ನಟ, ನಿರ್ದೇಶಕ, ನಿರ್ಮಾಪಕರಾಗಿ ಭಾರತೀಯ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ರಾಜ್‌ ಕಪೂರ್‌. ಅವರ 100ನೇ ಜನ್ಮದಿನಾಚರಣೆ ಪ್ರಯುಕ್ತ 2024ರ ಡಿಸೆಂಬರ್ 13ರಿಂದ 15ರ ವರೆಗೆ ದೇಶದಾದ್ಯಂತ 40 ನಗರಗಳ 135 ಥಿಯೇಟರ್‌ಗಳಲ್ಲಿ ಅವರ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ.

ಹಿಂದಿ ಸಿನಿಮಾರಂಗದಲ್ಲಿ ಶೋಮ್ಯಾನ್ ಎಂದೇ ಕರೆಯಲ್ಪಡುತ್ತಾರೆ ನಟ ರಾಜ್ ಕಪೂರ್. 1924 ಡಿಸೆಂಬರ್ 14ರಂದು ಪೇಶಾವರದಲ್ಲಿ ಜನಿಸಿದ ರಾಜ್ ಕಪೂರ್, ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಬಾಲ ಕಲಾವಿದರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದ್ದರೂ ಮಗ ತನ್ನಂತೆಯೇ ಸಿನಿಮಾ ನಟನಾಗುವುದು ಅಪ್ಪ ಪೃಥ್ವಿರಾಜ್ ಕಪೂರ್ ಅವರಿಗೆ ಇಷ್ಟವಿರಲಿಲ್ಲ. ತನ್ನ 10ನೇ ವಯಸ್ಸಿನಲ್ಲಿ ‘ಇಂಕ್ವಿಲಾಬ್’ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ ರಾಜ್ ಕಪೂರ್‌ಗೆ ನಟನಾಗಬೇಕೆಂಬ ಬಯಕೆ ಇತ್ತು. ಆದರೆ ನಟನಾಗುವುದು ಅಷ್ಟು ಸುಲಭವೇ?

ಹತ್ತನೇ ತರಗತಿಯಲ್ಲಿ ಫೇಲ್ ಆದಾಗ ಪೃಥ್ವಿರಾಜ್ ಕಪೂರ್ ಮಗನನ್ನು ನಿರ್ದೇಶಕ ಕೇದಾರ್ ಶರ್ಮಾ ಅವರ ಬಳಿ ಕೆಲಸಕ್ಕೆ ಸೇರಿಸಿದರು. ಅಲ್ಲಿ ರಾಜ್ ಕಪೂರ್ ಎಂಬ ನೀಲಿ ಕಣ್ಣಿನ ಹುಡುಗ Clapper boy ಆಗಿ ಕೆಲಸ ಮಾಡಬೇಕಾಗಿತ್ತು. ಹೇಗಾದರೂ ಕ್ಯಾಮೆರಾದಲ್ಲಿ ತನ್ನ ಮುಖ ಬರಬೇಕು ಎಂದು ಬಯಸುತ್ತಿದ್ದ ಹುಡುಗ, ಸರಿಯಾಗಿ ಕ್ಲ್ಯಾಪ್ ಮಾಡದೇ ಇದ್ದಾಗ ನಿರ್ದೇಶಕ ಸಿಟ್ಟಿನಿಂದ ಬೈದಿದ್ದರು. ಇದೇ ಕೇದಾರ್ ಶರ್ಮಾ 1947ರಲ್ಲಿ ‘ನೀಲ್ ಕಮಲ್’ ಚಿತ್ರದಲ್ಲಿ ರಾಜ್ ಕಪೂರ್‌ರನ್ನು ನಾಯಕನನ್ನಾಗಿ ಮಾಡಿದ್ದು. ಮಧುಬಾಲಾ ನಾಯಕಿಯಾಗಿದ್ದ ಈ ರೊಮ್ಯಾಂಟಿಕ್ ಸಿನಿಮಾ ಜನರ ಮನಸ್ಸು ಗೆದ್ದಿತ್ತು. ಮೊದಲ ಸಿನಿಮಾ ಯಶಸ್ಸು ಗಳಿಸಿದರೂ ನಂತರದ ಮೂರು ಸಿನಿಮಾ ಫ್ಲಾಪ್!

