ಒಂದು ಜೀವನ ಚರಿತ್ರೆ 130 ನಿಮಿಷ ಕಿಂಚಿತ್ತೂ ಬೇಸರಗೊಳಿಸದೆ ನೋಡಿಸಿಕೊಂಡು ಹೋಗುತ್ತದೆ ಎನ್ನುವುದೇ ಸಾಧನೆ. ಅದರಲ್ಲೂ ಜ್ಯೋತಿಬಾ ಫುಲೆಯಂತಹ ಮಹಾತ್ಮರ ಚಿತ್ರ ನಮಗೆ ತಿಳಿಯದ ಹಲವು ಹತ್ತು ವಿಷಯಗಳನ್ನು ಕಟ್ಟಿ ಕೊಡುತ್ತಿರುವಾಗ ಇನ್ನೇನು ಬೇಕು? ಅನಂತ ಮಹದೇವನ್ ನಿರ್ದೇಶನದ ಈ ಹಿಂದಿ ಸಿನಿಮಾ ಒಂದೊಳ್ಳೆಯ ಬಯೋಪಿಕ್.
ಫುಲೆ ದಂಪತಿಗಳ ಬದುಕಿನ ಎಲ್ಲಾ ಪ್ರಮುಖ ಘಟನೆಗಳನ್ನು ಮತ್ತು ಕೆಲವನ್ನು ಸಂಭಾಷಣೆಯ ಮೂಲಕ ಹೇಳುವ ವಸ್ತು ನಿಷ್ಠ ಬಯೋಪಿಕ್- ‘ಫುಲೆ’. ಇದರಲ್ಲಿ ಅವಾಸ್ತವ ಅಂಶಗಳಾಗಲೀ, ವೈಭವೀಕರಣವಾಗಲೀ ಇಲ್ಲ. ಮುಖ್ಯವಾಗಿ,ಇತಿಹಾಸವನ್ನು ಆಧರಿಸಿದ್ದೆಂದು ಹೇಳಲಾಗುವ ಇತ್ತೀಚಿನ ಸಿನಿಮಾಗಳಲ್ಲಿ ವಿಜೃಂಭಿಸುವ ಸುಳ್ಳುಗಳು ಇಲ್ಲಿಲ್ಲ. ಇದು ಅನನುಕ್ರಮಣಿಕೆಯಲ್ಲಿ ಹೆಣೆಯಲಾದ ವಾಸ್ತವವಾದಿ ಚಿತ್ರ. ರೋಚಕ ಸನ್ನಿವೇಶಗಳು, ಮೈ ನವಿರೇಳಿಸುವ ದೃಶ್ಯಗಳಲ್ಲದೆ, ದಂಪತಿಗಳ ಸಾಮಾಜಿಕ ಹೋರಾಟದ ಸನ್ನಿವೇಶಗಳನ್ನು ಪರಿಚಯ ಮಾಡಿಕೊಡುತ್ತದೆ.
‘ಈ ಕ್ರಾಂತಿ ಇಲ್ಲಿಯೇ ನಿಲ್ಲಬಾರದು. ಅದನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ಮರಣ ಕಾಲದಲ್ಲಿ ಜ್ಯೋತಿಬಾ ಫುಲೆ ಹೇಳುತ್ತಾರೆ. ಶೂದ್ರರಿಗೆ, ದಲಿತರಿಗೆ, ಮಹಿಳೆಯರಿಗೆ ಕನಿಷ್ಟ ಹಕ್ಕುಗಳೂ ಇಲ್ಲದ ಸಮಯದಲ್ಲಿ ಮೇಲ್ಜಾತಿ ಜನರನ್ನು ಎದುರು ಹಾಕಿಕೊಂಡು ಹೋರಾಟ ನಡೆಸಿದವರು ಫುಲೆ ದಂಪತಿ. ಅವರ ಹೋರಾಟವನ್ನು ವಿರೋಧಿಸುವ ಜ್ಯೋತಿಬಾ ತಂದೆಯೇ ಹೇಳುತ್ತಾರೆ – ‘ಈಗ ರಾಜರ ಆಳ್ವಿಕೆ ಇದ್ದಿದ್ದರೆ ನಿಮ್ಮನ್ನು ಕೊಲ್ಲಿಸುತ್ತಿದ್ದರು!’
