ಸಂಗೀತ ಸಂಯೋಜಕ ರವಿ ಬಸ್ರೂರು ಅವರ ತಂಡದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಸೂಚನ್ ಶೆಟ್ಟಿ ‘ಗಾಡ್ ಪ್ರಾಮಿಸ್’ ಸಿನಿಮಾ ನಿರ್ದೇಶಿಸಲಿದ್ದಾರೆ. ನಟನಾಗಿ ಗುರುತಿಸಿಕೊಂಡಿದ್ದ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಭರತ್ ಮಧುಸೂದನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.
ಸೂಚನ್ ಶೆಟ್ಟಿ ಅವರು ನೂತನ ಚಿತ್ರ ನಿರ್ದೇಶಿಸುತ್ತಿದ್ದು, ‘ಗಾಡ್ ಪ್ರಾಮಿಸ್’ ಎಂಬ ವಿಭಿನ್ನ ಶೀರ್ಷಿಕೆಯನ್ನು ಘೋಷಿಸಿದ್ದಾರೆ. ರವಿ ಬಸ್ರೂರ್ ಸಾರಥ್ಯದಲ್ಲಿ ‘ಕಟಕ’, ‘ಗಿರ್ಮಿಟ್’, ‘ಕಡಲ್’ ಸಿನಿಮಾಗಳಿಗೆ ಬರಹಗಾರನಾಗಿ, ಸಹ ನಿರ್ದೇಶಕನಾಗಿ, ನಟನಾಗಿ ಕೆಲಸ ಮಾಡಿರುವ ಸೂಚನ್ ಈಗ ನಿರ್ದೇಶನಾಗಿ ಸಿನಿಮಾ ಮಾಡುತ್ತಿದ್ದಾರೆ. ‘ಕಾಂತಾರ’ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ರವಿ ಪಾತ್ರದಲ್ಲಿ, ರವಿ ಬಸ್ರೂರ್ ಅವರ ‘ಕಡಲ್’ ಸಿನಿಮಾದಲ್ಲಿ ಖಳನಾಯಕನಾಗಿ ಸೂಚನ್ ಶೆಟ್ಟಿ ನಟಿಸಿದ್ದಾರೆ. ರವಿ ಬಸ್ರೂರ್ ಅವರು ‘ಕೆಜಿಎಫ್’ ಸಿನಿಮಾಗಳ ಬಹುದೊಡ್ಡ ಯಶಸ್ಸಿನ ಬಳಿಕ ಬಾಲಿವುಡ್, ಟಾಲಿವುಡ್‌ನಲ್ಲೂ ಸಕ್ರಿಯರಾಗಿದ್ದು, ಅಲ್ಲಿನ ಸಿನಿಮಾಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಇವರ ಗರಡಿಯಿಂದ ಬಂದ ಸಾಕಷ್ಟು ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡುತ್ತಿದ್ದಾರೆ. ಅವರಲ್ಲಿ ಸೂಚನ್ ಶೆಟ್ಟಿ ಸಹ ಒಬ್ಬರು.
‘ನಮ್ಮ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾ ಮಾಡುವ ಕನಸಿನೊಂದಿಗೆ 2016ರಲ್ಲಿ ಶುರುವಾದ Mythri Productions ಸೂಚನ್ ಶೆಟ್ಟಿ ಅವರ ಚೊಚ್ಚಲ ಕನಸಿಗೆ ಜೊತೆಯಾಗಿದೆ. ಇವರ ಚಿತ್ರವನ್ನು ಮೈತ್ರಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ‘ಹಫ್ತಾ’ ಸಿನಿಮಾವನ್ನು ನಿರ್ಮಿಸಿದ್ದ ಈ ಪ್ರೊಡಕ್ಷನ್ ಎರಡನೇ ಕಾಣಿಕೆ ‘ಗಾಡ್ ಪ್ರಾಮಿಸ್’. ನೈಜ ಘಟನೆಯ ಸ್ಫೂರ್ತಿ ಪಡೆದ ಕೌಟುಂಬಿಕ ಹಾಸ್ಯ ಕಥಾಹಂದರ ಚಿತ್ರ ಇದಾಗಿದ್ದು, ‘ಕಬ್ಜ’, ‘ಸಲಾರ್’ ಚಿತ್ರಗಳಿಗೆ ಛಾಯಾಗ್ರಹಣ ನಿರ್ವಹಿಸಿರುವ ಎ ಜೆ ಶೆಟ್ಟಿ ಹಾಗೂ ಭುವನ್ ಗೌಡ ಜೊತೆ ಕೆಲಸ ಮಾಡಿರುವ ಗುರುಪ್ರಸಾದ್ ನರ್ನಾಡ್ ಅವರು ಸಿನಿಮಾಗೆ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ರವಿ ಬಸ್ರೂರ್ ಜೊತೆ ‘ಸಲಾರ್’, ‘ಕೆಜಿಎಫ್’ ಚಿತ್ರಗಳಲ್ಲಿ ಕೆಲಸ ಮಾಡಿರುವ ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರ ಭರತ್ ಮಧುಸೂದನ್ ಸಂಗೀತ ಸಂಯೋಜನೆಯಿದೆ. ನವೀನ್ ಶೆಟ್ಟಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.