ಒಂದು ಕಾಲ ದೇಶದ ಸಾಮಾನ್ಯ ಮನುಷ್ಯರ ಬದುಕಿನ ಘಟನೆಗಳನ್ನು ಹೆಣೆದು, ಮನುಷ್ಯರು ತಮ್ಮ ಬದುಕಿನ ಅನುಭವದಲ್ಲಿ ನೆಂದು ಹ್ಯಾಗೆ ಜೀವ ಕಾಣ್ಕೆಗಳನ್ನು ಪಡೆಯುವುದಕ್ಕೆ ಹೆಣಗುತ್ತಾರೆ ಎಂದು ತೋರಿಸುವ ಅಪರೂಪದ ಸಿನಿಮಾ ಇದು.
ಲಿಥುನಿಯ ದೇಶದ Lauryanas Bareisa ನಿರ್ದೇಶಿಸಿರುವ ಸಿನಿಮಾ Drowning Dry ಕಲೆಯ ಅಂತಿಕ ಉದ್ದೇಶವನ್ನು ಬಹಳ ಚೆಂದವಾಗಿ ಹಿಡಿದುಕೊಟ್ಟಿದೆ. ಸಿನಿಮಾ ಕಲೆಯ ಆಂತಿಕ ಉದ್ದೇಶವೆಂದರೆ – ಇತರ ಕಲಾ ಪ್ರಕಾರಗಳು, ಹಾಗು ಸಿನಿಮಾವನ್ನು ಒಳಗೊಂಡಿರುವ ಇತರ ದೃಷ್ಯ ಕಲೆಗಳು ಯಾವುದನ್ನು ಕಸುವಿನಿಂದ ಹಿಡಿದಿಡಲು ಸಾಧ್ಯವಾಗುವುದಿಲ್ಲವೋ ಅಂಥದ್ದನ್ನು ದೃಷ್ಯ ಚಿತ್ರ ಸರಮಾಲೆಯಲ್ಲಿ ಹಿಡಿದಿಟ್ಟು ಕೊಡುವುದು. ಸಿನಿಮಾ ಕಲೆಗೆ ವಿಶಿಷ್ಟವಾಗಿ ದಕ್ಕುವ ಅಂಥ ವಸ್ತು ವಿಷಯ ಯಾವುದು? – ಅದು ಮನುಷ್ಯರ ನಿತ್ಯ ಸಾಮಾಜಿಕ ಬದುಕಿನಲ್ಲೇ ಕಡೆದು ಬರುವ ಜೀವನ ದರ್ಶನಗಳನ್ನು, ಕಥನ ಸೊಗಸಿನ ನೆರವಿಲ್ಲದೆ, ಮನುಷ್ಯರ ವಿಲಕ್ಷಣ ಪ್ರವೃತ್ತಿಗಳ ಕಡೆ ಗಮನ ಹರಿಸದೆ- ಬರೀ ಸಾಮಾನ್ಯ ಬದುಕಿನ ಚಿತ್ರಣಗಳ ಸಂಕಲನದಲ್ಲಿ ತೆರೆದಿಯೂವುದು. ಒಂದು ಕಾಲ ದೇಶದ ಸಾಮಾನ್ಯ ಮನುಷ್ಯರ ಬದುಕಿನ ಘಟನೆಗಳನ್ನು ಹೆಣೆದು, ಮನುಷ್ಯರು ತಮ್ಮ ಬದುಕಿನ ಅನುಭವದಲ್ಲಿ ನೆಂದು ಹ್ಯಾಗೆ ಜೀವ ಕಾಣ್ಕೆಗಳನ್ನು ಪಡೆಯುವುದಕ್ಕೆ ಹೆಣಗುತ್ತಾರೆ ಎಂದು ತೋರಿಸುವ ಅಪರೂಪದ ಸಿನಿಮಾವಿದು. ಇದನ್ನು ನೋಡಿದ ನಂತರ ಚಲನಚಿತ್ರ ಕಲೆಯ ದಿಗ್ಗಜ ವಿಮ್ ವೆಂಡರ್ಸ್ ಅವರ- Kings of the Road ಸಿನಿಮಾದ ದರ್ಶನವು ತನಗೆ ತಾನೇ ಆಯಿತು.