ಜೈ ಶಂಕರ್ ಆರ್ಯರ್ ನಿರ್ದೇಶನದ ‘ಶಿವಮ್ಮ’ ಸಿನಿಮಾ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮನ್ನಣೆ ಪಡೆದಿದೆ. ನಟ, ನಿರ್ದೇಶಕ ರಿಷಭ್ ಶೆಟ್ಟಿ ನಿರ್ಮಿಸಿ, ನಿರ್ದೇಶಿಸಿರುವ ಸಿನಿಮಾ ಇದೇ ಜೂನ್ 14ರಂದು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ರಿಷಭ್ ಶೆಟ್ಟಿ ಫಿಲಂಸ್ ನಿರ್ಮಾಣದ ‘ಶಿವಮ್ಮ’ ಕನ್ನಡ ಸಿನಿಮಾ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಸಾಕಷ್ಟು ಕಡೆಗಳಲ್ಲಿ ಚಿತ್ರಕ್ಕೆ ಅಪಾರ ಮೆಚ್ಚುಗೆ, ಪ್ರಶಸ್ತಿಗಳು ಲಭಿಸಿವೆ. ಜೈ ಶಂಕರ್ ಆರ್ಯರ್ ನಿರ್ದೇಶನದ ಸಿನಿಮಾವನ್ನು ಸಂಪೂರ್ಣವಾಗಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಿಸಲಾಗಿದೆ. ಊರಿನ ಗ್ರಾಮಸ್ಥರೇ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನುವುದು ವಿಶೇಷ. ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಶಿವಮ್ಮನ ಕತೆ ಸಿನಿಮಾ. 46 ವರ್ಷದ ಶಿವಮ್ಮ ಪಾರ್ಶ್ವವಾಯು ಪೀಡಿತನಾದ ತನ್ನ ಪತಿ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ನೆಟ್‌ವರ್ಕ್ ಮಾರ್ಕೆಟಿಂಗ್ ವ್ಯಾಪಾರಕ್ಕೆ ಮುಂದಾಗುತ್ತಾಳೆ. ಇದರಿಂದ ಆಕೆಯ ಬದುಕಿನಲ್ಲಾಗುವ ಪಲ್ಲಟಗಳೇ ಚಿತ್ರದ ಕಥಾವಸ್ತು.
ತಿಂಗಳುಗಳ ಹಿಂದೆ ಆಯೋಜನೆಗೊಂಡಿದ್ದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನಗೊಂಡಿತ್ತು. ಸಿನಿಮಾ ಇದೀಗ ಥಿಯೇಟರ್‌ಗಳಿಗೆ ಬರುತ್ತಿದೆ. ನಿರ್ಮಾಪಕ ರಿಷಭ್ ಶೆಟ್ಟಿ ಇದೇ ಜೂನ್ 14ರಂದು ಕರ್ನಾಕದಾದ್ಯಂತ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರೇಲರ್ ಬಿಡುಗಡೆಗೊಳಿಸಿದ್ದಾರೆ. ‘ತಿಥಿ’ ಸಿನಿಮಾದಲ್ಲಿನ ಸಹಜ ನಿರೂಪಣಾ ಶೈಲಿಯಲ್ಲಿ ನಿರ್ದೇಶಕ ಜೈಶಂಕರ್ ಆರ್ಯರ್ ಕತೆ ಹೇಳಿದ್ದಾರೆ. ಶರಣಮ್ಮ ಚಟ್ಟಿ, ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಕಾಸ್ ಯು ಆರ್ ಎಸ್ ಮತ್ತು ಸೌಮ್ಯಾನಂದ ಸಾಹಿ ಛಾಯಾಗ್ರಹಣ ಚಿತ್ರಕ್ಕಿದೆ. ಜೂನ್ 14ರಂದು ‘Love…ಲಿ’, ‘ಕೋಟಿ’, ‘Chef ಚಿದಂಬರ’ ಸಿನಿಮಾಗಳೂ ತೆರೆಕಾಣುತ್ತಿವೆ. ಈ ಚಿತ್ರಗಳ ಮಧ್ಯೆ ‘ಶಿವಮ್ಮ’ನಿಗೆ ಪ್ರೇಕ್ಷಕರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎನ್ನುವುದನ್ನು ನೋಡಬೇಕು.