ಸುಕುಮಾರ್‌ ನಿರ್ದೇಶನ, ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ2’ ಭರ್ಜರಿ ಗಳಿಕೆ ಮಾಡುತ್ತಿದೆ. ದಕ್ಷಿಣ ಭಾರತದ ಈ ಸಿನಿಮಾಗೆ ಈಶಾನ್ಯ ರಾಜ್ಯದ ನಂಟು ಕೂಡಾ ಇದೆ. ಸಿನಿಮಾಗೆ ಭರಪೂರ ಆಕ್ಷನ್‌ ಕೊರಿಯೋಗ್ರಾಫಿ ಮಾಡಿದವರು ಮಣಿಪುರದ ಮೈಬಂ ನಬಕಾಂತ. ಅವರೀಗ ತೆಲುಗಿನ ಸ್ಟಾರ್‌ ಸ್ಟಂಟ್‌ ಕೊರಿಯೋಗ್ರಾಫರ್‌.

ಪುಷ್ಪ-2 ಸಿನಿಮಾ ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುತ್ತಾ ಮುನ್ನಡೆಯುತ್ತಿದೆ. ಆಕ್ಷನ್, ಥ್ರಿಲ್ಲರ್ ‘ಪುಷ್ಪ2 ದಿ ರೂಲ್’, ರಕ್ತ ಚಂದನ ಕಳ್ಳಸಾಗಣೆ ಮಾಡುವ ಪುಷ್ಪರಾಜ್‌ನ ಕತೆ ಹೇಳುತ್ತದೆ. ‘ಪುಷ್ಪ2’ ಹೀರೋ ಅಲ್ಲು ಅರ್ಜುನ್ ತೆಲುಗಿನವರು, ನಾಯಕಿ ರಶ್ಮಿಕಾ ಮಂದಣ್ಣ ಕನ್ನಡತಿ. ಭನ್ವರ್ ಸಿಂಗ್ ಶೆಖಾವತ್ ಎಂಬ ಇನ್ನೊಂದು ಪ್ರಮುಖ ಪಾತ್ರ ನಿರ್ವಹಿಸಿದ ಫಹಾದ್ ಫಾಸಿಲ್ ಮಲಯಾಳಿ. ಹೀಗೆ ದಕ್ಷಿಣ ಭಾರತದ ಪ್ರಮುಖರು ಒಂದಾಗಿರುವ ಈ ಸಿನಿಮಾಕ್ಕೆ ಈಶಾನ್ಯ ರಾಜ್ಯದ ನಂಟು ಕೂಡಾ ಇದೆ. ಹೌದು, ‘ಪುಷ್ಪ2’ ಸಿನಿಮಾದ ಆಕ್ಷನ್ ಡೈರೆಕ್ಟರ್ ಮಣಿಪುರದವರು, ಹೆಸರು ಮೈಬಂ ನಬಕಾಂತ. ಮಣಿಪುರದ ಥೌಬಲ್ ಜಿಲ್ಲೆಯ ಖೇಟ್ರಿ ಲೈಕಿ ಮೂಲದ ನಬಕಾಂತ ಅವರ ವಯಸ್ಸು 29. ಸುಮಾರು 25 ವರ್ಷಗಳ ಹಿಂದೆ ನಬಕಾಂತ ಅವರ ಅಪ್ಪ, ಹೈದರಾಬಾದ್‌ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಣಿಪುರದ ಸಮರ ಕಲೆ ಥಾಂಗ್ ತಾ ಪ್ರದರ್ಶಿಸಿದ್ದರು. ಈ ಪ್ರದರ್ಶನವೇ ಅವರ ಬದುಕಿನ ಟರ್ನಿಂಗ್ ಪಾಯಿಂಟ್ ಆಗಿತ್ತು.

‘ನನ್ನ ಅಪ್ಪನ ಸಾಮರ್ಥ್ಯವನ್ನು ಗುರುತಿಸಿದ ನಿರ್ಮಾಪಕರು ಸಿನಿಮಾದಲ್ಲಿ ಅವಕಾಶ ನೀಡತೊಡಗಿದರು. ಆ ಅವಕಾಶವೇ ನನ್ನ ಕುಟುಂಬವನ್ನು ಹೈದರಾಬಾದ್‌ಗೆ ಕರೆತಂದಿದ್ದು. ನನ್ನ ಅಪ್ಪ ನನ್ನನ್ನು ಸಿನಿಮಾ ಜಗತ್ತಿಗೆ ಪರಿಚಯಿಸಿದರು. ಬಾಲ್ಯದಿಂದಲೇ ಅವರು ನನ್ನ ಗುರು, ನನ್ನ ಸ್ಫೂರ್ತಿ. 14ನೇ ವಯಸ್ಸಿನಿಂದ ಹೈದರಾಬಾದ್‌ನಲ್ಲಿ ನಾನು ಸ್ಟಂಟ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಆದರೆ ಸುಕುಮಾರ್ ನಿರ್ದೇಶನದ ಪುಷ್ಪ-2 ಸಿನಿಮಾದಲ್ಲಿ ಕೆಲಸ ನನ್ನ ಕನಸನ್ನು ನನಸಾಗಿಸಿತು’ ಎನ್ನುತ್ತಾರೆ ನಬಕಾಂತ.

