ಹಲವು ನೈಜ ಘಟನೆಗಳನ್ನು ಚಿತ್ರದ ಕತೆ ಒಳಗೊಂಡಿದೆ. ಈ ಘಟನೆಗಳನ್ನು ಜಯತೀರ್ಥ ಕತೆಯೊಂದಿಗೆ ಬೆಸೆದಿರುವ ರೀತಿ ಆಕರ್ಷಕವಾಗಿದೆ. ಘಟನೆಗಳನ್ನು ಒತ್ತಾಯಪೂರ್ವಕ ಹೇರಿದಂತೆ ಅನಿಸುವುದಿಲ್ಲ. ನಿರ್ದೇಶಕರಿಗೆ ಇರುವ ನೈತಿಕ ಹೊಣೆಗಾರಿಕೆಯ ಅರಿವು ಚಿತ್ರಕ್ಕೆ ಪ್ಲಸ್ ಮತ್ತು ಮೈನಸ್ ಎರಡೂ ಆಗಿದೆ. ಏಕೆಂದರೆ, ಅದು ಚಿತ್ರ ಮಾಸ್ ಅಂಶಗಳಿಂದ ಹಾದಿ ತಪ್ಪದಂತೆ ನೋಡಿಕೊಳ್ಳುತ್ತದೆ, ಜೊತೆಜೊತೆಗೆ ಸ್ಪಷ್ಟತೆಯ ಕೊರತೆಗೂ ಕಾರಣವಾಗಿದೆ. ಈ ಎರಡರ ನಡುವೆ ಇನ್ನೂ ಉತ್ತಮ ಸಮತೋಲನ ಸಾಧಿಸಲು ಸಾಧ್ಯವಾಗಿದ್ದಿದ್ದರೆ, ‘ಕೈವ’ ಮತ್ತಷ್ಟು ಮಿಂಚುತ್ತಿತ್ತು.

ಭಾವಾನಾತ್ಮಕ ಪ್ರೇಮ ಕತೆಗಳು, ಸಸ್ಪೆನ್ಸ್ ಥ್ರಿಲ್ಲರ್‌ಗಳನ್ನು ತೆರೆಯ ಮೇಲೆ ತಂದು ಯಶಸ್ವಿಯಾಗಿದ್ದ ನಿರ್ದೇಶಕ ಜಯತೀರ್ಥ, ಈ ಬಾರಿ ಈಗ ಚಾಲ್ತಿಯಲ್ಲಿರುವ ಟ್ರೆಂಡ್‌ಗೆ ಸರಿಹೊಂದುವ ಆ್ಯಕ್ಷನ್ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಆದರೆ, ‘ಕೈವ’ ಚಿತ್ರವನ್ನು ಪೂರ್ತಿಯಾಗಿ ಮಾಸ್ ಅಂಶಗಳಿಂದ ಮಾತ್ರ ಅಲಂಕರಿಸದೆ ಅದರ ನಡುವೊಂದು ಪ್ರೇಮಕತೆ, ನೈಜ ಘಟನೆಗಳು ಮತ್ತು ವ್ಯಕ್ತಿಗಳನ್ನು ಪೋಣಿಸಿದ್ದಾರೆ. ಈ ಮೂಲಕ ಚಿತ್ರಕ್ಕೊಂದು ವಾಸ್ತವಿಕ ನೆಲೆ ಮತ್ತು ತಾರ್ಕಿಕತೆಯನ್ನು ತರುವ ಯತ್ನವನ್ನು ಮಾಡಿದ್ದಾರೆ. ಜೊತೆಗೆ, ತಮ್ಮ ಹಿಂದಿನ ಸಿನಿಮಾಗಳಲ್ಲಿ ತಾವು ಪ್ರತಿಪಾದಿಸುತ್ತಾ ಬಂದಿರುವ ಮೌಲ್ಯಗಳಿಗೆ ಇವೆಲ್ಲಾ ವಿರುದ್ಧವಾಗಬಾರದೆಂಬ ಎಚ್ಚರಿಕೆಯನ್ನೂ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಹೀಗೆ, ಹಲವು ವಿರೋಧಾಭಾಸ ಅಂಶಗಳಿಂದ ತುಂಬಿರುವ ಈ ಕತೆಯನ್ನು ಹೇಳಲು ಸುಲಭ ನಿರೂಪಣ ತಂತ್ರಕ್ಕೆ ಮೊರೆ ಹೋಗಿರುವ ನಿರ್ದೇಶಕರು, ನಿರೂಪಕನೊಬ್ಬನನ್ನು ಸೃಷ್ಟಿಸಿ ಅವನಿಂದಲೇ ನೇರವಾಗಿ ಕತೆ ಹೇಳಿಸಿದ್ದಾರೆ.