1948ರಲ್ಲಿ ಆರ್ ಕೆ ಸ್ಟುಡಿಯೊ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ ರಾಜ್ ಕಪೂರ್ ‘ಆಗ್’ ಸಿನಿಮಾ ಮೂಲಕ ನಿರ್ದೇಶಕ ಮತ್ತು ನಿರ್ಮಾಪಕರಾದರು.1949ರಲ್ಲಿ ತೆರೆಕಂಡ ರೊಮ್ಯಾಂಟಿಕ್ ಸಿನಿಮಾ ‘ಅಂದಾಜ್’ ಬ್ಲಾಕ್ ಬಸ್ಟರ್ ಆಗಿತ್ತು. ಇದಾದ ಮೇಲೆ ಅವರದ್ದೇ ನಿರ್ಮಾಣ, ನಿರ್ದೇಶನ, ನಟನೆಯ ಬರ್‌ಸಾತ್, ಆವಾರಾ ಚಿತ್ರ ಮೆಗಾ ಬ್ಲಾಕ್ ಬಸ್ಟರ್ ಆದವು. ಶಂಕರ್- ಜೈಕಿಶನ್ ಜೋಡಿ ಸಂಗೀತ ಸಂಯೋಜನೆ ಮಾಡಿದ ‘ಆವಾರಾ’ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು. ಈ ಸಿನಿಮಾದಿಂದಾಗಿ ಸೋವಿಯತ್ ಒಕ್ಕೂಟ, ಚೀನಾ, ಟರ್ಕಿ, ಅಫ್ಘಾನಿಸ್ತಾನದಲ್ಲಿಯೂ ರಾಜ್ ಕಪೂರ್ ಜನಪ್ರಿಯರಾದರು.

ರಾಜ್ ಕಪೂರ್ ಮತ್ತು ನರ್ಗೀಸ್ ಆಗಿನ ಕಾಲದ ಜನಪ್ರಿಯ ಜೋಡಿ. ‘ಆಗ್’ ಸಿನಿಮಾದ ಮೂಲಕ ಮೋಡಿ ಮಾಡಿದ್ದ ಈ ಜೋಡಿ 16 ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದರು. 1955ರಲ್ಲಿ ಇವರಿಬ್ಬರೂ ಜತೆಯಾಗಿ ನಟಿಸಿದ ‘ಶ್ರೀ 420’ (ಶ್ರೀ ಚಾರ್ ಸೌ ಬೀಸ್), ಗಳಿಕೆಯಲ್ಲಿ ‘ಆವಾರಾ’ ಚಿತ್ರವನ್ನೂ ಹಿಂದಿಕ್ಕಿತ್ತು. 1956ರಲ್ಲಿ ‘ಚೋರಿ ಚೋರಿ’ ಸಿನಿಮಾದಲ್ಲಿ ನರ್ಗೀಸ್, ರಾಜ್ ಕಪೂರ್ ನಾಯಕಿಯಾಗಿದ್ದು, ‘ಜಾಗ್ತೇ ರಹೋ’ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. 9 ವರ್ಷ ನರ್ಗೀಸ್ ಜತೆ ಕೆಲಸ ಮಾಡಿದ್ದ ರಾಜ್ ಕಪೂರ್ ಗೃಹಸ್ಥನಾಗಿದ್ದರೂ ಆಕೆಯನ್ನು ಪ್ರೀತಿಸುತ್ತಿದ್ದರು. ಮುಂದೊಂದು ದಿನ ಆ ಪ್ರಣಯ ಸಂಬಂಧ ಮುರಿದು ಬಿದ್ದು, ರಾಜ್ ಕಪೂರ್‌ನಿಂದ ದೂರವಾದ ನರ್ಗೀಸ್‌ಗೆ ‘ಮದರ್ ಇಂಡಿಯಾ’ ಸಿನಿಮಾ ಶೂಟಿಂಗ್ ವೇಳೆ ನಾಯಕ ಸುನಿಲ್ ದತ್ ಮೇಲೆ ಪ್ರೇಮಾಂಕುರವಾಗಿ ಅವರಿಬ್ಬರೂ ಮದುವೆಯಾದರು.

