ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಿರ್ದೇಶಕ ಬ್ಲೆಸ್ಸಿ ನಿರ್ದೇಶನದ ‘ಆಡುಜೀವಿತಂ’ ಮಲಯಾಳಂ ಸಿನಿಮಾ 2024ರ ಏಪ್ರಿಲ್‌ 10ರಂದು ತೆರೆಕಾಣಲಿದೆ. ಬರಹಗಾರ ಬೆನ್ಯಾಮಿನ್ ಅವರ ‘ಆಡುಜೀವಿತಂ’ ಕಾದಂಬರಿ ಆಧರಿಸಿದ ಚಿತ್ರವಿದು. ಪೃಥ್ವಿರಾಜ್‌, ಹಾಲಿವುಡ್‌ ನಟ ಜಿಮ್ಮಿ ಜೀನ್‌ ಲೂಯಿಸ್‌, ಅಮಲಾ ಪೌಲ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪೃಥ್ವಿರಾಜ್ ಸುಕುಮಾರನ್ ನಟನೆಯ ಬಹುನಿರೀಕ್ಷಿತ ‘ಆಡುಜೀವಿತಂ’ (The Goat Life) ಮಲಯಾಳಂ ಸಿನಿಮಾದ ಚಿತ್ರತಂಡ ವೀಡಿಯೋ ತುಣುಕೊಂದನ್ನು, ಬಿಡುಗಡೆಯ ದಿನಾಂಕ ಘೋಷಿಸಿದೆ. ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶಿಸುತ್ತಿದ್ದು, ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಿದ್ಧ ಬರಹಗಾರ ಬೆನ್ಯಾಮಿನ್ ಅವರು ಬರೆದ ‘ಆಡುಜೀವಿತಂ’ ಕಾದಂಬರಿಯನ್ನು ಆಧರಿಸಿದ ಸಿನಿಮಾ ಮಾಡಲಾಗಿದೆ. ಕಾದಂಬರಿಯ ಅಧಿಕೃತ ಸಾರಾಂಶದ ಪ್ರಕಾರ ಸಿನಿಮಾ 90ರ ದಶಕದ ಆರಂಭದಲ್ಲಿ ಕೇರಳದ ಅಚ್ಚ ಹಸಿರಿನ ತೀರದಿಂದ ಉನ್ನತ ಜೀವನವನ್ನು ಹುಡುಕುತ್ತಾ ಮಧ್ಯಪ್ರಾಚ್ಯ ಪ್ರದೇಶಕ್ಕೆ ವಲಸೆ ಬಂದ ಯುವಕ ನಜೀಬ್‌ನ ನೈಜ ಕಥೆಯನ್ನು ಒಳಗೊಂಡಿದೆ. ವ್ಯಕ್ತಿಯೊಬ್ಬ ಏಕಾಂಗಿಯಾಗಿ ಮರುಭೂಮಿಯಲ್ಲಿ ನಡೆದುಕೊಂಡು ಬರುತ್ತಿರುವ ವೀಡಿಯೊವೊಂದನ್ನು ಚಿತ್ರತಂಡ ಹಂಚಿಕೊಂಡಿದೆ.

‘ಕಾದಂಬರಿಯು ಕೆಲವು ನೈಜ ಘಟನೆಗಳನ್ನು ಆಧರಿಸಿದೆ. ನಂಬಲಸಾಧ್ಯವಾದ ಯಾವುದೋ ಘಟನೆ ಸಂಭವಿಸಿದೆ ಎಂದು ಪ್ರತಿ ಕ್ಷಣವೂ ವೀಕ್ಷಕರನ್ನು ಸೆಳೆಯಲು ನಾನು ಬಯಸುತ್ತೇನೆ. ಸತ್ಯ ಎಂದಿಗೂ ಕಾಲ್ಪನಿಕ ಕಥೆಗಿಂತ ಹೆಚ್ಚು ಭಿನ್ನವೇನಲ್ಲ. ಪ್ರಪಂಚದಾದ್ಯಂತ ಪ್ರೇಕ್ಷಕರ ಮುಂದೆ ಈ ಕೃತಿಯನ್ನು ತರಲು ನಾವು ಉತ್ಸುಕರಾಗಿದ್ದೇವೆ’ ಎಂದು ನಿರ್ದೇಶಕರು ತಿಳಿಸಿದ್ದಾರೆ. ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ, ರೆಸೂಲ್ ಪೂಕ್ಕುಟ್ಟಿ ಅವರ ಧ್ವನಿ ವಿನ್ಯಾಸವಿದೆ. ಸುನಿಲ್ ಕೆ ಎಸ್ ಛಾಯಾಗ್ರಹಣ ಮಾಡಿದ್ದು, ಶ್ರೀಕರ್ ಪ್ರಸಾದ್ ಸಂಕಲನ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಅಮಲಾ ಪೌಲ್, ಕೆ ಆರ್ ಗೋಕುಲ್ ಮತ್ತು ಅರಬ್ ನಟರಾದ ತಾಲಿಬ್ ಅಲ್ ಬಲುಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಲನಚಿತ್ರವು ಏಪ್ರಿಲ್ 10, 2024ರಂದು ಮೂಲ ಮಲಯಾಳಂ ಸೇರಿದಂತೆ ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಅರೆಬಿಕ್‌ ಭಾಷೆಗಳಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here