಅವರದೆ. ತಮ್ಮ ಸಿನಿಮಾ ಬಗ್ಗೆ ಮಾತನಾಡು ಅವರು, ‘ಕ್ರೈಮ್ – ಥ್ರಿಲ್ಲರ್ – ಇನ್ವೆಸ್ಟಿಗೇಷನ್ ಸಿನಿಮಾ ಎಂದರೆ ರಕ್ತಸಿಕ್ತ ದೃಶ್ಯಗಳನ್ನು ವೈಭವೀಕರಿಸುವುದು ಸಾಮಾನ್ಯ. ಆದರೆ ಸೈಕಿಕ್ ಸಿನಿಮಾದಲ್ಲಿ ಅದರ ಹೊರತಾಗಿ, ಕ್ರೌರ್ಯವನ್ನು ಪರೋಕ್ಷವಾಗಿ ಮನದಟ್ಟು ಮಾಡುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಛಾಯಾಗ್ರಹಣ, ಹಿನ್ನೆಲೆ‌ ಸಂಗೀತ ಮತ್ತು ಶಬ್ದ ವಿನ್ಯಾಸ ಬೆಂಬಲ ನೀಡಿವೆ. ಮೂರು ರೀತಿಯ ಲವ್ ಸ್ಟೋರಿಗಳನ್ನು ಇಲ್ಲಿ ಹೇಳಿದ್ದೇವೆ. ಚಿತ್ರದಲ್ಲಿ ಕೊಲೆ, ಅಪರಾಧ, ತನಿಖೆ ಇದ್ದರೂ ಅದರ ಜೊತೆ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಕೊಡುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ.

ನಟ ಸರ್ದಾರ್‌ ಸತ್ಯ ತುಂಬಾ ದಿನಗಳ ನಂತರ ವಿಶೇಷ ಪಾತ್ರದೊಂದಿಗೆ ಈ ಚಿತ್ರದ ಮೂಲಕ ತೆರೆಗೆ ಮರಳುತ್ತಿದ್ದಾರೆ. ‘ತುಂಬಾ ಸ್ಟ್ರಾಂಗ್ ಕಂಟೆಂಟ್ ಇರುವ ಚಿತ್ರ. ನಾನು ಈವರೆಗೂ ಮಾಡಿರದ ಹೊಸತನದ ಪಾತ್ರ ಮಾಡಿದ್ದೇನೆ’ ಎನ್ನುತ್ತಾರವರು. ಕಿರುತೆರೆಯ ಚಿರಪರಿಚಿತ ನಟಿ ಹಂಸ ಪ್ರತಾಪ್‌ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಮೇಶ್ ಭಟ್, ಅರವಿಂದ್ (ರಥಸಪ್ತಮಿ), ಕೈಲಾಸ್ ದೇವ್, ನಿಖಿತಾ ದೋರ್ತೋಡಿ, ರೇಷ್ಮಾ ಲಿಂಗರಾಜಪ್ಪ, ರೋಹಿತ್ ನಾಗೇಶ್, ಕೇಶವ್ ಚಿತ್ರದ ಇತರೆ ಪ್ರಮುಖ ಕಲಾವಿದರು. ಚೇತನ್ ಮಂಜುನಾಥ್ ನಿರ್ಮಾಣದ ಸಿನಿಮಾಗೆ ವೈ ಎಸ್ ಶ್ರೀಧರ್ ಸಂಕಲನ, ಪ್ರಸನ್ನ ಶೆಟ್ಟಿ ಅವರ ಸಂಭಾಷಣೆ, ಗೋಪಿ ಜಾ ಸಾಹಸ ಸಂಯೋಜನೆ, ಎಂ ಎಸ್ ತ್ಯಾಗರಾಜ್ ಸಂಗೀತ, ಸಿನಿಟೆಕ್ ಸೂರಿ ಕ್ಯಾಮೆರಾ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here