‘ಮೂರಕ್ಕೆ ಮುನ್ನುಡಿ ಇಲ್ಲವೇ ಮೂರಕ್ಕೆ ಮುಕ್ತಾಯ’ ಎನ್ನುತ್ತಾರೆ ಚಿತ್ರನಿರ್ದೇಶಕ ಅಭಿಷೇಕ್ ಶೆಟ್ಟಿ. ಅವರ ಈ ಹಿಂದಿನ ಎರಡು ಸಿನಿಮಾಗಳಿಗೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಈ ಬಾರಿ ‘ಆರಾಮ್ ಅರವಿಂದ ಸ್ವಾಮಿ’ ಎನ್ನುವ ವಿಶಿಷ್ಟ ಕತೆ ಮತ್ತು ಶೀರ್ಷಿಕೆಯ ಚಿತ್ರದೊಂದಿಗೆ ಅವರು ತೆರೆಗೆ ಮರಳುತ್ತಿದ್ದಾರೆ.
ಫಸ್ಟ್ ಲುಕ್ ಹಾಗೂ ಪ್ರಮೋಷನಲ್ ವಿಡಿಯೋ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ನಿರತವಾಗಿದೆ. ಅಭಿಷೇಕ್ ಶೆಟ್ಟಿ ಮತ್ತು ಅನೀಶ್ ತೇಜೇಶ್ವರ್ ಕಾಂಬಿನೇಷ್‌ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಮಿಲನ ನಾಗರಾಜ್ ಹಾಗೂ ರಿತಿಕಾ ಶ್ರೀನಿವಾಸ್ ನಾಯಕಿಯರಾಗಿ ನಟಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ. ನಟ ಅನೀಶ್ ಮಾತನಾಡಿ, ‘ಪ್ರತಿಯೊಂದು ಅಂತ್ಯದಲ್ಲೊಂದು ಆರಂಭ ಇರುತ್ತದೆ. ಹಾಗೆಯೇ ನನ್ನ ಬೆಂಕಿ ಸಿನಿಮಾ ಫ್ಲಾಪ್ ಆಗುತ್ತಿದ್ದಂತೆ ನಾನು ಎಂಡ್ ಪಾಯಿಂಟ್‌ನಲ್ಲಿ ಇದ್ದೇನಾ ಅನಿಸಿತು. ನನ್ನಿಂದ ಪ್ರೇಕ್ಷಕರು ಬೇರೆಯದ್ದನ್ನೂ ನಿರೀಕ್ಷೆ ಮಾಡುತ್ತಿದ್ದಾರೆ ಎಂಬುವುದು ಗೊತ್ತಾಯಿತು. ತನಗೆ ಮಾಡಿಕೊಂಡ ಸಬ್ಜೆಕ್ಟ್ ಅನ್ನು ಅನೀಶ್ ನನಗೆ ಸಿನಿಮಾ ಮಾಡಿದರು. ಅದೇ ಆರಾಮ್ ಅರವಿಂದ ಸ್ವಾಮಿ’ ಎಂದರು.
ನಟಿ ಮಿಲನಾ ನಾಗರಾಜ್ ಮಾತನಾಡಿ, ‘ಆರಾಮ್ ಅರವಿಂದ್ ಸ್ವಾಮಿ ಸಿನಿಮಾ ಕುರಿತು ಅಭಿಷೇಕ್ ಅವರು ಬಂದು ಕತೆ ಹೇಳಿದರು. ಕತೆ ತುಂಬಾ ಎಕ್ಸೈಟಿಂಗ್ ಅನಿಸಿತು. ಇಲ್ಲಿಯವರೆಗೂ ಮಾಡಿದ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವ ಅನುಭವ ನನಗೆ’ ಎಂದರು. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ‘ಅಕಿರ’ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸಾಗರ್ ಛಾಯಾಗ್ರಹಣ, ಉಮೇಶ್ ಸಂಕಲನವಿದೆ. ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗಳ ಖ್ಯಾತಿಯ ಅಭಿಷೇಕ್ ಶೆಟ್ಟಿ ಅವರಿಗೆ ಇದು ಮೂರನೇ ಸಿನಿಮಾ. ಬೆಂಗಳೂರು, ಕೇರಳ, ಕನಕಪುರ, ಮೈಸೂರು ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಮುಂದಿನ ತಿಂಗಳು ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರು ಮಾಡಲಿದೆ ಚಿತ್ರತಂಡ. ಜನವರಿಯಲ್ಲಿ ಸಿನಿಮಾ ತೆರೆಕಾಣಲಿದೆ.