ಧಾವಂತದ ಬದುಕಿನಲ್ಲಿ ಸಿಕ್ಕ ಬಿಡುವಿನ ವೇಳೆ ಮೊಬೈಲ್ ಅಥವಾ ಟಿವಿಯಲ್ಲಿ ಸಿನಿಮಾ ವೀಕ್ಷಿಸುವ ಮಜಾ ಬೇರೇಯೇ ಬಿಡಿ. ಹಲವಾರು ಕಲಾವಿದರು ಓಟಿಟಿ ಮೂಲಕವೇ ಜನಪ್ರಿಯರಾಗಿದ್ದಾರೆ. ಬರೀ ಸಿನಿಮಾ ಮಾತ್ರವಲ್ಲ, ಓಟಿಟಿ ಸರಣಿಗಳನ್ನು ಇಷ್ಟಪಡುವ ಪ್ರೇಕ್ಷಕ ವರ್ಗವೂ ಇದೆ. ಇಂತಿರುವಾಗ ಈ ವರ್ಷದ ಜನಪ್ರಿಯ ಓಟಿಟಿ ಸರಣಿ, ಸಿನಿಮಾಗಳು ಯಾವುವು? ಎಂಬುದನ್ನು ನೋಡೋಣ ಬನ್ನಿ.
2024 ಮುಗಿಯುವ ಹೊತ್ತಲ್ಲಿ ಓಟಿಟಿಯಲ್ಲಿ ಏನೇನ್ ನೋಡಿದ್ವಿ? ನೋಡಲು ಮಿಸ್ ಮಾಡಿಕೊಂಡಿರುವುದು ಯಾವುದಾದರೂ ಇದೆಯಾ ಎಂದು ಯೋಚಿಸಿದರೆ ಯಾವುದನ್ನು ನೋಡುವುದು? ಯಾವುದನ್ನು ಬಿಡುವುದು? ಎಂಬ ಗೊಂದಲವಂತೂ ಇದ್ದೇ ಇರುತ್ತದೆ. ಯಾವುದಾದರೂ ಸಿನಿಮಾ ಥಿಯೇಟರ್ನಲ್ಲಿ ಬಿಡುಗಡೆಯಾದ ಕೂಡಲೇ ಈ ಸಿನಿಮಾ ಯಾವಾಗ ಓಟಿಟಿಯಲ್ಲಿ ಬರುತ್ತದೆ ಎಂದು ಕಾಯುವ ಮಂದಿಯೇ ಜಾಸ್ತಿ. ಕೆಲವೊಂದು ಸಿನಿಮಾಗಳು ಥಿಯೇಟರ್ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯದೇ ಇದ್ದರೂ ಓಟಿಟಿಯಲ್ಲಿ ರಿಲೀಸ್ ಆದಾಗ ಉತ್ತಮ ಪ್ರತಿಕ್ರಿಯೆಗಳನ್ನು ಗಳಿಸಿದ್ದೂ ಉಂಟು. ಥಿಯೇಟರ್ ಎಫೆಕ್ಟ್ ಸಿಗಬೇಕಾದರೆ ಚಿತ್ರಮಂದಿರಕ್ಕೆ ಹೋಗಬೇಕು ನಿಜ. ಆದರೆ ಧಾವಂತದ ಬದುಕಿನಲ್ಲಿ ಸಿಕ್ಕ ಬಿಡುವಿನ ವೇಳೆ ಮೊಬೈಲ್ ಅಥವಾ ಟಿವಿಯಲ್ಲಿ ಸಿನಿಮಾ ವೀಕ್ಷಿಸುವ ಮಜಾ ಬೇರೇಯೇ ಬಿಡಿ. ಹಲವಾರು ಕಲಾವಿದರು ಓಟಿಟಿ ಮೂಲಕವೇ ಜನಪ್ರಿಯರಾಗಿದ್ದಾರೆ. ಬರೀ ಸಿನಿಮಾ ಮಾತ್ರವಲ್ಲ, ಓಟಿಟಿ ಸರಣಿಗಳನ್ನು ಇಷ್ಟಪಡುವ ಪ್ರೇಕ್ಷಕ ವರ್ಗವೂ ಇದೆ. ಇಂತಿರುವಾಗ ಈ ವರ್ಷದ ಜನಪ್ರಿಯ ಓಟಿಟಿ ಸರಣಿ, ಸಿನಿಮಾಗಳು ಯಾವುವು? ಎಂಬುದನ್ನು ನೋಡೋಣ ಬನ್ನಿ.
