ಚಿತ್ರೋತ್ಸವದಲ್ಲಿ ಸಿನಿಮಾ ನೋಡಿದವರಿಗೆ ಎಲ್ಲಾ ಚಿತ್ರಗಳು ಇಷ್ಟವಾಗುವುದಿಲ್ಲ. ಅದನ್ನು ಅವರವರ ಅಭಿರುಚಿಗೆ ಬಿಟ್ಟ ವಿಷಯ ಎಂದು ಹೇಳಿ ಬಿಡಬಹುದು. ಆದರೆ ನಾವು ಅಭಿರುಚಿಯನ್ನು ಬೆಳೆಸಲು ಏನು ಮಾಡಿದ್ದೇವೆ ಎಂದೂ ಕೇಳಿಕೊಳ್ಳಬೇಕಾಗಿದೆ.
16ನೇ ಬೆಂಗಳೂರು ಚಲನಚಿತ್ರೋತ್ಸವದ ಮುಕ್ತಾಯದ ಸಿನಿಮಾ ‘ಲಿಟಲ್ ಲವ್ಸ್’. ಬಗೆಬಗೆಯ ಚಿತ್ರಗಳನ್ನು ನೋಡಿ ದಣಿದ ಮನಸ್ಸಿಗೆ ಆಹ್ಲಾದ ದೊರಕಲಿ ಎಂದು ಈ ಚಿತ್ರವನ್ನು ಆಯ್ಕೆ ಮಾಡಿದಂತಿತ್ತು. ಊರಾಚೆಯ ಒಂಟಿ ಮನೆಗೆ ಬಣ್ಣ ಬಳಿಯುವ ತಾಯಿ ಆಕಸ್ಮಿಕವಾಗಿ ಗಾಯಗೊಳ್ಳುತ್ತಾಳೆ. ಅವಳನ್ನು ನೋಡಿಕೊಳ್ಳಲು ಮಗಳು ಬರುತ್ತಾರೆ. ತಾಯಿ – ಮಗಳು ಇಬ್ಬರೂ ಏಕಾಂಗಿಗಳು. ಮೊದಮೊದಲು ಭಾವನಾತ್ಮಕ ತೊಡಕುಗಳು ಒದಗಿದರೂ ಪರಸ್ಪರರನ್ನು ಅರಿತುಕೊಳ್ಳುವ ಅವಕಾಶ ಒದಗುತ್ತದೆ. ಏನನ್ನೂ ನಿರೀಕ್ಷಿಸದೆ, ಒಬ್ಬರನ್ನೊಬ್ಬರು ಅವಲಂಬಿಸದೆ ಸ್ವತಂತ್ರವಾಗಿ ಬದುಕುವ ಹಕ್ಕನ್ನು ಅವರಿಬ್ಬರೂ ಉಳಿಸಿಕೊಳ್ಳುತ್ತಾರೆ. ನಿರ್ದೇಶಕ ಮೆಲೋಡ್ರಾಮಕ್ಕೆ ಆಸ್ಪದ ನೀಡದೆ ಮೆಲು ದನಿಯಲ್ಲಿ ಚಿತ್ರ ನಿರ್ವಹಿಸಿದ್ದಾರೆ. ಹದಿನಾರನೇ ಬೆಂಗಳೂರು ಚಲನಚಿತ್ರೋತ್ಸವಕ್ಕೆ ಈ ಚಿತ್ರದೊಂದಿಗೆ ತೆರೆ ಬಿತ್ತು. ಇದಕ್ಕೂ ಮುನ್ನ ಪ್ರದರ್ಶನಗೊಂಡ ಸಿನಿಮಾಗಳ ಬಗ್ಗೆ ನಾಲ್ಕು ಮಾತು…
ಬ್ರೀಫ್ ಸ್ಟೋರಿ ಆಫ್ ಎ ಫ್ಯಾಮಿಲಿ | ತಂದೆ ತಾಯಿಯನ್ನು ಕಳೆದುಕೊಂಡ ಬಾಲಕ ಒಬ್ಬನೇ ಮಗನಿರುವ ಕುಟುಂಬದ ಆಸರೆ ಪಡೆಯತ್ತಾನೆ. ಆದರೆ ಇದು ಮನೆ ಮಗನಿಗೆ ಇಷ್ಟವಾಗುವುದಿಲ್ಲ. ಚಿತ್ರದ ವಸ್ತು ಇತ್ತೀಚೆಗೆ ಚೀನಾ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು, ದತ್ತು