ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ‘ಗೌರಿ’ ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿವೆ. ಕೆ ಕಲ್ಯಾಣ್‌ ಮತ್ತು ಕವಿರಾಜ್‌ ರಚನೆಯ ಹಾಡುಗಳನ್ನು ಸಂಗೀತ ಸಂಯೋಜಕ ಹಂಸಲೇಖ ಅವರು ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಇದೇ ಸಮಾರಂಭದಲ್ಲಿ ಇಂದ್ರಜಿತ್‌ ಲಂಕೇಶ್‌ ನಿರ್ದೇಶದ ‘ಮೊನಾಲಿಸ’ ಸಿನಿಮಾದ 20 ವರ್ಷದ ಸಂಭ್ರಮಾಚರಣೆ ಆಚರಿಸಲಾಯ್ತು.

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಮೂರನೇ ಸಿನಿಮಾ ‘ಮೊನಾಲಿಸ’ ತೆರೆಕಂಡು ಈ ಹೊತ್ತಿಗೆ 20 ವರ್ಷಗಳಾಗಿವೆ. ಜೊತೆಗೆ ಇದೀಗ ಅವರ ‘ಗೌರಿ’ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ಚಿತ್ರದಲ್ಲಿನ ‘ಮುದ್ದಾದ’ ಹಾಡಿನ ಬಿಡುಗಡೆ ಮತ್ತು ‘ಮೊನಲಿಸ’ ಚಿತ್ರದ 20 ವರ್ಷಗಳ ಸಂಭ್ರಮವನ್ನು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಒಟ್ಟಿಗೇ ಆಚರಿಸಿದ್ದಾರೆ. ಸಂಗೀತ ಸಂಯೋಜಕ, ಗೀತ ರಚನೆಕಾರ ಹಂಸಲೇಖ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ‘ಮೊನಾಲಿಸ’ ತಂಡದ ಸದಸ್ಯರೊಡನೆ ಕೇಕ್ ಕಟ್ ಮಾಡುವ ಮೂಲಕ ಚಿತ್ರದ ಇಪ್ಪತ್ತರ ಸಂಭ್ರಮವನ್ನು ಆಚರಿಸಲಾಯಿತು. ನಾಯಕ ಧ್ಯಾನ್, ನಾಯಕಿ ಸದಾ, ನಟ ಶರಣ್, ಸಂಭಾಷಣೆ ಬರೆದಿದ್ದ ಬಿ ಎ ಮಧು, ಸ್ಥಿರ ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್, ಡಿಸೈನರ್ ಮಣಿ ಸೇರಿದಂತೆ ‘ಮೊನಾಲಿಸ’ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ‘ಗೌರಿ’ ಚಿತ್ರದ ‘ಮುದ್ದಾದ’ ಹಾಡು ಸೇರಿದಂತೆ ಎರಡು ಹಾಡುಗಳು ಬಿಡುಗಡೆಯಾದವು. ಹಂಸಲೇಖ ಹಾಡನ್ನು ಬಿಡುಗಡೆ ಮಾಡಿದರು. ಕೆ ಕಲ್ಯಾಣ್‌ ರಚನೆಯ ಮತ್ತೊಂದು ಹಾಡನ್ನು ಅಕಾಲಿಕವಾಗಿ ಕಾಲವಾದ ಇಂದ್ರಜಿತ್ ಅವರ ಸಹೋದರಿ, ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಅರ್ಪಿಸಲಾಯ್ತು. ‘ಮದ್ದಾದ’ ಹಾಡನ್ನು ಕವಿರಾಜ್ ಬರೆದಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡುಗಳು ಬಿಡುಗಡೆಯಾಗಿವೆ. ಹಂಸಲೇಖ ಅವರು ಮಾತನಾಡಿ, ‘ಸಂಗೀತ ಎಂದರೆ ಸಿನಿಮಾ. ಸಿನಿಮಾ ಎಂದರೆ ಸಂಗೀತ. ಸಂಗೀತವಿಲ್ಲದ ಸಿನಿಮಾವನ್ನು ಊಹಿಸಿಕೊಳ್ಳಲು ಅಸಾಧ್ಯ. ಸ್ಟೈಲಿಶ್ ಚಿತ್ರಗಳಿಗೆ ಹೆಸರಾದ ಇಂದ್ರಜಿತ್ ತಮ್ಮ ನಿರ್ದೇಶನದಲ್ಲೇ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಇಂದು ನನ್ನಿಂದ ಬಿಡುಗಡೆಯಾದ ಹಾಡನ್ನು ಗೌರಿ ಲಂಕೇಶ್ ಅವರಿಗೆ ಅರ್ಪಿಸಿದ್ದಾರೆ. ಚಿತ್ರ ಯಶಸ್ವಿಯಾಗಲಿ’ ಎಂದು ಹಾರೈಸಿದರು.

ಚಿತ್ರ ಮತ್ತು ಹಾಡುಗಳ ಬಗ್ಗೆ ಮಾತನಾಡಿದ ಇಂದ್ರಜಿತ್‌ ಲಂಕೇಶ್‌, ‘ಚಿತ್ರದಲ್ಲಿ ಏಳು ಹಾಡುಗಳಿದೆ. ಇದೊಂದು ಸಂಗೀತ ಪ್ರಧಾನ ಚಿತ್ರವಾಗಿರುವುದರಿಂದ ಹಂಸಲೇಖ ಅವರಿಂದಲೇ ಹಾಡು ಬಿಡುಗಡೆ ಮಾಡಿಸಬೇಕೆಂಬ ಹಂಬಲ ನನಗಿತ್ತು. ಹಾಡು ಬಿಡುಗಡೆ ಮಾಡಿಕೊಟ್ಟ ಅವರಿಗೆ ವಂದನೆ.‌ ಇಂದು ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದು, ‘ಮುದ್ದಾದ’ ಹಾಡನ್ನು ಕವಿರಾಜ್ ಬರೆದಿದ್ದು, ನಿಹಾಲ್ ತವ್ರು ಹಾಡಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಮತ್ತೊಂದು ಹಾಡನ್ನು ಕೆ ಕಲ್ಯಾಣ್ ಅವರು ರಚಿಸಿದ್ದು, ಆ ಹಾಡನ್ನು ನನ್ನ ಅಕ್ಕ ಗೌರಿ ಲಂಕೇಶ್ ಅವರಿಗೆ ಅರ್ಪಣೆ ಮಾಡಲಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣ ಪತ್ರ ನೀಡಿದೆ. ಆಗಸ್ಟ್ ಹದಿನೈದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ’ ಎನ್ನುತ್ತಾರೆ.

LEAVE A REPLY

Connect with

Please enter your comment!
Please enter your name here