ಕುಟುಂಬಸಮೇತ ಕುಳಿತು ವೆಬ್ ಸರಣಿಗಳನ್ನು ನೋಡಬಹುದಾದ ಸಾಧ್ಯತೆಗಳೇ ಇಲ್ಲವಾಗುತ್ತಿರುವ ದಿನಗಳಲ್ಲಿ ಈ ಸರಣಿ ಬಹಳ ಸದಭಿರುಚಿಯಿಂದ ಕೂಡಿದ್ದು ಮನೆಮಂದಿಯೆಲ್ಲಾ ಮುಜುಗರವಿಲ್ಲದೆ ಒಟ್ಟಿಗೆ ಕುಳಿತು ನೋಡಬಹುದಾಗಿದೆ. ಉತ್ತಮ ಮನರಂಜನೆ ಅಪರೂಪವಾಗುತ್ತಿರುವ ಕಾಲಘಟ್ಟದಲ್ಲಿ ‘ಕುಮಾರಿ ಶ್ರೀಮತಿ’ ಒಂದು ಹೊಸ ಭರವಸೆ ಮೂಡಿಸಿದೆ. ಈ ತೆಲುಗು ಸರಣಿ ಅಮೇಜಾನ್ ಪ್ರೈಮಲ್ಲಿ stream ಆಗುತ್ತಿದೆ.
ನಿತ್ಯ ಮೆನನ್ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ. ‘ಕುಮಾರಿ ಶ್ರೀಮತಿ’ ಎಂಬ ತೆಲುಗು ವೆಬ್ ಸರಣಿಯ ಮೂಲಕ ಮತ್ತೆ ಅಭಿಮಾನಿಗಳ ಮನಗೆಲ್ಲಲು ನಿತ್ಯ ಮೆನನ್ ಬಂದಿದ್ದಾರೆ. ಇದೊಂದು ಕೌಟುಂಬಿಕ ಡ್ರಾಮಾ ಮಾದರಿಯ ಸರಣಿ. ಇದರ ನಿರ್ದೇಶಕರು ಗೊಮಟೇಶ್ ಉಪಾಧ್ಯೆ. ಶ್ರೀನಿವಾಸ್ ಅವಸರಲ ಅವರ ಚಿತ್ರಕಥೆ ಇರುವ ಈ ಸರಣಿಯಲ್ಲಿ ಜಬರ್ದಸ್ತ್ ಎನ್ನಬಹುದಾದ ತಾರಾಗಣವಿದೆ.
ರಾಮರಾಜು ಲಂಕಾ ಹಿನ್ನೆಲೆಯಲ್ಲಿ ಹೆಣೆದ ಈ ಕಥೆಯಲ್ಲಿ ನಾಯಕಿ ಶ್ರೀಮತಿ ಮತ್ತು ಆಕೆಯ ಮಾವ ಕೇಶವ್ ರಾವ್ ನಡುವೆ ನಡೆಯುವ ಒಂದು ಪಿತ್ರಾರ್ಜಿತ ಆಸ್ತಿ ವ್ಯಾಜ್ಯ ಮುಖ್ಯ ವಿಷಯ. ಬಾಲ್ಯದಲ್ಲಿ ಶ್ರೀಮತಿ, ಅವಳ ತಾತನಿಗೆ ಆ ಮನೆಯನ್ನು ಎಂದೂ ಯಾರಿಗೂ ಮಾರುವುದಿಲ್ಲ ಎಂಬ ಮಾತು ನೀಡಿರುತ್ತಾಳೆ. ಕೇಶವ್ ರಾವ್ ತನ್ನ ತಂದೆಯೇ ತನ್ನ ಹೆಸರಿಗೇ ಎಲ್ಲ ಆಸ್ತಿ ಹಸ್ತಾಂತರ ಮಾಡಿದ್ದಾರೆ ಎಂಬ ಉಯಿಲು ಪತ್ರವನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುತ್ತಾನೆ. ಮನೆಯನ್ನು ಮಾರಲು ಮುಂದಾದಾಗ ನ್ಯಾಯಾಲಯ ಪಿತ್ರಾರ್ಜಿತ ಆಸ್ತಿ ಮಾರುವ ಹಾಗಿಲ್ಲ ಎಂದು ತಡೆಯಾಜ್ಞೆ ನೀಡುತ್ತದೆ.