ಪಡೆಯಲು ಅವಕಾಶ ನೀಡಿದ ಹಿನ್ನೆಲೆಯಲ್ಲಿದೆ. ಇಂಗ್ಲಿಷ್ ಶಿಕ್ಷಣದ ಪ್ರಸಾರ, ಹೊರದೇಶಕ್ಕೆ ಹೋಗುವ ಬಯಕೆ, ಜಾಗತೀಕರಣ ಪ್ರಭಾವಗಳನ್ನು ಸೂಕ್ಷ್ಮವಾಗಿ ಅಳವಡಿಸಲಾಗಿದೆ. ಕಾನೂನಲ್ಲಿ ಅವಕಾಶ ಇದ್ದರೂ ಪ್ರೀತಿಯಲ್ಲಿ ಪಾಲು ಪಡೆಯುವುದು ಸುಲಭವಲ್ಲ ಎನ್ನುವುದನ್ನು ಚಿತ್ರ ಹೇಳುತ್ತದೆ.
ಇನ್ ದಿ ಲ್ಯಾಂಡ್ ಆಫ್ ಬ್ರದರ್ಸ್ | ಅಫಘಾನಿಸ್ತಾನದಿಂದ ಬರುವ ಅತಿ ಹೆಚ್ಚು ನಿರಾಶ್ರಿತರಿಗೆ ಆಶ್ರಯ ಕೊಡುವ ದೇಶ ಇರಾನ್. ಅದಕ್ಕಾಗಿ ಇರಾನನ್ನು ಅಫ್ಘಾನರು ಸಹೋದರರ ದೇಶ ಎಂದು ಕರೆಯುತ್ತಾರೆ. ಈ ಸೋದರ ನಾಡಿನಲ್ಲಿ ಆಶ್ರಯ ಬೇಡಿ ಬಂದವರ ಅವಸ್ಥೆ ಹೇಗಿದೆ ಎನ್ನುವುದನ್ನು ಮೂರು ಕತೆಗಳ ಮೂಲಕ ಚಿತ್ರದಲ್ಲಿ ನಿರೂಪಿಸಲಾಗಿದೆ.
ಹೈಸ್ಕೂಲಲ್ಲಿ ಓದುತ್ತಿರುವ ವಿದ್ಯಾರ್ಥಿಯನ್ನೂ ಅಗತ್ಯ ಸಂದರ್ಭದಲ್ಲಿ ಬಳಸಿಕೊಳ್ಳುವುದಲ್ಲದೆ ಲೈಂಗಿಕ ಶೋಷಣೆ ಮಾಡುವುದು ಮೊದಲ ಕತೆಯಲ್ಲಿದೆ. ಇನ್ನೊಂದರಲ್ಲಿ ಗಂಡ ಸತ್ತರೂ, ವಾಪಸು ಅಪ್ಘಾನಿಗೆ ಕಳಿಸುತ್ತಾರೆಂಬ ಭಯದಲ್ಲಿ ತಿಳಿಸಲಾರದೆ ಒದ್ದಾಡುವ ಹೆಣ್ಣು ಮಗಳಿದ್ದಾಳೆ. ಕೊನೆಯ ಕತೆಯಲ್ಲಿ ಯುದ್ಧದಲ್ಲಿ ಹುತಾತ್ಮರಾದ ಅಫ್ಘನ್ನರ ಪೋಷಕರಿಗೆ ಪೌರತ್ವವನ್ನು ನೀಡುವ ಉದಾರತೆಯನ್ನು ಅಣಕಿಸಲಾಗಿದೆ. ಇರಾನ್ ಸಮೇತ ಯಾವುದೇ ದೇಶದಲ್ಲಿ ನಿರಾಶ್ರಿತರು ನಾಗರಿಕ ಹಕ್ಕುಗಳಿಲ್ಲದ ಚಾಕರಿಗೆ ಬಳಸಿಕೊಳ್ಳುವ ಜನ ಎನ್ನುವುದನ್ನು ಚಿತ್ರ ಮನ ಮುಟ್ಟುವಂತೆ ಹೇಳುತ್ತದೆ. ಈ ಚಿತ್ರಕ್ಕೆ ಚಲನಚಿತ್ರೋತ್ಸವದ ಏಷ್ಯನ್ ಸ್ಪರ್ಧಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರಕಿದೆ
ಕ್ಹಾಟ್ ಬೈ ದ ಟೈಡ್ಸ್ | ಕೆಲವು ಚಿತ್ರಗಳಲ್ಲಿ ಕತೆ ಹುಡುಕಬಾರದು ಅಥವಾ ಅರ್ಥವನ್ನೂ ಅರಸಬಾರದು. ತೆರೆದ ಮನಸ್ಸಿನಿಂದ ದೃಶ್ಯ ಕಟ್ಟುಗಳನ್ನು ಆಸ್ವಾದಿಸಬೇಕು. ‘ಕ್ಹಾಟ್ ಬೈ ದ ಟೈಡ್ಸ್’ ಈ ಬಗೆಯ ಚಿತ್ರ. ಅಲ್ಲಿ ಪಾತ್ರಗಳು, ದೃಶ್ಯಗಳು ಬರುತ್ತವೆ; ಹೋಗುತ್ತವೆ. ಒಂದೇ ಒಂದು ಮಹಿಳೆಯ ಪಾತ್ರ ಮಾತ್ರ ಮೊದಲಿಂದ ಕೊನೆ ತನಕ ಕಾಣಿಸಿಕೊಳ್ಳುತ್ತದೆ. ಬೆನ್ನಟ್ಟುವ ಬೈಕ್ ಸವಾರರಿಂದ ರಕ್ಷಿಸಿಕೊಳ್ಳುವ ಈಕೆ ಮುತ್ತಿಗೆ ಹಾಕುವವರಿಂದಲೂ ಪಾರಾಗಬಲ್ಲಳು. ಈ ಚಿತ್ರ 2002ರ ಚೀನಾದಿಂದ 2022ರವರೆಗಿನ ಬದಲಾವಣೆಗಳನ್ನು ದರ್ಶಿಸುತ್ತದೆ. ಕಾಲದೊಂದಿಗೆ ಸಾಗುವ ಆಕೆ ಬದಲಾವಣೆಗೆ ತೆರೆದುಕೊಳ್ಳುವ ಬಗೆಯನ್ನು ಹೇಳುತ್ತದೆಯೇ? ಚಿತ್ರ ನೋಡಿ ಹೇಳಿ.
ಎ ಹೌಸ್ ಆನ್ ಫೈರ್ | ಬಹಳ ವರ್ಷಗಳ ನಂತರ ಕುಟುಂಬವೊಂದು ಬೀಚ್ ಪಕ್ಕದ ಸ್ವಂತ ಮನೆಯಲ್ಲಿ ಒಟ್ಟಾಗುತ್ತದೆ. ಈ ಸಂದರ್ಭವನ್ನು ಕಳೆದುಕೊಳ್ಳಲು ಇಚ್ಚಿಸದ ತಾಯಿ ಸ್ವಂತ ತಾಯಿಯ ಸಾವನ್ನೂ ಮುಚ್ಚಿಡುತ್ತಾಳೆ. ಮನೆಯವರೆಲ್ಲ ಸೇರಿದ ಬಳಿಕ ಒಬ್ಬೊಬ್ಬರ ಸಣ್ಣತನ, ದುರಾಸೆ, ಲೈಂಗಿಕತೆ, ಅಸೂಯೆ ಬಯಲಾಗುತ್ತಾ ಹೋಗುತ್ತದೆ. ತಾನು ಸಂಸಾರವನ್ನು ನಿಭಾಯಿಸಲು ಪಟ್ಟ ಶ್ರಮವನ್ನು ಗುರುತಿಸಲು ಅಪೇಕ್ಷಿಸುವ ತಾಯಿಯ ವರ್ತನೆ ಒಡಕಿಗೆ ಕಾರಣವಾಗುತ್ತದೆ. ಮನೆ ಉರಿದು ಹೋಗುವ ಸಂದರ್ಭದಲ್ಲಿ ತಾಯಿ, ತಂದೆ, ಮಗಳು, ಮಗ ಮೂಕ ಪ್ರೇಕ್ಷಕರಾಗಿ ತಬ್ಬಿ ನಿಲ್ಲುತ್ತಾರೆ. ನೂರ ಐದು ನಿಮಿಷಗಳ ಈ ಸಿನಿಮಾ ತಮಾಷೆಯ ಮಾತುಗಳಿಂದ, ಚುರುಕಾದ ದೃಶ್ಯ ಸಂಯೋಜನೆಯಿಂದ ರಂಜಿಸುತ್ತದೆ. ಸಮುದ್ರ ದಡದ ದೃಶ್ಯ, ಗ್ಲೈಡಿಂಗ್ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ.
