ಚಿತ್ರ ನಿರ್ಮಾಣ ಮಾಡುವುದು ಎಷ್ಟು ಕಷ್ಟವೋ, ಅದಕ್ಕಿಂತಲೂ ಕಷ್ಟ ಚಿತ್ರವನ್ನು ಪ್ರೇಕ್ಷಕರಿಗೆ ತಲುಪುವಂತೆ ಮಾಡುವುದು. ದಿಗಂತ್‌, ರಂಜನಿ ರಾಘವನ್‌, ಐಂದ್ರಿತಾ ರೇ ಅಭಿನಯದ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ವಿಶಿಷ್ಟ ಪ್ರಚಾರ ಶೈಲಿಯಿಂದ ಸುದ್ದಿಯಾಗಿದೆ.

ವಿನಾಯಕ ಕೋಡ್ಸರ ನಿರ್ದೇಶನದ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಬಿಡುಗಡೆಗೆ ಸಿದ್ಧವಾಗಿದ್ದು, ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಟಿ.ಎಸ್.ಎಸ್ ಅಡಿಕೆ ವ್ಯಾಪಾರಿ ಅಂಗಳ ಅಂದರೆ ಬಹು ಖ್ಯಾತಿ. ಇದರ ಸಹಯೋಗದೊಂದಿಗೆ ಫೆಬ್ರವರಿ 20ರಂದು ಮಧ್ಯಾಹ್ನ ಮೂರರಿಂದ ಸಂಜೆ ಐದು ಮೂವತ್ತರವರೆಗೂ ಚಿತ್ರತಂಡ ಅಡಿಕೆ ಸುಲಿಯುವ ಸ್ಪರ್ಧೆ ಏರ್ಪಡಿಸಿದೆ. ಶಿರಸಿಯ ಟಿ.ಎಸ್.ಎಸ್ ಪ್ರಾಂಗಣದಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಸುಮಾರು 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ದಿಗಂತ್, ಐಂದ್ರಿತ ರೆ , ರಂಜನಿ ರಾಘವನ್ ಹಾಗೂ ಚಿತ್ರತಂಡದ ಬಹುತೇಕ ಸದಸ್ಯರು ಅಂದು ಉಪಸ್ಥಿತರಿದ್ದು,
ವಿಜೇತರಿಗೆ ಬಹುಮಾನ ವಿತರಿಸಲಿದ್ಧಾರೆ.

“ಚಿತ್ರದಲ್ಲಿ ದಿಗಂತ್ ಅಡಿಕೆ ಬೆಳೆಗಾರನಾಗಿದ್ದು, ಅಡಿಕೆ ಜೊತೆ ಪಾತ್ರದ ನಂಟಿದೆ. ಹೀಗಾಗಿ‌ ಮಲೆನಾಡಿನ ಜೀವನಾಡಿಯಾದ ಅಡಿಕೆ ಸುಲಿಯುವ ಸ್ಪರ್ಧೆ ಆಯೋಜಿಸಲಾಗಿದೆ. ಚಿತ್ರದಲ್ಲಿ ಪ್ರೇಮಕತೆಯ ಜೊತೆಗೆ ಅಡಿಕೆ ಬೆಳೆಗಾರರ ಕಷ್ಟ-ಸುಖಗಳ ಬಗ್ಗೆ ಗಮನ ಸೆಳೆಯುವ ಸನ್ನಿವೇಶಗಳಿವೆ. ಸಿನಿಮಾ ಮೂಲಕ ಸ್ಥಳೀಯ ರೈತರ ಬದುಕನ್ನು ಹೇಳುವ ಪ್ರಯತ್ನವೂ ಇಲ್ಲಿದೆ” ಎನ್ನುತ್ತಾರೆ ನಿರ್ದೇಶಕ ವಿನಾಯಕ ಕೋಡ್ಸರ. ಬಿ.ಜಿ. ಮಂಜುನಾಥ್ ನಿರ್ಮಾಣದ ಚಿತ್ರ ವಿಶಿಷ್ಟ ಶೀರ್ಷಿಕೆಯ ಮೂಲಕ ಆರಂಭದಿಂದಲೂ ಸುದ್ದಿಯಲ್ಲಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವುದಾಗಿ ನಿರ್ದೇಶಕರು ಹೇಳುತ್ತಾರೆ.

Previous articleಟೀಸರ್‌ | ‘ಕಾಥು ವಾಕುಲ ರೆಂಡು ಕಾದಲ್‌’; ವಿಜಯ್‌ ಸೇತುಪತಿ ಲವ್‌ – ಕಾಮಿಡಿ
Next article‘ರಾಣ’ನ ಹಾಡು ಬಿಡುಗಡೆ ಮಾಡಿದ ದುನಿಯಾ ವಿಜಯ್‌; ಇದು ಸಂಯುಕ್ತಾ ಹೆಗಡೆ ಸ್ಪೆಷಲ್‌ ಸಾಂಗ್‌

LEAVE A REPLY

Connect with

Please enter your comment!
Please enter your name here