ರಾಜ್ ಕಪೂರ್ ನಿರ್ಮಿಸಿದ ‘ಜಿಸ್ ದೇಶ್ ಮೆ ಗಂಗಾ ಬೆಹ್ತೀ ಹೈ’ ಮ್ಯೂಸಿಕಲ್ ಹಿಟ್ ಆಗಿದ್ದರೂ ಅವರೇ ನಿರ್ದೇಶಿಸಿ ನಟಿಸಿದ ‘ಮೇರಾ ನಾಮ್ ಜೋಕರ್’ ಫ್ಲಾಪ್ ಆಗಿ ಭಾರೀ ನಷ್ಟವನ್ನುಂಟು ಮಾಡಿತ್ತು. ನಂತರದ ವರ್ಷಗಳಲ್ಲಿ ಮಗ ರಣಧೀರ್ ಕಪೂರ್, ರಿಷಿ ಕಪೂರ್‌ರನ್ನು ರಾಜ್ ಕಪೂರ್ ಚಿತ್ರರಂಗಕ್ಕೆ ಪರಿಚಯಿಸಿದರು. ರಿಷಿ ಕಪೂರ್ ಅವರ ಮೊದಲ ಸಿನಿಮಾ ‘ಬಾಬ್ಬಿ’. ಈ ಸಿನಿಮಾದಲ್ಲಿ ಡಿಂಪಲ್ ಕಪಾಡಿಯಾ ನಾಯಕಿ. ಹದಿಹರೆಯದವರ ಪ್ರೇಮಕತೆ ಹೇಳುವ ‘ಬಾಬ್ಬಿ’ ಸಿನಿಮಾ ಹಿಂದಿ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. 1970, 80ರ ದಶಕಗಳಲ್ಲಿ ಸ್ತ್ರೀ ಪ್ರಧಾನ ಚಿತ್ರಗಳಾದ ಸತ್ಯಂ ಶಿವಂ ಸುಂದರಂ, ರಾಮ್ ತೇರಿ ಗಂಗಾ ಮೈಲಿ ಸಿನಿಮಾ ನಿರ್ದೇಶಿಸಿದ ಅವರು ಸಹನಟನಾಗಿಯೂ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ಸಿನಿಮಾರಂಗದಲ್ಲಿ ಅಪೂರ್ವ ಸಾಧನೆ ಮಾಡಿದ ರಾಜ್ ಕಪೂರ್ 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು11 ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದಾರೆ. ಕಲೆಗೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಮತ್ತು ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ನೀಡಿ ಗೌರವಿಸಿದೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕಾರಕ್ಕಾಗಿ ರಾಜ್ ಕಪೂರ್ ಮುಂಬೈನಿಂದ ದೆಹಲಿಗೆ ಪ್ರಯಾಣಿಸಿದ್ದರು. ಅಸ್ತಮಾದಿಂದ ಬಳಲುತ್ತಿದ್ದ ಅವರು ದೆಹಲಿ ತಲುಪಿದ ಕೂಡಲೇ ಅಸ್ವಸ್ಥರಾದರು. ಉಸಿರಾಟ ಸಮಸ್ಯೆಯಿಂದಾಗಿ ಆಕ್ಸಿಜನ್ ಮಾಸ್ಕ್ ಕೂಡಾ ನೀಡಲಾಯಿತು. 1988 ಮೇ 2ರಂದು ಪ್ರಶಸ್ತಿ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದ ರಾಜ್ ಕಪೂರ್‌ಗೆ ಅಲ್ಲಿ ಕೂರಲಾಗಲಿಲ್ಲ. ಅವರು ವೇದಿಕೆ ಹತ್ತುವ ಪರಿಸ್ಥಿತಿಯಲ್ಲೂ ಇರಲಿಲ್ಲ. ಇದನ್ನು ಗಮನಿಸಿದ ಆಗಿನ ರಾಷ್ಟ್ರಪತಿ ಆರ್ ವೆಂಕಟರಾಮನ್, ರಾಜ್ ಕಪೂರ್ ಹತ್ತಿರ ಬಂದು ವಿಚಾರಿಸಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದರು. ಇದಾಗಿ ಒಂದು ತಿಂಗಳಲ್ಲಿ ಅಂದರೆ 1988 ಜೂನ್ 2ರಂದು ರಾಜ್ ಕಪೂರ್ ಕೊನೆಯುಸಿರೆಳೆದರು.

ಭಾರತೀಯ ಚಿತ್ರರಂಗದ ಚಾರ್ಲಿ ಚಾಪ್ಲಿನ್ ಎಂದು ಕರೆಯಲಾಗುತ್ತಿದ್ದ ರಾಜ್ ಕಪೂರ್, ಸಿನಿಮಾರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಭಾರತ ಸರ್ಕಾರ 2001ರಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿತ್ತು. ರಾಜ್ ಕಪೂರ್ ಅವರ 100ನೇ ಜನ್ಮದಿನಾಚರಣೆ ಪ್ರಯುಕ್ತ 2024ರ ಡಿಸೆಂಬರ್ 13ರಿಂದ 15ರ ವರೆಗೆ ದೇಶದಾದ್ಯಂತ 40 ನಗರಗಳ 135 ಥಿಯೇಟರ್‌ಗಳಲ್ಲಿ ಅವರ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ.

LEAVE A REPLY

Connect with

Please enter your comment!
Please enter your name here