ಚಿತ್ರೋತ್ಸವದಲ್ಲಿ ಸಿನಿಮಾ ನೋಡಿದವರಿಗೆ ಎಲ್ಲಾ ಚಿತ್ರಗಳು ಇಷ್ಟವಾಗುವುದಿಲ್ಲ. ಅದನ್ನು ಅವರವರ ಅಭಿರುಚಿಗೆ ಬಿಟ್ಟ ವಿಷಯ ಎಂದು ಹೇಳಿ ಬಿಡಬಹುದು. ಆದರೆ ನಾವು ಅಭಿರುಚಿಯನ್ನು ಬೆಳೆಸಲು ಏನು ಮಾಡಿದ್ದೇವೆ ಎಂದೂ ಕೇಳಿಕೊಳ್ಳಬೇಕಾಗಿದೆ. ಒಂದು ಕಾಲದಲ್ಲಿ ಮಲಯಾಳಂ ಸಿನಿಮಾಗಳು ಲೈಂಗಿಕತೆಗೆ ಹೆಸರು ಮಾಡಿತ್ತು. ಈಗ ಅಲ್ಲಿ ಅತ್ಯುತ್ತಮ ಸಿನಿಮಾಗಳು ತಯಾರಾಗುತ್ತಿವೆ. ಕೇರಳ ಫಿಲ್ಮ್ ಫೆಸ್ಟಿವಲ್‌ಗೆ ಜನ ಮುಗಿಬಿದ್ದು ಹೋಗುತ್ತಾರೆ. ಅದಕ್ಕೆ ಕಾರಣ ಅಲ್ಲಿಯ ಫಿಲ್ಮ್ ಸೊಸೈಟಿಗಳು ಮತ್ತು ಜಿಲ್ಲಾ ಮಟ್ಟದಲ್ಲೂ ಅಂತಾರಾಷ್ಟ್ರೀಯ ಸಿನಿಮಾ ಪ್ರದರ್ಶನಕ್ಕೆ ಸಿಗುವ ಆವಕಾಶ.
ಕರ್ನಾಟಕದಲ್ಲೂ ಚಲನಚಿತ್ರ ಅಕಾಡೆಮಿ ಫಿಲ್ಮ್ ಸೊಸೈಟಿಗಳನ್ನು ಉತ್ತೇಜಿಸುವ, ಅಂತಾರಾಷ್ಟ್ರೀಯ ಸಿನಿಮಾಗಳ ವೀಕ್ಷಣೆಗೆ ಜಿಲ್ಲಾ ಕೇಂದ್ರಗಳಲ್ಲಿ ಅವಕಾಶ ಒದಗಿಸುವ ವ್ಯವಸ್ಥೆ ಮಾಡಬೇಕು. ಈ ಮೂಲಕ ಜನರಲ್ಲಿ ಉತ್ತಮ ಸಿನಿಮಾಗಳನ್ನು ಆಸ್ವಾದಿಸುವ ಅಭಿರುಚಿಯನ್ನು ಬೆಳೆಸಲು ಸಾಧ್ಯ.