ಬಹುನಿರೀಕ್ಷಿತ ’45’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಿರ್ದೇಶಕ ಅರ್ಜುನ್ ಜನ್ಯ ಪೌರಾಣಿಕ ಕತೆಯೊಂದರ ಎಳೆಯೊಂದಿಗೆ ಸಿನಿಮಾ ನಿರೂಪಿಸಿದ್ದಾರೆ ಎನ್ನಲಾಗುತ್ತಿತ್ತು. ಟ್ರೇಲರ್ ಕಾಣಿಸುವ ಮೂರು ಪ್ರಮುಖ ಪಾತ್ರಗಳು ಈ ಹೇಳಿಕೆಗೆ ಪೂರಕವಾಗಿವೆ.
ಸ್ಯಾಂಡಲ್‌ವುಡ್‌ನ ಜನಪ್ರಿಯ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ’45’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಮೂವರು ಪ್ರಮುಖ ಪಾತ್ರಧಾರಿಗಳಾದ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಪಾತ್ರಗಳು ಟ್ರೇಲರ್‌ನಲ್ಲಿ ಅನಾವರಣಗೊಂಡಿವೆ. ಮೇಲ್ನೋಟಕ್ಕೆ ಟ್ರೇಲರ್‌ನಲ್ಲಿ ಶಿವರಾಜಕುಮಾರ್ ರಕ್ಷಕನ ಪಾತ್ರದಲ್ಲಿ ಹಾಗೂ ಉಪೇಂದ್ರ ಖಳಛಾಯೆಯ ಪಾತ್ರದಲ್ಲಿ ಇರುವಂತೆ ತೋರುತ್ತದೆ. ಈ ಎರಡೂ ಪಾತ್ರಗಳು ರಾಜ್ ಬಿ ಶೆಟ್ಟಿ ಅವರ ಪಾತ್ರದ ಸುತ್ತ ಸುತ್ತುತ್ತವೆ. 2.25 ನಿಮಿಷಗಳ ಟ್ರೇಲರ್ ಆಕರ್ಷಕವಾಗಿ ಸಂಕಲನಗೊಂಡಿದ್ದು, CG ಬಳಕೆ ಚೆನ್ನಾಗಿದೆ. ಕೊನೆಯಲ್ಲಿ ಸ್ತ್ರೀ ವೇಷದಲ್ಲಿನ ಶಿವರಾಜಕುಮಾರ್ ಪಾತ್ರ ಅಚ್ಚರಿ ಮೂಡಿಸುತ್ತದೆ.
ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಕುರಿತು ಮಾತನಾಡುವ ಅರ್ಜುನ್ ಜನ್ಯ, ‘ನಾನು ಈ ಮೂವರು ನಾಯಕನಟರ ಅಭಿಮಾನಿಯಾಗಿ ಈ ಸಿನಿಮಾ ನಿರ್ದೇಶನ ಮಾಡಿದ್ದೇನೆ. ಹಾಗಾಗಿ ನನಗೆ ನಿರ್ದೇಶಿಸುವುದು ಅಷ್ಟು ಕಷ್ಟ ಆಗಲಿಲ್ಲ. ನಾನು ಸಿನಿಮಾ ನಿರ್ದೇಶಕನಾಗಲು ಶಿವರಾಜಕುಮಾರ್ ಅವರೇ ಕಾರಣ. ಇನ್ನೂ, ಈ ಚಿತ್ರದ ನಾಲ್ಕನೇ ಹೀರೋ ನಿರ್ಮಾಪಕ ರಮೇಶ್ ರೆಡ್ಡಿ. ಅವರು ಯಾವುದೇ ಕೊರತೆ ಬಾರದ ಹಾಗೆ ಈ ಸಿನಿಮಾ ಮಾಡಿದ್ದಾರೆ. ನಾನು ಚಿತ್ರ ನಿರ್ದೇಶನಕ್ಕೂ ಮುನ್ನ ಅನಿಮೇಶನ್ ನಲ್ಲಿ ಈ ಸಿನಿಮಾ ಕಥೆ ಮಾಡಿ ಶಿವಣ್ಣ ಹಾಗೂ ರಮೇಶ್ ರೆಡ್ಡಿ ಅವರಿಗೆ ತೋರಿಸಿದ್ದೆ. ಅವರು ಅದನ್ನು ನೋಡಿ ಮೆಚ್ಚಿಕೊಂಡಿದ್ದರು. ಒಂದೊಳ್ಳೆಯ ಸಂದೇಶದೊಂದಿಗೆ ಕಥೆ ಮಾಡಿದ್ದೇನೆ’ ಎಂದರು. ಇದೇ ಡಿಸೆಂಬರ್ 25ರಂದು ಸಿನಿಮಾ ತೆರೆಕಾಣಲಿದೆ.