ಫುಲೆ ದಂಪತಿ ಸಮಾನತೆಯ ಸಮಾಜಕ್ಕಾಗಿ ಬದುಕನ್ನು ಮುಡುಪಾಗಿಟ್ಟವರು. ಆ ಕಾಲದ ಹೀನ ಪದ್ಧತಿಗಳು, ಅದನ್ನು ಬದಲಾಯಿಸಲು ಅವರು ಪಟ್ಟ ಪಾಡು ಇವನ್ನು ಅರ್ಥ ಮಾಡಿಕೊಂಡರೆ ನಾವು ಅವರು ಬಯಸಿದ ಸಮಾನತೆ, ವ್ಯಕ್ತಿ ಸ್ವಾತಂತ್ಯದ ಹೋರಾಟವನ್ನು ದಡ ಮುಟ್ಟಿಸಲು ವಿಫಲರಾಗಿದ್ದೇವೆ ಎಂದೇ ಹೇಳಬೇಕು.
ತಂದೆಯ ಮನೆಯಿಂದ ಹೊರಬಿದ್ದ ಜ್ಯೋತಿಬಾ ಮತ್ತು ಸಾವಿತ್ರಿಬಾಯಿ, ಗೆಳೆಯ ಉಸ್ಮಾನ್ ಶೇಖ್ ಬಳಿ ಆಶ್ರಯ ಪಡೆಯುತ್ತಾರೆ. ಉಸ್ಮಾನ್ ಶೇಖ್ ಸಹೋದರಿ ಫಾತಿಮಾ ಮತ್ತು ಸಾವಿತ್ರಿ ಬಾಯಿ ಶಿಕ್ಷಕರ ತರಬೇತಿ ಪಡೆದು ಶಾಲೆಗಳನ್ನು ತೆರೆಯುತ್ತಾರೆ. ಒಂದು ಹೆಣ್ಣು ಮಗುವನ್ನು ಓದಿಸಲು ಆಗದ ಕಾಲದಲ್ಲಿ ಇವರ ಪ್ರಯತ್ನದಿಂದಾಗಿ ಪುಣೆಯಲ್ಲಿ 20 ಶಾಲೆಗಳು ತೆರೆಯಲ್ಪಟ್ಟು 600 ವಿದ್ಯಾರ್ಥಿನಿಯರು ಓದತೊಡಗುತ್ತಾರೆ.
ಫುಲೆ ದಂಪತಿಯ ಸಾಧನೆಗಳು ಬೆರಗುಗೊಳಿಸುವಷ್ಟಿವೆ. ಒಬ್ಬರ ಜೀವಮಾನದಲ್ಲಿ ಇಷ್ಟೊಂದು ಕೆಲಸಗಳನ್ನು ಮಾಡಲು ಸಾಧ್ಯವೇ ಎಂದು ಯೋಚಿಸುವಂತಾಗುತ್ತದೆ. ವಿಧವೆಯರಿಗೆ ಆಶ್ರಯ, ವಿಧವಾ ವಿವಾಹ, ಎಲ್ಲರಿಗೂ ನೀರು ಕೊಡಲು ಬಾವಿ, ಸರಳ ವಿವಾಹ, ಕ್ಷಾಮ ಸಂದರ್ಭದಲ್ಲಿ ನೆರವು, ಪತ್ರಿಕೆ, ಪುಸ್ತಕ ಪ್ರಕಟಣೆ, ಸತ್ಯ ಶೋಧನಾ ಸಮಿತಿ ಇವೆಲ್ಲವೂ ಚಿತ್ರದಲ್ಲಿ ಸೇರಿವೆ. (ಕೆಲವನ್ನು ಬಿಡಲಾಗಿದೆ, ಉದಾ: ಪುಣೆಯ ಮುನಿಸಿಪಾಲಿಟಿಯ ಕೆಲಸ). ಆದಷ್ಟು ಹೇಳಬೇಕೆಂಬ ಅವಸರದಲ್ಲಿ ಕೆಲವನ್ನು ಒತ್ತೊತ್ತಾಗಿ ತುರುಕಿದಂತೆನಿಸಿದರೂ ಅವು ಅನಗತ್ಯ ಎನಿಸುವುದಿಲ್ಲ. ಫುಲೆ ದಂಪತಿಗಳ ಬಗ್ಗೆ ಅರಿಯದವರು ಮತ್ತು ಅರಿತವರು ಮನನ ಮಾಡುವಷ್ಟು ಮಾಹಿತಿಗಳಿವೆ.
