‘ಲವ್‌ ಯೂ ರಚ್ಚು’ ಸಿನಿಮಾ ಹೀರೋ ಅಜಯ್‌ ರಾವ್‌ ಮತ್ತು ನಿರ್ಮಾಪಕ ಗುರು ದೇಶಪಾಂಡೆ ಮಧ್ಯೆ ಮನಸ್ತಾಪ ತಲೆದೋರಿದೆ. ಇವರಿಬ್ಬರ ಮಧ್ಯೆಯ ಮುನಿಸು ಮುಂದಿನ ವಾರ ತೆರೆಕಾಣಲಿರುವ ಸಿನಿಮಾ ಮೇಲೆ ಪರಿಣಾಮ ಬೀರಲಿದೆ ಎನ್ನುವುದು ಚಿತ್ರತಂಡದ ಅಳಲು.

ಚಿತ್ರೀಕರಣದ ದಿನಗಳಿಂದಲೂ ‘ಲವ್‌ ಯೂ ರಚ್ಚು’ ಸುದ್ದಿಯಲ್ಲಿದ್ದ ಸಿನಿಮಾ. ಫೈಟಿಂಗ್‌ ಸನ್ನಿವೇಶವೊಂದರ ಚಿತ್ರೀಕರಣ ಸಂದರ್ಭದಲ್ಲಿನ ಅವಘಡದಿಂದಾಗಿ ತಂಡದ ಸಾಹಸ ಕಲಾವಿದರೊಬ್ಬರು ಅಸುನೀಗಿದ್ದರು. ಕೋವಿಡ್‌ ದಿನಗಳ ಸಂಕಷ್ಟಗಳ ಮಧ್ಯೆ ಈ ದುರ್ಘಟನೆ ಚಿತ್ರತಂಡಕ್ಕೆ ದುಬಾರಿಯಾಯ್ತು. ಒಂದಷ್ಟು ದಿನಗಳ ನಂತರ ಮತ್ತೆ ಶೂಟಿಂಗ್‌ ಮುಂದುವರೆದು, ಸೆನ್ಸಾರ್‌ ಆಗಿ ಈಗ ಮುಂದಿನ ವಾರ ಸಿನಿಮಾ ತೆರೆಕಾಣುತ್ತಿದೆ. ಪ್ರಚಾರಕಾರ್ಯ ಶುರುವಾಗುತ್ತಿದ್ದಂತೆ ಚಿತ್ರತಂಡದಲ್ಲಿನ ಮುನಿಸು ಹೊರಬಿದ್ದಿದೆ. ಕಳೆದ ವಾರ ನಡೆದ ಚಿತ್ರದ ಟ್ರೈಲರ್‌ ಬಿಡುಗಡೆಗೆ ಹೀರೋ ಅಜಯ್‌ ರಾವ್‌ ಗೈರು ಹಾಜರಾಗಿದ್ದರು. “ಅನಾರೋಗ್ಯದಿಂದಾಗಿ ಅಜಯ್‌ ಸಮಾರಂಭದಲ್ಲಿ ಭಾಗವಹಿಸಿಲ್ಲ” ಎಂದಿದ್ದರು ನಿರ್ಮಾಪಕ ಗುರು ದೇಶಪಾಂಡೆ. ಇದು ನಿಜವಲ್ಲ ಎನ್ನುವುದು ಅಲ್ಲಿದ್ದವರಿಗೆ ಗೊತ್ತಾಗಿತ್ತು. ನಿರ್ಮಾಪಕರು ಚಿತ್ರದ ನಾಯಕಿ ರಚಿತಾ ರಾಮ್‌ ಅವರಿಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಇದು ಅಜಯ್‌ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನುವ ವದಂತಿ ಹರಡಿತು.

ಈಗ ನಟ ಅಜಯ್‌ ರಾವ್‌ ಪ್ರತಿಕ್ರಿಯೆ ಹೊರಬಿದ್ದಿದೆ. “ನಿರ್ಮಾಪಕ ಗುರು ದೇಶಪಾಂಡೆ ಅವರಿಂದ ನನಗೆ ಅವಮಾನವಾಗಿದೆ. ನನ್ನ ಅತ್ಮಗೌರವ ಕಳೆದುಕೊಂಡು ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಮನಸ್ಸಾಕ್ಷಿ ಒಪ್ಪುತ್ತಿಲ್ಲ” ಎಂದು ನಟ ಅಜಯ್‌ ರಾವ್‌ ನೇರವಾಗಿ ನಿರ್ಮಾಪಕರ ಬಗೆಗಿನ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಆದರೆ ನಿಜಕ್ಕೂ ಏನಾಗಿದೆ ಎನ್ನುವುದರ ಬಗ್ಗೆ ಅವರು ಮಾತನಾಡುವುದಿಲ್ಲ. “ಲವ್‌ ಯೂ ರಚ್ಚು’ ನನ್ನ ಸಿನಿಮಾ. ಈ ಸಿನಿಮಾ ಬಗ್ಗೆ ನನಗೆ ಕಾಳಜಿ, ಪ್ರೀತಿ ಇದೆ. ವೈಯಕ್ತಿಕ ಮಟ್ಟದಲ್ಲಿ ನಾನು ಪ್ರಚಾರ ಕೈಗೊಳ್ಳುತ್ತೇನೆ. ಆದರೆ ನಿರ್ಮಾಪಕರು ಆಯೋಜಿಸುವ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುವುದಿಲ್ಲ. ಅವಮಾನ ಮಾಡಿರುವವರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಚ್ಛಿಸುವುದಿಲ್ಲ” ಎಂದಿದ್ದಾರೆ. ವಿವಾದಗಳಿಂದ ದೂರವೇ ಇರುವ ನಟ ಅಜಯ್‌ ರಾವ್‌ ಅವರು ಗುರು ದೇಶಪಾಂಡೆ ಅವರ ಮೇಲೆ ಮುನಿಸಿಕೊಂಡಿರುವುದು ಸಿನಿಮಾ ಮೇಲೆ ಪರಿಣಾಮ ಬೀರಲಿದೆ ಎನ್ನುವುದು ಚಿತ್ರತಂಡದವರ ಆತಂಕ.

