ರವೀಂದ್ರ ವಂಶಿ ನಿರ್ದೇಶನದ ‘ಟೇಕ್ವಾಂಡೋ ಗರ್ಲ್’ ಸಿನಿಮಾದ ‘ಈ ಜಗದಲ್ಲಿ’ ಸಾಂಗ್ ರಿಲೀಸ್ ಆಗಿದೆ. ಚಿತ್ರನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಡು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಟೇಕ್ವಾಂಡೋ ಕುರಿತ ಕಥಾಹಂದರ ಇರುವ ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಋತು ಸ್ಪರ್ಶ ನಟಿಸಿದ್ದಾರೆ.
‘ಈ ಚಿತ್ರದಲ್ಲಿ ಒಂದು ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟ ಪಡುತ್ತಾಳೆ? ಟೇಕ್ವಾಂಡೋ ಸಮರ ಕಲೆ ಹೇಗೆ ಕಲಿಯುತ್ತಾಳೆ, ಈ ವಿದ್ಯೆಯ ಮುಖಾಂತರ ಸಮಾಜಕ್ಕೆ ಹೇಗೆ ಮಾದರಿಯಾಗುತ್ತಾಳೆ ಎನ್ನುವುದೇ ಚಿತ್ರದ ಮುಖ್ಯ ಸಾರಾಂಶ’ ಎನ್ನುತ್ತಾರೆ ‘ಟೇಕ್ವಾಂಡೋ ಗರ್ಲ್’ ಸಿನಿಮಾದ ನಿರ್ದೇಶಕ ರವೀಂದ್ರ ವಂಶಿ. ಈ ಹಿಂದೆ ಅವರು ಮಾಲಾಶ್ರೀ ನಟನೆಯ ‘ನೈಟ್ ಕರ್ಫ್ಯೂ’ ಸಿನಿಮಾ ನಿರ್ದೇಶಿಸಿದ್ದರು. ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ನಟಿಸಿರುವ ಋತು ಸ್ಪರ್ಶ 5ನೇ ತರಗತಿ ವಿದ್ಯಾರ್ಥಿನಿ. 3ನೇ ವಯಸ್ಸಿನಿಂದ ಈ ಕಲೆಯನ್ನು ಅಭ್ಯಾಸ ಮಾಡಿದ್ದಾಳೆ. ಒಟ್ಟು ಎಂಟು ಪರೀಕ್ಷೆಗಳನ್ನು ಎದುರಿಸಿ ಬ್ಲಾಕ್ ಬೆಲ್ಟ್ ಪಡೆದು ನಾಲ್ಕು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾಳೆ. ಈ ಸಿನಿಮಾ ಆಗಸ್ಟ್ 30ರಂದು ತೆರೆಕಾಣುತ್ತಿದೆ. ಚಿತ್ರನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಡು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
‘ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಶ್ರಮ ಪಟ್ಟು ಕಲಿತಿರುವ ಋತುಸ್ಪರ್ಶಗೆ ಉಜ್ವಲ ಭವಿಷ್ಯವಿದೆ. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದು ಈ ಸೆಲ್ಫ್ ಡಿಫೆನ್ಸ್ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುವ ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ. ಇಂತಹ ಚಿತ್ರಗಳು ಹೆಚ್ಚು ಹೆಚ್ಚಾಗಿ ಬರಬೇಕು. ಹೊಸ ಪ್ರತಿಭೆಗಳು ಆಗಮನವಾಗಬೇಕು , ನಿಂತ ನೀರಾಗದೆ ಹರಿಯುವ ನೀರಾಗಿ ಬೆಳೆಯಬೇಕು. ಡ್ಯಾನ್ಸ್ , ಫೈಟ್ ಎಲ್ಲವೂ ಚೆನ್ನಾಗಿ ಮಾಡುತ್ತಿದ್ದಾಳೆ ಇವಳಿಗೆ ಒಳ್ಳೆಯದಾಗಲಿ’ ಎಂದು ಋತುಗೆ ಹಾರೈಸಿದರು. ಋತು ಸ್ಪರ್ಶ ಅವರ ತಂದೆ ಪ್ರವೀಣ್ ಭಾನು ಮತ್ತು ತಾಯಿ ಡಾ ಸುಮೀತಾ ಪ್ರವೀಣ್ ಅವರೇ ಪುತ್ರಿಗಾಗಿ ಈ ಸಿನಿಮಾ ನಿರ್ಮಿಸಿದ್ದಾರೆ. ‘ಮಗಳು ಬೇಬಿ ಋತು ಸ್ಪರ್ಶ ಸಾಮರ್ಥ್ಯ ಗಮನಿಸಿ ಈ ಚಿತ್ರ ಮಾಡಿದೇನೆ. ಇದು ಮಗಳಿಗಷ್ಟೇ ಸೀಮಿತವಾಗಬಾರದು. ಸಿನಿಮಾ ಮುಖಾಂತರ ಸಮಾಜಕ್ಕೆ ಈ ಸಮರ ಕಲೆಯ ಜೊತೆಗೆ ಹಣುಮಕ್ಕಳ ರಕ್ಷಣೆ ಬಗ್ಗೆ ತಿಳುವಳಿಕೆ ಮೂಡಬೇಕು’ ಎನ್ನುತ್ತಾರೆ ನಿರ್ಮಾಪಕಿ ಡಾ ಸುಮೀತಾ ಪ್ರವೀಣ್. ಶಾಲಾ ಮಕ್ಕಳು ಚಿತ್ರವನ್ನು ವೀಕ್ಷಿಸಲೆಂದು ಟಿಕೆಟ್ ದರ ಕಡಿತಗೊಳಿಸುವ ಸಂಬಂಧ ಅವರು ಶಿಕ್ಷಣ ಸಚಿವರಿಗೆ ಒಂದು ಮನವಿ ಪತ್ರವನ್ನೂ ಕೊಟ್ಟಿದ್ದಾರೆ. M S ತ್ಯಾಗರಾಜ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.