ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ‘UI’ ಈ ವರ್ಷದ ಮಹತ್ವಾಕಾಂಕ್ಷೆಯ ಸಿನಿಮಾಗಳಲ್ಲೊಂದು. ಇದೀಗ ಸಿನಿಮಾಗೆ ಮತ್ತೊಂದು ವಿಶೇಷತೆ ಸೇರ್ಪಡೆಯಾಗಿದೆ. ಹಂಗೇರಿಯ ಬುಡಾಪೆಸ್ಟ್ ಆರ್ಕೇಸ್ಟ್ರಾ ಸಹಯೋಗದೊಂದಿಗೆ ಚಿತ್ರಕ್ಕೆ ಸಂಗೀತ ಸಂಯೋಜನೆ ನಡೆಯಲಿದೆ.
ಬಹುವರ್ಷಗಳ ನಂತರ ಉಪೇಂದ್ರ ನಿರ್ದೇಶನಕ್ಕೆ ಮರಳುತ್ತಿರುವ ‘UI’ ಸಿನಿಮಾ ಕುರಿತು ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆಯಿದೆ. ಇದೀಗ ನಟ, ನಿರ್ದೇಶಕ ಉಪೇಂದ್ರ ಮತ್ತು ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಹಂಗೇರಿಯ ಬುಡಾಪೆಸ್ಟ್‌ನಲ್ಲಿದ್ದಾರೆ. ಬುಡಾಪೆಸ್ಟ್ ಆರ್ಕೇಸ್ಟ್ರಾ ಸಹಯೋಗದೊಂದಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ ಅಜನೀಶ್. ಬುಡಾಪೆಸ್ಟ್ ಆರ್ಕೇಸ್ಟ್ರಾ, ಯೂರೋಪ್‌ನ ವಿಶ್ವ ದರ್ಜೆಯ ಗುಣಮಟ್ಟವಿರುವ ತಂಡ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆರ್ಕೇಸ್ಟ್ರಾ ಬಳಕೆ ಮಾಡಿ ‘UI’ ಸಿನಿಮಾ ಸಂಗೀತವನ್ನು ಎತ್ತರಕ್ಕೆ ಕೊಂಡೊಯ್ಯುವುದು ಅಜನೀಶ್ ಲೋಕನಾಥ್ ಯೋಜನೆ. ಈ ಮೂಲಕ ಪ್ರೇಕ್ಷಕರಿಗೆ ವಿನೂತನ ಅನುಭವ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ಈ ಹಿಂದೆ ‘ಸರಿಲೇರು ನೀಕೆವ್ವರು’, ‘ವಿಕ್ರಾಂತ್ ರೋಣ’, ‘ಕೆಜಿಎಫ್2’, ‘ಸಲಾರ್’ ಸಿನಿಮಾಗಳು ಬುಡಾಪೆಸ್ಟ್ ಆರ್ಕೇಸ್ಟ್ರಾ ಸಹಯೋಗದಲ್ಲಿ ಸಂಗೀತ ಮಾಡಿದ್ದವು. ಈಗ ‘UI’ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿ ಪೂರ್ಣ 90 ಪೀಸ್ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದೆ. ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೇನರ್ಸ್ ನಿರ್ಮಾಣದ ಸಿನಿಮಾ ವಿವಿಧ ಕಾರಣಗಳಿಗೆ ಸುದ್ದಿಯಾಗುತ್ತಿದೆ. ತಿಂಗಳುಗಳ ಹಿಂದೆ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಚಿತ್ರವಿಲ್ಲದೆ ಕೇವಲ ದನಿಯಷ್ಟೇ ಇದ್ದ ಈ ಟ್ರೇಲರ್ ಬಗ್ಗೆ ಸಿನಿಪ್ರಿಯರ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಹಲವು ರೀತಿಯ ತಂತ್ರಗಾರಿಕೆ, ಗಿಮಿಕ್‌ಗಳಿಂದ ಸುದ್ದಿಯಾಗುವ ಉಪೇಂದ್ರ ‘UI’ ಹೇಗೆ ಸಿದ್ಧಪಡಿಸಲಿದ್ದಾರೆ ಎನ್ನುವ ಕುತೂಹಲವಿದೆ.