ಆರ್‌ ಚಂದ್ರು ಅವರ RC Studio ಬ್ಯಾನರ್‌ನಡಿ ಮೊದಲ PAN ಇಂಡಿಯಾ ಸಿನಿಮಾ ‘ಫಾದರ್‌’ಗೆ ಚಾಲನೆ ಸಿಕ್ಕಿದೆ. ಹಿರಿಯ ನಟ ಶಿವರಾಜಕುಮಾರ್‌ ಚಿತ್ರಕ್ಕೆ ಕ್ಲ್ಯಾಪ್‌ ಮಾಡಿ ಶುಭ ಹಾರೈಸಿದ್ದಾರೆ. ಬಹುಭಾಷಾ ನಟ ಪ್ರಕಾಶ್‌ ರೈ, ಡಾರ್ಲಿಂಗ್‌ ಕೃಷ್ಣ ಮತ್ತು ಅಮೃತಾ ಅಯ್ಯಂಗಾರ್‌ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ನಿರ್ದೇಶಕ ಮತ್ತು ನಿರ್ಮಾಪಕ ಆರ್‌ ಚಂದ್ರು ಕೆಲವು ದಿನಗಳ ಹಿಂದೆ ‘RC Studio’ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು. ಈ ಬ್ಯಾನರ್‌ ಅಡಿ ಐದು ಚಿತ್ರಗಳನ್ನು ಘೋಷಿಸಿದ್ದರು. ಈ ಪೈಕಿ ಮೊದಲ ಚಿತ್ರವಾಗಿ ‘ಫಾದರ್‌’ ಸೆಟ್ಟೇರಿದೆ. ಇತ್ತೀಚಿಗೆ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ನಟ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ದಂಪತಿ ಆರಂಭ ಫಲಕ ತೋರುವುದರ ಮೂಲಕ ‘ಫಾದರ್’ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು. ರಾಜಕೀಯ ಮುಖಂಡ ಎಚ್ ಎಂ ರೇವಣ್ಣ, ಶಾಸಕ ಪ್ರದೀಪ್ ಈಶ್ವರ್, ನಿರ್ಮಾಪಕ ಕೆ ಪಿ ಶ್ರೀಕಾಂತ್, ಬಹದ್ದೂರ್ ಚೇತನ್ ಕುಮಾರ್ ಮುಂತಾದವರು ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ನಟ ಶಿವರಾಜಕುಮಾರ್‌ ಮಾತನಾಡಿ, ‘ಆರ್ ಚಂದ್ರು ನನ್ನ ಆತ್ಮೀಯರು. ಬಹುದೊಡ್ಡ ಕನಸುಗಾರ. ಸಿನಿಮಾವನ್ನು ಪ್ರೀತಿಯ ತಂತ್ರಜ್ಞ. ಆರ್ ಸಿ ಸ್ಟುಡಿಯೋಸ್ ಮೂಲಕ ಮೊದಲ ಚಿತ್ರ ಆರಂಭಿಸಿದ್ದಾರೆ. ಚಂದ್ರು ಹಾಗೂ ಇಡೀ ಚಿತ್ರತಂಡಕ್ಕೆ ಶುಭವಾಗಲಿ’ ಎಂದು ಹಾರೈಸಿದರು. ಶಿವರಾಜಕುಮಾರ್‌ ದಂಪತಿಗೆ ಧನ್ಯವಾದ ಹೇಳಿದ ಚಂದ್ರು, ”ನನ್ನ ‘ಚಾರ್ ಮಿನಾರ್’ ಚಿತ್ರ ಆರಂಭವಾದಾಗಿನಿಂದ ಹಿಡಿದು ಈವರೆಗೂ ನನಗೆ ಶಿವಣ್ಣ ಹಾಗೂ ಗೀತಾ ಶಿವರಾಜಕುಮಾರ್ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಕೆಲವು ದಿನಗಳ ಮುಂಚೆ ನಮ್ಮ ಆರ್‌ಸಿ ಸ್ಟುಡಿಯೋಸ್ ಸಂಸ್ಥೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಈ ಸಂಸ್ಥೆಯಿಂದ ಒಂದು ವರ್ಷದಲ್ಲಿ ಐದು ಸಿನಿಮಾಗಳನ್ನು ನಿರ್ಮಿಸುವುದಾಗಿ ಹೇಳಿದ್ದೆ. ಅದರ ಮೊದಲ ಹೆಜ್ಜೆಯಾಗಿ ಇಂದು ‘ಫಾದರ್’ ಚಿತ್ರ ಆರಂಭವಾಗಿದೆ’ ಎಂದರು.

ಶಿವರಾಜಕುಮಾರ್‌ ಅವರ ‘ಭೈರಾಗಿ’ ಚಿತ್ರಕ್ಕೆ ಸಹನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ರಾಜ್ ಮೋಹನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಅಮೃತ ಅಯ್ಯಂಗಾರ್ ನಾಯಕ – ನಾಯಕಿಯಾಗಿ ನಟಿಸುತ್ತಿದ್ದು, ಪ್ರಕಾಶ್‌ ರೈ ಅವರಿಗೆ ಪ್ರಮುಖ ಪಾತ್ರವಿದೆ. ಮುಂಬೈನ ಆನಂದ್ ಪಂಡಿತ್ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ‘ಹನುಮಾನ್’ ಸಿನಿಮಾ ಖ್ಯಾತಿಯ ಹರಿ ಸಂಗೀತ ನೀಡುತ್ತಿದ್ದಾರೆ. ‘ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರ. ಕಥೆ ತುಂಬಾ ಚೆನ್ನಾಗಿದೆ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿವೆ’ ಎನ್ನುವುದು ನಿರ್ದೇಶಕ ರಾಜ್‌ಮೋಹನ್‌ ಮಾತು.

LEAVE A REPLY

Connect with

Please enter your comment!
Please enter your name here