ಚಿತ್ರಕಥೆ ಸರಳವಾಗಿದ್ದಿದ್ದರೆ, 3Dಗೆ ಬೇಕಿದ್ದ ಎಲಿಮೆಂಟ್ಸ್‌ ಇನ್ನೂ ಒಂದಿಷ್ಟು ಇದ್ದಿದ್ದರೆ ಮನರಂಜನೆ ಸರಾಗವಾಗುತ್ತಿತ್ತು. ಸ್ಟೈಲಿಷ್‌ ನಟ ಸುದೀಪ್‌ರಿಗೆ ಇದು ಹೇಳಿಮಾಡಿಸಿದ ಪಾತ್ರವಾಗಿದ್ದು, ಅವರ ಅಭಿಮಾನಿಗಳು ನೋಡಬೇಕಾದ ಸಿನಿಮಾ.

ಭಾರೀ ಪ್ರಚಾರ ಪಡೆದಿದ್ದ ‘ವಿಕ್ರಾಂತ್‌ ರೋಣ’ ಮೇಲೆ ನಿರೀಕ್ಷೆಯ ಭಾರವೂ ಹೆಚ್ಚೇ ಇತ್ತು. ಅದರಲ್ಲೂ 3D ಸಿನಿಮಾ ಎನ್ನುವ ವಿಶೇಷಣವೂ ಇದ್ದುದರಿಂದ ಸಿನಿಪ್ರೇಮಿಗಳಲ್ಲದೆ ಉದ್ಯಮದ ತಂತ್ರಜ್ಞರೂ ಕುತೂಹಲಗಳಾಗಿದ್ದರು. ಈ ಆಕ್ಷನ್‌ – ಫ್ಯಾಂಟಸಿ ಸಿನಿಮಾ ನಿರೀಕ್ಷೆಯ ಪ್ರಮಾಣವನ್ನೂ ಸಂಪೂರ್ಣ ಸರಿಗಟ್ಟದಿದ್ದರೂ ಹುಸಿಯನ್ನಂತೂ ಮಾಡಿಲ್ಲ. ಚಿತ್ರಕಥೆಯಲ್ಲಿ ಸಿಕ್ಕುಗಳು ಇಲ್ಲದಿದ್ದರೆ, 3Dಗೆ ಬೇಕಿದ್ದ ಎಲಿಮೆಂಟ್ಸ್‌ ಇನ್ನೂ ಒಂದಿಷ್ಟು ಇದ್ದಿದ್ದರೆ ಮನರಂಜನೆ ಸರಾಗವಾಗುತ್ತಿತ್ತು. ಸ್ಟೈಲಿಷ್‌ ನಟ ಸುದೀಪ್‌ರಿಗೆ ಇದು ಹೇಳಿಮಾಡಿಸಿದ ಪಾತ್ರವಾಗಿದ್ದು, ಅವರ ಅಭಿಮಾನಿಗಳು ನೋಡಬೇಕಾದ ಸಿನಿಮಾ.

ದೊಡ್ಡ ಪರದೆ ಮೇಲೆ ಬೇರೆಯದ್ದೊಂದು ಫ್ಯಾಂಟಸಿ ಜಗತ್ತನ್ನು ಸೃಷ್ಟಿಸುವುದು ಸುಲಭದ ಹಾದಿಯಲ್ಲ. ಅದರಲ್ಲೂ 3Dಯಲ್ಲಿ ಕತೆ ಹೇಳಲು ಧೈರ್ಯ ಬೇಕು. ನಮ್ಮ ಥಿಯೇಟರ್‌, ಪ್ರೊಜೆಕ್ಷನ್‌ ಗುಣಮಟ್ಟವನ್ನೂ ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಹೆಣೆಯಬೇಕಾಗುತ್ತದೆ. ತಪ್ಪಿದಲ್ಲಿ ಪ್ರೇಕ್ಷಕರಿಗೆ ಸಿನಿಮಾ ನೋಡುವ ಅನುಭವ ತ್ರಾಸದಾಯಕವೇ ಹೌದು. ಸಾಮಾನ್ಯವಾಗಿ ಯಶಸ್ವೀ 3D ಸಿನಿಮಾಗಳ ಕತೆಯಲ್ಲಿ ಲಾಜಿಕ್‌ ಹುಡುಕುವಂತಿಲ್ಲ. ಕತೆ, ಚಿತ್ರಕಥೆ ಸರಳ ಮತ್ತು ನೇರ. ಆಕರ್ಷಕ ಪಾತ್ರಗಳೊಂದಿಗೆ ಫ್ಯಾಂಟಸಿ ಜಗತ್ತು ಕಟ್ಟಿಕೊಡಬೇಕು. ಅಲ್ಲೇನಿದ್ದರೂ 3D ಅನುಭವವೇ ಮುಖ್ಯ. ಆ ವಿಚಾರದಲ್ಲಿ ‘ವಿಕ್ರಾಂತ್‌ ರೋಣ’ಗೆ ಕೊಂಚ ಹಿನ್ನಡೆಯಾಗಿದೆ ಎಂದೇ ಹೇಳಬಹುದು. ನಿರ್ದೇಶಕ ಅನೂಪ್‌ ಭಂಡಾರಿ ಚಿತ್ರಕಥೆಯಲ್ಲಿ ಸಾಕಷ್ಟು ತಿರುವುಗಳನ್ನಿಟ್ಟಿದ್ದಾರೆ. ತೆರೆಯ ಮೇಲಿನ ಫ್ಯಾಂಟಸಿಯ ಅನುಭವಕ್ಕೆ ಮಿಗಿಲಾಗಿ ಪ್ರೇಕ್ಷಕ ಕತೆ ಅರ್ಥಮಾಡಿಕೊಳ್ಳಲು ಶ್ರಮಪಡಬೇಕು.

