ಸಂಗೀತ ಸಂಯೋಜಕ ಅಜನೀಶ್‌ ಲೋಕನಾಥ್‌ 50 ಸಿನಿಮಾಗಳ ಗಡಿ ತಲುಪಿದ್ದಾರೆ. ಅವರು ಸಿನಿಮಾರಂಗಕ್ಕೆ ಪರಿಚಯವಾಗಿ ಎರಡು ದಶಕ. ಸ್ವತಂತ್ರವಾಗಿ ಸಂಗೀತ ಸಂಯೋಜನೆ ಶುರು ಮಾಡಿ ದಶಕವಾಯ್ತು. ‘ಕಾಂತಾರ’ ಅವರ ವೃತ್ತಿಬದುಕಿನ ಮಹತ್ವದ ಚಿತ್ರವಾಯ್ತು. ಮುಂಬರುವ ‘ಮ್ಯಾಕ್ಸ್‌’, ‘ಬಘೀರ’, ‘UI’ ಚಿತ್ರಗಳಿಗೆ ಅವರ ಸಂಗೀತ ಸಂಯೋಜನೆಯಿದೆ.

ಸಾಲು, ಸಾಲು ಹಿಟ್‌ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯ ಚಿತ್ರಗಳ ಸಂಖ್ಯೆ 50 ತಲುಪಿದೆ. ಅವರು ಚಿತ್ರರಂಗಕ್ಕೆ ಪರಿಚಯವಾಗಿ ಇಲ್ಲಿಗೆ 21 ವರ್ಷ. ಸ್ವತಂತ್ರವಾಗಿ ಸಂಗೀತ ಸಂಯೋಜನೆ ಶುರು ಮಾಡಿ ದಶಕವಾಯ್ತು. ‘ಕಾಂತಾರ’ ಅವರ ವೃತ್ತಿಬದುಕಿನ ಮಹತ್ವದ ಚಿತ್ರವಾಯ್ತು. ಮುಂಬರುವ ‘ಮ್ಯಾಕ್ಸ್‌’, ‘ಬಘೀರ’, ‘UI’ ಚಿತ್ರಗಳಿಗೆ ಅವರ ಸಂಗೀತ ಸಂಯೋಜನೆಯಿದೆ. ಈ ಸಂಗೀತ ಪಯಣದ ಬಗ್ಗೆ ಮಾತನಾಡುವ ಅಜನೀಶ್‌, ‘ಆರಂಭದಲ್ಲಿ ಕೀ ಬೋರ್ಡ್‌ ಪ್ಲೇಯರ್‌ ಆಗಿದ್ದೆ. ಆಮೇಲೆ 2005ರಿಂದ ಚಿಕ್ಕ ಪುಟ್ಟ ಸಿನಿಮಾಗಳಿಗೆ ಮ್ಯೂಸಿಕ್‌ ಮಾಡಿದೆ. ಯಾವುದೂ ರಿಲೀಸ್‌ ಆಗಲಿಲ್ಲ. ಒಳ್ಳೆಯ ಸಿನಿಮಾ ಸಿಗುತ್ತಿರಲಿಲ್ಲ. 2010ರಲ್ಲಿ ಬಂದ ಶಿಶಿರ ಕೈ ಹಿಡಿಯಿತು. ಉಳಿದವರು ಕಂಡಂತೆ ಹೆಸರು ತಂದುಕೊಟ್ಟಿತು. ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಗಳಿಂದಲೂ ಪ್ರಶಂಸೆ ಸಿಕ್ತು. ರಂಗಿತರಂಗ ಚಿತ್ರದಿಂದ ಕಮರ್ಷಿಯಲ್‌ ಸಕ್ಸಸ್‌ ಸಿಕ್ತು. ಕಿರಿಕ್‌ ಪಾರ್ಟಿ ಸಿನಿಮಾದಿಂದ ತೆಲುಗಿನಲ್ಲಿಯೂ ಅವಕಾಶ ಸಿಕ್ಕಿತು. ಹೀಗೆ, 50ರ ನಂಬರ್‌ ತಲುಪಿದ್ದೇನೆ’ ಎಂದಿದ್ದಾರೆ.

