‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಖ್ಯಾತಿಯ ನಟಿ ಚೈತ್ರಾ ಜೆ ಆಚಾರ್‌ ನಟಿಸಿರುವ ‘ಲವ್‌ ಅಂಡ್‌ ಲೆಟ್‌ ಲವ್‌’ ಕಿರುಚಿತ್ರ ಬಿಡುಗಡೆಯಾಗಿದೆ. ಶೈಲಜಾ ಪಡಿಂದಲ ನಿರ್ದೇಶನದ ಈ ಕಿರುಚಿತ್ರ ಸಲಿಂಗಕಾಮದ ವಸ್ತು ಒಳಗೊಂಡಿದೆ. ಗೀತಾ ಕೈಲಾಸಂ, ಮಾಲಿನಿ ಜೀವರತ್ನಂ, ಬೈಜುಕ್ಬಾಲನ್ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚೈತ್ರಾ ಜೆ ಆಚಾರ್‌ ಅಭಿನಯದ ‘ಲವ್‌ ಅಂಡ್‌ ಲೆಟ್‌ ಲವ್‌’ ಕಿರುಚಿತ್ರ ಬಿಡುಗಡೆಯಾಗಿದೆ. ಏಳು ನಿಮಿಷಗಳ ಈ ಕಿರುಚಿತ್ರದಲ್ಲಿ ನಟಿ ಚೈತ್ರಾ ಸಲಿಂಗಕಾಮಿ ಪಾತ್ರ ನಿರ್ವಹಿಸಿದ್ದಾರೆ. ‘ನಾನು ಲೇಡೀಸ್’ ಚಿತ್ರದ ನಿರ್ದೇಶಕಿ ಶೈಲಜಾ ಪಡಿಂದಲ ಈ ಕಿರುಚಿತ್ರ ನಿರ್ದೇಶಿಸಿದ್ದಾರೆ. ಗೀತಾ ಕೈಲಾಸಂ ಮತ್ತು ಚೈತ್ರ ಜೆ ಆಚಾರ್ ತಾಯಿ – ಮಗಳಾಗಿ ನಟಿಸಿದ್ದಾರೆ. ಒಂದು ಮನೆಯಲ್ಲಿ ವಿಧವೆ ತಾಯಿ, ಮಗಳು ವಾಸವಿರುತ್ತಾರೆ. ಅದೊಂದು ದಿನ ತಾಯಿ ಸುಂದರವಾಗಿ ಅಲಂಕೃತಗೊಂಡು ಹೊರಹೋಗಲು ಸಿದ್ದವಾಗಿರುತ್ತಾಳೆ. ಮಗಳು ಅದನ್ನು ಕಂಡು, ‘ಸುಂದರವಾಗಿ ಕಾಣುತ್ತಿದ್ದೀರಿ!’ ಎಂಬಂತೆ ಭಾವನೆಗಳನ್ನು ವ್ಯಕ್ತಪಡಿಸಿ ಅಪ್ಪುಗೆ ನೀಡಿ ಬೀಳ್ಕೊಡುತ್ತಾಳೆ. ಪ್ರತಿಯೊಬ್ಬರೂ ಹೊಸ ಪ್ರೀತಿಯನ್ನು ಹುಡುಕುವ ತಮ್ಮದೇ ಆದ ದಾರಿಯನ್ನು ಕಂಡುಕೊಂಡಿರುತ್ತಾರೆ. ಕಾಫಿ ರೆಸ್ಟೋರೆಂಟ್‌ ಒಂದರಲ್ಲಿ ಪುರುಷನೊಬ್ಬನನ್ನು ಭೇಟಿಯಾಗುವ ತಾಯಿ ತನಗಾಗಿ ಹೊಸ ಸಂಗಾತಿಯನ್ನು ಹುಡುಕಿಕೊಂಡಿರುತ್ತಾಳೆ. ಅದೇ ರೆಸ್ಟೋರೆಂಟಿನಲ್ಲಿ ಮಗಳು ಸಹ ಇನ್ನೊಬ್ಬ ಹುಡುಗಿಯೊಂದಿಗೆ ಪ್ರೀತಿಯಲ್ಲಿ ಮುಳುಗಿರುತ್ತಾಳೆ. ಅವರಿಬ್ಬರು ತಮ್ಮ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕಿರುಚಿತ್ರದ ತಿರುಳು. ಯಾವುದೇ ಸಂಭಾಷಣೆಗಳಿಲ್ಲದೇ ಕೇವಲ ಸನ್ನೆಗಳ ಮೂಲಕವೇ ಇಡೀ ಕಿರುಚಿತ್ರ ಮೂಡಿಬಂದಿದೆ. ಪ್ರೀತಿಗೆ ಲಿಂಗ, ವಯಸ್ಸು ಎಂಬುವ ಭೇದವಿಲ್ಲ ಎನ್ನುವುದು ಕಿರುಚಿತ್ರದ ಸಂದೇಶ. ಮಾಲಿನಿ ಜೀವರತ್ನಂ ಮತ್ತು ಬೈಜುಕ್ಬಾಲನ್ ಇತರೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುಚಿತ್ರಕ್ಕೆ ಕರಮ್‌ ಚಾವ್ಲಾ ಛಾಯಾಗ್ರಹಣ, The RET ಸಂಗೀತ ಸಂಯೋಜನೆಯಿದೆ.

LEAVE A REPLY

Connect with

Please enter your comment!
Please enter your name here