ಇಂಟರ್‌ವೆಲ್‌ ನಂತರ ಸಿನಿಮಾ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ. ಚಿತ್ರಕಥೆಯಲ್ಲಿನ ಅನಿರೀಕ್ಷಿತ ತಿರುವುಗಳು ಕ್ಲೈಮ್ಯಾಕ್ಸ್‌ಗೆ ಕಾಯುವಂತೆ ಮಾಡುತ್ತವೆ. ಕಥಾನಾಯಕ ರಂಗಾಯಣ ರಘು ಮಧ್ಯವಯಸ್ಸಿನ ವ್ಯಕ್ತಿಯ ನಿರ್ಲಿಪ್ತತೆಯನ್ನು ಹೊದ್ದುಕೊಂಡೇ ಪ್ರೀತಿ, ಕೋಪ, ಸಂಕಟ, ಮೌನ, ದುಃಖ, ದುಮ್ಮಾನಗಳನ್ನು ಸನ್ನಿವೇಶದ ಅಗತ್ಯತೆ ಅರಿತು ವ್ಯಕ್ತಪಡಿಸುತ್ತಾರೆ. ನಿಸ್ಸಂಶಯವಾಗಿ ಇದು ಅವರ ವೃತ್ತಿ ಬದುಕಿನ ಪ್ರಮುಖ ಚಿತ್ರವಾಗಿ ದಾಖಲಾಗುತ್ತದೆ.

‘ನಾನು ಈ ಬದುಕನ್ನು ತುಂಬಾ ಪ್ರೀತಿಸುತ್ತೇನೆ. ಬದುಕುವುದು ನನಗಿಷ್ಟ’ ಎನ್ನುವುದು ಸುಬ್ಬಣ್ಣನ ಮಾತು. ಮಧ್ಯಮ ವಯಸ್ಸಿನ ಆತ ಚಿತ್ರದ ಕಥಾನಾಯಕ. ಈ ಮಾತುಗಳು ಸಿನಿಮಾದ ಇತರೆ ಹಲವು ಪಾತ್ರಗಳ ಮಾತುಗಳೂ ಇರಬಹುದೇನೋ? ಆದರೆ, ಬದುಕನ್ನು ಅವರೆಲ್ಲರೂ ನೋಡುವ ಬಗೆ, ಅವರು ಬದುಕುವ ಬಗೆ ಭಿನ್ನ ಭಿನ್ನ. ನಿರ್ದೇಶಕ ಸಂದೀಪ್‌ ಸುಂಕದ್‌ ಚಿತ್ರದಲ್ಲಿ ಅಂತಹ ಹತ್ತಾರು ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಈ ಪಾತ್ರಗಳನ್ನು ಅವರು ಕಟ್ಟಿರುವ ಬಗೆಯಲ್ಲಿ ಸಿನಿಮಾದೆಡೆಗಿನ ಅವರ ಪ್ರೀತಿ ಗೊತ್ತಾಗುತ್ತದೆ.

ಪ್ರಮುಖವಾಗಿ ಈ ಥ್ರಿಲ್ಲರ್‌ ಸಿನಿಮಾ, ಕಥಾವಸ್ತು ಮತ್ತು ಕಥಾನಾಯಕನ ಕಾರಣಕ್ಕೆ ಭಿನ್ನವಾಗಿ ನಿಲ್ಲುತ್ತದೆ. ಮಧ್ಯವಯಸ್ಸಿನ ವ್ಯಕ್ತಿಯನ್ನು ಚಿತ್ರದ ಕೇಂದ್ರಬಿಂದುವಾಗಿ ಗುರುತಿಸಿ ಕತೆ ಮಾಡುವುದು ಸುಲಭವಲ್ಲ. ಅದರಲ್ಲೂ ಸಿದ್ಧ, ಸಾಂಪ್ರದಾಯಿಕ ಮಾದರಿ ಹೊರತಾಗಿ ಚಿತ್ರಕಥೆ ರಚಿಸಿ – ನಿರೂಪಿಸುವುದು ಮತ್ತೊಂದು ಸವಾಲು. ಒಂದೆಡೆ ಇದು ಸವಾಲಾದರೂ, ಹೊಸತಲೆಮಾರಿನ ಪ್ರೇಕ್ಷಕರನ್ನು ಹಿಡಿದಿಡುವ ಅನಿವಾರ್ಯತೆ ಕೂಡ. ನಿರ್ದೇಶಕ ಸಂದೀಪ್‌ ಈ ವಿಚಾರದಲ್ಲಿ ಗೆದ್ದಿದ್ದಾರೆ. ಇಬ್ಬರು ಅಪರೂಪದ ಕಲಾವಿದರಾದ ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ನಿರ್ದೇಶಕರ ಹಾದಿಯನ್ನು ಸುಗಮಗೊಳಿಸಿದ್ದಾರೆ.