ಬಹಳಷ್ಟು ಜನರಿಗೆ ಮುಕ್ತಾ ಸಾಲ್ವೆ ಬಗ್ಗೆ ತಿಳಿದಿರಲಿಕ್ಕಿಲ್ಲ. ಫುಲೆಯವರ ಶಾಲೆಯಲ್ಲಿ ಕಲಿತ ಮೊದಲ ದಲಿತ ಬರಹಗಾರ್ತಿ ಆಕೆ. ಈ ಬಾಲೆಯ ಪಾತ್ರ ಚಿತ್ರಣ, ಅವಳು ಹಣ ಪಡೆಯಲು ನಿರಾಕರಿಸಿ ಓದಲು ಪುಸ್ತಕಗಳು ಬೇಕು ಎನ್ನುವ ಘಟನೆ ಮನಸ್ಸನ್ನು ತಟ್ಟುತ್ತದೆ. ಅದೇ ರೀತಿ ಜ್ಯೋತಿಬಾ ನೆರಳನ್ನು ತುಳಿಯದೆ ಹಿಮ್ಮೆಟ್ಟುವ ಬ್ರಾಹ್ಮಣರು, ಸಾವಿತ್ರಿ ತಡೆಯಲು ಬಂದವರನ್ನು ವಿರೋಧಿಸುವ ದೃಶ್ಯ, 2000 ವರ್ಷಗಳಲ್ಲಿ ಮೊತ್ತ ಮೊದಲು ಹೆಂಡತಿ, ಗಂಡನ ಚಿತೆಗೆ ಬೆಂಕಿ ಕೊಡುವ ಸನ್ನಿವೇಶ ನೆನಪಿನಲ್ಲಿ ಉಳಿಯುವಂಥವು. ಆದರೆ ಇದೇ ರೀತಿಯಲ್ಲಿ ಎಲ್ಲಾ ಘಟನೆಗಳನ್ನು ಚಿತ್ರಿಸಲಾಗಿದೆ ಎನ್ನಲಾಗದು. ಬಾವಿ ತೋಡುವ ಸಂದರ್ಭ, ಕೊಲೆ ಮಾಡಲು ಬಂದವರನ್ನು ಪರಿವರ್ತಿಸುವ ಘಟನೆ ಇನ್ನಷ್ಟು ಪರಿಣಾಮಕಾರಿಯಾಗಬೇಕಿತ್ತು.
