ಕನ್ನಡ ಸಿನಿಮಾ | ನಿನ್ನ ಸನಿಹಕೆ

ಊರಿನ ಗೌಡ ನಾಯಕನ ತಾಯಿಯ ಮೇಲೆ ಕೈ ಮಾಡಿದಾಗ, ‘ತಪ್ ಮಾಡ್ಬಿಟ್ರಿ ಗೌಡ್ರೇ’ ಅಂತ ಮಾಸ್ ಸ್ಟೈಲಲ್ಲಿ ಕೂಗುತ್ತಾಳೆ ತಾಯಿ. ಆಗ ನಾಯಕ ಸೂರಜ್ ಗೌಡ ಅವರ ರಫ್ ಅಪಿಯರೆನ್ಸ್ ರಿವೀಲ್ ಆಗುತ್ತೆ. ಹಾಗಂತ ಇದು ಮಾಸ್ ಸಿನಿಮಾ ಅಲ್ಲ, ಹಾಗೆನೇ ಮದರ್ ಸೆಂಟಿಮೆಂಟ್ ಸಿನಿಮಾನೂ ಅಲ್ಲ. ಹೀಗೆ ಪ್ರೇಕ್ಷಕರ ನಿರೀಕ್ಷೆ ಸುಳ್ಳು ಮಾಡುವುದು ನಿರ್ದೇಶಕರ ಗೆಲುವು ಎಂದಾದರೆ ‘ನಿನ್ನ ಸನಿಹಕೆ’ ಚಿತ್ರ ಸಹನೀಯವಾಗಿದೆ ಎನ್ನಬಹುದು. ಯಾಕಂದರೆ ನಿರ್ದೇಶಕರೂ ಆಗಿರುವ ಸೂರಜ್ ಗೌಡ ಚಿತ್ರದಲ್ಲಿ ಹಲವಾರು ಬಾರಿ ಪ್ರೇಕ್ಷಕರ ನಿರೀಕ್ಷೆಯನ್ನು ಸುಳ್ಳು ಮಾಡುತ್ತಾರೆ. ಅದರಲ್ಲೂ ಚಿತ್ರದ ಮೊದಲಾರ್ಧದಲ್ಲಿ ನಾಯಕ ನಾಯಕಿಯ ನಡುವೆ, ಈಗ ಬ್ರೇಕ್ ಅಪ್ ಆಗುತ್ತೆ, ಆಗ ಬ್ರೇಕಪ್ ಆಗುತ್ತೆ ಅಂತ,‘ಬ್ರೇಕ್’ ಗಾಗಿ ಕಾಯುವ ಪ್ರೇಕ್ಷಕನ ನಿರೀಕ್ಷೆ ಸಾಕಷ್ಟು ಬಾರಿ ಸುಳ್ಳಾಗುತ್ತದೆ.

ಇತ್ತೀಚೆಗೆ ಸೇಫ್ ಎಂದು ನಂಬಲಾಗುತ್ತಿರುವ ಕೊಂಚ ಆಧುನಿಕ ಕಾಲದ ನಾಯಕ, ನಾಯಕಿಯರ ಕಥೆ ಇದು. ಮದುವೆಗೆ ಮುನ್ನ ಒಂದೇ ಮನೆಯಲ್ಲಿ ವಾಸಿಸುವ ನಾಯಕ, ನಾಯಕಿ. ನಾಯಕನಿಗೆ ಅಮ್ಮನ ಸೆಂಟಿಮೆಂಟು. ಅಪ್ಪನ್ನ ಕಂಡ್ರೆ ಸಿಟ್ಟು, ಸೆಂಟ್ ಪರ್ಸೆಂಟು. ನಾಯಕಿಯದ್ದು ಅಕ್ಕನ ಸೆಂಟಿಮೆಂಟು. ಆ ಕಾರಣಕ್ಕೆ ಮುರಿದು ಬೀಳುವ ನಾಯಕನ ಜೊತೆಗಿನ ಕಮಿಟ್ಮೆಂಟು. ಅದರಿಂದ ಇವಳ ಮನಸ್ಸಿಗೆ ಆಗುವ ಗಾಯಕ್ಕೆ ಕೊನೆಗೆ ಅಕ್ಕನೇ ಆಯಿಂಟ್ಮೆಂಟು. ಇದು ಚಿತ್ರದ ಕಥೆ. ನಿರೂಪಣೆಯ ವಿಷಯದಲ್ಲಿ ಹೃದಯಕ್ಕೆ ಸನಿಹ. ಸಹನೀಯ, ಕೊಂಚ ಸಿನಿಮೀಯ ಎಂದು ಸರಳವಾಗಿ ನಿನ್ನ ಸನಿಹಕೆ ಚಿತ್ರದ ಬಗ್ಗೆ ಹೇಳಬಹುದು.

