ಐದು ಮಕ್ಕಳಿರುವ ಸುಖೀ ಸಂಸಾರದಲ್ಲಿ ಗಂಡ ಬಂಧನಕ್ಕೊಳಗಾದಾಗ ತೀವ್ರ ಏರು ಪೇರುಗಳಾಗುತ್ತವೆ. ಸ್ವಿಸ್ ರಾಜತಾಂತ್ರಿಕನನ್ನು ಒತ್ತೆಯಾಗಿಟ್ಟ ಆತಂಕವಾದಿಗಳ ಮಾಹಿತಿ ಪಡೆಯುವ ಉದ್ದೇಶದಿಂದ ಈ ಬಂಧನವಾದರೂ ಆತನಿಗೆ ಏನಾಗಿದೆ ಎನ್ನುವ ಸುಳಿವೇ ಸಿಗುವುದಿಲ್ಲ. ಈ ಬಾರಿಯ ಬೆಂಗಳೂರು ಚಲನಚಿತ್ರೋತ್ಸವದ ಮುಖ್ಯ ಸಿನಿಮಾಗಳಲ್ಲಿ ‘I Am Still Here’ ಕೂಡ ಒಂದು.
1971 ರ ಸರ್ವಾಧಿಕಾರದ ಬ್ರೆಜಿಲ್‌ನಲ್ಲಿ ಕುಟುಂಬವೊಂದು ಹಿಂಸೆಗೊಳಗಾಗುವ – ಜೀವನ ಚರಿತ್ರೆ ಆಧಾರಿತ ಚಿತ್ರ. ಐದು ಮಕ್ಕಳಿರುವ ಸುಖೀ ಸಂಸಾರದಲ್ಲಿ ಗಂಡ ಬಂಧನಕ್ಕೊಳಗಾದಾಗ ತೀವ್ರ ಏರು ಪೇರುಗಳಾಗುತ್ತವೆ. ಸ್ವಿಸ್ ರಾಜತಾಂತ್ರಿಕನನ್ನು ಒತ್ತೆಯಾಗಿಟ್ಟ ಆತಂಕವಾದಿಗಳ ಮಾಹಿತಿ ಪಡೆಯುವ ಉದ್ದೇಶದಿಂದ ಈ ಬಂಧನವಾದರೂ ಆತನಿಗೆ ಏನಾಗಿದೆ ಎನ್ನುವ ಸುಳಿವೇ ಸಿಗುವುದಿಲ್ಲ. ಕುಟುಂಬ ಅನಿವಾರ್ಯವಾಗಿ ವಾಸ್ತವ್ಯ ಬದಲಿಸಬೇಕಾಗುತ್ತದೆ. ಆತ ಸತ್ತ ವಿಷಯ ತಿಳಿಯಲು 25 ವರ್ಷ ತಗಲುತ್ತದೆ. ಐದು ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಹೆಂಡತಿಯ ಮೇಲೇ ಬೀಳುತ್ತದೆ. ಈ ಚಿತ್ರ ಸರ್ವಾಧಿಕಾರದ ದಮನಕಾರಿ ಪ್ರವೃತ್ತಿ ಅನಾವರಣಗೊಳಿಸುವುದಲ್ಲದೆ, ಸಂಕಷ್ಟವನ್ನು ಏಕಾಂಗಿಯಾಗಿ ಎದುರಿಸುವ ಮಹಿಳೆಯ ಎದೆಗಾರಿಕೆಯನ್ನೂ ಹೇಳುತ್ತದೆ. ಈ ಬಾರಿಯ ಬೆಂಗಳೂರು ಚಲನಚಿತ್ರೋತ್ಸವದ ಮುಖ್ಯ ಸಿನಿಮಾಗಳಲ್ಲಿ ಇದೂ ಒಂದು.
ಮಿ, ಮಯರಮ್, ದಿ ಚಿಲ್ಡ್ರನ್ ಆಂಡ್ 26 ಅದರ್ಸ್ | ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆ ತನ್ನ ಮನೆಯನ್ನು ಕೆಲ ದಿನಗಳ ಮಟ್ಟಿಗೆ ಶೂಟಿಂಗ್‌ಗೆ ಬಿಟ್ಟು ಕೊಡುತ್ತಾಳೆ. ಶಿಲ್ಪಿಯೂ ಆದ ಅವಳ ಮನೆಯಲ್ಲಿ ಪುಸ್ತಕಗಳು, ಅಮೂಲ್ಯ ವಸ್ತುಗಳೂ ಇರುತ್ತವೆ. ಚಿತ್ರೀಕರಣ ನಡೆಯುವಾಗ ಏನೆಲ್ಲಾ ತೊಂದರೆಗಳಾಗುತ್ತವೋ ಎನ್ನುವ ಆತಂಕ ಆಕೆಗೆ.ಕ್ರಮೇಣ ತಂಡದೊಂದಿಗೆ ಹೊಕ್ಕು ಬಳಕೆ ಹೆಚ್ಚಿದಂತೆ ಕರಾರಿಗಿಂತ ಹೆಚ್ಚು ಅವಕಾಶ ನೀಡುತ್ತಾಳೆ. ತಾನು ಪೂರ್ಣಗೊಳಿಸದೆ ಬಿಟ್ಟ ಶಿಲ್ಪದ ಕೆಲಸ ಮುಂದುವರಿಸುತ್ತಾಳೆ. ಚಿತ್ರ ಕಲಾವಿದ ತಂದೆ ತುಟಿ ರಚಿಸದೇ ಬಿಟ್ಟಿದ್ದ ಚಿತ್ರಕ್ಕೆ ಕಲ್ಪನೆಯ ಬಾಯಿ ಮೂಡುವಂತಾಗುತ್ತದೆ.