ಬೆಂಗಳೂರಿನ ಪ್ರಸಿದ್ಧ ಧರ್ಮರಾಯನ ಕರಗವನ್ನು ಪರಿಚಯಿಸುವುದರೊಂದಿಗೆ ಚಿತ್ರ ಆರಂಭವಾಗುತ್ತದೆ. ತೊಗಲು ಗೊಂಬೆಯಾಟದ ಮೂಲಕ ದ್ರೌಪದಿ ಮತ್ತು ಕರಗಕ್ಕೆ ಇರುವ ಸಂಬಂಧ ಅದರ ಪೌರಾಣಿಕ ಹಿನ್ನೆಲೆಯನ್ನು ಚೆನ್ನಾಗಿ ವಿವರಿಸಲಾಗಿದೆ. ಅಲ್ಲಿಂದ ಚಿತ್ರ ಕರಗ ನಡೆಯುವ ತಿಗಳರ ಪೇಟೆ, ಆ ಪ್ರದೇಶದಲ್ಲಿ 80ರ ದಶಕದಲ್ಲಿದ್ದ ಗರಡಿ ಮನೆಗಳು, ಅಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿದ್ದ ಭೂಗತ ದೊರೆಗಳು, ಭೂಗತ ಚಟುವಟಿಕೆಗಳು ಇವನ್ನೆಲ್ಲಾ ಉದ್ದಕ್ಕೆ ಪರಿಚಯಿಸುತ್ತದೆ. ಇವುಗಳ ವಿವರಣೆಗಳನ್ನು ನೇರವಾಗಿ ನಿರೂಪಕನಿಂದಲೇ ಕೇಳುವುದರ ಲಾಭವೆಂದರೆ, ಒಮ್ಮೆಗೇ ಮೂಡಿಬರುವ ಈ ಭರಪೂರ ಮಾಹಿತಿಯನ್ನು ಜೀರ್ಣಿಸಿಕೊಳ್ಳುವುದು ಸುಲಭವಾಗುತ್ತದೆ. ಇವುಗಳೆಲ್ಲದರ ನಡುವೆಯೇ ಕೈವಾರದಿಂದ ಬೆಂಗಳೂರಿಗೆ ಕೆಲಸ ಹುಡುಕಿ ಬಂದ ಕೈವ ಮತ್ತು ತಿಗಳರಪೇಟೆಯ ಹುಡುಗಿ ಸಲ್ಮಾ ನಡುವೆ ಪ್ರೇಮ ಹುಟ್ಟುತ್ತದೆ. ಈ ಪ್ರೇಮಕತೆಯಲ್ಲೇನೂ ಅಂತಹ ಹೊಸತನವಿಲ್ಲ. ಹಿಂದು -ಮುಸ್ಲಿಂ ಪ್ರೇಮಕತೆಗೆ ಸಹಜವಾಗಿ ಎದುರಾಗಬಹುದಾದ ದೊಡ್ಡ ವಿರೋಧಗಳಿಲ್ಲದೆ ಇರುವಾಗಲೇ ಕತೆ ಬೇರೆಯದೇ ತಿರುವು ಪಡೆದುಕೊಂಡು, ರಕ್ತಸಿಕ್ತ ಸೇಡಿನ ಕತೆಯಾಗಿ ಬದಲಾಗುತ್ತದೆ.