‘ಪುಷ್ಪ2’ ಸಿನಿಮಾದಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವ ಹಲವಾರು ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದು ಇವರೇ. ಜಾತ್ರೆ ಫೈಟ್ ಮತ್ತು ‘ರಪ್ಪ ರಪ್ಪ’ ಆಕ್ಷನ್ ಫೈಟ್ ಎಲ್ಲವನ್ನೂ ನಿರ್ದೇಶಿಸಿದ್ದು ನಬಕಾಂತ. ‘ನಾನು ಮೊದಲ ಬಾರಿಗೆ ಸಾಹಸ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಅವಕಾಶಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಪುಷ್ಪ 2 ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನನ್ನ ತಂದೆಯೇ ನನ್ನ ಮಾರ್ಗದರ್ಶಕರು. ಅವರು ನನಗೆ ಸಮರ ಕಲೆಗಳ ತಾಂತ್ರಿಕತೆಗಳನ್ನು ಮಾತ್ರವಲ್ಲದೆ ಈ ಉದ್ಯಮದಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಶಿಸ್ತು ಮತ್ತು ಸೃಜನಶೀಲತೆಯನ್ನೂ ಕಲಿಸಿದರು. ಸ್ವತಂತ್ರವಾಗಿ ಕೆಲಸ ಮಾಡಲು ಆರಂಭಿಸಿ ಎರಡು ವರ್ಷಗಳೇ ಕಳೆದಿವೆ, ಎಲ್ಲದಕ್ಕೂ ಋಣಿಯಾಗಿದ್ದೇನೆ’ ಎಂದು ಹೇಳುವ ನಬಕಾಂತ ಅವರಿಗೆ ಒಂದಿಷ್ಟು ಕನಸು, ಯೋಜನೆಗಳಿವೆ.
ಈ ಬಗ್ಗೆ ಮಾತನಾಡುವ ಅವರು, ‘ಮಣಿಪುರದ ಅಥ್ಲೀಟ್‌ಗಳು ವಿಶ್ವದಾದ್ಯಂತ ಮನ್ನಣೆ ಗಳಿಸಿದ್ದಾರೆ. ನಮ್ಮ ಸಮರ ಕಲೆಗಳು ಮತ್ತು ಚಲನಚಿತ್ರೋದ್ಯಮ ಕ್ಷೇತ್ರದಲ್ಲಿನ ಕೌಶಲ್ಯಗಳು ಜಾಗತಿಕ ಗಮನಕ್ಕೆ ಅರ್ಹವಾಗಿವೆ ಎಂದು ತೋರಿಸಬೇಕಿದೆ. ಥಂಗ್ -ತಾ ನಮ್ಮ ಸಂಸ್ಕೃತಿಯ ಸಂಪತ್ತು. ಸಿನಿಮಾದ ಮೂಲಕ ಅದನ್ನು ವಿಶ್ವ ವೇದಿಕೆಗೆ ತರಲು ನಾನು ಬಯಸುತ್ತೇನೆ’ ಎಂದಿದ್ದಾರೆ.

ಪ್ರಸ್ತುತ ರಾಮ್ ಚರಣ್ ಮತ್ತು ಪ್ರಭಾಸ್ ಅವರೊಂದಿಗೆ ಎರಡು ಪ್ರಮುಖ ಯೋಜನೆಗಳಲ್ಲಿ ನಬಕಾಂತ ಕೆಲಸ ಮಾಡುತ್ತಿದ್ದಾರೆ. ಅದೇ ವೇಳೆ ಮಣಿಪುರದ ಯುವ ಪ್ರತಿಭೆಗಳಿಗೆ ಚಿತ್ರರಂಗಕ್ಕೆ ಸೇರಲು ಅವಕಾಶ ಕಲ್ಪಿಸುವ ಕನಸು ಇವರಿಗಿದೆ. ‘ನಮ್ಮ ರಾಜ್ಯದಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ. ನಾನು ಮಣಿಪುರದ ನುರಿತ ಯುವಕರೊಂದಿಗೆ ನನ್ನ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ, ಅವರು ಚಿತ್ರರಂಗದಲ್ಲಿ ಸ್ಥಿರವಾದ ವೃತ್ತಿಜೀವನವನ್ನು ನಿರ್ಮಿಸಲು ಸಹಾಯ ಮಾಡುತ್ತೇನೆ. ಈ ಕ್ಷೇತ್ರವು ಗುರುತಿಸುವಿಕೆಯನ್ನು ಮಾತ್ರವಲ್ಲದೆ ಆರ್ಥಿಕ ಸ್ಥಿರತೆಯನ್ನು ನೀಡುತ್ತದೆ, ಇದು ಜೀವನವನ್ನು ಪರಿವರ್ತಿಸುತ್ತದೆ. ನಾವು ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಹೈದರಾಬಾದ್‌ಗೆ ಬಂದಿದ್ದೇವೆ. ಪ್ರಯಾಣ ಸುಲಭವಲ್ಲ, ಆದರೆ ನನ್ನ ತಂದೆಯ ಬೆಂಬಲ ಮತ್ತು ಈ ಉದ್ಯಮವು ನೀಡಿದ ಅವಕಾಶಗಳು ಅದನ್ನು ಸಾರ್ಥಕಗೊಳಿಸಿವೆ’ ಎಂದು ನಬಕಾಂತ ಹೇಳಿದ್ದಾರೆ.

LEAVE A REPLY

Connect with

Please enter your comment!
Please enter your name here