ಪ್ರಜ್ವಲ್‌ ದೇವರಾಜ್‌ ನೂತನ ಸಿನಿಮಾ ‘ಚೀತಾ’ ಸೆಟ್ಟೇರಿದೆ. ಖ್ಯಾತ ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್‌ ನಿರ್ದೇಶನದ ಆಕ್ಷನ್‌ – ಥ್ರಿಲ್ಲರ್‌ ಚಿತ್ರವಿದು. ತೆಲುಗು ನಟ ಸುನಿಲ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಶೃತಿ ಹರಿಹರನ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್‌ ನಿರ್ದೇಶನದ ‘ಚೀತಾ’ ಸಿನಿಮಾ ಸೆಟ್ಟೇರಿದೆ. ಪ್ರಜ್ವಲ್‌ ದೇವರಾಜ್‌ ಹೀರೋ ಆಗಿ ನಟಿಸುತ್ತಿರುವ ಆಕ್ಷನ್‌ – ಥ್ರಿಲ್ಲರ್‌ ಇದು. ಕಳೆದ ಎರಡು ದಶಕಗಳಿಂದ ನೃತ್ಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಾಜ ಕಲೈ ಕುಮಾರ್‌ ಅವರಿಗೆ ಇದು ಚೊಚ್ಚಲ ನಿರ್ದೇಶನ. ಪ್ರಜ್ವಲ ದೇವರಾಜ್‌ ಅಭಿನಯದ 39ನೇ ಸಿನಿಮಾ. ತಮ್ಮ ಸಿನಿಮಾ ಬಗ್ಗೆ ಮಾತನಾಡುವ ಕಲೈ, ‘ಕಳೆದ 23 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸರ್ ಆಗಿ, ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ನನ್ನ ನಿರ್ದೇಶನದ ಮೊದಲ ಚಿತ್ರವಿದು. ಇದೊಂದು ಮಾರ್ಕೆಟ್ ನಲ್ಲಿ ನಡೆಯುವ ಕಥೆ. ಮಾರ್ಕೆಟ್‌ನಲ್ಲಿನ ವ್ಯಾಪಾರ, ವಹಿವಾಟು ಹಾಗೂ ಅಲ್ಲಿ ಕೆಲಸ ಮಾಡುವವರು ಎಲ್ಲಾ ಸೂಪರ್ ಫಾಸ್ಟ್. ನಮ್ಮ ಚಿತ್ರದ ನಾಯಕ ಕೂಡ ಚಿರತೆಯಷ್ಟೇ ವೇಗದವನು. ಹಾಗಾಗಿ ನಮ್ಮ ಚಿತ್ರಕ್ಕೆ ‘ಚೀತಾ’ ಎಂದು ಹೆಸರಿಟ್ಟಿದ್ದೇವೆ’ ಎನ್ನುತ್ತಾರೆ.

ಚಿತ್ರಕ್ಕಾಗಿ ಕಲಾನಿರ್ದೇಶಕ ಶಿವು ಅವರು ಅದ್ಧೂರಿ ಮಾರ್ಕೆಟ್‌ ಸೆಟ್‌ ನಿರ್ಮಾಣ ಮಾಡುತ್ತಿದ್ದಾರೆ. ಆ ಸೆಟ್‌ನಲ್ಲೇ ಚಿತ್ರದ ಬಹುತೇಕ ಚಿತ್ರೀಕರಣ ನಡೆಯುತ್ತದೆ. ಶೃತಿ ಹರಿಹರನ್, ಗುರುರಾಜ್ ಜಗ್ಗೇಶ್, ಶಿವರಾಜ ಕೆ.ಆರ್ ಪೇಟೆ, ತೆಲುಗು ನಟ ಸುನೀಲ್, ಗೋವಿಂದೇ ಗೌಡ, ಅಭಯ್ ಪುನೀತ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕಲೈ‌ ಮಾಸ್ಟರ್ ನೃತ್ಯ ನಿರ್ದೇಶಕರಾದಾಗ ನೃತ್ಯ ಸಂಯೋಜಿಸಿದ ಮೊದಲ ಗೀತೆಗೂ ನಾನೇ ನಾಯಕನಾಗಿದ್ದೆ. ಈಗ ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರಕ್ಕೂ ನಾನೇ ನಾಯಕ. ನಿರ್ದೇಶಕರು ಒಳ್ಳೆ ಕಥೆ ಸಿದ್ದ ಮಾಡಿಕೊಂಡಿದ್ದಾರೆ. ಮಾರ್ಕೆಟ್ ನಲ್ಲೇ ಹುಟ್ಟಿ, ಅಲ್ಲೇ ಬೆಳೆಯುವ ಹುಡುಗನ ಪಾತ್ರ ನನ್ನದು’ ಎಂದು ತಮ್ಮ ಪಾತ್ರದ ಪರಿಚಯ ಮಾಡಿಕೊಡುತ್ತಾರೆ ಹೀರೊ ಪ್ರಜ್ವಲ್‌. ಪ್ರತಿಭಾ ನರೇಶ್‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here