ನಿರ್ದೇಶಕರೇ ಹೇಳಿರುವಂತೆ ‘ಕೈವ’ ನೈಜ ಘಟನೆ ಆಧಾರಿತ ಸಿನಿಮಾ. 1983ರಲ್ಲಿ ನಡೆದ ಹಲವು ಪ್ರಮುಖ ಘಟನೆಗಳನ್ನು ಕತೆ ಒಳಗೊಂಡಿದೆ. ಮತ್ತು ಈ ಘಟನೆಗಳನ್ನು ಜಯತೀರ್ಥ ಕತೆಯೊಂದಿಗೆ ಬೆಸೆದಿರುವ ರೀತಿ ಆಕರ್ಷಕವಾಗಿದೆ. ಯಾವುದೇ ಘಟನೆಗಳನ್ನು ಒತ್ತಾಯಪೂರ್ವಕ ಹೇರಿದಂತೆ ಅನಿಸುವುದಿಲ್ಲ. ಗಂಗಾರಾಮ್ ಕಟ್ಟಡ ಕಪಾಲಿ ಚಿತ್ರಮಂದಿರದ ಮೇಲೆ ಕುಸಿದು ಬಿದ್ದ ಘಟನೆಯನ್ನು ಕತೆಗೆ ಪ್ರಮುಖ ತಿರುವು ನೀಡಲು ಬಳಸಿಕೊಂಡಿದ್ದಾರೆ. ರಾಜಕುಮಾರ್ ನಟನೆಯ ‘ಭಕ್ತ ಪ್ರಹ್ಲಾದ’ ಚಿತ್ರದ ಬಿಡುಗಡೆ, ಪ್ರದರ್ಶನವನ್ನು ಚಿತ್ರದ ಮುಖ್ಯ ಕತೆಗೆ ಹೆಣೆದಿರುವ ರೀತಿಯೂ ಅನನ್ಯವಾಗಿದೆ. ಇನ್ನು, ಭೂಗತ ದೊರೆಗಳಾದ ಜೈರಾಜ್ ಮತ್ತು ಕೊತ್ವಾಲ್‌ ರಾಮಚಂದ್ರ (ಚಿತ್ರದಲ್ಲಿ ಇಬ್ಬರ ಹೆಸರೂ ಬದಲಿಸಲಾಗಿದೆ) ಅವರ ನಡುವಣ ವೈರತ್ವವೂ ಕೂಡ ಕತೆ ಮುಂದುವರಿಯಲು ಬೇಕಾದ ವಸ್ತುವನ್ನು ಒದಗಿಸುತ್ತದೆ. ಇವೆಲ್ಲವನ್ನು ನಿರ್ದೇಶಕರು ಚಿತ್ರದೊಳಗೆ ಸಮರ್ಥವಾಗಿ ತಂದಿದ್ದಾರೆ. ಹಾಗೆ ನೋಡಿದರೆ, ಹೆಚ್ಚು ವಿವರವಾಗಿ ತೋರಿಸಿರುವ ಬೆಂಗಳೂರು ಕರಗದ ಪ್ರಸ್ತುತತೆ ಕತೆಗೆ ಹೆಚ್ಚಿಲ್ಲ. ಅದನ್ನು, ಬಹುತೇಕ ಒಂದು ಪರಿಸರ ನಿರ್ಮಿಸಲು ಪ್ರಾಪ್ ರೀತಿ ಬಳಸಲಾಗಿದೆ. ಆದರೆ, ಮೊದಲಲ್ಲಿ ಬರುವ ದ್ರೌಪದಿ ಮತ್ತು ಕರಗದ ಕತೆಯಿಂದಾಗಿ ಸಿನಿಮಾದ ಒಟ್ಟು ಆಶಯಕ್ಕೊಂದು ಚೌಕಟ್ಟು ಸಿಗುತ್ತದೆ.