ತಂದೆಯೇ ತಮ್ಮ ಸಂಗೀತದ ಮೊದಲ ಗುರು ಎನ್ನುತ್ತಾರೆ ಅಜನೀಶ್‌. ಬೆಂಗಳೂರಿಗೆ ಬಂದಾಗ ಸಿನಿಮಾ ಸಂಗೀತದಲ್ಲಿ ಅವರಿಗೆ ಗುರುವಾದವರು ಸಂಗೀತ ಸಂಯೋಜಕ – ಗೀತ ರಚನೆಕಾರ ಕೆ ಕಲ್ಯಾಣ್‌. ‘ನಾನು ಬೆಂಗಳೂರಿಗೆ ಬಂದಾಗ, ಸಿನಿಮಾ ಕ್ಷೇತ್ರದ ಅನುಭವ ಹೇಳಿಕೊಟ್ಟವರು ಗುರುಗಳಾದ ಕೆ ಕಲ್ಯಾಣ್‌ ಸರ್.‌ ಒಂದು ವರ್ಷ ಅವರ ಮನೆಯಲ್ಲಿಯೇ ಇದ್ದೆ. ಮ್ಯೂಸಿಕ್‌ ಗೊತ್ತಿತ್ತು. ಆದರೆ, ಸಿನಿಮಾ ಮ್ಯೂಸಿಕ್‌ ಹೇಗೆ ವರ್ಕ್‌ ಆಗುತ್ತದೆ ಎಂಬುದು ಗೊತ್ತಿರಲಿಲ್ಲ. ಆ ಅನುಭವ ಸಿಕ್ಕಿದ್ದೇ ಅಲ್ಲಿ. ಅವರೇ ನನ್ನ ಗಾಡ್‌ ಫಾದರ್‌’ ಎನ್ನುತ್ತಾರೆ ಅಜನೀಶ್‌. ‘ನನ್ನ ದೃಷ್ಟಿಕೋನದ ಜತೆಗೆ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು ಮತ್ತು ಕಲಾವಿದರ ಪಾಯಿಂಟ್‌ ಆಫ್‌ ವ್ಯೂವ್‌ನಲ್ಲಿ ನಾನು ಕೆಲಸ ಮಾಡುತ್ತೇನೆ. ನನ್ನ ಮ್ಯೂಸಿಕ್‌ನಿಂದ, ಹಾಡಿನಿಂದ ಒಂದು ಸಿನಿಮಾ ಹಿಟ್‌ ಆಗಬಹುದು. ಹೇಗಾದ್ರೂ ಒಂದು ಸಿನಿಮಾದಿಂದ ಒಂದು, ಎರಡಾದರೂ ಹಾಡು ಹಿಟ್‌ ಆಗಬೇಕು ಅನ್ನೋ ದೃಷ್ಟಿಯಲ್ಲಿಯೇ ನಾನು ಕೆಲಸ ಮಾಡ್ತಿನಿ’ ಎನ್ನುತ್ತಾರವರು.

ಅಜನೀಶ್‌ ಅವರಿಗೆ ಬೆನ್ನೆಲುಬಾಗಿ ನಿಂತವರು ಸಿ ಆರ್‌ ಬಾಬಿ. ಅವರು ಕೂಡ ಸಂಗೀತ ಸಂಯೋಜಕರೇ. ವ್ಯವಹಾರಿಕವಾಗಿ ಅಜನೀಶ್‌ರಿಗೆ ನೆರವಾಗುವುದು ಕೂಡ ಬಾಬಿ ಅವರೇ. ಅಜನೀಶ್‌ ಲೋಕನಾಥ್‌ ಮತ್ತು ಬಾಬಿ ಇದೀಗ ಸಿನಿಮಾ ನಿರ್ಮಾಣಕ್ಕೂ ಇಳಿದಿದ್ದಾರೆ. Abbs Studios ಬ್ಯಾನರ್‌ ತೆರೆದು, ಅದರ ಅಡಿಯಲ್ಲಿ ಮೊದಲ ಚಿತ್ರವಾಗಿ ‘ಜಸ್ಟ್‌ ಮ್ಯಾರೀಡ್‌’ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶೈನ್‌ ಶೆಟ್ಟಿ ಮತ್ತು ಅಂಕಿತಾ ಅಮರ್‌ ಜೋಡಿಯಾಗಿ ನಟಿಸುತ್ತಿದ್ದಾರೆ. ‘ಸಿನಿಮಾಗೆ ಏನನ್ನು ಕೊಡಬೇಕು, ಹೇಗಿರಬೇಕು ಎಂಬ ಆ ಪ್ರೊಸೆಸ್‌ಗೆ ಹೆಚ್ಚು ಸಮಯ ಬೇಕೇ ಹೊರತು, ಮ್ಯೂಸಿಕ್‌ ಮಾಡಲು ಅಲ್ಲ. ಅದೇ ರೀತಿ ಮ್ಯಾಕ್ಸ್‌ ಸಿನಿಮಾ, UI ಸಿನಿಮಾಗಳನ್ನು ನೋಡಿದ ಮೇಲೆ ಮ್ಯೂಸಿಕ್‌ ಸಖತ್‌ ಸೂಟ್‌ ಆಗಿದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಎಲ್ಲ ಅಂಶಗಳನ್ನೂ ಸಂಗೀತದ ಮೂಲಕ ನೀಡಿದ್ದೇನೆ. ನೋಡುಗನಿಗೆ ಒಂದೊಳ್ಳೆ ಟ್ರೀಟ್‌ ಈ ಸಿನಿಮಾಗಳ ಮೂಲಕ ಸಿಗಲಿದೆ’ ಎನ್ನುತ್ತಾರೆ ಅಜನೀಶ್‌.

LEAVE A REPLY

Connect with

Please enter your comment!
Please enter your name here