ಈ ಹಿಂದೆ ಕಿರುಚಿತ್ರಗಳನ್ನು ರೂಪಿಸಿ ಅನುಭವ ಪಡೆದಿರುವ ಸಂದೀಪ್‌ ಸುಂಕದ್‌ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಮಲೆನಾಡಿನ ಹಳ್ಳಿಯೊಂದನ್ನು ಅವರು ತಮ್ಮ ಕತೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಚಿಕ್ಕದೂ ಅಲ್ಲದ, ತೀರಾ ದೊಡ್ಡದೂ ಅಲ್ಲದ ಹಳ್ಳಿಯ ಹೋಟೆಲ್‌ ಮಾಲೀಕ ಸುಬ್ಬಣ್ಣನ ಕತೆ. ಸಿನಿಮಾದ ಮೊದಲಾರ್ಧ ಅಷ್ಟೇನೂ ಬಿರುಸಾಗಿಲ್ಲ. ನಿರೂಪಣೆ ಕೆಲವೆಡೆ ಹದ ಕಳೆದುಕೊಂಡಿದ್ದರೂ ಚಿತ್ರದ ಓಘಕ್ಕೆ ಅಡ್ಡಿಯಾಗಿಲ್ಲ. ದ್ವಿತಿಯಾರ್ಧದ ಥ್ರಿಲ್‌ಗೆ ಬೇಕಾದ ಅಗತ್ಯ ಭೂಮಿಕೆಯನ್ನು ನಿರ್ದೇಶಕರು ಫಸ್ಟ್‌ ಹಾಫ್‌ನಲ್ಲಿ ಸಿದ್ಧಪಡಿಸುತ್ತಾರೆ. ಇಂಟರ್‌ವೆಲ್‌ ನಂತರ ಸಿನಿಮಾ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ. ಚಿತ್ರಕಥೆಯಲ್ಲಿನ ಅನಿರೀಕ್ಷಿತ ತಿರುವುಗಳು ಕ್ಲೈಮ್ಯಾಕ್ಸ್‌ಗೆ ಕಾಯುವಂತೆ ಮಾಡುತ್ತವೆ.