ಚಿತ್ರದ ಕತೆ ನಡೆಯುವ ನಿರ್ದಿಷ್ಟ ಕಾಲಘಟ್ಟವನ್ನು ಗುರುತಿಸುವಲ್ಲಿಯೂ ನಿರ್ದೇಶಕರು ಎಡವಿದ್ದಾರೆ. ಫ್ಯಾಂಟಸಿ ಸಿನಿಮಾ ಆದರೂ ಅವರು ಹೇಳುವ ಕತೆ, ಫ್ಲಾಷ್‌ಬ್ಯಾಕ್‌ಗಳಿಗೆ ಕಾಲಘಟ್ಟ ಮುಖ್ಯವೇ ಆಗುತ್ತದೆ. ಭೂತ – ಪ್ರೇತದ ಚೇಷ್ಟೆಗಳು ಹೆಚ್ಚೇ ಪ್ರಚಲಿತವಿದ್ದ 70, 80ರ ದಶಕಗಳ ಚಿತ್ರಣದ ಹಿನ್ನೆಲೆಯಲ್ಲಿ ಅವರು ಕತೆ ಹೇಳಿರುವಂತಿದೆ. ನಾಸ್ಟಾಲ್ಜಿಕ್‌ ಫೀಲ್‌ ಕೊಡುವ ಪ್ರಾಪರ್ಟಿಗಳನ್ನು ಬಳಕೆ ಮಾಡಲಾಗಿದೆ. ಆದರೆ ಕೆಲವು ಪಾತ್ರಗಳು ತೊಡುವ ವಸ್ತ್ರ, ಸನ್ನಿವೇಶಗಳು ಇದಕ್ಕೆ ಪೂರಕವಾಗಿಲ್ಲ. ಸುದೀರ್ಘ ತಯಾರಿ, ಚಿತ್ರೀಕರಣ ನಡೆಸಿದ ಸಿನಿಮಾದಲ್ಲಿ ಇಂತಹ ತಪ್ಪುಗಳು ಹೇಗಾದವೋ? ಭಾರತೀಯ ಸಿನಿಮಾಗಳಲ್ಲಿ ರಿವೇಂಜ್‌ ಸಿನಿಮಾಗಳಿಗೆ ಫ್ಲಾಷ್‌ಬ್ಯಾಕ್‌ ಕತೆ ಕಟ್ಟುವ ರೂಢಿ ತೀರಾ ಹಳೆಯದು. ಇದೇ ತಂತ್ರವನ್ನು ಚಿತ್ರಕ್ಕೆ ಅಳವಡಿಸಿರುವ ನಿರ್ದೇಶಕರು ನಿರ್ದಿಷ್ಟ ಕಾಲಘಟ್ಟ ಗುರುತಿಸುವಲ್ಲಿ ಎಡವದ್ದಾರೆ.