ಜೊತೆಗೆ ಈ ಆಸ್ತಿಯನ್ನು ಕೊಂಡುಕೊಳ್ಳಲು ಶ್ರೀಮತಿಗೆ ಒಂದು ಅವಕಾಶವನ್ನು ನೀಡಿ ಹಣ ಹೊಂದಿಸಲು ಆರು ತಿಂಗಳುಗಳ ವಾಯಿದೆ ನೀಡುತ್ತದೆ. ಆದರೆ ಶ್ರೀಮತಿ ಅಡುಗೆ ಕೆಲಸ ಮಾಡುವವಳು ಮತ್ತು ಆಕೆಯ ಬಳಿ ಅಷ್ಟು ಹಣ ಇರುವುದಿಲ್ಲ. ಆಗ ಆಕೆಯ ನೆರೆಯವ ಶ್ರೀರಾಮ್, ಶ್ರೀಮತಿಗೆ ಒಂದು ಬಿಸಿನೆಸ್ ಶುರು ಮಾಡಲು ಸಲಹೆ ನೀಡುತ್ತಾನೆ. ಶ್ರೀಮತಿ ಮುಂದೇನು ಮಾಡುತ್ತಾಳೆ? ಹಣ ಹೊಂದಿಸಿ ಮನೆಯನ್ನು ಕೊಂಡುಕೊಳ್ಳುತ್ತಾಳಾ ಇಲ್ಲವಾ ಎನ್ನುವುದು ಸರಣಿಯಲ್ಲಿ ನಿರೂಪಿತವಾಗಿದೆ. ಈ ಹಿಂದೆಯೂ ಈ ರೀತಿಯ ಪಿತ್ರಾರ್ಜಿತ ಆಸ್ತಿ ಕುರಿತಾದ ವ್ಯಾಜ್ಯಗಳ ಸುತ್ತ ಅನೇಕ ಕಥೆಗಳು ಹೇಳಲ್ಪಟ್ಟಿವೆ. ಆದರೆ ತನ್ನ ಸದಭಿರುಚಿಯ ಹಾಸ್ಯ ಮತ್ತು ನವಿರಾದ ಭಾವನಾತ್ಮಕ ನಿರೂಪಣೆಯಿಂದ ‘ಕುಮಾರಿ ಶ್ರೀಮತಿ’ ವಿಭಿನ್ನವಾಗಿ ನಿಲ್ಲುತ್ತದೆ. ಇಡೀ ಸರಣಿಯಲ್ಲಿ ಒಂದು ಲವಲವಿಕೆ ಗಮನಿಸಬಹುದು. ಅಲ್ಲಲ್ಲಿ ಹಾಸ್ಯ ತುಸು ಹಳೆಯದು ಎನ್ನಬಹುದಾದ ಶೈಲಿಯಾದರೂ ಬಹಳ ಚೆನ್ನಾಗಿ ಕಥೆಯೊಡನೆ ಹೊಂದಿಸಲಾಗಿದೆ.
ಮಹಿಳಾ ಸಬಲೀಕರಣದ ಕುರಿತಾದ ಉದ್ದುದ್ದ ಭಾಷಣಗಳು ಇಲ್ಲದೆಯೇ ಸಂದೇಶವನ್ನು ಪರಿಣಾಮಕಾರಿಯಾಗಿ ಮತ್ತು ಸಶಕ್ತವಾಗಿ ಕಥೆಯಲ್ಲಿ ಹೇಗೆ ಹೇಳಬಹುದು ಎನ್ನುವುದನ್ನು ಬಹಳ ಚೆನ್ನಾಗಿ ಇದರಲ್ಲಿ ನಿರೂಪಿಸಿದ್ದಾರೆ. ಇಲ್ಲಿ ಕಥಾನಾಯಕಿ ಬಾರ್ ಅಂಡ್ ರೆಸ್ಟೋರೆಂಟ್ ಬಿಸಿನೆಸ್ ಶುರುಮಾಡುವ ಮೂಲಕ ಅಚ್ಚರಿ ಹುಟ್ಟಿಸುತ್ತಾಳೆ. ಊರಿನವರಿಂದ ಆಕ್ಷೇಪಣೆಗಳನ್ನೂ ಆಕೆ ಎದುರಿಸಬೇಕಾಗುತ್ತದೆ. ಆದರೆ ಎಲ್ಲರ ಬಾಯಿ ಮುಚ್ಚಿಸುವ ಒಳ್ಳೆಯ ಪರಿಹಾರದೊಂದಿಗೆ ನಾಯಕಿ ಸಮಸ್ಯೆಗೆ ಅಂತ್ಯ ಹಾಡುವುದು ಬಹಳ ಸೊಗಸಾಗಿ ಮತ್ತು ವಸ್ತುನಿಷ್ಠವಾಗಿ ನಿರೂಪಿತವಾಗಿದೆ. ಒಬ್ಬ ವಿಶೇಷ ತಾರೆ ನಿರ್ವಹಿಸಿರುವ ಅತಿಥಿ ಪಾತ್ರ ಈ ಸನ್ನಿವೇಶದ ಮೆರುಗನ್ನು ಹೆಚ್ಚಿಸಿದೆ.
