ಕನ್ನಡ ಚಿತ್ರರಂಗದ ಮೇರು ಚಿತ್ರನಿರ್ದೇಶಕ ಟಿ ಎಸ್ ನಾಗಾಭರಣ ಸಾರಥ್ಯದಲ್ಲಿ ಸಿದ್ಧವಾಗುತ್ತಿರುವ ‘ನಾಡಪ್ರಭು ಕೆಂಪೇಗೌಡ’ ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನಟ ಧನಂಜಯ ಶೀರ್ಷಿಕೆ ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೆಯಾಗುತ್ತಾರೆ ಎನ್ನುವ ಕಾಮೆಂಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸುತ್ತಿವೆ.
‘ಟಿ ಎಸ್ ನಾಗಾಭರಣರ ಎರಡು ದಶಕಗಳ ಕನಸು, ಕನ್ನಡ ಅಸ್ಮಿತೆಯ ಐತಿಹಾಸಿಕ ದೃಶ್ಯಕಾವ್ಯ’ ಎನ್ನುವ ಸಾಲುಗಳೊಂದಿಗೆ ‘ನಾಡಪ್ರಭು ಕೆಂಪೇಗೌಡ’ ಸಿನಿಮಾದ ಫಸ್ಟ್ಲುಕ್ ಬಿಡುಗಡೆಯಾಗಿದೆ. ಅನುಭವಿ ಚಿತ್ರನಿರ್ದೇಶಕ ಟಿ ಎಸ್ ನಾಗಾಭರಣ ಅವರು ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಶೀರ್ಷಿಕೆ ಪಾತ್ರಧಾರಿ ಧನಂಜಯ ಅವರು ಕೆಂಪೇಗೌಡರ ಐಕಾನಿಕ್ ಪೇಟ ಮತ್ತು ಮೀಸೆಯೊಂದಿಗೆ ಪೋಸ್ಟರ್ನಲ್ಲಿ ಮಿಂಚಿದ್ದಾರೆ. ಈ ಪಾತ್ರಕ್ಕೆ ಧನಂಜಯ ಅವರು ಸೂಕ್ತವಾದ ಆಯ್ಕೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾಸಕ್ತರು ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ. ISVARA ಎಂಟರ್ಟೇನ್ಮೆಂಟ್ನಡಿ ಡಾ ಎಂ ಎನ್ ಶಿವರುದ್ರಪ್ಪ ಮತ್ತು ಶುಭಂ ಗುಂಡಾಲ ಸಿನಿಮಾ ನಿರ್ಮಿಸುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ಸಹಯೋಗವಿದೆ.
ಪೋಸ್ಟರ್ನಲ್ಲಿ ಸಿನಿಮಾಗೆ ಕೆಲಸ ಮಾಡುತ್ತಿರುವ ತಂತ್ರಜ್ಞರ ಪಟ್ಟಿಯೂ ಇದೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸುತ್ತಿದ್ದಾರೆ. ಐತಿಹಾಸಿಕ ಸಿನಿಮಾದಲ್ಲಿ ಕಲಾನಿರ್ದೇಶನಕ್ಕೆ ಹೆಚ್ಚಿನ ಮನ್ನಣೆ. ಹಿರಿಯ ಕಲಾನಿರ್ದೇಶಕ ಶಶಿಧರ ಅಡಪ ಅವರು ಕಲಾನಿರ್ದೇಶಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ನಾಗಿಣಿ ಭರಣ ಅವರು ವಸ್ತ್ರವಿನ್ಯಾಸ ಮಾಡುತ್ತಿದ್ದು, ಪನ್ನಗ ಭರಣ ಸಹನಿರ್ದೇಶಕರಾಗಿ ಮತ್ತು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ. ಚಿತ್ರಕಥೆ ರಚನೆಯಲ್ಲಿ ನಿರ್ದೇಶಕ ನಾಗಾಭರಣರಿಗೆ ಕವಯಿತ್ರಿ ಪ್ರತಿಭಾ ನಂದಕುಮಾರ್ ಸಹಕಾರವಿದೆ. ಪ್ರೊ ಸಿದ್ದಲಿಂಗಯ್ಯ ಕಂಬಾಳು, ಡಾ ಎಚ್ ಎಸ್ ಗೋಪಾಲ ರಾವ್ ಪ್ರೊ ಚಂದ್ರಶೇಖರ ಉಘಾಲ, ಡಾ ಹಂಗು ರಾಜೇಶ್ ಅವರ ಸಂಶೋಧನಾ ಸಾಹಿತ್ಯದ ಸಹಕಾರ ಚಿತ್ರಕ್ಕಿದೆ.
ನಾಗಾಭರಣ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲೊಬ್ಬರು. ಕನ್ನಡ ಚಿತ್ರರಂಗಕ್ಕೆ ಅವರಿಂದ ಮಹತ್ವದ ಸಿನಿಮಾಗಳು ಸಿಕ್ಕಿವೆ. ಅವರಿಗೆ ದಟ್ಟ ರಂಗಭೂಮಿ ಹಿನ್ನೆಲೆಯಿದೆ. ಈ ಹಿಂದೆ ನಾಗಾಭರಣ ನಿರ್ದೇಶನದ ‘ಅಲ್ಲಮ’ ಚಿತ್ರದಲ್ಲಿ ಧನಂಜಯ ನಟಿಸಿದ್ದರು. ಇತಿಹಾಸ ಮತ್ತು ಸಾಹಿತ್ಯ ಪ್ರಜ್ಞೆ ಇರುವ ನಟ ಧನಂಜಯ ಅವರು ಈ ಪಾತ್ರಕ್ಕೆ ಅಗತ್ಯ ತಯಾರಿ ನಡೆಸಿ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡದಿದ್ದರೂ ವಿಶ್ಲೇಷಕರ ಮೆಚ್ಚುಗೆಗೆ ಪಾತ್ರವಾಯ್ತು. ಇದೀಗ ಇಬ್ಬರೂ ಮತ್ತೊಂದು ಪೀರಿಯಡ್ ಸಿನಿಮಾಗೆ ಜೊತೆಯಾಗಿದ್ದಾರೆ. ಖಂಡಿತವಾಗಿ ಇದೊಂದು ಮೈಲುಗಲ್ಲು ಚಿತ್ರವಾಗಲಿದೆ ಎಂದೇ ಹೇಳಲಾಗುತ್ತಿದೆ.