ಇದು ಐವರು ಹೋಟೆಲ್ ಹುಡುಗರ ಸುತ್ತ ನಡೆಯುವ ಕತೆ. ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ ಎನ್ನುತ್ತಾರೆ ಚಿತ್ರದ ನಿರ್ದೆಶಕ ಪ್ರತೀಕ್ ಪ್ರಜೋಷ್. ‘19.20.21’ ಸಿನಿಮಾ ಖ್ಯಾತಿಯ ನಟ ಶೃಂಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್ ರಿಲೀಸ್ ಆಗಿದ್ದು, ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.
‘ನಾವೆಲ್ಲಾ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದೇವೆ. ನನಗಿಲ್ಲಿ ರೆಸ್ಟೋರೆಂಟ್ ಮಾಲೀಕನ ಪಾತ್ರ. ಕತೆ ಕೇಳಿದಾಗ ಇಂದಿನ ಜನರೇಷನ್ಗೆ ಹೇಳಬೇಕಾದ ವಿಷಯವಿದೆ ಅನಿಸಿತು. ಇದರಲ್ಲಿ ಹ್ಯೂಮರ್, ಫ್ಯಾಮಿಲಿ ಡ್ರಾಮಾವನ್ನು ನಿರ್ದೇಶಕರು ಚೆನ್ನಾಗಿ ಬಳಸಿದ್ದಾರೆ’ ಎನ್ನುತ್ತಾರೆ ‘ಚಿಲ್ಲಿ ಚಿಕನ್’ ಸಿನಿಮಾದ ಪ್ರಮುಖ ಪಾತ್ರಧಾರಿ ಶೃಂಗ. ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ ಖ್ಯಾತಿಯ ಶೃಂಗ ರಂಗಭೂಮಿ ಹಿನ್ನೆಲೆಯ ನಟ. ‘19.20.21’ ಸವಾಲಿನ ಪಾತ್ರ ನಿರ್ವಹಿಸಿದ ಪ್ರೇಕ್ಷಕರ ಮನಗೆದ್ದಿದ್ದ ಅವರು ‘ಚಿಲ್ಲಿ ಚಿಕನ್’ ಚಿತ್ರದಲ್ಲಿ ಪ್ರೇಕ್ಷಕರನ್ನು ನಗಿಸುವ ಪಾತ್ರದಲ್ಲಿದ್ದಾರೆ. ಚೈನೀಸ್ ರೆಸ್ಟೋರೆಂಟ್ ಮಾಡುವ ಆಸೆ ಇರುವ ಮಧ್ಯಮ ವರ್ಗದ ಕುಟುಂಬದ ಯುವಕನಾಗಿ ಅವರು ಕಾಣಿಸಿಕೊಂಡಿದ್ದಾರೆ.
ಹೋಟೆಲ್ ಕೆಲಸ ಮಾಡುವ ಐವರು ಹುಡುಗರ ಸುತ್ತ ನಡೆಯುವ ಕತೆಯಿದು. ಪ್ರತೀಕ್ ಪ್ರಜೋಷ್ ನಿರ್ದೇಶನದ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಬಹುತೇಕ ಹೊಸಬರೇ ನಟಿಸಿರುವ ಸಿನಿಮಾದಲ್ಲಿ ಪ್ರತೀಕ್ ಹೊಸ ಪೀಳಿಗೆಯ ಪ್ರೇಕ್ಷಕರಿಗೆ ಇಷ್ಟವಾಗುವಂಥ ಕತೆ ಹೇಳುತ್ತಿದ್ದಾರೆ. ಬೆಂಗಳೂರಿನ ಹೋಟೆಲೊಂದರಲ್ಲಿ ದುಡಿಯುತ್ತಾ ಚೈನೀಸ್ ರೆಸ್ಟೋರೆಂಟ್ ಒಂದನ್ನು ಪ್ರಾರಂಭಿಸಬೇಕೆಂಬ ಕನಸು ಕಾಣುವ ಈ ಹುಡುಗರ ಕನಸಿಗೆ ಏನೆಲ್ಲಾ ಅಡೆ ತಡೆಗಳು ಬರುತ್ತವೆ ಎನ್ನುವುದು ಒನ್ಲೈನ್ ಸ್ಟೋರಿ. ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿ ಅವರು ಚಿತ್ರಕಥೆ ಮಾಡಿದ್ದಾರೆ. ರೆಸ್ಟೋರೆಂಟ್ವೊಂದರಲ್ಲಿ ಕುಳಿತಾಗ ಸಂಗೀತ ನಿರ್ದೇಶಕ ಸಿದ್ಧಾಂತ್ ಸುಂದರ್ ಅವರಿಗೆ ಈ ಕಾನ್ಸೆಪ್ಟ್ ಹೊಳೆಯಿತಂತೆ. ನಿರ್ದೇಶಕ ಪ್ರತೀಕ್ ಪ್ರಜೋಶ್ ಅವರು ಈ ಕತೆಯನ್ನು ಚಿತ್ರಕಥೆಯನ್ನಾಗಿ ಬೆಳೆಸಿದ್ದಾರೆ.
