ರಿತೇಶ್ ದೇಶ್‌ಮುಖ್ ನಟಿಸಿ, ನಿರ್ದೇಶಿಸಲಿರುವ ‘ರಾಜಾ ಶಿವಾಜಿ’ ಸಿನಿಮಾ ಸೆಟ್ಟೇರಿದೆ. ಶಿವಾಜಿ ಮಹಾರಾಜರ ಕುರಿತ ಈ ಚಿತ್ರವನ್ನು Jio Studios ಮತ್ತು Mumbai Film Company ಜೊತೆಗೂಡಿ ನಿರ್ಮಿಸಲಿವೆ. ಸಂತೋಷ್ ಶಿವನ್ ಛಾಯಾಗ್ರಹಣ, ಅಜಯ್ ಮತ್ತು ಅತುಲ್ ಸಂಗೀತ ಸಂಯೋಜನೆ ಸಿನಿಮಾಗೆ ಇರಲಿದೆ.
ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ರಿತೇಶ್ ದೇಶ್‌ಮುಖ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ‘ರಾಜಾ ಶಿವಾಜಿ’ ಸಿನಿಮಾ ಘೋಷಿಸಿದ್ದಾರೆ. ಈ ಸಿನಿಮಾ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಲಿದೆ. ಚಿತ್ರದಲ್ಲಿ ರಿತೇಶ್ ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮಹಾರಾಜರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರೇ ಚಿತ್ರದ ನಿರ್ದೇಶಕರು ಎನ್ನುವುದು ವಿಶೇಷ. ರಿತೇಶ್ ಈ ಕುರಿತು ಮಾತನಾಡಿ, ‘ಶಿವಾಜಿ ಅವರ ಕುರಿತಾದ ಚಲನಚಿತ್ರವನ್ನು ನಿರ್ಮಿಸುವುದು ನನ್ನ ಕನಸು. ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಐತಿಹಾಸಿಕ ವ್ಯಕ್ತಿ ಅಲ್ಲ. ಅವರೆಂದರೆ ಒಂದು ಭಾವನೆ. ಶೌರ್ಯದ ಸಾಹಸಗಾಥೆ ಮತ್ತು ಭರವಸೆಯ ದಾರಿ ದೀಪವಾಗಿದ್ದಾರೆ. ಅವರೊಬ್ಬ ಬಂಡಾಯಗಾರರೂ ಆಗಿದ್ದರು. ನಾನು ನಿಮ್ಮೊಂದಿಗೆ ಸೇರಿ ಮಣ್ಣಿನ ಮಗನಿಗೆ ನಮನ ಸಲ್ಲಿಸುತ್ತೇನೆ. ಅವರ ಪರಂಪರೆಯು ಮುಂದಿನ ಪೀಳಿಗೆಗೆ ಹಾಗೂ ನಮಗೆ ಸ್ಫೂರ್ತಿಯಾಗಲಿ’ ಎಂದಿದ್ದಾರೆ.
ಈ ಐತಿಹಾಸಿಕ ಆಕ್ಷನ್ ಡ್ರಾಮಾ ಚಿತ್ರವನ್ನು Jio Studios ಮತ್ತು ದೇಶ್‌ಮುಖ್ ಹೋಮ್ ಬ್ಯಾನರ್ ನಿರ್ಮಾಣ ಸಂಸ್ಥೆಯಾದ Mumbai Film Company ಬ್ಯಾನರ್ ಅಡಿಯಲ್ಲಿ ದೇಶಮುಖ್ ಅವರ ತಾರಾಪತ್ನಿ ಜೆನಿಲಿಯಾ ಅವರು ನಿರ್ಮಿಸಲಿದ್ದಾರೆ. ಈ ಕುರಿತು ಮಾತನಾಡಿರುವ ಜೆನಿಲಿಯಾ, ‘ನಾವು ಕೇವಲ ಚಲನಚಿತ್ರವನ್ನು ನಿರ್ಮಿಸಬೇಕು ಎಂದು ಮುಂದಾಗಿಲ್ಲ. ನಮ್ಮ ಸಂಸ್ಕೃತಿ ಮತ್ತು ಇತಿಹಾಸವನ್ನು ಶ್ರೀಮಂತಗೊಳಿಸುವ ನಿರೂಪಣೆಯ ಎಳೆಯನ್ನು ಹೆಣೆಯಲಿದ್ದೇವೆ. ಯುವ ಶಿವಾಜಿ ಕುರಿತಾದ ಕಥಾಹಂದರ ‘ರಾಜಾ ಶಿವಾಜಿʼ ಕಥೆ ರಚಿಸುವುದು ನಮ್ಮ ದೊಡ್ಡ ಕನಸು. ಮತ್ತು ನಮಗೆ ಜ್ಯೋತಿ ದೇಶಪಾಂಡೆ ಮತ್ತು ಜಿಯೋ ಸ್ಟುಡಿಯೋಸ್‌ನಂತಹ ಉತ್ತಮ ಪಾಲುದಾರರು ಸಿಕ್ಕಿದ್ದಾರೆ. ಇದು ಕೇವಲ ಸಿಕ್ಕ ಗೌರವವಲ್ಲ ಜೊತೆಗೆ ಅಗಾಧವಾದ ಜವಾಬ್ಧಾರಿಯೂ ಆಗಿದೆʼ ಎಂದಿದ್ದಾರೆ. ಚಿತ್ರಕ್ಕೆ ಸಂತೋಷ್ ಶಿವನ್ ಛಾಯಾಗ್ರಹಣ, ಅಜಯ್ ಮತ್ತು ಅತುಲ್ ಸಂಗೀತ ಸಂಯೋಜನೆ ಇರಲಿದೆ. ಶಿವಾಜಿ ಮಹಾರಾಜರ ಕುರಿತು ಇನ್ನೂ ಎರಡು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಅಕ್ಷಯ್ ಕುಮಾರ್ ನಟಿಸಲಿರುವ ಒಂದು ಚಿತ್ರವನ್ನು ಮಹೇಶ್ ಮಂಜ್ರೇಕರ್ ನಿರ್ದೇಶಿಸುತ್ತಿದ್ದಾರೆ. ಸಂದೀಪ್ ಸಿಂಗ್ ನಿರ್ಮಾಣದಲ್ಲಿ ಮತ್ತೊಂದು ಸಿನಿಮಾ ತಯಾರಾಗಲಿದೆ.