ಬಹುಶಃ ಸಂದೀಪ್‌ ಈ ಸಿನಿಮಾಗೆ ಕತೆ ಬರೆಯುವಾಗಲೇ ರಂಗಾಯಣ ರಘು ಅವರನ್ನು ಆಲೋಚಿಸಿ ಪಾತ್ರ ಬರದಿದ್ದರು ಎನಿಸುತ್ತದೆ. ರಂಗಾಯಣ ರಘು ಅವರಲ್ಲದೆ ಸದ್ಯಕ್ಕೆ ಯಾರನ್ನೂ ಅವರ ಪಾತ್ರದಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಂದೀಪ್‌ ಅವರು ರಂಗಾಯಣ ರಘು ಅವರಲ್ಲಿನ ನಟನನ್ನು ಸಂಪೂರ್ಣವಾಗಿ ಬಳಕೆ ಮಾಡಬೇಕು ಎಂದೇ ಚಿತ್ರಕಥೆ ಬರೆದಂತಿದೆ. ಬಹಳಷ್ಟು ಸಿನಿಮಾಗಳನ್ನು ರಂಗಾಯಣ ರಘು ಅವರ ಪಾತ್ರಗಳು ಕ್ಲೀಷೆ ಎನಿಸುವುದಿದೆ. ಅದು ಸ್ಕ್ರೀನ್‌ಸ್ಪೇಸ್‌ ಕಡಿಮೆ ಇರುವ ಪೋಷಕ ಪಾತ್ರದ ಮಿತಿಯೂ ಇರಬಹುದು. ಇಲ್ಲಿ ಸಿನಿಮಾ ಪೂರ್ತಿ ಅವರೇ ಆವರಿಸಿಕೊಂಡಿದ್ದಾರೆ. ಭಾವಾಭಿವ್ಯಕ್ತಿಗೆ ಹೆಚ್ಚು ಸಾಧ್ಯತೆಗಳಿವೆ. ಮಧ್ಯವಯಸ್ಸಿನ ವ್ಯಕ್ತಿಯ ನಿರ್ಲಿಪ್ತತೆಯನ್ನು ಹೊದ್ದುಕೊಂಡೇ ಪ್ರೀತಿ, ಕೋಪ, ಸಂಕಟ, ಮೌನ, ದುಃಖ, ದುಮ್ಮಾನಗಳನ್ನು ಸನ್ನಿವೇಶದ ಅಗತ್ಯತೆ ಅರಿತು ವ್ಯಕ್ತಪಡಿಸುತ್ತಾರೆ. ನಿಸ್ಸಂಶಯವಾಗಿ ಇದು ಅವರ ವೃತ್ತಿ ಬದುಕಿನ ಪ್ರಮುಖ ಚಿತ್ರವಾಗಿ ದಾಖಲಾಗುತ್ತದೆ.

ದ್ವಿತಿಯಾರ್ಧದಲ್ಲಿ ರಂಗಾಯಣ ರಘು ಅವರಿಗೆ ಸರಿಸಮನಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟ ಗೋಪಾಲಕೃಷ್ಣ ದೇಶಪಾಂಡೆ. ರಾಜ್‌ ಬಿ ಶೆಟ್ಟಿ ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿನ ಅವರ ಪಾತ್ರವನ್ನು ಸಿನಿಪ್ರಿಯರು ಬಹುವಾಗಿ ಮೆಚ್ಚಿಕೊಂಡಿದ್ದರು. ಈ ಸಿನಿಮಾದಲ್ಲಿಯೂ ಅವರು ತಮ್ಮ ಇರುವಿಕೆಯಿಂದಲೇ ಸನ್ನಿವೇಶದ ತೂಕ ಹೆಚ್ಚಿಸುತ್ತಾರೆ.. ಸಹಜಾಭಿನಯದ ನಟ. ತೆರೆಯ ಮೇಲಿನ ಅವರ ಉಪಸ್ಥಿತಿಯೇ ಸನ್ನಿವೇಶಗಳಿಗೆ ಅಗತ್ಯವಿರುವ ಮೂಡ್‌ ಕ್ರಿಯೇಟ್‌ ಮಾಡುತ್ತದೆ. ವಿನಯ್‌ ಯು ಜೆ, ನಿಧಿ ಹೆಗ್ಡೆ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಛಾಯಾಗ್ರಾಹಕ ವಿಶ್ವಜಿತ್‌ ರಾವ್‌ ಮತ್ತು ಸಂಗೀತ ನಿರ್ದೇಶಕ ಮಯೂರ್‌ ಅಂಬೆಕಲ್ಲು ಥ್ರಿಲ್ಲರ್‌ ಕತೆಯ ಅಗತ್ಯತೆಗೆ ತಕ್ಕಂತೆ ಕಾರ್ಯನಿರ್ವಹಿಸಿದ್ದಾರೆ. ಸಂಕಲನಕಾರ ಹಾಗೂ ಇತರೆ ತಂತ್ರಜ್ಞರಿಗೂ ಮೆಚ್ಚುಗೆ ಸಲ್ಲಬೇಕು. ಇತ್ತೀಚಿನ ದಿನಗಳ ಒಂದೊಳ್ಳೆಯ ಥ್ರಿಲ್ಲರ್‌ ಎಂದು ದಾಖಲಾಗುವ ಎಲ್ಲಾ ಅರ್ಹತೆಗಳು ‘ಶಾಖಾಹಾರಿ’ ಸಿನಿಮಾಗಿವೆ.

LEAVE A REPLY

Connect with

Please enter your comment!
Please enter your name here