‘ಚಿಲ್ಲಿ ಚಿಕನ್’ ಕುರಿತು ಮಾತನಾಡುವ ಚಿತ್ರದ ಸಂಗೀತ ಸಂಯೋಜಕ ಸಿದ್ಧಾಂತ್ ಸುಂದರ್, ನೈಜ ಘಟನೆಯನ್ನು ಕತೆ ಮಾಡಿ ಸಿನಿಮಾ ಮಾಡುವುದು ಸುಲಭವಲ್ಲ. ಚಿತ್ರ ಚೆನ್ನಾಗಿ ಬಂದಿದೆ. ಚಿತ್ರದಲ್ಲಿ 5 ಹಾಡುಗಳಿದ್ದು ಅವುಗಳಿಗೆ Rapper ಮಾರ್ಟಿನ್ ಯೋ ಸಾಹಿತ್ಯ ಬರೆದಿದ್ದಾರೆ. ಇದು ಕನ್ನಡಿಗರಷ್ಟೇ ಅಲ್ಲ ನಾನ್ ಕನ್ನಡಿಗರು ಸಹ ನೋಡಲೇ ಬೇಕಾದ ಚಿತ್ರ. ಇದರಲ್ಲಿ ಒಳ್ಳೇ ಕಥೆ, ಜೊತೆಗೆ ಮನರಂಜನೆ ಎಲ್ಲಾ ಇದೆ’ ಎನ್ನುತ್ತಾರೆ. ಚಿತ್ರದ ನಾಯಕಿ ನಿತ್ಯಶ್ರೀ ಅವರಿಗಿದು ಎರಡನೇ ಕನ್ನಡ ಸಿನಿಮಾ. ಈಗಾಗಲೇ ಅವರು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಣಿಪುರ ನಟ ಬಿಜು ತಾಂಜಿಂ, ನಟಿ ರಿನಿ ಆಸ್ಸಾಂ ಕಲಾವಿದ ಹಿರಾಕ್ ಸೋನಾವಾಲ್, ‘ಉತ್ತರಕಾಂಡ’ದ ನಟ ಜಿಂಪಾ ಭುಟಿಯಾ, ನಿರ್ಮಾಪಕ ದೀಪ್ ಭೀಮಾಜಿಹಾನಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ತಂಡ ಇತ್ತೀಚೆಗೆ ಬೆಂಗಳೂರಿನಲ್ಲಿ ಒಡೆದು ಹಾಕಿರುವ ಕಾವೇರಿ ಥಿಯೇಟರ್ ಬಗ್ಗೆ ಸಾಂಗ್ ಮಾಡಿ, ಅದನ್ನು ಪ್ರಸ್ತುತಪಡಿಸಲಿದೆ. ಪತ್ರಕರ್ತ ಶ್ರೀಧರ್ ಶಿವಮೊಗ್ಗ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.