ಮೊದಲರ್ಧದಲ್ಲಿ ನಿಧಾನವಾಗಿ ತೆರೆದುಕೊಳ್ಳುವ ಕಥೆಯಲ್ಲಿ, ಪ್ರೇಕ್ಷಕನಿಗೂ ಅಲ್ಲಲ್ಲಿ ಬಾಯಿ ತೆರೆದು ಆಕಳಿಸುವ ಅವಕಾಶಗಳಿವೆ. ಒಂದೇ ಮನೆಯಲ್ಲಿರುವ ನಾಯಕ ನಾಯಕಿ ‘ಟಾಮ್ ಅಂಡ್ ಜೆರ್ರಿ’ ಥರ ಕಿತ್ತಾಡುವುದರಿಂದ, ಅವರ ಪ್ರೇಮಕಥೆ ಮನಸ್ಸನ್ನು ಆವರಿಸದೆ, ಯಾರೋ ‘ಟಾಮ್, ಡಿಕ್ ಅಂಡ್ ಹ್ಯಾರಿ’ ಕಥೆ ಎಂಬಂತೆ ಪ್ರೇಕ್ಷಕನ ಮನಸ್ಸಿನಿಂದ ದೂರವೇ ಉಳಿಯುತ್ತದೆ. ಆದರೆ ಇಂಟರ್ ವಲ್ ನಂತರ ಸಿನಿಮಾಕ್ಕೆ ಒಂದಿಷ್ಟು ಫ್ರೆಷ್ ನೆಸ್ ದೊರೆತಿದೆ. ಹಾಗಂತ, ಅದನ್ನು ಸಂಪೂರ್ಣ ಫ್ರೆಷ್ ನೆಸ್ ಎನ್ನೋಕೆ ಕೊನೆಯ ಭಾಗದಲ್ಲಿ ‘ಗೆಸ್ಟ್ ಅಪಿಯರೆನ್ಸ್’ ಮಾಡಿರುವ ‘ಆಶಿಕಿ 2’ಮತ್ತು ‘ಅರ್ಜುನ್ ರೆಡ್ಡಿ’ಚಿತ್ರಗಳ ನಾಯಕ ಪಾತ್ರಗಳು ‘ಅಡ್ಡಿ’ ಮಾಡುತ್ತವೆ.