ಈ ಒಂದು ಹಾಸ್ಯಮಿಶ್ರಿತ ಡ್ರಾಮಾ ಸರಣಿಯಲ್ಲಿ ನಿತ್ಯ ಮೆನನ್ ಅವರ ಅಭಿನಯ ಬಹಳ ವಿಶೇಷವಾಗಿದೆ. ಪಾತ್ರದ ಆಳಕ್ಕೆ ಸಲೀಸಾಗಿ ಇಳಿದು ಲೀಲಾಜಾಲವಾಗಿ ಅಭಿನಯಿಸುವುದು ಅವರಿಗೆ ಹೊಸದೇನಲ್ಲ. ಶ್ರೀಮತಿ ಅವರಿಗೆ ಬಹಳ ಸಹಜವಾಗಿ ಒಗ್ಗಿದಂತಿದೆ. ಇನ್ನು ನಟಿ ಗೌತಮಿ ಅವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಒಬ್ಬ ತಾಯಿಯಾಗಿ ಮಗಳನ್ನು ಬೆಂಬಲಿಸುವುದಕ್ಕೆ ಏನು ಮಾಡಲೂ ಸಿದ್ಧವಾಗಿ ಸದಾ ಮಗಳ ಬೆನ್ನಿಗೆ ಕಾವಲಾಗಿ ಇರುವ ಅಮ್ಮನ ಪಾತ್ರದಲ್ಲಿ ಆಕೆಯ ಅಭಿನಯ ಅಮೋಘ. ತಲ್ಲುರಿ ರಾಮೇಶ್ವರಿ, ಪ್ರನೀತಾ ಪಟ್ನಯಕ್ ಮತ್ತು ಪ್ರೇಮ್ ಸಾಗರ್ ಅವರ ಅಭಿನಯ ಕಥೆಯ ಕುತೂಹಲವನ್ನು ಇಮ್ಮಡಿಸುತ್ತದೆ. ಹಿನ್ನೆಲೆ ಸಂಗೀತ ಮತ್ತು ದೃಶ್ಯ ಸಂಯೋಜನೆ ಕಥೆಗೆ ಪೂರಕವಾಗಿ ಮೂಡಿಬಂದಿದೆ. ಎಲ್ಲಿಯೂ ಸಭ್ಯತೆಯ ಎಲ್ಲೆಯನ್ನು ಮೀರದ ಸರಣಿ ಇದು ಎನ್ನುವುದು ಮತ್ತೊಂದು ಖುಷಿಯ ವಿಚಾರ.
ಆದರೂ ಪ್ರೀತಿ ಪ್ರೇಮದ ದೃಶ್ಯಗಳು ಇನ್ನಷ್ಟು ಆಳವಾಗಿ ಇರಬಹುದಿತ್ತು. ನ್ಯಾಯಾಲಯದ ಸನ್ನಿವೇಶಗಳ ಓಘಕ್ಕೆ ಈ ಪ್ರೇಮದ ದೃಶ್ಯಗಳು ಧಕ್ಕೆ ನೀಡಿವೆ ಎನಿಸಿದ್ದು ಹೌದು. ಒಂದೆರಡು ಸಂಚಿಕೆಗಳ ನಂತರ ಕಥೆಯಲ್ಲಿ ವೇಗ ಕಡಿಮೆಯಾದಂತೆ ಎನಿಸಿದರೂ ನಾಯಕಿ ತನ್ನ ಬಿಸಿನೆಸ್ ಆರಂಭಿಸಿದ ಬಳಿಕ ಕಥೆ ತನ್ನ ಎಂದಿನ ವೇಗ ಮತ್ತೆ ಪಡೆದುಕೊಂಡಿದೆ. ಕಥೆ ಅಲ್ಲಲ್ಲಿ ತುಸು ಎಳೆದಂತೆಯೂ ಸರಣಿಯ ಅಂತ್ಯ ತುಸು ಆತುರದಲ್ಲಿ ನಿರೂಪಿಸಲ್ಪಟ್ಟಂತೆಯೂ ಎನಿಸುತ್ತದೆ. ಅಂತ್ಯ ಇನ್ನೊಂದು ಚೂರು ಮೊನಚಾಗಿ ಇದ್ದಿದ್ದರೆ ಸರಣಿ ಪರಿಪೂರ್ಣ ಎನಿಸಬಹುದಾಗಿತ್ತು.
