ಇಶಾನಿ ಮತ್ತು ಮೈಕಲ್ ಇಬ್ಬರೂ ಸಂಪೂರ್ಣ ಭಿನ್ನ ಹಿನ್ನೆಲೆಗಳಿಂದ ಬಂದವರು. ಭಿನ್ನ ಅಭಿರುಚಿಗಳನ್ನು ಇಟ್ಟುಕೊಂಡವರು. ಎಷ್ಟೋ ಸಲ ಹೀಗೆ ಭಿನ್ನವಾದ ಮನಸ್ಥಿತಿಗಳೇ ಹತ್ತಿರವಾಗುವುದು. ಹಾಗೆಂದು ಇಶಾನ್ ಮತ್ತು ಮೈಕಲ್ ಪ್ರೇಮಿಗಳಾಗಿಯೇ ಉಳಿಯಲಿದ್ದಾರೆ ಎಂದೂ ಹೇಳುವಂತಿಲ್ಲ.
ಬಿಗ್ಬಾಸ್ನಲ್ಲಿ ಹೊಸ ಸ್ನೇಹಗಳು ಚಿಗುರಿಕೊಳ್ಳುವುದರ ಜೊತೆಗೆ ಅನಿರೀಕ್ಷಿತವಾಗಿ ಮುರಿದೂ ಹೋಗುತ್ತವೆ. ಇದರ ಮಧ್ಯೆ ಪ್ರೀತಿಯ ಕತೆಗಳೂ ಇಲ್ಲಿ ಕಾಣಿಸುತ್ತಿವೆ. ಕಾರ್ತಿಕ್ – ಸಂಗೀತಾ ಜೋಡಿ, ಸ್ನೇಹಿತ್ ಮತ್ತು ನಮ್ರತಾ ನಡುವಿನ ಹೊಂದಾಣಿಕೆಯ ಜೊತೆಗೇ ಗಮನಸೆಳೆದಿರುವ ಇನ್ನೊಂದು ಜೋಡಿ ಮೈಕಲ್ ಮತ್ತು ಇಶಾನಿ ಅವರದ್ದು. ಮೈಕಲ್ ಇಶಾನಿ ಇಬ್ಬರೂ ಕನ್ನಡ ಮೂಲದವರು, ಆದರೆ ಕರ್ನಾಟಕದ ಆಚೆಗೇ ಹುಟ್ಟಿ ಬೆಳೆದವರು. ಹಾಗಾಗಿ ಇಬ್ಬರೂ
ಕಷ್ಟಪಟ್ಟೇ ಕನ್ನಡ ಮಾತಾಡುತ್ತಾರೆ. ಇದೇ ಅವರ ನಡುವಿನ ಸ್ನೇಹಕ್ಕೆ ಸೇತುವಾಯ್ತೇನೋ… JioCinemaದ Unseen ಕಥೆಗಳು ಸೆಗ್ಮೆಂಟ್ನಲ್ಲಿ ಇಶಾನಿ ಮತ್ತು ಮೈಕಲ್ ನಡುವಿನ ಆಪ್ತಸಂಬಂಧದ ಕೆಲವು ಆಪ್ತ ಗಳಿಗೆಗಳನ್ನು ವೀಕ್ಷಿಸಬಹುದು.
- ಇಶಾನಿಗೆ ಎಲ್ಲದರಲ್ಲಿಯೂ ಕುತೂಹಲ. ಹಾಗಿರುವಾಗ ಮೈಕಲ್ ಅವರ ಮಿಸ್ಟೀರಿಯಸ್ ಲೈಫ್ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸೆ ಹುಟ್ಟದಿರುತ್ತದೆಯೇ? ಆದರೆ ಇಶಾನಿ, ‘ನಿನ್ ಬಗ್ಗೆ ನಾನು ಏನೂ ತಿಳ್ಕೊಂಡೇ ಇಲ್ಲ’ ಎಂದು ಹೇಳಿದ್ದು ಕೂಡ, ಮೈಕಲ್ ಅವಳನ್ನು ಮಾತಾಡಿಸಲು ಯತ್ನಿಸಿದಾಗಲೇ! ಇವರಿಬ್ಬರ ನಡುವೆ ಬಾಂಡಿಂಗ್ ಬೆಳೆಯುವುದನ್ನು ಗಮನಿಸಿದ ನಮ್ರತಾ ಮತ್ತು ಸ್ನೇಹಿತ್ ಇಬ್ಬರೂ ಸೇರಿಕೊಂಡು ಮೈಕಲ್ – ಇಶಾನಿಯ ಕಾಲೆಳೆದಿದ್ದರು!
- ಸದಾ ಇಶಾನಿ ಜೊತೆಗೆ ಮೈಕಲ್ ನಗುನಗುತ್ತ ಇರುವುದು ಮನೆಯಲ್ಲಿ ಉಳಿದವರಿಗೆ ತಿಳಿಯದೇ ಇರುತ್ತದೆಯೇ? ಒಮ್ಮೆಯಂತೂ ಮೈಕಲ್, ಇಶಾನಿಯ ಹಸ್ತವನ್ನು ತೆಗೆದು ಮುತ್ತಿಟ್ಟಿದ್ದರು ಕೂಡ. ಇದು ಉಳಿದ ಸ್ಪರ್ಧಿಗಳ ಕಣ್ಣಿಗೂ ಬಿದ್ದಿದೆ. ಹಾಗೆಯೇ ಅವರಿಂದ ಥರಹೇವಾರಿ ಪ್ರತಿಕ್ರಿಯೆಗಳೂ ಬಂದಿವೆ. ಒಮ್ಮೆಯಂತೂ ತನಿಷಾ ಈ ಜೋಡಿಯ ಬಗ್ಗೆ ತುಸು ಅಸೂಯೆಯನ್ನೂ ವ್ಯಕ್ತಪಡಿಸಿದ್ದರು.