ಆರಂಭದಲ್ಲಿ ಚಿತ್ರದ ಟೈಟಲ್ ಕಾರ್ಡ್ ನಲ್ಲಿ ಕಲಾವಿದರ ಹೆಸರುಗಳು ಒಂದೆರಡು ಕಾರ್ಡ್ ಗಳಲ್ಲೇ ಮುಗಿದು ಹೋದಾಗಲೇ ಈ ಚಿತ್ರ ಹೆಚ್ಚು ಕಮ್ಮಿ ಒಂದೆರಡು ಪಾತ್ರಗಳ ಸುತ್ತಲೇ ಸುತ್ತುತ್ತದೆ ಎಂಬುದು ಮನದಟ್ಟಾಗುತ್ತದೆ. ಮತ್ತದು ನಿಜ ಕೂಡ. ನಾಯಕನ ಆಫೀಸು, ನಾಯಕ-ನಾಯಕಿ ಇರೋ ಮನೆ, ಒಂದೆರಡು ಬಾರುಗಳು, ಇಷ್ಟು ಬಿಟ್ಟರೆ ಔಟ್ ಡೋರ್ ಲೊಕೇಶನ್ ಗಳು ಕಡಿಮೆ. ಆ ಲೆಕ್ಕದಲ್ಲಿ ಇದು ಹಾಡುಗಳನ್ನು ಬಿಟ್ಟರೆ,‘ಔಟ್ ಅಂಡ್ ಔಟ್’‘ಇನ್ ಡೋರ್’ ಸಿನಿಮಾ.  ಆದರೆ, ಇದು ‘ಮನೆಮಂದಿ ಎಲ್ಲಾ ಒಟ್ಟಾಗಿ ಕೂತು ನೋಡುವ ಸಿನಿಮಾ’ ಎಂದು ಹೇಳಿದರೆ, ಅದಕ್ಕೆ, ಸಿನಿಮಾದ ಹೆಚ್ಚಿನ ಭಾಗ ಮನೆಯಲ್ಲೇ ನಡೆಯುತ್ತದೆ ಅನ್ನೋದು ಕಾರಣವಲ್ಲ. ಇತ್ತೀಚಿನ ‘ಲವ್ ಮಾಕ್ಟೇಲ್’ ರೀತಿಯ ಲೈಟ್ ನಿರೂಪಣೆ ಇಲ್ಲಿದೆ. ಮತ್ತಿದು ಹೃದಯಗಳ ವಿಷಯ ಇರೋ ಕಥೆ ಆದ್ದರಿಂದ, ಇದೊಂದು ‘ಲೈಟ್ ಹಾರ್ಟೆಡ್’ ಸಿನಿಮಾ ಆಗಿದೆ ಎಂದರೆ ತಪ್ಪಿಲ್ಲ. ಆದರೆ, ಚಿತ್ರದಲ್ಲಿ ಒಂದಷ್ಟು ಲೋಪಗಳಿವೆ. ನಾಯಕಿಯ ಮನೆಯಲ್ಲಿರುವ ಪುಟ್ಟ ನಾಯಿಮರಿ, ಒಂದೇ ದೃಶ್ಯದಲ್ಲಿ ಬೆಳೆದು, ಹೆಚ್ಚು ಕಮ್ಮಿ ಮದುವೆ ವಯಸ್ಸಿಗೆ ಬಂದು ಬಿಡುತ್ತದೆ. ನಾಯಕಿಯ ಅಮ್ಮ ಟೇಬಲ್ ಮೇಲೆ ಇಟ್ಟ 2 ಬಂಡಲ್ ನೋಟು, ವಿಲನ್ ಅದನ್ನು ತೆಗೆದುಕೊಳ್ಳುವಷ್ಟರಲ್ಲಿ ನಾಲ್ಕು ಬಂಡಲ್ ಆಗಿರುತ್ತದೆ. ಆದರೆ ತೀರಾ ಆ ಕಾರಣಕ್ಕೆ ಇದನ್ನು ‘ಬಂಡಲ್’ ಸಿನಿಮಾ ಅನ್ನೋದು ತಪ್ಪು.

