ಭಾರತೀಯ ಕಿರುತೆರೆಯಲ್ಲಿ ರಾಮಾಯಣ, ಮಹಾಭಾರತ ಪುರಾಣ ಕತೆಗಳಿಗೆ ಎಲ್ಲಾ ಕಾಲಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಪೌರಾಣಿಕ ಹಿಂದಿ ಸೀರಿಯಲ್‌ಗಳ ಕನ್ನಡ ಡಬ್‌ ವರ್ಷನ್‌ಗಳು ಜನಪ್ರಿಯವಾದವು. ಇದೀಗ ಉದಯ ವಾಹಿನಿ ‘ಶ್ರೀಮದ್‌ ರಾಮಾಯಣ’ ಕನ್ನಡ ಅವತರಣಿಕೆಯ ಸರಣಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ.

ಮೂರು ದಶಕಗಳ ಹಿಂದೆ ಕಿರುತೆರೆಯಲ್ಲಿ ಮೂಡಿಬಂದ ರಮಾನಂದ ಸಾಗರ್‌ ನಿರ್ದೇಶನದ ‘ರಾಮಾಯಣ’ ಹಿಂದಿ ಸರಣಿ ಭಾರತೀಯರ ಅಪಾರ ಮೆಚ್ಚುಗೆಗೆ ಪಾತ್ರವಾಯ್ತು. ರಾಮನ ಜೀವನ ಬಹುತೇಕ ಭಾರತೀಯರಿಗೆ ಮಾದರಿಯಾಗಿದೆ. ಇಂದಿಗೂ ರಾಮರಾಜ್ಯ ಅನ್ನುವ ಪದ ಈಗಲೂ ಬಳಸಲಾಗುತ್ತಿದೆ. ರಾಮ ಮತ್ತು ಸೀತೆಯ ಪವಿತ್ರ ಪ್ರೇಮ, ಕಥೆಯಲ್ಲಿ ಧರ್ಮದ ಪಾಲನೆಯ ಮಾರ್ಗದಲ್ಲಿ ಎದುರಿಸಿದ ಅನೇಕ ಸವಾಲುಗಳು, ಕುತೂಹಲಕಾರಿ ಕತೆಗಳನ್ನು ಜನರು ಇಷ್ಟಪಟ್ಟು ನೋಡುತ್ತಾರೆ. ಖಾಸಗಿ ಮನರಂಜನಾ ವಾಹಿನಿಗಳಲ್ಲಿ ರಾಮಾಯಣ, ಮಹಾಭಾರತ ಸೇರಿದಂತೆ ಹಲವು ಪೌರಾಣಿಕ ಸರಣಿಗಳು ಮೂಡಿಬಂದವು. ಕೆಲವರ್ಷಗಳಿಂದೀಚೆಗೆ ಕನ್ನಡ ಡಬ್ಬಿಂಗ್‌ ಅವತರಣಿಕೆಗಳಲ್ಲೂ ಈ ಸರಣಿಗಳು ಕನ್ನಡಿಗರಿಗೆ ಲಭ್ಯವಾಗುತ್ತಿವೆ. ಇದೀಗ ಉದಯ ವಾಹಿನಿ ‘ಶ್ರೀಮದ್‌ ರಾಮಾಯಣ’ ಕನ್ನಡ ಡಬ್ಬಿಂಗ್‌ ಸರಣಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಇದೇ ಮೇ 20ರಿಂದ ಸಂಜೆ 6ಕ್ಕೆ ಉದಯ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ‘ಶ್ರೀಮದ್‌ ರಾಮಾಯಣ’ ಮೂಡಿಬರಲಿದೆ.

‘ಅಯೋಧ್ಯೆಯ ಪುತ್ರ, ಕಿಷ್ಕಿಂದೆಯ ಮಿತ್ರ, ಶುರುವಾಗಲಿದೆ ಮರ್ಯಾದಾ ಪುರುಷೋತ್ತಮನ ಜೀವನಗಾಥೆ’ ಎನ್ನುವ ಒಕ್ಕಣಿಯೊಂದಿಗೆ ಉದಯ ವಾಹಿನಿ ಟ್ರೇಲರ್‌ ಹಂಚಿಕೊಂಡಿದೆ. ಇನ್ನು, ಈ ಬಾರಿ ಪ್ರತ ಸಂಚಿಕೆಯಲ್ಲೂ ವೀಕ್ಷಕರಿಗೆ ಬಹುಮಾನ ಗೆಲ್ಲವು ಅವಕಾಶ ಇರುವುದು ವಿಶೇಷ. ಪ್ರತಿ ಸಂಚಿಕೆಗೆ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಮಿಸ್ಡ್‌ ಕಾಲ್‌ ಮೂಲಕ ವೀಕ್ಷಕರು ಉತ್ತರಿಸಬೇಕು. ಸರಿ ಉತ್ತರ ನೀಡುವ 250 ವೀಕ್ಷಕರಿಗೆ ತಲಾ ಒಂದು ಸಾವಿರ ರೂಪಾಯಿ ಅಂದೇ ಸಂದಾಯವಾಗುವಂತೆ ಯೋಜನೆ ರೂಪಿಸಲಾಗಿದೆ. ಅದರಂತೆ ಪ್ರತೀ ಸಂಚಿಕೆಯಲ್ಲಿ ಎರಡೂವರೆ ಲಕ್ಷ ರೂಪಾಯಿ ಬಹುಮಾನ ನೀಡುವ ಯೋಜನೆ ಹಾಕಿಕೊಂಡಿದೆ ವಾಹಿನಿ.

LEAVE A REPLY

Connect with

Please enter your comment!
Please enter your name here