ಜನಪ್ರಿಯ OTT ಸರಣಿಗಳು
ಪಂಚಾಯತ್ | ಇದೊಂದು ಹಾಸ್ಯಭರಿತ ಸರಣಿ ಆಗಿದ್ದು, ಇಂಜಿನಿಯರಿಂಗ್ ಪದವೀಧರ ಅಭಿಷೇಕ್ ಅವರ ಜೀವನದ ಸುತ್ತಲೂ ಈ ಕತೆ ಸುತ್ತುತ್ತದೆ. ಸರಣಿಯ ಮೊದಲ ಭಾಗ 2020ರಲ್ಲಿ ಪ್ರಸಾರವಾಗಿದ್ದು, ಎರಡನೇ ಆವೃತ್ತಿ 2022 ಮತ್ತು ಮೂರನೇ ಆವೃತ್ತಿ ಈ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಉತ್ತರ ಪ್ರದೇಶದ ಫುಲೇರಾ ಎಂಬ ಸುಂದರವಾದ ಹಳ್ಳಿಯಲ್ಲಿನ ರಾಜಕೀಯ ಮತ್ತು ಮಾನವೀಯ ಸಂಬಂಧಗಳ ಕಥಾಹಂದರವನ್ನು ಇದು ಹೊಂದಿದ್ದು, ಅಮೆಜಾನ್ ಪ್ರೈಮ್ನಲ್ಲಿ ಇದನ್ನು ವೀಕ್ಷಿಸಬಹುದು.
ಮಿರ್ಜಾಪುರ್ | ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾದ ಕ್ರೈಂ -ಡ್ರಾಮಾ ‘ಮಿರ್ಜಾಪುರ್’ನಲ್ಲಿ ಪಂಕಜ್ ತ್ರಿಪಾಠಿ, ಅಲಿ ಫಜಲ್, ಶ್ವೇತಾ ತ್ರಿಪಾಠಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಗುಡ್ಡು ಮತ್ತು ಬಬ್ಲೂ ಎಂಬ ಇಬ್ಬರು ಸಹೋದರರ ಬದುಕಿನ ಕತೆಯೊಂದಿಗೆ ಅಧಿಕಾರ, ರಾಜಕೀಯ ಮತ್ತು ಹಿಂಸಾಚಾರಗಳೂ ಈ ಸರಣಿಯ ಕಥಾವಸ್ತು. ಅಪರಾಧ ಮತ್ತು ಭ್ರಷ್ಟಾಚಾರದ ಕತೆ ಹೇಳುವ ‘ಮಿರ್ಜಾಪುರ್’ ಅಪಾರ ಅಭಿಮಾನಿಗಳನ್ನು ಹೊಂದಿದ್ದು ಇದು ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ವೆಬ್ ಸರಣಿಗಳಲ್ಲಿ ಒಂದಾಗಿದೆ.
ಗ್ಯಾರಾ ಗ್ಯಾರಾ | ಗ್ಯಾರಾ ಗ್ಯಾರಾ ಹಿಂದಿ ಭಾಷೆಯ ಫ್ಯಾಂಟಸಿ ಥ್ರಿಲ್ಲರ್ ಸರಣಿಯಾಗಿದ್ದು, ಇದನ್ನು ಉಮೇಶ್ ಬಿಸ್ಟ್ ನಿರ್ದೇಶಿಸಿದ್ದಾರೆ. ಈ ಸರಣಿ ಜನಪ್ರಿಯ ಕೊರಿಯನ್ ಡ್ರಾಮಾ ಸಿಗ್ನಲ್ (2016) ಆಧರಿಸಿದ್ದಾಗಿದೆ. ಸಿಖ್ಯಾ ಎಂಟರ್ಟೇನ್ಮೆಂಟ್ ಮತ್ತು ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಈ ಸರಣಿಯಲ್ಲಿ ಕೃತಿಕಾ ಕಾಮ್ರಾ, ರಾಘವ್ ಜುಯಾಲ್, ಧೈರ್ಯ ಕರ್ವಾ ಮತ್ತು ಆಕಾಶ್ ದೀಕ್ಷಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗ್ಯಾರಾ ಗ್ಯಾರಾ ZEE5 ನಲ್ಲಿ ಪ್ರಸಾರವಾಗಿತ್ತು.
ತಾಜಾ ಖಬರ್ | ಡಿಸ್ನೀ ಪ್ಲಸ್ ಹಾಟ್ಸ್ಟಾರ್ನಲ್ಲಿ ಪ್ರಸಾರವಾದ ಕಾಮಿಡಿ ಥ್ರಿಲ್ಲರ್ ‘ತಾಜಾ ಖಬರ್’. ಅಬ್ಬಾಸ್ ದಲಾಲ್ ಮತ್ತು ಹುಸೈನ್ ದಲಾನ್ ಚಿತ್ರಕತೆ ಬರೆದು ಹಿಮಾಂಕ್ ಗೌರ್ ನಿರ್ದೇಶಿಸಿದ ಈ ಸರಣಿಯಲ್ಲಿ ಯುಟ್ಯೂಬರ್ ಭುವನ್ ಬಾಮ್, ಶ್ರಿಯಾ ಪಿಲಗಾಂವ್ ಕರ್, ದೆವನ್ ಭೋಡನಿ ಮೊದಲಾದವರು ನಟಿಸಿದ್ದಾರೆ.
ಮಾಮ್ಲಾ ಲೀಗಲ್ ಹೈ | ದೆಹಲಿಯ ಪ್ರತಾಪ್ ಗಂಜ್ ಜಿಲ್ಲಾ ನ್ಯಾಯಾಲಯ ಎಂಬ ಫಿಕ್ಷನಲ್ ಕೋರ್ಟ್ನಲ್ಲಿ ನಡೆಯುವ ಕತೆ ಇದು. ಹಾಸ್ಯದಿಂದ ಕೂಡಿದ ಈ ಸರಣಿ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಿದೆ. ರವಿ ಕಿಶನ್, ನಿಧಿ ಬಿಷ್ತ್, ಯಶ್ ಪಾಲ್ ಶರ್ಮಾ, ನೈಲಾ ಗ್ರೆವಾಲ್ ಮತ್ತು ಅನಂತ್ ವಿ ಜೋಷಿ ಈ ಸರಣಿಯಲ್ಲಿ ನಟಿಸಿದ್ದಾರೆ.
2024ರಲ್ಲಿನ ಟಾಪ್ ರೇಟೆಡ್ ಸಿನಿಮಾಗಳು
ಅಮರ್ ಸಿಂಗ್ ಚಮ್ಕಿಲಾ | ಹತ್ಯೆಗೀಡಾದ ಪಂಜಾಬಿ ಜಾನಪದ ಕಲಾವಿದನ ಕತೆ ಹೇಳುವ ಈ ಸಿನಿಮಾದ ನಿರ್ದೇಶನ ಇಮ್ತಿಯಾಜ್ ಅಲಿ ಅವರದ್ದು. ಸಂಗೀತ ಎ ಆರ್ ರೆಹಮಾನ್ ಮತ್ತು ಗೀತರಚನೆಕಾರ ಇರ್ಷಾದ್ ಕಾಮಿಲ್ ಜೋಡಿ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ನಟ, ಗಾಯಕ ದಿಲ್ಜಿತ್ ದೋಸಾಂಜ್ ಮತ್ತು ಪರಿಣಿತಿ ಚೋಪ್ರಾ ನಟಿಸಿದ ನೆಟ್ಫ್ಲಿಕ್ಸ್ ಚಿತ್ರವು IMDb ಯಲ್ಲಿ 7.8 ರೇಟಿಂಗ್ ಪಡೆದಿದೆ.
ಭಕ್ಶಕ್ | ಪುಲ್ಕಿತ್ ನಿರ್ದೇಶಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ಭೂಮಿ ಪಡ್ನೇಕರ್ ನಾಯಕಿ. ನಿರಾಶ್ರಿತರ ಕೇಂದ್ರದಲ್ಲಿ ಯುವತಿಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಹೊರ ಜಗತ್ತಿಗೆ ತೋರಿಸುವ ದಿಟ್ಟ ಪತ್ರಕರ್ತೆಯ ಪಾತ್ರವನ್ನು ಭೂಮಿ ನಿರ್ವಹಿಸಿದ್ದಾರೆ. ಮುಜಾಫರ್ಪುರದಲ್ಲಿ ನಡೆದ ಪ್ರಕರಣವನ್ನು ಆಧರಿಸಿದ ಈ ಚಿತ್ರವು IMDb ಯಲ್ಲಿ 7.2 ರೇಟಿಂಗ್ ಹೊಂದಿದೆ.