ಹಾಡುಗಳು ಮತ್ತು ಹಿನ್ನೆಲೆ ಸಂಗೀತಕ್ಕೆ ವಿಶೇಷ ಮೆಚ್ಚುಗೆ ಸಲ್ಲಲೇಬೇಕು ಅದರಲ್ಲೂ ಬಾರಿನಲ್ಲಿ ಸಂಯೋಜಿಸಲಾದ ಒಂದು ಹಾಡು ಕಥೆಗೆ ಬಹಳ ಮೆರುಗನ್ನು ನೀಡಿದೆ. ಇನ್ನು ಛಾಯಾಗ್ರಹಣ, ಸಂಕಲನ, ನಿರ್ಮಾಣ ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಚಿತ್ರಕಥೆ ಮತ್ತು ಸಂಭಾಷಣೆ ಕೂಡ ಬಹುತೇಕ ಹರಿತವಾಗಿದ್ದು ಸರಣಿಯನ್ನು ಆಸಕ್ತಿಕರವಾಗಿ ಕೊಂಡೊಯ್ಯುತ್ತದೆ. ಹಾಸ್ಯದ ಬಳಕೆ ಬಹಳ ಸಂದರ್ಭೋಚಿತವಾಗಿದೆ. ನಿರ್ದೇಶಕರು ಕೂಡ ನಟರಿಂದ ಅಚ್ಚುಕಟ್ಟಾಗಿ ಕೆಲಸ ತೆಗೆದಿದ್ದರೂ ದೃಶ್ಯಗಳು ಕೆಲವೆಡೆ ಇನ್ನೂ ಹರಿತವಾಗಿ ಇರಬಹುದಿತ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ಇದೊಂದು ಉತ್ತಮ ಸರಣಿ. ಕುಟುಂಬಸಮೇತ ಕುಳಿತು ವೆಬ್ ಸರಣಿಗಳನ್ನು ನೋಡಬಹುದಾದ ಸಾಧ್ಯತೆಗಳೇ ಇಲ್ಲವಾಗುತ್ತಿರುವ ದಿನಗಳಲ್ಲಿ ಈ ಸರಣಿ ಬಹಳ ಸದಭಿರುಚಿಯಿಂದ ಕೂಡಿದ್ದು ಮನೆಮಂದಿಯೆಲ್ಲಾ ಮುಜುಗರವಿಲ್ಲದೆ ಒಟ್ಟಿಗೆ ಕುಳಿತು ನೋಡಬಹುದಾಗಿದೆ. ಹಾಸ್ಯ, ಭಾವನಾತ್ಮಕ ಸನ್ನಿವೇಶಗಳ ಜೊತೆಗೆ ಒಂದು ಉತ್ತಮ ಸಂದೇಶ ಕೊಡುವ ಮಹಿಳಾ ಕೇಂದ್ರಿತ ಕಥೆ ಇದಾಗಿದೆ. ಉತ್ತಮ ಮನರಂಜನೆ ಅಪರೂಪವಾಗುತ್ತಿರುವ ಕಾಲಘಟ್ಟದಲ್ಲಿ ‘ಕುಮಾರಿ ಶ್ರೀಮತಿ’ ಒಂದು ಹೊಸ ಭರವಸೆ ಮೂಡಿಸಿದೆ. ಸರಣಿ ಅಮೇಜಾನ್ ಪ್ರೈಮಲ್ಲಿ stream ಆಗುತ್ತಿದೆ.