ಸಿನಿಮಾ ಇಂಟರೆಸ್ಟಿಂಗ್‌ ಅನ್ನಿಸುವುದು, ಪ್ರೇಕ್ಷಕರು ಕತೆಯೊಳಗೆ ಪ್ರವೇಶಿಸುವುದು ಇಂಟರ್‌ವೆಲ್‌ ನಂತರವೇ. ಮೊದಲಾರ್ಧದಲ್ಲಿ ನಿರ್ದೇಶಕರು ಕಟ್ಟಿದ ಪಾತ್ರಗಳು, ರೂಪಿಸಿದ ಭೂಮಿಕೆ ಇಂಟರ್‌ವೆಲ್‌ ನಂತರ ಒಂದೊಂದಾಗಿ ಅರ್ಥವಾಗುತ್ತಾ ಹೋಗುತ್ತವೆ. ಈ ಹಂತದಲ್ಲಿ 3Dಗೆ ಅನುಭವಕ್ಕೆ ಬೇಕಾದ ಎಲಿಮೆಂಟ್ಸ್‌ ಇನ್ನಷ್ಟು ಇದ್ದಿದ್ದರೆ ಸಿನಿಮಾ ಎಂಗೇಜಿಂಗ್‌ ಆಗಿರೋದು. ಕೊನೆಯ ಅರ್ಧ ಗಂಟೆ ಫ್ಯಾಂಟಸಿ ಜಗತ್ತನ್ನು ತೋರಿಸುವ ನಿರ್ದೇಶಕರ ಕಲ್ಪನೆಗೆ ಕಲಾನಿರ್ದೇಶಕರ ಸಹಕಾರ, ಸೃಜನಶೀಲತೆ ನೆರವಾಗಿದೆ. ಛಾಯಾಗ್ರಾಹಕ ವಿಲಿಯಂ ಡೇವಿಡ್‌ ತಂಡ ಮತ್ತು ಸಂಗೀತ ಸಂಯೋಜಕ ಅಜನೀಶ್‌ ಲೋಕನಾಥ್‌ ಅವರ ಪರಿಶ್ರಮಕ್ಕೆ ಮೆಚ್ಚುಗೆ ಸಿಗಬೇಕು. ವಿಶೇಷವಾಗಿ ‘ರಕ್ಕಮ್ಮ’ ಮತ್ತು ‘ತಣ್ಣನೆ ಬೀಸೋ ಗಾಳಿ’ ಹಾಡುಗಳನ್ನು ಸೊಗಸಾಗಿ ರೂಪಿಸಿದ್ದಾರೆ.

ತಮ್ಮ ಧ್ವನಿ ಮತ್ತು ಸ್ಟೈಲ್‌ನಿಂದಾಗಿ ತಮ್ಮದೇ ಆದೊಂದು ಗುರುತು ಮೂಡಿಸಿರುವ ನಟ ಸುದೀಪ್‌. ಅವರು ಚಿತ್ರವನ್ನು ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಅವರ ಪಾತ್ರಪೋಷಣೆಯೂ ಚೆನ್ನಾಗಿದೆ. ವಿಕ್ರಾಂತ್‌ ರೋಣ ಪಾತ್ರ ಸುದೀಪ್‌ರ ಇಮೇಜಿಗೆ ಸೂಕ್ತವಾಗಿ ಹೊಂದಿಕೆಯಾಗಿದೆ. ಆಕ್ಷನ್‌ – ಅಡ್ವೆಂಚರ್‌ ಮಧ್ಯೆ ನಿರೂಪ್‌ ಭಂಡಾರಿ ಮತ್ತು ನೀತಾರ ಪಾತ್ರಗಳ ಪ್ರೀತಿಯ ಎಳೆಯಿದೆ. ನಿರೂಪ್‌ ಭಂಡಾರಿ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದ್ದು, ರೊಮ್ಯಾಂಟಿಕ್‌ ಹೀರೋ ಆಗಿ ಅವರಿನ್ನೂ ಪಳಗಬೇಕು. ರಫೀಕ್‌ ಪಾತ್ರಕ್ಕೆ ಬರೆದಿರುವ ಕಾಮಿಡಿ ಉತ್ತಮ ಅಭಿರುಚಿಯದ್ದೇನಲ್ಲ. ಬಿಡಿಬಿಡಿಯಾಗಿ ಹೇಳುತ್ತಾ ಹೋದರೆ ಕೆಲವು ಲೋಪಗಳು ಕಾಣಿಸುವುದು ಸಹಜ. ಇಡಿಯಾಗಿ ಚಿತ್ರದ ಬಗ್ಗೆ ಹೇಳುವುದಾದರೆ ಕನ್ನಡದ ಮಟ್ಟಿಗೆ ಒಂದೊಳ್ಳೆಯ ಪ್ರಯತ್ನ.

Previous article‘ಲಕ್ಕೀ ಮ್ಯಾನ್‌’ ಟೀಸರ್‌ | ಪುನೀತ್‌ ಅಭಿನಯದ ಕೊನೆಯ ಫೀಚರ್‌ ಸಿನಿಮಾ
Next article‘Liger’ ಥೀಮ್‌ ಸಾಂಗ್‌ ಬಿಡುಗಡೆ; ವಿಜಯ್‌ ದೇವರಕೊಂಡ ಸಿನಿಮಾ

LEAVE A REPLY

Connect with

Please enter your comment!
Please enter your name here