ಓಂ ಪ್ರಕಾಶ್ ರಾವ್ ನಿರ್ದೇಶನದ ‘ಫೀನಿಕ್ಸ್’ ಸಿನಿಮಾ ಸೆಟ್ಟೇರಿದೆ. ಮಹಿಳಾ ಪ್ರಧಾನ ಕ್ರೈಂ – ಥ್ರಿಲ್ಲರ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಿಮಿಕಾ ರತ್ನಾಕರ್ ನಟಿಸುತ್ತಿದ್ದಾರೆ. ಬೆಂಗಳೂರು, ಜರ್ಮನಿ ಹಾಗೂ ಆಸ್ಟ್ರೀಯಾದಲ್ಲಿ ಸಿನಿಮಾಗೆ ಚಿತ್ರೀಕರಣ ನಡೆಯಲಿದೆ.
‘ಲಾಕಪ್ ಡೆತ್’, ‘Ak 47’, ‘ಮಂಡ್ಯ’, ‘ಹುಬ್ಬಳ್ಳಿ’ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನಕ್ಕೆ ಮರಳಿದ್ದಾರೆ. ಅವರ ನಿರ್ದೇಶನದ ‘ಫೀನಿಕ್ಸ್’ ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿದೆ. ಎನ್ ಸೋಮೇಶ್ವರ್ ಸಮಾರಂಭಕ್ಕೆ ಚಾಲನೆ ನೀಡಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಮಾಹಿತಿ ನೀಡುವ ಓಂಪ್ರಕಾಶ್, ‘ಇದು ನನ್ನ 49ನೇ ಸಿನಿಮಾ. ಮಹಿಳಾ ಪ್ರಧಾನ ಕತೆ. ರಿಮೇಕ್ ಚಿತ್ರಗಳಿಗೆ ಬ್ರೇಕ್ ಹಾಕಿ ಸ್ವಮೇಕ್ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದೇನೆ. ಕ್ರೈಮ್ – ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕಿಯರಾಗಿ ನಿಮಿಕಾ ರತ್ನಾಕರ್, ಕೃತಿಕಾ ಲೋಗೊ, ತನಿಷಾ ರಜಪುತ್ ನಟಿಸುತ್ತಿದ್ದಾರೆ. ಭಾಸ್ಕರ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು, ಜರ್ಮನಿ ಹಾಗೂ ಆಸ್ಟ್ರೀಯಾದಲ್ಲಿ ಚಿತ್ರೀಕರಣ ನಡೆಯಲಿದೆ’ ಎನ್ನುತ್ತಾರೆ.
ವೆಂಕಟ್ ಗೌಡ ಅರ್ಪಿಸುತ್ತಿರುವ ಈ ಚಿತ್ರವನ್ನು ತ್ರಿಶಾ ಪ್ರಕಾಶ್ ಅವರು Shri Guru Chitralaya ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ‘ನಾನು ಈವರೆಗೂ ತೊಂಭತ್ತು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದಲ್ಲಿ ನಿರ್ದೇಶಕರು ಪ್ರಮಖಪಾತ್ರ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರ ನನ್ನದು’ ಎನ್ನುತ್ತಾರೆ ನಟ ಭಾಸ್ಕರ್ ಶೆಟ್ಟಿ. ಕಾಕ್ರೋಚ್ ಸುಧೀ, ವಿನೋದ್ ಕಿನ್ನಿ, ರೋಬೊ ಗಣೇಶ್, ಆರ್ಯನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಎಂ ಎಸ್ ರಮೇಶ್ ಸಂಭಾಷಣೆ, ಸಾಧುಕೋಕಿಲ ಸಂಗೀತ ಸಂಯೋಜನೆ, ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ, ವಿಜಯನ್ ಸಾಹಸ ನಿರ್ದೇಶನ, ರಾಮಚಂದ್ರ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ.