ಈ ಕುಟುಂಬದ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನೊಂದವರೇ. ಸಾವಿನ ಕದ ತಟ್ಟುವವರೇ. ಸಿನಿಮ್ಯಾಟಿಕ್ ಎಕ್ಸ್ ಪೀರಿಯನ್ಸ್ ಪಡೆಯುವ ಉತ್ಸುಕರಿಗೆ ಚಿತ್ರ ನಿರಾಶೆ ಮೂಡಿಸುವುದಿಲ್ಲ ‘ಡೈಯಿಂಗ್ ‘.
ಮೂರು ಗಂಟೆ ದೀರ್ಘಾವಧಿಯ ಚಿತ್ರ ‘ಡೈಯಿಂಗ್’ ಮಹತ್ವಾಕಾಂಕ್ಷೆಯ ಚಿತ್ರ. ಮಾರಣಾಂತಿಕ ಕಾಯಿಲೆಯಲ್ಲಿ ನರಳುತ್ತಿರುವ ಅಪ್ಪ- ಅಮ್ಮ, ಮತ್ತೊಬ್ಬನಿಂದ ಮಗು ಪಡೆಯುವ ಮಗ, ಮದ್ಯವ್ಯಸನಿ ಮಗಳು ಇವರೆಲ್ಲರನ್ನು ಒಳಗೊಂಡ ಚಿತ್ರದಲ್ಲಿ ಖಿನ್ನತೆಯಲ್ಲಿ ಬಳಲುವ ಸಂಗೀತ ರಚನೆಕಾರನ ಪಾತ್ರವೂ ಇದೆ. ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ನೊಂದವರೇ. ಸಾವಿನ ಕದ ತಟ್ಟುವವರೇ. ‘ಡೈಯಿಂಗ್ ‘ ಹಾಡಿನ ಸಂಯೋಜನೆ ಪರಿಪೂರ್ಣಗೊಳ್ಳಲು ಪಾತ್ರಗಳು, ಸನ್ನಿವೇಶ, ಸಂಗೀತ ಪರೀಕ್ಷೆಗೊಳಗಾಗುತ್ತದೆ. ಸಿನಿಮ್ಯಾಟಿಕ್ ಎಕ್ಸ್ ಪೀರಿಯನ್ಸ್ ಪಡೆಯುವ ಉತ್ಸುಕರಿಗೆ ಚಿತ್ರ ನಿರಾಶೆ ಮೂಡಿಸುವುದಿಲ್ಲ.
‘ಐವೋ’ ದೀರ್ಘಾವಧಿ ಕಾಯಿಲೆಯಿಂದ ಬಳಲುವವರ ಸೇವೆ ಮಾಡುವ ಶುಶ್ರೂಷಕಿಯ ಚಿತ್ರ. ನಿರ್ಲಿಪ್ತತೆಯಿಂದ ಸೇವೆ ಮಾಡಬೇಕಾದ ಐವೋ ಕೆಲವೊಮ್ಮೆ ತನ್ನ ಪಾಡನ್ನೂ ನೆನೆದು ದುಃಖಿಸುತ್ತಾಳೆ. ಸೇವೆ ಮಾಡುವವರಿಂದ ಅವರೇನನ್ನೂ ಪಡೆಯಬಾರದು. ಆದರೆ ಐವೋ ಉಡುಗೊರೆಯಾಗಿ ವೈನ್ ಬಾಟಲ್ ಸ್ವೀಕರಿಸುತ್ತಾಳೆ. ಗೆಳತಿಯ ಗಂಡನೊಂದಿಗೆ ಮಲಗುತ್ತಾಳೆ. ಗೆಳತಿ ಸತ್ತಾಗ ಅವನನ್ನು ಸೇರುತ್ತಾಳೆ. ಶುಶ್ರೂಷಕಿಯರೂ ಮನುಷ್ಯರೇ ತಾನೇ? ನಿರ್ದೇಶಕ ತುರ್ತು ಸಂದರ್ಭಗಳಲ್ಲಿ ಮನುಷ್ಯ ತೆಗೆದುಕೊಳ್ಳುವ ನಿರ್ಧಾರಗಳ ಬಗೆಗೆ ಹೇಳುವಂತಿದೆ.
ತೊಂಬತ್ತು ವರ್ಷದ ‘ಫಾರೂಕ್’ ವಾಸವಾಗಿರುವ ಅಪಾರ್ಟ್ಮೆಂಟ್ ಹಳೆಯದಾಗಿದ್ದು, ಅದನ್ನು ಕೆಡವಿ ಹೊಸದನ್ನು ಕಟ್ಟಲು ಬಿಲ್ಡರ್ಸ್ ತಯಾರಾಗಿದ್ದಾರೆ. ಅದರ ಬಗ್ಗೆ ಮೀನ ಮೇಷ ಎಣಿಸುವ ಫಾರೂಕ್ ಓಡಾಡಲಾರದೆ ಮಗಳಿಗೆ ಪವರ್ ಆಫ್ ಅಟಾರ್ನಿ ಕೊಡುತ್ತಾನೆ. ಚಿತ್ರ ನಿರ್ದೇಶಕಿಯಾದ ಅಕೆಗೆ ಹಣದ ಅವಶ್ಯಕತೆ ಇದೆ. ಫಾರೂಕ್ಗೆ ಹಲವಾರು ವರ್ಷಗಳಿಂದ ನೆಲಸಿರುವ ಫ್ಲಾಟ್ ಮೇಲೆ ಭಾವನಾತ್ಮಕ ಸಂಬಂಧ. ಕಲ್ಲು ಕಟ್ಟಡಗಳೊಳಗೆ ಹುಗಿಯುವ ಸಂಬಂಧಗಳ ಮೇಲೆ ನಿರ್ದೇಶಕನ ಕ್ಯಾಮರಾ ಕಣ್ಣಿದೆ. ವಯಸ್ಸು ಎಷ್ಟಾದರೇನಂತೆ ಬಯಕೆಗಳಿಗೆ ಬರವೇ? ಕಂಡ ಕನಸುಗಳು ನನಸಾದರೆ ಫಲಿತಾಂಶದ ಬಗೆಗೇಕೆ ಕೊರಗಬೇಕು? ಎಪ್ಪತ್ತರ ವಯಸ್ಸಿನವರನ್ನು ಕೂಡಾ ಹುಚ್ಚೆಬ್ಬಿಸುವ ಲವಲವಿಕೆಯ ಚಿತ್ರ ‘ ಮೈ ಪೇವರಿಟ್ ಕೇಕ್’
‘ಮಾಲು’ ನಿವೃತ್ತ ರಂಗಭೂಮಿ ಕಲಾವಿದೆಯೊಬ್ಬಳ, ಕನಸು,ತೊಳಲಾಟ, ಭ್ರಮೆಗಳ ಚಿತ್ರ. ಮೂರು ತಲೆಮಾರುಗಳ ಅಜ್ಜಿ, ತಾಯಿ, ಮಗಳ ಪರಸ್ಪರ ಪ್ರೀತಿಯ-ದ್ವೇಷದ, ನಂಬಿಕೆ- ವಿಚಾರಗಳ ಘರ್ಷಣೆಯ ಪರಿಧಿಯಲ್ಲಿದೆ. ದೃಶ್ಯಗಳ ಕಲಾತ್ಮಕತೆಯೊಂದಿಗೆ, ಸುಲಭ ತೀರ್ಮಾನಗಳಿಗೆ ಆತು ಬೀಳದಿರುವಲ್ಲಿ ನಿರ್ದೇಶಕನ ವಿಶೇಷತೆಯಿದೆ.