‘ಮನಿಕೆ ಮಗೆ ಹಿತೆ’ ಹಾಡಿನೊಂದಿಗೆ ಶ್ರೀಲಂಕಾ ಗಾಯಕಿ ಯೊಹಾನಿ ಭಾರತದೆಲ್ಲೆಡೆ ಮಿಂಚಿದ್ದರು. ಅವರೀಗ ‘ಥ್ಯಾಂಕ್‌ ಗಾಡ್‌’ ಹಿಂದಿ ಚಿತ್ರಕ್ಕೆ ಈ ಜನಪ್ರಿಯ ಸಾಂಗ್‌ನ ಹಿಂದಿ ವರ್ಷನ್ ಹಾಡಲಿದ್ದಾರೆ. ಅಜಯ್ ದೇವಗನ್‌ ನಟನೆಯ ಈ ಚಿತ್ರದೊಂದಿಗೆ ಯೊಹಾನಿ ಬಾಲಿವುಡ್ ಪ್ರವೇಶವಾಗುತ್ತಿದೆ.

ಶ್ರೀಲಂಕಾ ಗಾಯಕಿ ಯೊಹಾನಿ ‘ಮನಿಕೆ ಮಗೆ ಹಿತೆ’ ಸಿಲ್ಹಳ ಭಾಷೆಯ ಹಾಡಿನೊಂದಿಗೆ ಜಗತ್ತಿಗೆ ಪರಿಚಯವಾದರು. ಈ ಆಲ್ಬಂ ಸಾಂಗ್ ಹೊರಬಂದ ಕೆಲವೇ ದಿನಗಳಲ್ಲಿ ಮಿಲಿಯನ್‌ಗಟ್ಟಲೆ ವ್ಯೂವ್ಸ್‌ ಪಡೆಯಿತು. ಹಾಡಿನ ಸಂಗೀತದ ಜೊತೆಗೆ ಸುಂದರಿ ಯೊಹಾನಿ ಆಟಿಟ್ಯೂಡ್‌ ಕೂಡ ಜನರಿಗೆ ಮೆಚ್ಚುಗೆಯಾಗಿತ್ತು. ಭಾರತದಲ್ಲಂತೂ ಈ ಹಾಡಿನ ಬೇರೆ ಬೇರೆ ಭಾಷೆಯ ವರ್ಷನ್‌ಗಳು ಕೂಡ ಬಂದವು. ಇದೀಗ ಯೊಹಾನಿ ಅವರೇ ಅಧಿಕೃತವಾಗಿ ಈ ಹಾಡಿನ ಹಿಂದಿ ವರ್ಷನ್ ಹಾಡಲಿದ್ದಾರೆ. ಇಂದ್ರಕುಮಾರ್ ನಿರ್ದೇಶನದ ‘ಥ್ಯಾಂಕ್ ಗಾಡ್‌’ ಹಿಂದಿ ಚಿತ್ರಕ್ಕೆ ಯೊಹಾನಿ ಹಾಡಲಿದ್ದು, ರಷ್ಮಿ ವಿರಾಗ್ ಸಾಹಿತ್ಯ ರಚಿಸುತ್ತಿದ್ದಾರೆ. ಮೂಲ ಟ್ಯೂನ್‌ನ ಕೆಲವು ಮಾರ್ಪಾಡುಗಳೊಂದಿಗೆ ತನಿಷ್ಕ್‌ ಸಂಗೀತ ಸಂಯೋಜಿಸಲಿದ್ದಾರೆ.

ಈ ಬಗ್ಗೆ ಯೊಹಾನಿ ಮಾತನಾಡಿ, “ನನ್ನ ಹಾಡಿಗೆ ಭಾರತದಲ್ಲಿ ಅಪಾರ ಮೆಚ್ಚುಗೆ ಸಿಕ್ಕಿದೆ. ಇದಕ್ಕೆ ನಾನು ಋಣಿಯಾಗಿದ್ದೇನೆ. ಹಿಂದಿ ಚಿತ್ರಕ್ಕೆ ಹಾಡುವ ಅವಕಾಶ ಸಿಕ್ಕಿದ್ದು, ಚಿತ್ರತಂಡದ ಎಲ್ಲರಿಗೂ ಕೃತಜ್ಞತೆ ಹೇಳುತ್ತೇನೆ. ಸದ್ಯದಲ್ಲೇ ಭಾರತಕ್ಕೆ ಬಂದು ನನ್ನ ಟ್ರ್ಯಾಕ್‌ನ ಹಿಂದಿ ವರ್ಷನ್ ಹಾಡಲಿದ್ದೇನೆ” ಎಂದಿದ್ದಾರೆ. ನಿರ್ದೇಶಕ ಇಂದ್ರಕುಮಾರ್ ಈ ಅವಕಾಶಕ್ಕೆ ಕಾರಣರಾದ ಚಿತ್ರದ ನಿರ್ಮಾಪಕ ಭೂಷಣ್ ಕುಮಾರ್ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. “ಈ ಬ್ಲಾಕ್‌ಬಸ್ಟರ್ ಹಾಡನ್ನು ಬಳಕೆ ಮಾಡಲು ನೆರವಾಗುತ್ತಿರುವ ಭೂಷಣ್‌ ಕುಮಾರ್‌ರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ದೇಸಿ ವರ್ಷನ್ ಖಂಡಿತ ಸೆನ್ಸೇಷನ್ ಸೃಷ್ಟಿಸಲಿದೆ” ಎಂದಿದ್ದಾರೆ ಇಂದ್ರಕುಮಾರ್. ಫ್ಯಾಮಿಲಿ ಎಂಟರ್‌ಟೇನರ್‌ ‘ಥ್ಯಾಂಕ್ ಗಾಡ್‌’ನಲ್ಲಿ ಅಜಯ್ ದೇವಗನ್‌ಗೆ ನಾಯಕಿಯಾಗಿ ರಾಕುಲ್ ಪ್ರೀತ್‌ಸಿಂಗ್ ನಟಿಸುತ್ತಿದ್ದು, ಸಿದ್ದಾರ್ಥ್ ಮಲ್ಹೋತ್ರಾ ಮತ್ತೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ಮುಂದಿನ ವರ್ಷಾರಂಭದ ಹೊತ್ತಿಗೆ ಸಿನಿಮಾ ಥಿಯೇಟರ್‌ಗೆ ಬರಲಿದೆ.

LEAVE A REPLY

Connect with

Please enter your comment!
Please enter your name here