ಗರ್ಲ್ಸ್ ವಿಲ್ ಬಿ ಗರ್ಲ್ಸ್ | Sundance ಸೇರಿದಂತೆ ಜಾಗತಿಕ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಪ್ರಶಸ್ತಿಗಳನ್ನು ಗೆದ್ದ ಸಿನಿಮಾ ಡಿಸೆಂಬರ್ 18ರಿಂದ ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಶುಚಿ ತಲಾತಿ ನಿರ್ದೇಶನದ ಚೊಚ್ಚಲ ಚಿತ್ರವಿದು. ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾದ ಈ ಚಿತ್ರ IMDb ನಲ್ಲಿ 7.1 ರೇಟಿಂಗ್ ಹೊಂದಿದೆ. ಪ್ರೀತಿ ಪಾಣಿಗ್ರಾಹಿ, ಕನಿ ಕುಸುರ್ತಿ ಮತ್ತು ಕೇಶವ್ ಬಿನೋಯ್ ಕಿರಣ್ ನಟಿಸಿರುವ ಈ ಚಿತ್ರ ಅಮ್ಮ- ಮಗಳ ನಡುವಿನ ಸಂಬಂಧ ಮತ್ತು ಟೀನೇಜ್ ಪ್ರೀತಿಯ ಕತೆಯನ್ನು ಹೇಳುತ್ತದೆ.
ಬರ್ಲಿನ್ | ಅತುಲ್ ಸಭರ್ವಾಲ್ ನಿರ್ದೇಶಿಸಿದ ಥ್ರಿಲ್ಲರ್ ಸಿನಿಮಾ ‘ಬರ್ಲಿನ್’. 1993ರಲ್ಲಿ ನಡೆಯುವ ಕತೆ. ದೆಹಲಿಯಲ್ಲಿ ಸೈನ್ ಲ್ಯಾಂಗ್ವೇಜ್ ಶಿಕ್ಷಕನಾಗಿರುವ ಪುಷ್ಕಿನ್ (ಅಪಾರಶಕ್ತಿ ಖುರಾನಾ) ಅವರನ್ನು ಗುಪ್ತಚರ ಅಧಿಕಾರಿಯೊಬ್ಬರು ಅಶೋಕ್ ಕುಮಾರ್ (ಇಶ್ವಾಕ್ ಸಿಂಗ್) ಎಂಬ ಕಿವುಡ ಮೂಕ ಶಂಕಿತನನ್ನು ವಿಚಾರಣೆ ಮಾಡಲು ಕರೆದೊಯ್ಯುವ ಕತೆಯೊಂದಿಗೆ ಆರಂಭವಾಗುವ ಈ ಸಿನಿಮಾ ಹಲವು ತಿರುವುಗಳೊಂದಿಗೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತದೆ.
ಮಹಾರಾಜ್ | ಸಿದ್ಧಾರ್ಥ್ ಪಿ. ಮಲ್ಹೋತ್ರಾ ಅವರ ‘ಮಹಾರಾಜ್’ ಸಿನಿಮಾ ಮೂಲಕ ಅಮೀರ್ ಖಾನ್ ಅವರ ಮಗ ಜುನೈದ್ ಖಾನ್ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ. 1862ರ ಮಹಾರಾಜ್ ಮಾನನಷ್ಟ ಪ್ರಕರಣದ ಕತೆ ಹೊಂದಿರುವ ಸಿನಿಮಾ ಇದು. ಜೈದೀಪ್ ಅಹ್ಲಾವತ್ ಪ್ರಧಾನ ಪಾತ್ರದಲ್ಲಿದ್ದು, ಆತನ ವಂಚನೆಗಳನ್ನು ಬಹಿರಂಗಪಡಿಸುವ ದೃಢನಿಶ್ಚಯದ ವಕೀಲನಾಗಿ ಜುನೈದ್ ಬಣ್ಣಹಚ್ಚಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ ‘ಮಹಾರಾಜ್’ ಚಿತ್ರವು 6.5 ರ IMDb ರೇಟಿಂಗ್ ಹೊಂದಿದೆ.