ಪುನೀತ್‌ ರಾಜಕುಮಾರ್‌ ಕತೆ ಇಷ್ಟಪಟ್ಟು ಓಕೆ ಮಾಡಿದ್ದ ಸಿನಿಮಾ ‘ಆಚಾರ್‌ & ಕೋ’. ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು ಜುಲೈ 28ರಂದು ತೆರೆಕಾಣುತ್ತಿದೆ. PRK ಪ್ರೊಡಕ್ಷನ್ಸ್‌ನಡಿ ಅಶ್ವಿನಿ ಪುನೀತ್‌ ರಾಜಕುಮಾರ್‌ ನಿರ್ಮಿಸಿರುವ ಚಿತ್ರವನ್ನು ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶಿಸಿದ್ದಾರೆ.

ಅಕಾಲಿಕವಾಗಿ ಅಗಲಿದ ನಟ ಪುನೀತ್‌ ರಾಜಕುಮಾರ್‌ ಅವರು ಇಷ್ಟಪಟ್ಟು ಓಕೆ ಮಾಡಿದ್ದ ಚಿತ್ರಕಥೆ ಸಿನಿಮಾ ತೆರೆಗೆ ಸಿದ್ಧವಾಗಿದೆ. ಅಶ್ವಿನಿ ಪುನೀತ್‌ ರಾಜಕುಮಾರ್‌ ಮೊದಲ ಬಾರಿ ನಿರ್ಮಾಣದ ಹೊಣೆ ಹೊತ್ತು ಸಿನಿಮಾ ಮಾಡಿದ್ದಾರೆ. ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನದ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಚಿತ್ರದ ಬಹುತೇಕ ತಾಂತ್ರಿಕ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ. ನಿರ್ದೇಶಕಿ ಸಿಂಧು ಅವರು 60, 70ರ ದಶಕಗಳ ಕಾಲಘಟ್ಟದ ಕತೆ ಹೇಳಿದ್ದು, ಕಂಟೆಂಟ್‌ ಕಾರಣಕ್ಕೆ ಟ್ರೈಲರ್‌ ಗಮನಸೆಳೆಯುತ್ತದೆ. ಸಿನಿಮಾ ಜುಲೈ 28ರಂದು ತೆರೆಕಾಣುತ್ತಿದೆ. ‘ಪ್ರತೀ ವಿಭಾಗದಲ್ಲಿ ತಂತ್ರಜ್ಞರು ಉತ್ತಮ ಕೆಲಸ ಮಾಡಿದ್ದಾರೆ. ಪ್ರೇಕ್ಷಕರಿಗೆ ಖಂಡಿತ ಸಿನಿಮಾ ಇಷ್ಟವಾಗಲಿದೆ’ ಎನ್ನುತ್ತಾರೆ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜಕುಮಾರ್‌.

ಚಿತ್ರದ ನಿರ್ದೇಶಕ ಸಿಂಧು ಶ್ರೀನಿವಾಸಮೂರ್ತಿ ಅವರು ಚಿತ್ರದ ಬಗ್ಗೆ ಮಾಹಿತಿ ನೀಡಿ, ‘ಇದು ಅರವತ್ತರ ಕಾಲಘಟ್ಟದಲ್ಲಿ ನಡೆಯುವ ಕಥೆ. ಬೆಂಗಳೂರಿನ ಜಯನಗರ ನಿವಾಸಿ ಮಧುಸೂದನ್ ಆಚಾರ್ – ಸಾವಿತ್ರಿ ಆಚಾರ್ ಹಾಗೂ ಅವರ ಹತ್ತು ಜನ ಮಕ್ಕಳ ಕತೆ. ಇದೊಂದು ಕೂಡು ಕುಟುಂಬದ ಕತೆ. ಅರವತ್ತರ ದಶಕದಲ್ಲಿ ನಡೆಯುವ ಕಥೆಯಾಗಿರುವುದರಿಂದ ಚಿತ್ರದಲ್ಲಿ ಸ್ವಲ್ಪ ಕೂಡ ಅಧುನಿಕತೆ ಕಾಣದಂತೆ ಎಚ್ಚರಿಕೆ ವಹಿಸಬೇಕಿತ್ತು. ಹಾಗಾಗಿ ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರದ ಬಗ್ಗೆ ಪುನೀತ್ ರಾಜಕುಮಾರ್ ಅವರ ಬಳಿ ಮಾತನಾಡಿದ್ದೆ.‌ ಇಂದು ಅವರಿದಿದ್ದರೆ ಬಹಳ ಖುಷಿ ಪಡುತ್ತಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಯಾವುದೇ ಕೊರತೆ ಬರದಂತೆ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ’ ಎಂದರು.

ಚಿತ್ರದ ಮಧುಸೂದನ್ ಆಚಾರ್ ಪಾತ್ರದಲ್ಲಿ ಹಿರಿಯ ನಟ ಅಶೋಕ್, ಸಾವಿತ್ರಿ ಆಚಾರ್ ಪಾತ್ರದಲ್ಲಿ ಸುಧಾ ಬೆಳವಾಡಿ ಅಭಿನಯಿಸಿದ್ದಾರೆ. ಹೆಚ್ಚು ಜನ ಕಲಾವಿದರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಬಹುತೇಕರು ರಂಗಭೂಮಿ ಹಿನ್ನೆಲೆಯುಳ್ಳವರು. ನಿರ್ದೇಶಕ ಸಿಂಧು ಶ್ರೀನಿವಾಸಮೂರ್ತಿ ಅವರೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮನ್ಯು ಸದಾನಂದನ್‌ ಛಾಯಾಗ್ರಹಣ, ಬಿಂದು ಮಾಲಿನಿ ಸಂಗೀತ, ವಿಶ್ವಾಸ್‌ ಕಶ್ಯಪ್‌ ಕಲಾ ನಿರ್ದೇಶನ, ಆಶಿಕ್‌ ಕುಸುಗೊಳ್ಳಿ ಸಂಕಲನ ಚಿತ್ರಕ್ಕಿದೆ. ಕತೆ, ಚಿತ್ರಕಥೆ ರಚನೆಯಲ್ಲಿ ನಿರ್ದೇಶಕಿ ಸಿಂಧು ಅವರಿಗೆ ಕಣ್ಣನ್‌ ಗಿಲ್‌ ಸಹಕರಿಸಿದ್ದಾರೆ. ತ್ರಿಲೋಕ್‌ ತ್ರಿವಿಕ್ರಮ್‌ ಸಂಭಾಷಣೆ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here