ಕಿಶೋರ್‌ ನಿರ್ದೇಶನದ ‘ಫ್ಲಾಟ್‌ #9’ ಮರ್ಡರ್‌ ಮಿಸ್ಟ್ರಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ತೇಜಸ್ವಿನಿ ಶರ್ಮಾ, ಸ್ಕಂದ ಅಶೋಕ್‌ ಮತ್ತು ಚಂದು ಗೌಡ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಟ್ರೈಲರ್‌ ಕುತೂಹಕಾರಿಯಾಗಿದ್ದು, ಸಿನಿಮಾ ಡಿಸೆಂಬರ್‌ 2ಕ್ಕೆ ತೆರೆಗೆ ಬರಲಿದೆ.

‘ಸೂಪರ್‌ ಕಪಲ್‌’ ವೆಬ್‌ ಸರಣಿ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ತೇಜಸ್ವಿನಿ ಶರ್ಮಾ ಚೊಚ್ಚಲ ಸಿನಿಮಾ ‘ಫ್ಲಾಟ್‌ #9’ ಟ್ರೈಲರ್‌ ಬಿಡುಗಡೆಯಾಗಿದೆ. ಕಿರುತೆರೆಯ ಜನಪ್ರಿಯ ನಟರಾದ ಸ್ಕಂದ ಅಶೋಕ್‌ ಮತ್ತು ಚಂದು ಗೌಡ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ. ನಟಿ ತೇಜಸ್ವಿನಿ ಶರ್ಮಾ ಮಾಡೆಲಿಂಗ್‌ ಮೂಲಕ ಗ್ಲಾಮರ್‌ ಜಗತ್ತಿಗೆ ಪರಿಚಯವಾದವರು. “ಇದು ನನ್ನ ಚೊಚ್ಚಲ ಸಿನಿಮಾ. ಇಂಜಿನಿಯರಿಂಗ್ ಮುಗಿಸಿ ರೀಸರ್ಚ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದೆ. ಆಗ ನನಗೆ ಅಪ್ರೋಚ್ ಆದ ಮೊದಲ ಚಿತ್ರವಿದು. ಒಂದೊಳ್ಳೆ ಕಟೆಂಟ್. ನನ್ನ ಪಾತ್ರದ ಸುತ್ತ ಇಡೀ ಕಥೆ ಸುತ್ತುತ್ತೆ” ಎನ್ನುತ್ತಾರೆ ತೇಜಸ್ವಿನಿ. ಅವರು ವರ್ಲ್ಡ್ ಸೂಪರ್ ಮಾಡೆಲ್ ಸೌತ್ ಏಷ್ಯಾ ಟೈಟಲ್ ವಿನ್ನರ್ ಕೂಡ ಹೌದು.

‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಖ್ಯಾತಿಯ ಚಂದು ಗೌಡ ಚಿತ್ರದಲ್ಲಿ ಸೈಕಿಯಾಟ್ರಿಸ್ಟ್‌ ಪಾತ್ರ ನಿರ್ವಹಿಸಿದ್ದಾರೆ. ಅವರ ಆತ್ಮೀಯ ಸ್ನೇಹಿತ ಸ್ಕಂದ ಅಶೋಕ್‌ ಇನ್ವೆಸ್ಟಿಗೇಶನ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿದ್ದಾರೆ. “ತುಂಬಾ ಎಫರ್ಟ್‌ ಹಾಕಿ ಈ ಸಿನಿಮಾ ಮಾಡಿದ್ದಾರೆ. ಒಂದೊಳ್ಳೆ ಕಂಫರ್ಟ್‌ ಝೋನ್‌ನಲ್ಲಿ ಚಿತ್ರೀಕರಣ ಮಾಡಿದ್ದೇವೆ” ಎನ್ನುತ್ತಾರೆ ಸ್ಕಂದ. ನಿರ್ದೇಶಕ ಕಿಶೋರ್‌ ಅವರಿಗೆ ಇದು ಮೊದಲ ಪ್ರಯತ್ನ. “ಕ್ರೈಂ ಆಧಾರಿತ ಕತೆಯಿದು. ಹೊಸಬನಾದರೂ ನಾನು ಮಾಡಿಕೊಂಡ ಕತೆ ಕೇಳಿ ನಂಬಿಕೆಯಿಟ್ಟು ಸ್ಕಂದ ಅಶೋಕ್‌, ತೇಜಸ್ವಿನಿ ಶರ್ಮಾ, ಚಂದು ಗೌಡ ಸಿನಿಮಾ ಮಾಡಿದ್ದಾರೆ” ಎಂದು ತಮ್ಮ ಚಿತ್ರದ ಕಲಾವಿದರಿಗೆ ಥ್ಯಾಂಕ್ಸ್‌ ಹೇಳುತ್ತಾರೆ. ಕಿಶೋರ್ ಕ್ರಿಯೇಷನ್ಸ್ ಬ್ಯಾನರ್‌ನಡಿ ಕಿಶೋರ್, ಸಂತೋಷ್ ಕುಮಾರ್, ಸಂತೋಷ್ ಜಿ.ಎನ್. ಈ ಚಿತ್ರ ನಿರ್ಮಿಸಿದ್ದಾರೆ. ದಿನೇಶ್ ಕುಮಾರ್ ಸಂಗೀತ, ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ವಿಕ್ರಮ್ ಮೋರ್ ಸಾಹಸ, ಗಣೇಶ್ ಮಲ್ಲಯ್ಯ ಸಂಕಲನ ಚಿತ್ರಕ್ಕಿದೆ. ಡಿಸೆಂಬರ್‌ 2ರಂದು ಸಿನಿಮಾ ತೆರೆಕಾಣುತ್ತಿದೆ.

LEAVE A REPLY

Connect with

Please enter your comment!
Please enter your name here