ನಿರ್ಮಾಪಕ ಗುರು ದೇಶಪಾಂಡೆ ಅವರು ಚಿತ್ರದ ನಿರ್ದೇಶನದಲ್ಲಿ ಮೂಗು ತೂರಿಸಿದ್ದಾರೆ ಎನ್ನುವುದು ಅಜಯ್‌ ರಾವ್‌ ಮುನಿಸು ಎಂದು ಮೂಲಗಳು ಹೇಳುತ್ತವೆ. ಈ ಬಗ್ಗೆ ನಿರ್ಮಾಪಕ ಗುರು ಅವರು ಪ್ರತಿಕ್ರಿಯಿಸಿದ್ದಾರೆ. “ನಾಲ್ಕಾರು ಜನರಿರುವ ಕುಟುಂಬದಲ್ಲೇ ಅಸಮಾಧಾನಗಳಿರುತ್ತವೆ. ನೂರೈವತ್ತು ಜನರು ಕೆಲಸ ಮಾಡುವ ಸಿನಿಮಾ ತಂಡದಲ್ಲಿ ಮನಸ್ತಾಪ ಬರುವುದು ಅಸಹಜವೇನಲ್ಲ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ನಾನು ಈ ಸಿನಿಮಾಗೆ ನಿರ್ಮಾಪಕನಷ್ಟೇ ಅಲ್ಲ, ಕ್ರಿಯೇಟಿವ್‌ ಹೆಡ್‌ ಕೂಡ ಹೌದು. ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲೂ ಇದನ್ನು ಹಾಕಿಕೊಂಡಿದ್ದೇನೆ. ಕ್ರಿಯೇಟಿವ್‌ ಹೆಡ್‌ ಆಗಿ ನಿರ್ದೇಶಕರಿಗೆ ಸಲಹೆ, ಸೂಚನೆ ನೀಡಬೇಕಾಗುತ್ತದೆ. ಇದನ್ನು ಅವರು ಪ್ರಶ್ನಿಸುವುದು ಸರಿಯಲ್ಲ. ಆದಾಗ್ಯೂ ನಾನು ಮುಂದಿನ ದಿನಗಳಲ್ಲಿ ನಡೆಯಲಿರುವ ಸಿನಿಮಾ ಪ್ರಚಾರ ಕಾರ್ಯಕ್ರಮಗಳಿಗೆ ಅವರಿಗೆ ಆಹ್ವಾನ ನೀಡಿದ್ದೇನೆ. ನಿರ್ಮಾಪಕನಾಗಿ ಸಿನಿಮಾ ಗೆಲ್ಲಿಸಿಕೊಳ್ಳಲು ಮಾಡಬೇಕಾದ ಎಲ್ಲಾ ಪ್ರಯತ್ನಗಳನ್ನು ನಾನು ಮಾಡುತ್ತೇನೆ” ಎಂದಿದ್ದಾರೆ. ‘ಲವ್‌ ಯೂ ರಚ್ಚು’ಯಲ್ಲಿ ಲವ್‌ ಸ್ಟೋರಿ ಜೊತೆಗೆ ಸಸ್ಪೆನ್ಸ್‌ – ಥ್ರಿಲ್ಲರ್‌ ಹೆಣಿಗೆಯಿರುವ ಸಿನಿಮಾ. ಮುಂದಿನ ವಾರ ಸಿನಿಮಾ ತೆರೆಕಾಣುತ್ತಿದ್ದು ಹೀರೋ ಮತ್ತು ನಿರ್ಮಾಪಕರ ಮಧ್ಯೆಯ ಮುನಿಸು ಸಿನಿಮಾ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ಎಂದು ನೋಡಬೇಕು.

LEAVE A REPLY

Connect with

Please enter your comment!
Please enter your name here