ಪ್ರತೀಕ್ ಗಾಂಧಿ ಜ್ಯೋತಿಬಾ ಆಗಿ, ಪತ್ರಲೇಖಾ ಸಾವಿತ್ರಿ ಬಾಯಿಯಾಗಿ ಸರಿಯಾದ ಆಯ್ಕೆ. ಇಬ್ಬರೂ ಸರಿ ಮಿಗಿಲೆನ್ನುವಂತೆ ನಟಿಸಿದ್ದರೂ ಪತ್ರಲೇಖಾ ಹೆಚ್ಚು ತೂಗುತ್ತಾರೆ. ಜ್ಯೋತಿಬಾ ಫುಲೆ ತಂದೆ ಪಾತ್ರಧಾರಿ ಘನತೆಯಿಂದ ಅಭಿನಯಿಸಿದ್ದಾರೆ. ‘ಸಾಥಿ, ಸಾಥಿ…’ ಹಾಡು ಗುನುಗುನಿಸುವಂತಿದೆ. ಆದರೆ ಹಿನ್ನೆಲೆ ಸಂಗೀತ ಇನ್ನಷ್ಟು ಚೆನ್ನಾಗಿದ್ದರೆ ಕೆಲವು ಘಟನೆಗಳ ಪರಿಣಾಮ ಹೆಚ್ಚುತ್ತಿತ್ತು. ಸಿನಿಮಾಟೋಗ್ರಫಿಯಂತೂ ಮೆಚ್ಚಲೇ ಬೇಕಾದ್ದು. ಉತ್ತಮ ಸಿನಿಮಾ ಮಾಡಿರುವ ನಿರ್ದೇಶಕ ಅನಂತ ಮಹದೇವನ್ ಅಭಿನಂದನಾರ್ಹರು.
ಒಂದು ಜೀವನ ಚರಿತ್ರೆ 130 ನಿಮಿಷ ಕಿಂಚಿತ್ತೂ ಬೇಸರಗೊಳಿಸದೆ ನೋಡಿಸಿಕೊಂಡು ಹೋಗುತ್ತದೆ ಎನ್ನುವುದೇ ಸಾಧನೆ. ಅದರಲ್ಲೂ ಜ್ಯೋತಿಬಾ ಫುಲೆಯಂತಹ ಮಹಾತ್ಮರ ಚಿತ್ರ ನಮಗೆ ತಿಳಿಯದ ಹಲವು ಹತ್ತು ವಿಷಯಗಳನ್ನು ಕಟ್ಟಿ ಕೊಡುತ್ತಿರುವಾಗ ಇನ್ನೇನು ಬೇಕು. ಹೊಡೆದಾಟದ, ಹಿಂಸೆಯ, ಸುಳ್ಳಿನ ಕಂತೆಯ ಸಿನಿಮಾಗಳನ್ನು ನೋಡಲು ಜನರು ಮುಗಿ ಬೀಳುತ್ತಾರೆ. ಸಮಾಜದ ಒಳಿತಿಗಾಗಿ ದುಡಿದ ವ್ಯಕ್ತಿಗಳ ಬಗೆಗಿನ ಪ್ರಾಮಾಣಿಕ ಪ್ರಯತ್ನಗಳಿಗೆ ಮನ್ನಣೆ ಸಿಗುವುದಿಲ್ಲ ಎನ್ನುವುದು ಖೇದದ ವಿಷಯ. ‘ಫುಲೆ’ ಸಿನಿಮಾ ಸಮಾಜದ ಬಗ್ಗೆ ಕಳಕಳಿ ಉಳ್ಳವರು, ಸಮಾನತೆಯ ಬಗ್ಗೆ ಕಾಳಜಿ ಉಳ್ಳವರು ನೋಡಲೇ ಬೇಕಾದ ಸಿನಿಮಾ.
ಫುಲೆ ಒಂದು ಮಾತು ಹೇಳುತ್ತಾರೆ: ‘ಸಮಾಜ ಉದ್ಧಾರವಾಗಲು ಜ್ಞಾನ, ವಿಚಾರ ಬೇಕು’ ಆ ಮಾತುಗಳನ್ನು ಥಿಯೇಟರ್ ನಲ್ಲಿ ಕೇಳಿಸಿಕೊಳ್ಳುವುದೇ ಖುಷಿ!