ಚಿತ್ರದ ಪ್ರಮುಖ ತೊಂದರೆ ಇರುವುದು ಪಾತ್ರ ಚಿತ್ರಣದಲ್ಲಿ. ಬಹುತೇಕ ಪ್ರಮುಖ ಪಾತ್ರಗಳನ್ನು ಕಪ್ಪು ಬಿಳುಪಾಗಿ ತೋರಿಸಲಾಗಿದೆ. ಅದರಲ್ಲೂ, ಮುಖ್ಯ ಮೂರು ವಿಲನ್‌ಗಳ ಹೆಸರುಗಳು ಮಾತ್ರ ಆಸಕ್ತಿದಾಯಕ. ಉಳಿದಂತೆ, ಆ ಪಾತ್ರಗಳು 80ರ ದಶಕದ ಸಿನಿಮಾಗಳ ಪುಡಿ ರೌಡಿಗಳನ್ನು ನೆನಪಿಸುವಂತಿವೆ. ಸದಾ ಬಾಟಲಿ ಕೈಯಲ್ಲಿ ಹಿಡಿದಿರುವ, ಹೆಣ್ಣುಗಳೊಂದಿಗೆ ಕೆಟ್ಟದಾಗಿ ವರ್ತಿಸುವ, ಅತ್ಯಾಚಾರ ಮಾಡುವ ದುಷ್ಟತನದ ಅಪರಾವತಾರಗಳಂತೆ. ಅದಕ್ಕೆ ತದ್ವಿರುದ್ಧವಾಗಿರುವ ಮುಗ್ಧ ನಾಯಕ, ನಾಯಕಿಯರು. ದ್ವಿತಿಯಾರ್ಧದ ಸೇಡಿನ ಕತೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಇಂತಹ ಪಾತ್ರಗಳನ್ನು ಸೃಷ್ಟಿಸಿರಬಹುದಾದರೂ ಅದು ಚಿತ್ರವನ್ನು ದುರ್ಬಲವಾಗಿಸುತ್ತದೆ. ಈ ಪಾತ್ರಗಳಿಗೆ ಹೋಲಿಸಿದರೆ, ದೇವರಾಜ್, ರಾಮಲಾಲ್, ಗೋವಿಂದಣ್ಣ ಮುಂತಾದ ಡಾನ್ ಪಾತ್ರಗಳಿಗೆ, ಕಾನ್‌ಸ್ಟೇಬಲ್, ರೋಸಿ ಮುಂತಾದ ಸಣ್ಣ ಪಾತ್ರಗಳಿಗೆ ಹೆಚ್ಚು ಆಯಾಮಗಳನ್ನು ಕೊಟ್ಟು ಚಿತ್ರಿಸಲಾಗಿದೆ. ದ್ವಿತಿಯಾರ್ಧದಲ್ಲಿ ಬರುವ ಹಿಂಸಾ ದೃಶ್ಯಗಳು ಚಿತ್ರಕ್ಕೆ ಎ ಸರ್ಟಿಫಿಕೇಟ್ ದೊರಕಿಸಿಕೊಡುವುದರಲ್ಲಿ ಪ್ರಮುಖ ಪಾತ್ರವಹಿಸಿವೆ. ಅಷ್ಟರಮಟ್ಟಿನ ಹಿಂಸೆಯನ್ನು ತೆರೆಯ ಮೇಲೆ ತೋರಿಸುವ ಅಗತ್ಯವಿತ್ತಾ ಎಂಬ ಪ್ರಶ್ನೆ ಕಾಡುತ್ತದೆ. ಅದನ್ನು ಸರಿದೂಗಿಸಲೇನೋ ಎಂಬಂತೆ ಜಯತೀರ್ಥ ಆಗಾಗ ಗಾಂದೀಜೀಯನ್ನು ನೆನಪಿಸಿಕೊಳ್ಳುತ್ತಾರೆ. ನಾಯಕನ ಕೈಯಲ್ಲಿ ಪ್ರೀತಿಯ ಪಾಠ ಮಾಡಿಸುತ್ತಾರೆ. ಅದು ಹಲವು ಕಡೆ ಚಿತ್ರದ ಒಟ್ಟು ರೂಪಕ್ಕೆ ಹೊಂದಿಕೆಯಾಗದೆ, ಪ್ರೇಕ್ಷಕರಿಗೆ ಸಂದೇಶ ನೀಡಲು ಮಾತ್ರ ಬಳಕೆಯಾಗುತ್ತದೆ. ಜೊತೆಗೆ, ಮಧ್ಯದಲ್ಲಿ 2 ನಿಮಿಷ ಬಂದು ಹೋಗುವ ನಾಯಕನ ಅಮ್ಮನ ಕತೆಯೂ ಅನಗತ್ಯವೆನಿಸುತ್ತದೆ.

ನಟನೆಯ ವಿಷಯಕ್ಕೆ ಬಂದಾಗ ನಾಯಕ ಧನವೀರ್ ನಟನೆ ಸಾಧಾರಣವಾಗಿದೆ. ಸಿಕ್ಕಿರುವ ಅವಕಾಶ ಬಳಸಿಕೊಂಡು ಪ್ರೇಕ್ಷಕರ ಮನಗೆಲ್ಲುವಲ್ಲಿ ಅವರು ಪೂರ್ತಿಯಾಗಿ ಯಶಸ್ವಿಯಾಗುವುದಿಲ್ಲ. ನಾಯಕಿ ಮೇಘಾ ಶೆಟ್ಟಿ ನಟನೆಗೆ ಹೆಚ್ಚಿನ ಅವಕಾಶವಿಲ್ಲ. ಗೋವಿಂದಣ್ಣ ಪಾತ್ರದಲ್ಲಿ ಇಂದಿರಾ ರಮೇಶ್ ನೆನಪಿನಲ್ಲಿ ಉಳಿಯುವಂತೆ ನಟಿಸಿದ್ದಾರೆ. ಉಳಿದಂತೆ ಮೂರು ಮುಖ್ಯ ಖಳಪಾತ್ರಗಳ ಚಿತ್ರಣದಲ್ಲಿರುವ ಕೊರತೆಯಿಂದಾಗಿ ನಟನೆಯೂ ಸೊರಗಿದೆ. ಹಾಗಿದ್ದೂ, ನಂದ ಗೋಪಾಲ್, ದಿನಕರ್ ತೂಗುದೀಪ, ಉಗ್ರಂ ಮಂಜು, ರಾಘು ಶಿವಮೊಗ್ಗ ಮುಂತಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಯತ್ನಿಸಿದ್ದಾರೆ. 80ರ ದಶಕವನ್ನು ಮರು ನಿರ್ಮಿಸುವಲ್ಲಿ ‘ಬೆಲ್ ಬಾಟಂ’ ಚಿತ್ರದ ಮಟ್ಟಿಗಿನ ಯಶಸ್ಸು ನಿರ್ದೇಶಕರಿಗೆ ದೊರಕಿಲ್ಲವಾದರೂ, ಚಿತ್ರದ ಒಟ್ಟು ನೋಟ ಚೆನ್ನಾಗಿದೆ. ಬಹಳಷ್ಟು ಪಾತ್ರಗಳ ವಿಗ್‌ಗಳು ತೀರಾ ಕೃತಕವಾಗಿದ್ದು, ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿತ್ತು. ಅಜನೀಶ್ ಸಂಗೀತ ಹಾಗು ಶ್ವೇತ ಪ್ರಿಯ ನಾಯಕ್ ಸಿನಿಮಾಟೋಗ್ರಫಿ ಅದ್ಭುತವಲ್ಲವಾದರೂ, ಪೂರಕವಾಗಿದೆ. ಚಿತ್ರಕ್ಕೊಂದು ಫಿಲಾಸಾಫಿಕಲ್ ಸ್ಪರ್ಶ ನೀಡುವ ಯತ್ನದಲ್ಲಿ ನಿರ್ದೇಶಕರು ಅಲ್ಲಲ್ಲಿ ಕೆಲವು ವಜ್ಜೆ ಇರುವ ಸಂಭಾಷಣೆಗಳನ್ನು ಬಳಸಿದ್ದಾರೆ. ಜೊತೆಗೆ, ಮಾಸ್ ಅಪೀಲ್‌ಗಾಗಿ ಮಾಸ್ ಡೈಲಾಗ್‌ಗಳನ್ನು ಬಳಸಲಾಗಿದೆ. ಆದರೆ, ಯಾವುದೂ ನೆನಪಿನಲ್ಲಿ ಉಳಿಯುವಷ್ಟಿಲ್ಲ.

80ರ ದಶಕದ ಬೆಂಗಳೂರು, ಆಗಿನ ಭೂಗತ ಲೋಕದ ದೊರೆಗಳು, ನಡುವೆ ಒಂದು ಪ್ರೇಮಕತೆ ಎಂದೊಡನೆ ಕನ್ನಡಿಗರಿಗೆ ನೆನಪಾಗುವ ಸಿನಿಮಾ ‘ಆ ದಿನಗಳು’. ನಿರ್ದೇಶಕ ಜಯತೀರ್ಥ ಅವರ ‘ಕೈವ’ ಆ ಮಟ್ಟಕ್ಕೆ ಏರದಿದ್ದರೂ ತುಂಬಾ ಆಸಕ್ತಿಕರವಾದ ಕಥಾ ಹಂದರ ಮತ್ತು ಕಾಲಘಟ್ಟವನ್ನು ಹೊಂದಿದೆ. ಜೊತೆಗೆ, ಇದೂ ಕೂಡ ನೈಜ ಘಟನೆ ಮತ್ತು ನೈಜ ವ್ಯಕ್ತಿಗಳನ್ನು ಆಧರಿಸಿದ್ದು ಎಂಬ ಸಂಗತಿ ಮತ್ತಷ್ಟು ಆಸಕ್ತಿ ಮೂಡಿಸುವಂತೆ ಮಾಡುತ್ತದೆ. ನಿರ್ದೇಶಕರಿಗೆ ಇರುವ ನೈತಿಕ ಹೊಣೆಗಾರಿಕೆಯ ಅರಿವು ಚಿತ್ರಕ್ಕೆ ಪ್ಲಸ್ ಮತ್ತು ಮೈನಸ್ ಎರಡೂ ಆಗಿದೆ. ಏಕೆಂದರೆ, ಅದು ಚಿತ್ರ ಮಾಸ್ ಅಂಶಗಳಿಂದ ಹಾದಿ ತಪ್ಪದಂತೆ ನೋಡಿಕೊಳ್ಳುತ್ತದೆ, ಜೊತೆಜೊತೆಗೆ ಸ್ಪಷ್ಟತೆಯ ಕೊರತೆಗೂ ಕಾರಣವಾಗಿದೆ. ಈ ಎರಡರ ನಡುವೆ ಇನ್ನೂ ಉತ್ತಮ ಸಮತೋಲನ ಸಾಧಿಸಲು ಸಾಧ್ಯವಾಗಿದ್ದಿದ್ದರೆ, ‘ಕೈವ’ ಮತ್ತಷ್ಟು ಮಿಂಚುತ್ತಿತ್ತು.

LEAVE A REPLY

Connect with

Please enter your comment!
Please enter your name here