ಕನ್ನಡ ಚಿತ್ರರಂಗದ ಮದರಾಸಿನ ದಿನಗಳಿಗೆ ಸಾಕ್ಷಿಯಾಗಿದ್ದ ಚಿತ್ರಸಾಹಿತಿ, ನಟ, ನಿರ್ದೇಶಕ ಮತ್ತು ನಿರ್ಮಾಪಕ ಸಿ ವಿ ಶಿವಶಂಕರ್‌ (90 ವರ್ಷ) ಅಗಲಿದ್ದಾರೆ. ಇಂದು (ಜೂನ್‌ 27) ಮಧ್ಯಾಹ್ನ ಅವರಿಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದರು.

‘ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ, ಭಿಕ್ಷುಕನಾದರೂ ಕನ್ನಡ ಮಣ್ಣಲ್ಲೇ ಮಡಿವೆ…’ – ಕನ್ನಡ ನಾಡು – ನುಡಿ ಕುರಿತಾಗಿ ಇಂತಹ ಹಲವಾರು ಅಮರ ಗೀತೆಗಳ ರಚನೆಕಾರರು ಸಿ ವಿ ಶಿವಶಂಕರ್‌. ಸದಭಿರುಚಿಯ ಸಿನಿಮಾಗಳ ನಿರ್ದೇಶಕ, ನಿರ್ಮಾಪಕ. ಕನ್ನಡ ಚಿತ್ರಗಳು ಮದರಾಸಿನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ದಿನಗಳಲ್ಲಿ ವೃತ್ತಿ ಬದುಕು ಆರಂಭಿಸಿದವರು. ಇಂದು ಮಧ್ಯಾಹ್ನ ಹೃದಯಾಘಾತದಿಂದ ಅವರು ಇಹಲೋಕ ತ್ಯಜಿಸಿದ್ದು, ಕನ್ನಡ ಚಿತ್ರರಂಗದ ಪ್ರಮುಖರನೇಕರು ಹಿರಿಯರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗದ ತಲೆಮಾರುಗಳನ್ನು ಬೆಸೆದ ಕೊಂಡಿಯೊಂದು ಕಳಚಿದಂತಾಗಿದೆ.

ಸಿ ವಿ ಶಿವಶಂಕರ್‌ ಜನಿಸಿದ್ದು 1933ರ ಮಾರ್ಚ್‌ 23ರಂದು ತಿಪಟೂರಿನಲ್ಲಿ. ತಂದೆ ವೆಂಕಟಕೃಷ್ಣ ಭಟ್‌ ಮತ್ತು ತಾಯಿ ವೆಂಕಟ್‌ ಲಕ್ಷಮ್ಮ. ಬಾಲನಟನಾಗಿ ರಂಗಭೂಮಿ ಪ್ರವೇಶಿಸಿದ ಅವರು ಹಲವು ವೃತ್ತಿ ಕಂಪನಿಗಳ ಹತ್ತಾರು ನಾಟಕಗಳಲ್ಲಿ ಅಭಿನಯಿಸಿದರು. ‘ರತ್ನಮಂಜರಿ’ (1962) ಚಿತ್ರದ ನಟ, ಸಹಾಯಕ ನಿರ್ದೇಶಕರಾಗಿ ಸಿನಿಮಾರಂಗ ಪ್ರವೇಶಿಸಿದ ಅವರು ನಂತರ ಹಲವು ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸಿದರು. ‘ಮನೆ ಕಟ್ಟಿ ನೋಡು’ ಅವರ ಸ್ವತಂತ್ರ್ಯ ನಿರ್ದೇಶನದ ಮೊದಲ ಸಿನಿಮಾ. ‘ಪದವೀಧರ’, ‘ನಮ್ಮ ಊರು’, ‘ಮಹಡಿಯ ಮನೆ’, ‘ಮಹಾ ತಪಸ್ವಿ’ ಅವರ ನಿರ್ದೇಶನದ ಪ್ರಮುಖ ಸಿನಿಮಾಗಳು.

ಸಹಾಯಕ ನಿರ್ದೇಶಕರಾಗಿದ್ದ ಹಲವಾರು ಚಿತ್ರಗಳಲ್ಲಿ ನಟರಾಗಿಯೂ ಅಭಿನಯಿಸಿದ್ದರು. ‘ಸ್ಕೂಲ್ ಮಾಸ್ಟರ್​’, ‘ಕೃಷ್ಣ ಗಾರುಡಿ’, ‘ರತ್ನಗಿರಿ ರಹಸ್ಯ’ ಅವರ ನಟನೆಯ ಕೆಲವು ಪ್ರಮುಖ ಚಿತ್ರಗಳು. ಗೀತರಚನೆಕಾರರಾಗಿ ಸಿ ವಿ ಶಿವಶಂಕರ್‌ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಕನ್ನಡ ನಾಡು – ನುಡಿ ಕುರಿತ ಅವರ ಅಭಿಮಾನದ ಹಾಡುಗಳು ಈ ಹೊತ್ತಿಗೂ ಹಸಿರಾಗಿವೆ. ಹಲವು 80ರ ದಶಕದ ನಂತರ ಹಲವು ನಿರ್ದೇಶಕರು ಹಾಗೂ ನಿರ್ಮಾಪಕರು ತಮ್ಮ ಸಿನಿಮಾಗಳಿಗೆ ಶಿವಶಂಕರ್‌ ಅವರಿಂದ ಗೀತೆಗಳನ್ನು ಬರೆಸುತ್ತಿದ್ದರು. ಡಾ ರಾಜಕುಮಾರ್‌ ಪ್ರಶಸ್ತಿ, ರಾಜ್ಯೋತ್ಸವ ಪುರಸ್ಕಾರ ಸೇರಿದಂತೆ ಸಿ ವಿ ಶಿವಶಂಕರ್‌ ಅವರಿಗೆ ಹಲವು ಗೌರವಗಳು ಸಂದಿವೆ.

ಸಿ ವಿ ಶಿವಶಂಕರ್‌ ನಿರ್ದೇಶನದ ‘ನಮ್ಮ ಊರು’ ಸಿನಿಮಾದ ಹಾಡು
Previous articleನಿಖಿಲ್‌ ಸಿದ್ದಾರ್ಥ್‌ – ಐಶ್ವರ್ಯ ಮೆನನ್‌ ‘ಸ್ಪೈ’ | ಜೂನ್‌ 29ಕ್ಕೆ ಸಿನಿಮಾ ತೆರೆಗೆ
Next articleನಟ ಉಮಾಪತಿ ಅವರನ್ನು ವರಿಸಲಿರುವ ಅರ್ಜುನ್‌ ಸರ್ಜಾ ತಾರಾಪುತ್ರಿ ಐಶ್ವರ್ಯ

LEAVE A REPLY

Connect with

Please enter your comment!
Please enter your name here