- ಮೈಕಲ್ ಮತ್ತು ಇಶಾನಿ ಇಬ್ಬರ ನಡುವೆ ಆಪ್ತಮಾತುಕತೆಯ ಹಾಗೆಯೇ ಹುಸಿಮುನಿಸುಗಳು, ಕಿರುಜಗಳಗಳೂ ನಡೆದಿವೆ. ಜಗಳಗಳಿಲ್ಲದೆ ಪ್ರೇಮ ಬೆಳೆಯಲು ಸಾಧ್ಯವೇ? ಅದರಲ್ಲಿಯೂ ಮೈಕಲ್ ಮಾತ್ರ ಬಿಟ್ಟೂಬಿಡದಂತೆ ಇಶಾನಿ ಮತ್ತು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು, ಎಲ್ಲ ತಡೆಗೋಡೆಗಳನ್ನು ಬಗೆಹರಿಸಿಕೊಳ್ಳಲಿಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರು.
- ಹಾಗೆ ಸುಮ್ಮನೆ ಗಾರ್ಡನ್ ಏರಿಯಾದಲ್ಲಿ ಆರಾಮವಾಗಿ ಕೂತು ಹರಟೆ ಹೊಡೆಯುತ್ತಿದ್ದಾಗ ಇಶಾನಿ ತಮ್ಮ ಬದುಕಿನ ಬಗ್ಗೆ, ಆಸೆ-ಕನಸುಗಳ ಬಗ್ಗೆ ಮೈಕಲ್ ಜೊತೆಗೆ ಮಾತನಾಡಿದ್ದಾರೆ. ಅಂತರಂಗದ ಹುಡುಕಾಟ ಮತ್ತು ಬಹಿರಂಗದ ಹುಡುಕಾಟ ಎರಡೂ ನನ್ನ ಬದುಕಿನಲ್ಲಿ ಇರಬೇಕು ಎಂದು ಹೇಳಿಕೊಂಡಿದ್ದಾರೆ. ಇದೇ ಸಮಯದಲ್ಲಿ ಮೈಕಲ್ ಕೂಡ ಸಿಂಪಲ್ ಆಗಿ ಬದುಕುವ, ಬದುಕನ್ನು ನೇರವಾಗಿ ಅರ್ಥಮಾಡಿಕೊಳ್ಳುವ ತಮ್ಮ ದೃಷ್ಟಿಕೋನದ ಬಗ್ಗೆ ಹೇಳಿಕೊಂಡಿದ್ದರು.
- ಮೈಕಲ್ ಜೊತೆಗೆ ಮಾತನಾಡಿದ್ದು ಹೇಗೆ ತನ್ನ ಮನಸ್ಸಿಗೆ ಸಮಾಧಾನ ನೀಡಿತು ಎಂದು ಇಶಾನಿ ಕಾರ್ತಿಕ್ ಜೊತಗೂ ಹೇಳಿಕೊಂಡಿದ್ದರು. ಕಳಪೆ ಎಂಬ ಹಣೆಪಟ್ಟಿ ಹೊತ್ತು ಜೈಲಿನಲ್ಲಿದ್ದ ಸಂದರ್ಭದಲ್ಲಿ ಇಶಾನಿ ತಮ್ಮ ಮನಸ್ಸಿನ ಭಯ, ಹಿಂಜರಿಕೆ, ಆತಂಕಗಳ ಬಗ್ಗೆ ಮೈಕಲ್ ಜೊತೆಗೆ ಮಾತಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ಇಶಾನಿ ಮತ್ತು ಮೈಕಲ್ ಇಬ್ಬರೂ ಸಂಪೂರ್ಣ ಭಿನ್ನ ಹಿನ್ನೆಲೆಗಳಿಂದ ಬಂದವರು. ಭಿನ್ನ ಅಭಿರುಚಿಗಳನ್ನು ಇಟ್ಟುಕೊಂಡವರು. ಎಷ್ಟೋ ಸಲ ಹೀಗೆ ಭಿನ್ನವಾದ ಮನಸ್ಥಿತಿಗಳೇ ಹತ್ತಿರವಾಗುವುದು. ಹಾಗೆಂದು ಇಶಾನ್ ಮತ್ತು ಮೈಕಲ್ ಪ್ರೇಮಿಗಳಾಗಿಯೇ ಉಳಿಯಲಿದ್ದಾರೆ ಎಂದೂ ಹೇಳುವಂತಿಲ್ಲ. ಹೇಳಿಕೇಳಿ ಬಿಗ್ಬಾಸ್ ಸ್ಪರ್ಧೆಯ ಕಣ. ವ್ಯಕ್ತಿತ್ವಗಳ ನಡುವಿನ ರಣರಂಗ. ಈ ಹೋರಾಟದಲ್ಲಿ ಪರಸ್ಪರ ಹತ್ತಿರವಾದವರು ದೂರಸರಿದಿದ್ದಿದೆ. ದೂರವಿದ್ದವರು ಹತ್ತಿರವಾಗುವುದೂ ಇದೆ. ಹಾಗಾಗಿ ಅವರಿಬ್ಬರ ನಡುವಿನ ಸಂಬಂಧಕ್ಕೆ ಈಗಲೇ ಒಂದು ಹೆಸರು ಕೊಡುವುದು ಕಷ್ಟವೇ ಸರಿ. ಆದರೆ ಬಂಧ ಗಟ್ಟಿಗೊಳ್ಳುವ ಸಾಧ್ಯತೆಯನ್ನು ಪೂರ್ತಿ ಅಲ್ಲಗಳೆಯುವುದೂ ಸಾಧ್ಯವಿಲ್ಲ.