ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ‘ಕಣ್ಣಪ್ಪ’ ಚಿತ್ರದಲ್ಲಿನ ನಟಿ ಮಧುಬಾಲ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಬೇಡ ಕುಲದ ನಾಯಕಿ ‘ಪನ್ನಗಾ’ ಪಾತ್ರದಲ್ಲಿ ಮಧುಬಾಲ ಕಾಣಿಸಿಕೊಂಡಿದ್ದಾರೆ. ವಿಷ್ಣು ಮಂಚು ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿರುವ ಈ ತೆಲುಗು ಸಿನಿಮಾ ಆರಂಭದಿಂದಲೂ ಭರ್ಜರಿ ಸುದ್ದಿಯಲ್ಲಿದೆ.
ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಚಿತ್ರದಲ್ಲಿನ ನಟಿ ಮಧುಬಾಲಾ ಫಸ್ಟ್‌ಲುಕ್ ಹೊರಬಿದ್ದಿದೆ. ಅವರು ಚಿತ್ರದಲ್ಲಿ ಬೇಡ ಕುಲದ ವೀರ ಮಹಿಳೆ ‘ಪನ್ನಗಾ’ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕತ್ತಿ ಹಿಡಿದು ಹೋರಾಟ ನಡೆಸುತ್ತಿರುವ ಪೋಸ್ಚರ್‌ನ ಅವರ ಫಸ್ಟ್‌ಲುಕ್ ಪೋಸ್ಟರ್ ಗಮನ ಸೆಳೆಯುತ್ತದೆ. ‘ಚಿತ್ರದಲ್ಲಿ ಮಧು ಅವರು ಬೇಡ ಸಮುದಾಯದ ನಾಯಕಿ ಮಾತ್ರವಲ್ಲ, ಹೋರಾಟದಲ್ಲಿಯೂ ದಿಟ್ಟೆ, ಧೀರೆ. ನಾವು ಅಂದುಕೊಂಡಂತೆ ಮಧುಬಾಲ ಅವರ ಪಾತ್ರ ಮೂಡಿಬಂದಿದ್ದು, ನೋಡುಗರಿಗೆ ಇಷ್ಟವಾಗಲಿದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್. ಚಿತ್ರದಲ್ಲಿ ದಕ್ಷಿಣ ಭಾರತದ ಪ್ರಮುಖ ಕಲಾವಿದರು ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಜೊತೆಜೊತೆಗೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ನಡೆದಿವೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಚಿತ್ರದ ಕತೆ ಮತ್ತು ಮೇಕಿಂಗ್ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇದು ವಿಷ್ಣು ಮಂಚು ಅವರ ಮೊದಲ ಪ್ಯಾನ್ ಇಂಡಿಯಾ ಪ್ರಾಜೆಕ್ಟ್.
‘ಕಣ್ಣಪ್ಪ’ ಜಾಗತಿಕ ಮಟ್ಟದಲ್ಲಿಯೂ ಕ್ರೇಜ್ ಸೃಷ್ಟಿಸಿದೆ. ಇತ್ತೀಚಿನ ಕಾನ್ ಸಿನಿಮೋತ್ಸವದಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ‘ಕಣ್ಣಪ್ಪ ಸಿನಿಮಾ ಬರೀ ಇತಿಹಾಸವಲ್ಲ, ಇದು ಎರಡನೇ ಶತಮಾನದ ಚೋಳರ ಕಾಲದ ಕಥೆ ಎಂದು ಶಂಕರಾಚಾರ್ಯರು ಹೇಳಿದ್ದರು. 14ನೇ ಶತಮಾನದಲ್ಲಿ ಕವಿ ಧೂರ್ಜಟಿ ಈ ಬಗ್ಗೆ ಬರೆದಿದ್ದಾರೆ. 18ನೇ ಶತಮಾನದಲ್ಲಿ ಬ್ರಿಟಿಷರೂ ಇದನ್ನು ಉಲ್ಲೇಖಿಸಿದ್ದಾರೆ. ಇದೆಲ್ಲವನ್ನು ಅಧ್ಯಯನ ನಡೆಸಿ ಈ ಸಿನಿಮಾ ಮಾಡಲಾಗಿದೆ’ ಎಂದು ಟೀಸರ್ ಬಿಡುಗಡೆ ಸಂದರ್ಭದಲ್ಲಿ ವಿಷ್ಣು ಮಂಚು ಹೇಳಿಕೊಂಡಿದ್ದರು. ಚಿತ್ರದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಶರತ್‌ಕುಮಾರ್, ಮಧುಬಾಲ, ಕಾಜಲ್ ಅಗರ್‌ವಾಲ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಮೋಹನ್ ಬಾಬು ನಿರ್ಮಿಸುತ್ತಿರುವ ಚಿತ್ರ ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾರತೀಯ ಭಾಷೆಗಳಲ್ಲೂ ತೆರೆಕಾಣಲಿದೆ.