ರಂಗಭೂಮಿ ಹಿನ್ನೆಲೆಯ ದೆಹಲಿ ಗಣೇಶ್‌ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ ನಟ. ಮೇರು ನಿರ್ದೇಶಕರು, ಮುಂಚೂಣಿ ನಾಯಕನಟರ ಚಿತ್ರಗಳ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದೆಹಲಿ ಗಣೇಶ್‌ ಅವರ ಅಗಲಿಕೆಯಿಂದಾಗಿ ತಮಿಳು ಚಿತ್ರರಂಗಕ್ಕೆ ತನ್ನ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಮೇರು ನಟನೊಬ್ಬನನ್ನು ಕಳೆದುಕೊಂಡಂತಾಗಿದೆ.

ತಮಿಳು ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ದೆಹಲಿ ಗಣೇಶ್ ಮೊನ್ನೆ ನವೆಂಬರ್‌ 9ರಂದು ಇಹಲೋಕ ತ್ಯಜಿಸಿದ್ದಾರೆ. 48 ವರ್ಷಗಳಷ್ಟು ಸುದೀರ್ಘ ನಟನಾ ಬದುಕು ಅವರದು. ಅಭಿನಯಿಸಿರುವ ಚಿತ್ರಗಳ ಸಂಖ್ಯೆ 400 ದಾಟುತ್ತದೆ. ಗಣೇಶ್ ಅವರು ಹುಟ್ಟಿದ್ದು 1944ರ ಆಗಸ್ಟ್‌ 1ರಂದು. 1964ರಿಂದ 1974ರವರೆಗೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ ಗಣೇಶ್ ಹೆಸರಿನೊಂದಿಗೆ ‘ದೆಹಲಿ’ ಸೇರಿಕೊಂಡಿದ್ದರ ಹಿಂದೊಂದು ಆಸಕ್ತಿದಾಯಕ ಕತೆಯಿದೆ. ದೆಹಲಿ ಮೂಲದ ಥಿಯೇಟರ್ ಗ್ರೂಪ್ ದಕ್ಷಿಣ ಭಾರತ ನಾಟಕ ಸಭಾಕ್ಕೆ ಸೇರಿದ ನಂತರ ಅವರ ಹೆಸರಿನ ಹಿಂದೆ ‘ದೆಹಲಿ’ ಸೇರಿಕೊಂಡಿತು. ಮುಂದೆ ಅವರು ‘ದೆಹಲಿ ಗಣೇಶ್’ ಎಂದೇ ಹೆಸರಾದರು.

ರಂಗಭೂಮಿಯಿಂದ ಸಿನಿಮಾಗೆ | ಕಾಥಾಡಿ ರಾಮಮೂರ್ತಿಯವರ ‘ಡೌರಿ ಕಲ್ಯಾಣ ವೈಭೋಗಮೆ’ ನಾಟಕದಲ್ಲಿ ಗಣೇಶನ್ ನಿರ್ವಹಿಸಿದ ‘ಕುಸೇಲರ್’ ಎಂಬ ಪಾತ್ರ ಚಿತ್ರನಿರ್ದೇಶಕ ಕೆ ಬಾಲಚಂದರ್ ಅವರ ಗಮನ ಸೆಳೆಯಿತು. ಅವರು ತಮ್ಮ ‘ಪಟ್ಟಿನ ಪ್ರವೇಶಂ’ ತಮಿಳು ಚಿತ್ರದಲ್ಲಿ (1976) ಗಣೇಶ್ ಅವರಿಗೆ ಅವಕಾಶ ನೀಡಿದರು. ಮುಂದೆ ಗಣೇಶ್‌ ಹಿಂತಿರುಗಿ ನೋಡಲೇ ಇಲ್ಲ. ಹಾಸ್ಯ, ಖಳ ಅಥವಾ ಭಾವನಾತ್ಮಕ ಪಾತ್ರವೇ ಆಗಲಿ ಗಣೇಶ್ ಮಿಂಚುತ್ತಾ ಹೋದರು. ‘ಅಪೂರ್ವ ಸಹೋದರರ್ಗಳ್‌’ ಸಿನಿಮಾದಲ್ಲಿ ಅವರ ನಿರ್ವಹಿಸಿದ ಫ್ರಾನ್ಸಿಸ್ ಅನ್ಬರಸು ಪಾತ್ರವನ್ನು ಸಿನಿಪ್ರಿಯರು ಮರೆಯುವುದುಂಟೇ? ಕೆ ಬಾಲಚಂದರ್ ಮತ್ತು ವಿಸು ಅವರಂತಹ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಗಣೇಶ್, ರಜನಿಕಾಂತ್, ಕಮಲ ಹಾಸನ್ ಮೊದಲಾದ ಹಿರಿಯ ನಟರಿಂದ ಹಿಡಿದು ವಿಜಯ್, ಅಜಿತ್ ಮತ್ತು ಸಿಲಂಬರಸನ್‌ ಸೇರಿದಂತೆ ಯುವ ನಟ – ನಿರ್ದೇಶಕರೊಂದಿಗೂ ಕೆಲಸ ಮಾಡಿದ್ದಾರೆ.

