ಶಂಕರ್‌ ಕೋನಮಾನಹಳ್ಳಿ ನಿರ್ದೇಶನದಲ್ಲಿ ಅಭಯ್‌ ಪುನೀತ್‌ ಮತ್ತು ಸೋನಾಲ್‌ ಮಾಂಟೆರೊ ಅಭಿನಯದ ‘ಶಂಭೋ ಶಿವ ಶಂಕರ’ ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ. ನಟ ವಸಿಷ್ಠ ಸಿಂಹ, ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಹಾಡುಗಳನ್ನು ಬಿಡುಗಡೆ ಮಾಡಿ ಶುಭಕೋರಿದರು.

“ನಾನು ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿದ್ದವನು. ಹಿರಿತೆರೆಯಲ್ಲಿ ಇದು ನನ್ನ ಚೊಚ್ಚಲ ನಿರ್ದೇಶನದ ಚಿತ್ರ. ನನ್ನ ಕನಸಿಗೆ ಜೀವ ತುಂಬಿದ ನಿರ್ಮಾಪಕ‌, ತಂತ್ರಜ್ಞರಿಗೆ ಹಾಗೂ‌ ಕಲಾವಿದರಿಗೆ ಧನ್ಯವಾದ. ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಬಹುದಿನಗಳ ಗೆಳೆಯ ವಸಿಷ್ಠ ಸಿಂಹ ಹಾಗೂ‌ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರಿಗೆ ವಿಶೇಷ ಧನ್ಯವಾದ” ಎಂದರು ನಿರ್ದೇಶಕ ಶಂಕರ್ ಕೋನಮಾನಹಳ್ಳಿ. ಅವರ ‘ಶಂಭೋ ಶಿವ ಶಂಕರ’ ಸಿನಿಮಾದ ಹಾಡುಗಳು ಬಿಡುಗಡೆಯಾಗಿವೆ. ನವೀನ್‌ ಸಜ್ಜು ಹಾಡಿರುವ ಚಿತ್ರದಲ್ಲಿನ ‘ನಾಟಿಕೋಳಿ’ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ನಾಯಕನಟ ಅಭಯ್‌ ಪುನೀತ್‌ ಮಾತನಾಡಿ, “ನನಗೆ ಅಭಿನಯ ಅಂದರೆ ಏನೆಂದು ಗೊತ್ತಿರಲಿಲ್ಲ. ನನಗೆ ಅಭಿನಯ ಕಲಿಸಿದ ನಿರ್ದೇಶಕರಿಗೆ ನಾನು ಆಭಾರಿ” ಎಂದು ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು. ನಾಯಕಿ ಸೋನಾಲ್ ಮಾಂಟೆರೊ, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರೋಹಿತ್ ಹಾಗೂ ರಕ್ಷಕ್ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ಸಿನಿಮಾ ನಿರ್ಮಾಣದ ಬಗ್ಗೆ ವರ್ತೂರು ಮಂಜು, ಗೀತರಚನೆ ಕುರಿತು ಗೌಸ್ ಪೀರ್‌ಹಾಗೂ ಸಂಗೀತದ ಬಗ್ಗೆ ಹಿತನ್ ಹಾಸನ್ ಮಾಹಿತಿ ನೀಡಿದರು. ನಟರಾಜು ಮದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಆನಂದ್ ಆಡಿಯೋ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here