ದರ್ಶನ್‌ ಅಭಿನಯದ ನೂತನ ಸಿನಿಮಾ ಸೆಟ್ಟೇರಿದೆ. ಮಿಲನ ಪ್ರಕಾಶ್‌ ನಿರ್ದೇಶಿಸಲಿರುವ ಚಿತ್ರಕ್ಕೆ ‘ಡೆವಿಲ್‌ – ದಿ ಹೀರೋ’ ಎಂದು ನಾಮಕರಣವಾಗಿದೆ. ವೈಷ್ಣೋ ಬ್ಯಾನರ್‌ನಡಿ ತಯಾರಾಗಲಿರುವ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಲಿದ್ದಾರೆ.

ನಟ ದರ್ಶನ್‌ ಅವರ ನೂತನ ಸಿನಿಮಾಗೆ ಸದ್ದಿಲ್ಲದೆ ಚಾಲನೆ ಸಿಕ್ಕಿದೆ. ‘ಮಿಲನ’ ಸಿನಿಮಾ ಖ್ಯಾತಿಯ ಮಿಲನ ಪ್ರಕಾಶ್‌ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ನಿನ್ನೆ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ನಿರ್ದೇಶಕ ಪ್ರಕಾಶ್‌ ದಂಪತಿ, ಅವರ ಸಂಬಂಧಿ ಮತ್ತು ಹಿರಿಯ ಚಿತ್ರನಿರ್ಮಾಪಕ ಚಿನ್ನೇಗೌಡರು ಸೇರಿದಂತೆ ಕೆಲವೇ ಆಪ್ತರ ಸಮ್ಮುಖದಲ್ಲಿ ಪೂಜೆ ನಡೆದಿದೆ. ಚಿತ್ರಕ್ಕೆ ‘ಡೆವಿಲ್‌ – ದಿ ಹೀರೋ’ ಎಂದು ನಾಮಕರಣವಾಗಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಮಾಸ್‌ – ಆಕ್ಷನ್‌ ಸಿನಿಮಾ ಎನ್ನುವ ಸೂಚನೆ ಸಿಕ್ಕಿದೆ. ಅಜನೀಶ್‌ ಲೋಕನಾಥ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು ಇತರೆ ಕಲಾವಿದರು ಹಾಗೂ ತಂತ್ರಜ್ಞರ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ಲಭ್ಯವಾಗಲಿದೆ. ವೈಷ್ಣೋ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

ಸದ್ಯ ದರ್ಶನ್‌ ‘ಕಾಟೇರ’ ಚಿತ್ರದ ಶೂಟಿಂಗ್‌ ಪೂರ್ಣಗೊಳಿಸಿದ್ದಾರೆ. ತರುಣ್‌ ಸುಧೀರ್‌ ನಿರ್ದೇಶನದ ಈ ಚಿತ್ರಕ್ಕೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆದಿವೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಈ ಚಿತ್ರದೊಂದಿಗೆ ಮಾಲಾಶ್ರೀ ಪುತ್ರಿ ಆರಾಧನಾ ಅವರು ನಾಯಕಿಯಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಯೋಗರಾಜ್‌ ಭಟ್‌ ನಿರ್ದೇಶನದ ‘ಗರಡಿ’ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ದರ್ಶನ್‌ ನಟಿಸಿದ್ದಾರೆ. ಮೊನ್ನೆ ನವೆಂಬರ್‌ 1ರಂದು ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ನವೆಂಬರ್‌ 10ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here