ವಲಸಿಗರ ಪರವಾದ ಕಣ್ಣೋಟದಲ್ಲಿ ನೋಡುಗರನ್ನು ಹೇಗೆ ಕಸುವಿಂದ ಪ್ರಭಾವಿಸುವ ಚಲನಚಿತ್ರ ಕಟ್ಟಬಹುದು ಎನ್ನುವುದಕ್ಕೆ Quite Life ಉತ್ತಮ ಉದಾಹರಣೆ. ಸ್ವೀಡನ್‌ಗೆ ಆಶ್ರಯ ಕೋರಿ ಬರುವ ವಲಸಿಗರ ವಾಸ್ತವಿಕ ವಿದ್ಯಮಾನಗಳನ್ನು ಆಧಾರವಾಗಿಟ್ಟುಕೊಂಡು ಕಟ್ಟಿರುವ ಕಥನ ಚಿತ್ರವಿದು.
Quite Life | ಇದು ರಷ್ಯಾ – ಸ್ವೀಡನ್ ಸಿನಿಮಾ. ಬೇರೆ ದೇಶಗಳಲ್ಲಿನ ಆಂತರಿಕ ಹಿಂಸೆಗಳಿಂದ ಬಚಾವಾಗಲು ಸ್ವಿಡನ್‌ಗೆ ಕಳೆದ ಎಂಟತ್ತು ವರ್ಷಗಳಲ್ಲಿ ಸಾವಿರಾರು ಕುಟುಂಬಗಳು ಆಶ್ರಯ ಕೋರಿ ಬರುತ್ತಿದ್ದಾರೆ ಎಂಬ ವಾಸ್ತವಿಕ ವಿದ್ಯಮಾನಗಳನ್ನು ಆಧಾರವಾಗಿಟ್ಟುಕೊಂಡು ಕಟ್ಟಿರುವ ಕಥನ ಚಿತ್ರವಿದು. ರಷ್ಯಾದಿಂದ ಬಂದಿರುವ ಅಂತಹ ಒಂದು ಕುಟುಂಬವು, ಆಶ್ರಯ ನೀಡುವ ಸ್ವಿಡನ್ನಿನ ಪ್ರಭುತ್ವವು ನಡೆಸಿಕೊಳ್ಳುವ ಬಗೆಯನ್ನು ಈ ಸಿನಿಮಾ ಹಿಡಿದಿಡುತ್ತದೆ. ಒಳ್ಳೆಯ ಚಿತ್ರಕತೆ, ಸಿನಿಮಾಟೋಗ್ರಫಿ ಹಾಗು ದೃಷ್ಯ ಸಂಕಲನವಿರುವ ಈ ಸಿನಿಮಾವು ನೋಡುಗರನ್ನು ಚಿತ್ರದ ವಿದ್ಯಮಾನ ಹಾಗು ಪಾತ್ರಗಳ ಭಾವ ತಾಕಲಾಟಗಳ ಜೊತೆ ಸುಲಲಿತವಾಗಿ ಹೆಣೆದು, ಪ್ರೇಕ್ಷಕರಲ್ಲಿ ಮೂಡಿಸಬೇಕಾದ ತಳಮಳಗಳನ್ನು ಮೂಡುವ ಹಾಗೆ ಕಟ್ಟಿದ್ದಾರೆ. ವಲಸಿಗರ ಪರವಾದ ಕಣ್ಣೋಟದಲ್ಲಿ ನೋಡುಗರನ್ನು ಹೇಗೆ ಕಸುವಿಂದ ಪ್ರಭಾವಿಸುವ ಚಲನಚಿತ್ರ ಕಟ್ಟಬಹುದು ಎನ್ನುವುದಕ್ಕೆ Quite Life ಉತ್ತಮ ಉದಾಹರಣೆ.
I the Song | ಇದು ಭೂತಾನ್ ಸಿನಿಮಾ. ಒಟ್ಟಂದದಲ್ಲಿ ಭಾರತದ ಸಿನಿಮಾ ಕಟ್ಟುವಿಕೆಯನ್ನೇ ಅನುಸರಿಸುವ ಈ ಸಿನಿಮಾ ಕುತೂಹಲಕರ ವಸ್ತುವನ್ನು ಹೊಂದಿದೆ. ಭೂತಾನಿನ ಸಮಾಜವನ್ನು ಬಾಧಿಸುವ ಅನೇಕ ಸಮಸ್ಯೆಗಳ ಎಳೆ ಹಿಡಿದು ಕಥಾರಚನೆ ಮಾಡಿರುವ ಸಿನಿಮಾ, ಅರ್ಧದವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ನಂತರ ಒಂದು ಕಡೆ ಜನಪ್ರಿಯ ಸಿನಿಮಾಗಳ ಸೂತ್ರ, ಮತ್ತೊಂದು ಕಡೆ ಕಲಾತ್ಮಕ ಸಿನಿಮಾಗಳ ತತ್ವ ವಿಚಾರ ಪರಾಮರ್ಶೆಗಳೆರಡನ್ನೂ ನಿಭಾಯಿಸುವ ಗೋಜಲಿನಲ್ಲಿ ಕುಸಿದುಬಿಡುತ್ತದೆ. ಐರೊಪ್ಯ ದೇಶಗಳ ನಿರ್ಮಾಣ ಸಂಸ್ಥೆಗಳ ಬಂಡವಾಳ ಹೂಡಿಕೆ, ಪೋಸ್ಟ್ ಪ್ರೊಡಕ್ಷನ್‌ನ ಅತ್ತ್ಯುತ್ತಮ ತಾಂತ್ರಿಕ ನೆರವುಗಳು ಇದ್ದೂ, ಕಥನವನ್ನು ಸೃಜನಾತ್ಮಕವಾಗಿ ನಿಭಾಯಿಸದಿದ್ದರೆ, ಉತ್ತಮ ಸಿನಿಮಾ ಸಾಧಾರಣ ಸಿನಿಮಾವಾಗಿ ಬಿಡುತ್ತದೆ ಎನ್ನುವುದಕ್ಕೆ ಈ ಸಿನಿಮಾ ಉದಾಹರಣೆ.