ಇನ್ನು, ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರದ ನಂತರ ನಾಯಕ ಸೂರಜ್ ಗೌಡ ಸಾಕಷ್ಟು ಸುಧಾರಿಸಿದ್ದಾರೆ. ಅವರ ಅಭಿನಯ ಮತ್ತು ಮ್ಯಾನರಿಸಂಗಳಲ್ಲಿ  ಸಾಫ್ಟ್ ಆಗಿದ್ದಾಗ ದಿಗಂತ್ ಮತ್ತು ಮಾಸ್ ಆದಾಗ ಶ್ರೀಮುರಳಿ ಕಾಣಿಸುತ್ತಾರೆ. ನಾಯಕಿ ಧನ್ಯಾ ರಾಮ್ ಕುಮಾರ್, ಬರೀ ಖಾಯಿಲೆ ಅಷ್ಟೇ ಅಲ್ಲ, ಕಲೆ ಕೂಡ ರಕ್ತದಲ್ಲಿ ಬರುತ್ತದೆ ಎನ್ನುವುದಕ್ಕೆ ಉದಾಹರಣೆಯಂತೆ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸುತ್ತಾರೆ. ಉಳಿದಂತೆ ಕರಿಸುಬ್ಬು, ಅರುಣಾ ಬಾಲರಾಜ್ ಗಮನ ಸೆಳೆಯುತ್ತಾರೆ. ರಜಿನಿಕಾಂತ್ ಅವರ ಪ್ರತಿಭೆಗೆ ಕೊನೆಗೂ ತಕ್ಕ ಪಾತ್ರ ಸಿಕ್ಕಿದೆ. ಮತ್ತವರು ಅದನ್ನು ಚೆನ್ನಾಗಿ ಬಳಸಿಕೊಳ್ಳುವ ಮೂಲಕ ಪ್ರೇಕ್ಷಕನಿಗೆ ಇನ್ನಷ್ಟು ಸನಿಹ ಆಗಿದ್ದಾರೆ.

ಪ್ರವೀಣ ಕುಮಾರ್ ಮತ್ತು ಸುಮನ್ ಜಾದೂಗರ್ ಸಂಭಾಷಣೆ ಚಿತ್ರದ ಏಕತಾನತೆಯನ್ನು ಮರೆಸುತ್ತದೆ. ಹಾಡುಗಳನ್ನು ಬಿಟ್ಟರೆ ಅಭಿಲಾಷ್ ಛಾಯಾಗ್ರಹಣಕ್ಕೆ ಅಷ್ಟು ಸ್ಕೋಪ್ ಇಲ್ಲ. ರಘು ದೀಕ್ಷಿತ್ ಸಂಗೀತದ ಹಾಡುಗಳು ಕೇಳೋಕೆ ಖುಷಿ ಕೊಟ್ಟರೂ ಸಿನಿಮಾದ ಓಟದಲ್ಲಿ ಮ್ಯೂಸಿಕ್ ಓವರ್ ಲೋಡೆಡ್ ಅನ್ನಿಸುತ್ತವೆ. ಒಟ್ಟಾರೆ, ಒಂದಷ್ಟು ಲೋಪದೋಷಗಳ ನಡುವೆಯೂ, ನಿಮ್ಮ ಸನಿಹದ ಚಿತ್ರಮಂದಿರದಲ್ಲಿ ನೋಡಬಹುದಾದ ಚಿತ್ರ ‘ನಿನ್ನ ಸನಿಹಕೆ’.

ನಿರ್ದೇಶನ : ಸೂರಜ್ ಗೌಡ, ನಿರ್ಮಾಣ : ಅಕ್ಷಯ್ ರಾಜಶೇಖರ್‌, ರಂಗನಾಥ್ ಕೂಡ್ಲಿ, ಸಂಗೀತ : ರಘು ದೀಕ್ಷಿತ್‌, ಸಂಭಾಷಣೆ: ಪ್ರವೀಣ್ ಕುಮಾರ್ ಮತ್ತು ಸುಮನ್ ಜಾದೂಗಾರ್‌. ತಾರಾಗಣ : ಸೂರಜ್ ಗೌಡ, ಧನ್ಯಾ ರಾಮ್‌ಕುಮಾರ್‌ ಮತ್ತಿತರರು.

LEAVE A REPLY

Connect with

Please enter your comment!
Please enter your name here