ಬೆರೆತು ಬಾಳುವ ಸುಖವನ್ನು ಹೇಳುವ ಚಿತ್ರದಲ್ಲಿ ನಗು ಬರಿಸುವ ಸಂಭಾಷಣೆಗಳಿವೆ. ಅಂತಹ ಒಂದು ತುಣುಕು ಇಲ್ಲಿದೆ: ಚಿತ್ರದಲ್ಲಿ ಸಹಾಯಕ ನಿರ್ಮಾಪಕ ಒಂದು ಪ್ರಸಂಗ ಹೇಳುತ್ತಾನೆ. ಒಬ್ಬ ಒಂದೇ ಸಲ ಎರಡು ಸಿಗರೇಟು ಸೇದುತ್ತಿರುತ್ತಾನೆ. ಅದನ್ನು ಕಂಡವನೊಬ್ಬ ‘ಒಮ್ಮೆಗೇ ಎರಡು ಸಿಗರೇಟು ಯಾಕೆ ಸೇದುತ್ತೀರಿ?’ ಎಂದು ಕೇಳುತ್ತಾನೆ. ಅದಕ್ಕೆ ಸಿಗರೇಟು ಸೇದುವವನು ‘ ಒಂದು ಸಿಗರೇಟು ನನಗೆ. ಇನ್ನೊಂದು ಜೈಲಲ್ಲಿರುವ ನನ್ನ ಸ್ನೇಹಿತನಿಗೆ’ ಎಂದು ಉತ್ತರಿಸುತ್ತಾನೆ. ಕೆಲವು ದಿನಗಳ ಬಳಿಕ ಮತ್ತೆ ಅವನನ್ನು ಭೇಟಿಯಾದಾಗ ಒಂದೇ ಸಿಗರೇಟು ಹಚ್ಚಿರುತ್ತಾನೆ. ಅದನ್ನು ಕಂಡು ‘ಏನು ನಿಮ್ಮ ಸ್ನೇಹಿತರು ಜೈಲಿನಿಂದ ಬಿಡುಗಡೆ ಹೊಂದಿದರೇ?’ಎಂದು ಕೇಳುತ್ತಾನೆ. ಅದಕ್ಕೆ ಸಿಗರೇಟು ಸೇದುತ್ತಿರುವವನು ಹೇಳುತ್ತಾನೆ’ ಇಲ್ಲ. ಅವನು ಜೈಲಲ್ಲೇ ಇದ್ದಾನೆ. ನಾನು ಒಂದು ವಾರದಿಂದ ಬಿಟ್ಟಿದ್ದೇನೆ!’
ಫೆಮಿನಾಚಿ ಫಾತಿಮಾ | ಈ ಮಲೆಯಾಳಿಗಳು ಯಾವ ವಿಷಯ ಸಿಕ್ಕಿದರೂ ಸಿನಿಮಾ ಮಾಡಿಬಿಡುತ್ತಾರೆ. ಈ ಸಲ ಅವರು ಬೆಡ್ ಮೇಲೆ ಬಿದ್ದಿದ್ದಾರೆ. ಮಗ ಉಚ್ಚೆ ಹೊಯ್ದ, ನಾಯಿ ಮೂಸಿದ ಬೆಡ್ ಫಾತಿಮಾಳನ್ನು ಸುಸ್ತು ಮಾಡುತ್ತದೆ. ಅವಳಿಗೋ ಬೆನ್ನು ನೋವು. ಚಾಪೆಯ ಮೇಲೆ ಮಲಗುವುದು ಕಷ್ಟ. ಪಳ್ಳಿ(ಮಸೀದಿ)ಯಲ್ಲಿ ಉಸ್ತಾದ್ ಆಗಿರುವ ಗಂಡ ಬಹಳ ಕಟ್ಟು ನಿಟ್ಟು. ಫ್ಯಾನ್ ಹಾಕಲು, ಕಾಲಿಗೆ ಚಪ್ಪಲಿ ಹಾಕಲು, ಟವೆಲ್ ಕೊಡಲು ಹೆಂಡತಿಯೇ ಬೇಕು. ಅವಳು ಏನೇನೋ ಮಾಡಿ ತಂದ ಬೆಡ್ಡನ್ನು ಮನೆಯೊಳಗೆ ತರಲು ಅವನ ಧಾರ್ಮಿಕ ನಂಬಿಕೆಗಳು ಬಿಡುತ್ತಿಲ್ಲ. ಗಲಾಟೆ, ಬೊಬ್ಬೆಗಳಿಗೆ ಅವಕಾಶ ಕೊಡದೆ ಫಾತಿಮಾ ತನಗೆ ಬೇಕಾದುದನ್ನು ಒದಗಿಸಿಕೊಳ್ಳುತ್ತಾಳೆ. ಗಂಡನೇ ಆಕೆಗೆ ಫೆಮಿನಿಸ್ಟ್ ಅಂತ ಹೇಳುವುದೇ ಚಂದ! ಈ ಚಿತ್ರ ಫಾಸಿಲ್ ಮಹಮೂದ್ ಅವರ ಮೊದಲ ಚಿತ್ರವೆಂದು ಅನ್ನಿಸುವುದೇ ಇಲ್ಲ. ಪಾತ್ರಕ್ಕೆ ತಕ್ಕ ನಟ, ನಟಿಯರು ಮಲ್ಲುಗಳಿಗೆ ಎಲ್ಲಿ ಸಿಗುತ್ತಾರೋ ಆ ಅಯ್ಯಪ್ಪನೇ ಹೇಳಬೇಕು!