‘ಮೈಖಲ್ ಮದನ ಕಾಮರಾಜನ್‌’ ಚಿತ್ರದಲ್ಲಿ ಬಾಣಸಿಗನಾಗಿ, ‘ಅವ್ವೈ ಷಣ್ಮುಗಿ’ಯಲ್ಲಿ ಸೇತುರಾಂ ಅಯ್ಯರ್ ಆಗಿ, ಮಣಿರತ್ನಂ ನಿರ್ದೇಶನದ ‘ನಾಯಕನ್‌’ನಲ್ಲಿ ಬಲಗೈ ಬಂಟ ಅಯ್ಯರ್ ಆಗಿ ನಟಿಸಿದ ಗಣೇಶ್ ಬಹುಮುಖ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ. ಪೊಲ್ಲಾದವನ್ , ಸಿಂಧು ಭೈರವಿ, ಚಿದಂಬರ ರಹಸ್ಯಂ, ಇರುವರ್, ಹೇ ರಾಮ್, ಇಂಡಿಯನ್ – 2 ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡ ಗಣೇಶನ್, ಧ್ವನಿ ಕಲಾವಿದರಾಗಿಯೂ ಕಂಠದಾನ ಮಾಡಿದ್ದಾರೆ. ‘ಮಝಲೈ ಪಟ್ಟಾಳಂ’ (ಕನ್ನಡದಲ್ಲಿ ‘ಮಕ್ಕಳ ಸೈನ್ಯ’ ಸಿನಿಮಾ) ತಮಿಳು ಸಿನಿಮಾದಲ್ಲಿ ಕನ್ನಡದ ಮೇರು ನಟ ವಿಷ್ಣುವರ್ಧನ್ ಅವರಿಗೆ ದನಿ ನೀಡಿದ್ದೇ ದೆಹಲಿ ಗಣೇಶ್. ಚಿರಂಜೀವಿ, ಪ್ರತಾಪ್ ಪೋತನ್, ರವೀಂದ್ರನ್, ನೆಡುಮುಡಿ ವೇಣು ಮೊದಲಾದ ಅನ್ಯಭಾಷಾ ನಟರು ತಮಿಳು ಚಿತ್ರಗಳಲ್ಲಿ ನಟಿಸಿದಾಗ ಅವರ ಪಾತ್ರಗಳಿಗೆ ಕಂಠದಾನ ಮಾಡಿದ್ದರು.

ಪ್ಯಾನ್ ಇಂಡಿಯಾ ಕಲಾವಿದ | ಗಣೇಶ್ ತಮಿಳು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರೊಬ್ಬ ಪ್ಯಾನ್ ಇಂಡಿಯಾ ಕಲಾವಿದ. ಮಲಯಾಳಂ, ತೆಲುಗು, ಹಿಂದಿಯಲ್ಲಿಯೂ ಗಣೇಶ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಧ್ರುವಂ, ದೇವಾಸುರಂ, ದಿ ಸಿಟಿ, ಕಾಲಾಪಾನಿ, ಕೀರ್ತಿ ಚಕ್ರ, ಪೋಕಿರಿ ರಾಜಾ, ಪೆರುಚ್ಚಾಝಿ, ಲ್ಯಾವೆಂಡರ್, ಮನೋಹರಂ ಮುಂತಾದ ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಗಣೇಶ್, ಜೈತ್ರ ಯಾತ್ರಾ, ನಾಯುಡಮ್ಮ, ಪುನ್ನಮಿ ನಾಗು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ದಸ್ , ಅಜಬ್ ಪ್ರೇಮ್ ಕೀ ಗಜಬ್ ಕಹಾನಿ, ಚೆನ್ನೈ ಎಕ್ಸ್‌ಪ್ರೆಸ್‌ ಅವರ ಹಿಂದಿ ಚಿತ್ರಗಳು. ‘ಪಾಸಿ’ (1979) ಚಿತ್ರಕ್ಕಾಗಿ ಅವರಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ‘ಕಲೈಮಾಮಣಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2023ರ ಡಿಸೆಂಬರ್‌ನಲ್ಲಿ ರಂಗಭೂಮಿಗೆ ನೀಡಿದ ಕೊಡುಗೆಗಾಗಿ ಗಣೇಶ್‌ ಅವರಿಗೆ ‘ಗೌರಿ ಮನೋಹರಿ’ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ದೆಹಲಿ ಗಣೇಶ್‌ ಅವರ ಅಗಲಿಕೆಯಿಂದಾಗಿ ತಮಿಳು ಚಿತ್ರರಂಗಕ್ಕೆ ತನ್ನ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಮೇರು ನಟನೊಬ್ಬನನ್ನು ಕಳೆದುಕೊಂಡಂತಾಗಿದೆ.

LEAVE A REPLY

Connect with

Please enter your comment!
Please enter your name here