ಯೂನಿವರ್ಸಲ್ ಲಾಂಗ್ವೇಜ್ | ವಿಶ್ವಾತ್ಮಕ ಭಾಷೆ ಯಾವುದು? ಪರ್ಶಿಯನ್, ಫ್ರೆಂಚ್ ಭಾಷೆಯ ಈ ಸರ್ರಿಯಾಲಿಸ್ಟ್ ಸಿನಿಮಾ ನಾವೇ ಅದನ್ನು ಕಂಡುಕೊಳ್ಳಲು ಪ್ರೇರೇಪಿಸುತ್ತದೆ. ಮುಂದೇನಾಗಬೇಕೆಂದು ಸ್ಪಷ್ಟತೆ ಇಲ್ಲದ ಶಾಲಾ ಮಕ್ಕಳು, ದೃಢ ಆರ್ಥಿಕತೆಯೇ ನೆಮ್ಮದಿಗೆ ಕಾರಣವೆನ್ನುವ ಸರಕಾರೀ ಧೋರಣೆ, ಮಂಜಿನಲ್ಲಿ ಹುಗಿದ ಕರೆನ್ಸಿ (ರಿಯಾಲ್) ಅನ್ನು ಪಡೆಯಲು ಒದ್ದಾಡುವ ಹುಡುಗರು- ಸಾಲಾಗಿ ಈ ದೃಶ್ಯ ಕಟ್ಟುಗಳು ಬರುತ್ತವೆ.ತಾಯಿಯನ್ನು ಹಲವಾರು ವರ್ಷಗಳ ನಂತರ ನೋಡಲು ಹೋಗುವವ ತಾನೇ ಮಗನೆಂದು ಆರೈಕೆ ಮಾಡಿದವನನ್ನು ಸಂಧಿಸುತ್ತಾನೆ. ಟರ್ಕಿ ಕೋಳಿಗಳು ಮಾರಾಟದ ವಸ್ತುವಾದಂತೆ, ಪ್ರದರ್ಶನದ ವಿಷಯವೂ ಆಗುತ್ತದೆ.
ಪ್ರಾಣಿ, ಮನುಷ್ಯರ ನಡುವೆ ಭೇದದವಿರದ ಕಾಲದಲ್ಲಿ ಪ್ರೀತಿ ಮಾತ್ರಾ ವಿಶ್ವ ಭಾಷೆಯೇ? ಕರೆನ್ಸಿಯನ್ನು ತೆಗೆದವನು ಮತ್ತೆ ತಂದಿಡುವುದು ಹಣಕ್ಕೆ ಮೌಲ್ಯವಿಲ್ಲ ಎಂದು ಹೇಳುತ್ತದೆಯೇ? ಇದು ಮತ್ತೆ, ಮತ್ತೆ ನೋಡಿ ಅರ್ಥ ಮಾಡಿಕೊಳ್ಳಬೇಕಾದ ಸಿನಿಮಾ. ಕೆಲವು ದೃಶ್ಯಗಳಂತೂ ಈ ಕಾಲದ ಆಷಾಢಭೂತಿ ಮನಸ್ಥಿತಿಯನ್ನು ತೀಕ್ಷ್ಣವಾಗಿ ಲೇವಡಿ ಮಾಡುತ್ತದೆ. ಮೂರು ರಸ್ತೆ ಸೇರುವಲ್ಲಿ ರಾಷ್ಟ್ರಪಿತನ ನಾಮಕಾವಸ್ತೆ ಪ್ರತಿಮೆ, ನೀರಿರದ ಫೌಂಟನ್, ಅಲ್ಲಲ್ಲಿ ಕಾಣುವ ರಾಷ್ಟ್ರಾಧ್ಯಕ್ಷನ ಚಿತ್ರಗಳು ವ್ಯವಸ್ಥೆಯನ್ನು ಚುಚ್ಚುವಂತಿವೆ.